* ನಾಗವಾರ-ಥಣಿಸಂದ್ರ ಮುಖ್ಯರಸ್ತೆಯಲ್ಲಿ ನಡೆದ ದುರ್ಘಟನೆ
* ಹಿಂದಿನಿಂದ ವೇಗವಾಗಿ ಗುದ್ದಿ, ತಲೆ ಮೇಲೆ ಹರಿದ ಲಾರಿ
* ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ
ಬೆಂಗಳೂರು(ಮೇ.15): ರಾಜಧಾನಿಯಲ್ಲಿ ಬಿಬಿಎಂಪಿ(BBMP) ಕಸದ ಲಾರಿಗೆ(Garbage Truck) ಮತ್ತೊಬ್ಬರು ಬಲಿಯಾಗಿದ್ದಾರೆ. ನಾಗವಾರ-ಥಣಿಸಂದ್ರ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿರುವ(Death) ಘಟನೆ ಶನಿವಾರ ಜರುಗಿದೆ.
ಕೊತ್ತನೂರು ನಿವಾಸಿ ದೇವಣ್ಣ (25) ಮೃತ ಸವಾರ. ಸಂಜೆ 4.30ರ ಸುಮಾರಿಗೆ ಗ್ರಾಹಕರಿಗೆ ಫುಡ್ ಡೆಲಿವರಿ(Food Delivery) ನೀಡಲು ದ್ವಿಚಕ್ರ ವಾಹನದಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ಸಂಬಂಧ ಬಿಬಿಎಂಪಿ ಕಸದ ಲಾರಿ ಚಾಲಕ ದಿನೇಶ್ ನಾಯಕ್(40)ನನ್ನು ಬಂಧಿಸಲಾಗಿದೆ(Arrest).
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಬ್ಯಾಂಕ್ ಅಧಿಕಾರಿ ಸಾವು
ದಾವಣಗೆರೆ ಮೂಲದ ದಿನೇಶ್ ಕೊತ್ತನೂರಿನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಫುಡ್ ಡೆಲಿವರಿ ಕೆಲಸ ಮಾಡಿಕೊಂಡು ಜೀವನ ದೂಡುತ್ತಿದ್ದರು. ಶನಿವಾರ ಸಂಜೆ ಫುಡ್ ಡೆಲಿವರಿ ನೀಡಲು ಹೋಗುವಾಗ ನಾಗವಾರ-ಥಣಿಸಂದ್ರ ಮುಖ್ಯರಸ್ತೆಯಲ್ಲಿ ಹಿಂದಿನಿಂದ ವೇಗವಾಗಿ ಬಂದಿರುವ ಬಿಬಿಎಂಪಿ ಕಸದ ಲಾರಿ, ಏಕಾಏಕಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ದಿನೇಶ್ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಕಸದ ಲಾರಿಚಕ್ರ ತಲೆಯ ಮೇಲೆಯೇ ಹರಿದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ(Accident) ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಿಬಿಎಂಪಿ ಕಸದ ಲಾರಿಯನ್ನು ಜಪ್ತಿ ಮಾಡಿ ಚಾಲಕನ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಚಿಕ್ಕಜಾಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಅಘಾತ ಪ್ರಕರಣಗಳು
*ಮಾ.21ರಂದು ಹೆಬ್ಬಾಳ ಬಳಿ ರಸ್ತೆ ದಾಟುವಾಗ 15 ವರ್ಷದ ಅಕ್ಷಯಾಗೆ ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಸೊಂಟದ ಮೇಲೆ ಲಾರಿ ಚಕ್ರ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಳು.
*ಮಾ.31ರಂದು ಥಣಿಸಂದ್ರ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಯಲಹಂಕ ನಿವಾಸಿ ರಾಮಯ್ಯ(60) ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು.
*ಏ.18ರಂದು ನಾಯಂಡಹಳ್ಳಿ ರಿಂಗ್ ರಸ್ತೆಯಲ್ಲಿ ನಾಗರಬಾವಿ ಕಡೆಯಿಂದ ನಾಯಂಡಹಳ್ಳಿ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ಎಸ್‌ಬಿಐ ಬ್ಯಾಂಕ್ ಅಧಿಕಾರಿ ಪದ್ಮಿನಿ(40) ಸ್ಥಳದಲ್ಲೇ ಮೃತಪಟ್ಟಿದ್ದರು.