ರಾಮ ಮಂದಿರ ಲೋಕಾರ್ಪಣೆ: ಯೋಗಿ ಆದಿತ್ಯನಾಥ್‌ ಬಿಟ್ಟರೆ ಬೇರೆ ಸಿಎಂಗೆ ಆಹ್ವಾನಿಸಿಲ್ಲ, ಈಶ್ವರಪ್ಪ

By Kannadaprabha News  |  First Published Jan 5, 2024, 2:00 AM IST

ಮುಂಬರುವ ಲೋಕಸಭೆ ಚುನಾವಣೆ ಇಡೀ ವಿಶ್ವದ ಗಮನ ಸೆಳೆದಿದ್ದು, ಚುನಾವಣೆ ನಂತರ ನರೇಂದ್ರ ಮೋದಿ ಮೂರನೇ ಬಾರಿಗೆ ಭಾರೀ ಬಹುಮತದೊಂದಿಗೆ ಪ್ರಧಾನಿಯಾಗಿ ವಿಶ್ವ ನಾಯಕರಾಗಿ ಹೊರ ಹೊಮ್ಮಲಿದ್ದಾರೆ:   ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ 


ದಾವಣಗೆರೆ(ಜ.05):  ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ವೇಳೆಯೇ 3 ದಶಕದ ಹಿಂದಿನ ಅನೇಕ ಪ್ರಕರಣಗಳ ಮರುತನಿಖೆ ಕೈಗೊಳ್ಳುವುದಾಗಿ ಹೇಳಿ ಕರಸೇವಕರು, ದೇಶಭಕ್ತರನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ವಿನಾಕಾರಣ ಕೆಣಕುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಹೊರ ವಲಯದ ಸರ್ಕ್ಯೂಟ್ ಹೌಸ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹುಬ್ಬಳ್ಳಿಯ ಕರ ಸೇವಕರಿಗೆ ತೊಂದರೆ ಕೊಟ್ಟರೆ ಬಿಡುವ ಪ್ರಶ್ನೆಯೇ ಇಲ್ಲ. ಯಾರನ್ನಾದರೂ ಮುಟ್ಟಲಿ ನೋಡೋಣ. ರಾಜ್ಯದ ಕಾಂಗ್ರೆಸ್ ಸರ್ಕಾರ ಭಸ್ಮ ಆಗುವವರೆಗೂ ಕರ ಸೇವಕರು ಬಿಡಲ್ಲ. ಹುಬ್ಬಳ್ಳಿಯಲ್ಲಿ ಅದೊಂದೇ ಫೈಲ್ ಯಾಕೆ ಓಪನ್ ಮಾಡಿದರು? ಯಾರು ಯಾರೆಲ್ಲಾ ಹೋರಾಟದಲ್ಲಿ ಭಾಗಿಯಾಗಿದ್ದರು ಎಲ್ಲರನ್ನೂ ಬಂಧಿಸಿ. ನಮ್ಮನ್ನೆಲ್ಲಾ ಬಂಧಿಸಿ ನೋಡೋಣ ಎಂದು ಸವಾಲು ಹಾಕಿದರು.

