
ಶಿವಕುಮಾರ ಕುಷ್ಟಗಿ
ಗದಗ(ಡಿ.03): ಇಡೀ ವಿಶ್ವವನ್ನೆ ತಲ್ಲಣಗೊಳಿಸಿರುವ ಕೊರೋನಾವನ್ನು ನಿಯಂತ್ರಿಸುವಲ್ಲಿ ಗದಗ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದ್ದು ಕಳೆದ 45 ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿನಿಂದ ಒಬ್ಬರೂ ಅಸುನೀಗಿಲ್ಲ! ಜಿಲ್ಲೆಯಲ್ಲಿ ಕೊರೋನಾ ಸೋಂಕು ಇಳಿಮುಖವಾಗುತ್ತಿದ್ದರೂ ಆರೋಗ್ಯ ಇಲಾಖೆ ಪರೀಕ್ಷೆ ಸಂಖ್ಯೆ ಹೆಚ್ಚಿಸಿದೆ. ನಿತ್ಯ 1500ಕ್ಕೂ ಅಧಿಕ ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸುತ್ತಿದ್ದು ಶೇ. 99.90ರಷ್ಟು ವರದಿಗಳು ನೆಗೆಟಿವ್ ಬರುತ್ತಿದ್ದು ಜನತೆ ನಿರಾಳರಾಗಿದ್ದಾರೆ.
ಕೋವಿಡ್ ಕೇಂದ್ರ ಖಾಲಿ:
ಜಿಲ್ಲೆಯಲ್ಲಿ ಒಟ್ಟು 21 ಕೊರೋನಾ ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಆಸ್ಪತ್ರೆಯಲ್ಲಿ 16 ಜನರು, ಉಳಿದವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಏ. 6ರಂದು ಜಿಲ್ಲೆಯಲ್ಲಿ ಮೊದಲ ಸೋಂಕಿನ ಪ್ರಕರಣ ವರದಿಯಾಗಿ ಆ ವೃದ್ಧೆ ಮರಣ ಹೊಂದಿದ ಆನಂತರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಭಾರೀ ಏರಿಕೆಯಾಯಿತು. ಜಿಲ್ಲೆಯ 7 ತಾಲೂಕು ಕೇಂದ್ರಗಳಲ್ಲಿ ಸ್ಥಾಪಿಸಿದ್ದ ಕೋವಿಡ್ ಕೇಂದ್ರಗಳು ಭರ್ತಿಯಾಗಿದ್ದವು. ಇದೀಗ ಎಲ್ಲವೂ ಖಾಲಿಯಾಗಿದೆ.
ಗಣನೀಯ ಇಳಿಕೆ:
ಕೇಂದ್ರ ಸರ್ಕಾರ ದೀಪಾವಳಿ ಆನಂತರ ಸೋಂಕು ಹೆಚ್ಚಾಗಬಹುದು ಮತ್ತು 2ನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಎಚ್ಚರಿಸಿತ್ತು. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಅಲ್ಪ ಪ್ರಮಾಣದಲ್ಲಿ ಸೋಂಕು ಹೆಚ್ಚಳವಾಗುತ್ತಿದ್ದರೂ ಗದಗ ಜಿಲ್ಲೆಯಲ್ಲಿ ಮಾತ್ರ ಸೋಂಕು ದಿನ ಕಳೆದಂತೆ ಕಡಿಮೆಯಾಗುತ್ತಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿವೆ.
ಗದಗ; ಅನುಮಾನಕ್ಕೆ ಮದ್ದಿಲ್ಲ... ಮಲಗಿದ್ದ ಗಾರ್ಡ್ ಹೆಣವಾಗಿದ್ದ
ಒಟ್ಟು 1.34 ಲಕ್ಷ ಮಾದರಿ ಸಂಗ್ರಹ:
ದೇಶದಲ್ಲಿ ಕೊರೋನಾ ಪ್ರಕರಣ ಪತ್ತೆಯಾಗುತ್ತಿದ್ದಂತೆ ಜಿಲ್ಲೆಯಲ್ಲೂ ಸೋಂಕು ಪತ್ತೆಯಾಗಿತ್ತು. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 1,34,921 ಮಾದರಿಗಳನ್ನು ಸಂಗ್ರಹಿಸಿದ್ದು, 1,23,521 ವರದಿಗಳು ನೆಗೆಟಿವ್ ಬಂದಿವೆ. ಅದರಲ್ಲಿ 10,750 ಸೋಂಕಿತರು ಪತ್ತೆಯಾಗಿ 141 ಜನರು ಅಸುನೀಗಿದ್ದಾರೆ. ಈ ವರೆಗೆ ಒಟ್ಟು 10,565 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ 45 ದಿನಗಳಿಂದ ಕೊರೋನಾಕ್ಕೆ ಯಾರೂ ಬಲಿಯಾಗದೆ ಇರುವುದು ನೆಮ್ಮದಿ ವಿಷಯ. ಸೋಂಕು ತಡೆಯುವಲ್ಲಿ ಶ್ರಮಿಸಿದ ಎಲ್ಲ ಕೊರೋನಾ ವಾರಿಯರ್ಸ್ಗಳನ್ನು ಅಭಿನಂದಿಸುತ್ತೇನೆ. ಚಳಿಗಾಲದಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇದ್ದು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ಕೋವಿಡ್ ನಿಯಂತ್ರಣಕ್ಕೆ ನಡೆಸಿದ ಹೋರಾಟಕ್ಕೆ ಫಲ ದೊರೆತಿದೆ. ಈಗಾಗಲೇ 78,609ಕ್ಕೂ ಹೆಚ್ಚು ಜನರಿಗೆ ಕೋವಿಡ್ ಟೆಸ್ಟ್ ಮಾಡಿದ್ದು, ಸದ್ಯ ಪ್ರತಿದಿನ 1500ಕ್ಕೂ ಅಧಿಕ ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಯಾವುದೇ ಕೋವಿಡ್ ರೋಗಿಗಳಿಲ್ಲ. ಈ ಮೊದಲು 200ಕ್ಕೂ ಅಧಿಕ ಜನರು ಆಸ್ಪತ್ರೆಗೆ ದಾಖಲಾಗಿದ್ದು ಸದ್ಯ 16 ಜನ ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಗದಗ ಜಿಮ್ಸ್ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ಹೇಳಿದ್ದಾರೆ.