Tap to resize

Latest Videos

ಸಿದ್ದರಾಮಯ್ಯ ಪೂಜೆ ಮಾಡ್ಕೊಳ್ಳಿ: ಎಚ್‌.ಆಂಜನೇಯಗೆ ಈಶ್ವರಪ್ಪ ತಿರುಗೇಟು

ಅಭಿವೃದ್ಧಿ ಮೇಲೆ ಚುನಾವಣೆಗೆ ಹೋಗೋಣವೆಂದರೆ ಅದಕ್ಕೆ ನಾವು ಸಿದ್ಧ. ಹಿಂದುತ್ವದ ಮೇಲೆ ಚುನಾವಣೆಗೆ ಹೋಗೋಣವೆಂದರೆ ಅದಕ್ಕೂ ನಾವು ತಯಾರಿದ್ದೇವೆ. ಸುಮ್ಮನೆ ಇದ್ದಂತಹ ಹುಬ್ಬಳ್ಳಿಗೆ ಬೆಂಕಿ ಹಂಚಿದ್ದೀರಿ. ಹಿಂದುತ್ವವು ಜೀವನ ಪದ್ಧತಿಯಾಗಿದೆ. ನನ್ನ ಪೂಜಾ ಪದ್ಧತಿಗೆ ಯಾರೇ ಅಡ್ಡಿ ಬಂದರೂ ನಾನು ಬಿಡುವುದಿಲ್ಲ. ನಾವು ಪೂಜೆ ಮಾಡಿದರೆ ಇವರಿಗ್ಯಾಕೆ ಸಿಟ್ಟು? ಇವರೆಲ್ಲಾ ಏನು ಬಾಬರ್‌ನ ವಂಶಸ್ಥರಾ? ನೀವೆಲ್ಲಾ ಕೋಮು ಗಲಭೆ ಮಾಡಿ, ಅದರ ಮೇಲೆ ಈ ಬಾರಿಯ ಚುನಾವಣೆಗೆ ರೆಡಿ ಅಂದರೆ ಅದಕ್ಕೂ ನಾವು ರೆಡಿ ಎಂದು ಈಶ್ವರಪ್ಪ ಮಾತಿನ ಚಾಟಿ ಬೀಸಿದರು.

ಬಿಜೆಪಿ ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ಮಾಜಿ ಮೇಯರ್‌ ಎಚ್‌.ಎನ್‌.ಗುರುನಾಥ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಪಾಲಿಕೆ ಮಾಜಿ ಸದಸ್ಯರಾದ ಎಚ್‌.ಸಿ.ಜಯಮ್ಮ, ಶಿವನಗೌಡ ಪಾಟೀಲ್, ಶಂಕರ ಗೌಡ ಬಿರಾದಾರ, ಎಚ್.ಎನ್.ಜಗದೀಶ, ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಅಧ್ಯಕ್ಷ ಹಾಗೂ ಇತರರಿದ್ದರು.

ಕಾಂಗ್ರೆಸ್‌ಗೆ ಜನರಿಂದ ತಕ್ಕಪಾಠ

ರಾಜ್ಯದಲ್ಲಿ ಸುಮಾರು 600ಕ್ಕೂ ಹೆಚ್ಚು ಹಳೆಯ ಪ್ರಕರಣಗಳಿದ್ದು, ಈಗ 3 ದಶಕಗಳ ಹಿಂದಿನ ಕರ ಸೇವಕರ ಪ್ರಕರಣಗಳೇ ತನಿಖೆಗೆ ಬೇಕಾಗಿತ್ತಾ? ಹುಬ್ಬಳ್ಳಿಯ ಪ್ರಕರಣವೇ ಕೆದಕಬೇಕಿತ್ತಾ? ಬೇರೆ ಯಾವುದೇ ಪ್ರಕರಣಗಳು ಕಾಂಗ್ರೆಸ್ ಸರ್ಕಾರಕ್ಕೆ ಇರಲಿಲ್ಲವೇ? ವಿನಾಕಾರಣ ಕರ ಸೇವಕರು, ದೇಶ ಭಕ್ತರ ಕೆಣಕಲು ಹೊರಟ ಗೃಹ ಸಚಿವ, ಕಾಂಗ್ರೆಸ್ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. 

ಮೂರನೇ ಬಾರಿ ಮೋದಿ ಪ್ರಧಾನಿಯಾಗಿ ವಿಶ್ವ ನಾಯಕರಾಗ್ತಾರೆ

ಮುಂಬರುವ ಲೋಕಸಭೆ ಚುನಾವಣೆ ಇಡೀ ವಿಶ್ವದ ಗಮನ ಸೆಳೆದಿದ್ದು, ಚುನಾವಣೆ ನಂತರ ನರೇಂದ್ರ ಮೋದಿ ಮೂರನೇ ಬಾರಿಗೆ ಭಾರೀ ಬಹುಮತದೊಂದಿಗೆ ಪ್ರಧಾನಿಯಾಗಿ ವಿಶ್ವ ನಾಯಕರಾಗಿ ಹೊರ ಹೊಮ್ಮಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ಆಳ್ವಿಕೆ ಇದ್ದಾಗ ಯಾವುದೇ ದೇಶಗಳೂ ನಮ್ಮ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಆದರೆ, ನರೇಂದ್ರ ಮೋದಿ ದೇಶದ ಸಾರಥ್ಯ ವಹಿಸಿದ ನಂತರ ವಿಶ್ವದ ಬಹುತೇಕ ರಾಷ್ಟ್ರಗಳು ಭಾರತದೊಂದಿಗೆ ಸ್ನೇಹ, ವಿಶ್ವಾಸದಿಂದಿವೆ. ಅದರಲ್ಲೂ ಮುಸ್ಲಿಂ ರಾಷ್ಟ್ರಗಳು, ಕ್ರಿಶ್ಚಿಯನ್‌ ರಾಷ್ಟ್ರಗಳು ನಮ್ಮೊಂದಿಗೆ ಸಹೋದರರಂತೆ ಇವೆ. ಇದನ್ನೆಲ್ಲಾ ಗಮನಿದರೆ ಮೋದಿ ಮುಂದಿನ ದಿನಗಳಲ್ಲಿ ವಿಶ್ವ ನಾಯಕರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ಭಾರತೀಯ ಕಲೆ, ಸಂಸ್ಕೃತಿಯ ಅನ್ಯ ದೇಶಗಳು ಒಪ್ಪಿಕೊಂಡಿವೆ. ಇಂದು ಅನೇಕ ದೇಶಗಳಲ್ಲಿ ಸನಾತನ ಧರ್ಮದ ಬಗ್ಗೆ ಸ್ಮರಣೆಯಾಗುತ್ತಿದೆ. ದೇಶದ ಸಂಸ್ಕೃತಿ, ಶ್ರದ್ಧಾ ಕೇಂದ್ರಗಳ ಉಳಿಸುವ ಕೆಲಸ, ಪ್ರಯತ್ನವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ. ಕಾಶಿ ವಿಶ್ವನಾಥ ಮತ್ತು ಅಲ್ಲಿನ ದೇವಸ್ಥಾನಗಳ ಸಮೀಕ್ಷೆ ಕೈಗೊಳ್ಳಲು ನ್ಯಾಯಾಲಯಗಳು ಆದೇಶ ಹೊರಡಿಸಿವೆ. ಅದೇ ರೀತಿ ನಮ್ಮ ಶ್ರದ್ಧಾ ಕೇಂದ್ರಗಳ ಮತ್ತೆ ನಮ್ಮ ತೆಕ್ಕೆಗೆ ತೆಗೆದುಕೊಳ್ಳುವ ನಿಟ್ಟಿನಲ್ಲೂ ಪ್ರಯತ್ನ ನಡೆದಿವೆ ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದರು.

ಜಾತ್ಯತೀತ ತತ್ವವನ್ನು ಬಿಟ್ಟು, ಧರ್ಮದ ಹಿಂದೆ ಹೋದರೆ ದೇಶವು ಅಭಿವೃದ್ಧಿ ಕಾಣುವುದಿಲ್ಲ: ಯತೀಂದ್ರ ಸಿದ್ದರಾಮಯ್ಯ

ಹರಿಪ್ರಸಾದ್‌ ರಿಂದ ಬೇಜವಾಬ್ದಾರಿ ಹೇಳಿಕೆ ಈಶ್ವರಪ್ಪ ಗರಂ

ಗೋಧ್ರಾ ಹತ್ಯಾಕಾಂಡದ ರೀತಿ ಮತ್ತೊಂದು ದುರಂತ ಆಗಬಹುದೆಂಬ ಹೇಳಿಕೆ ನೀಡಿದ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಬಾಯಿಯಿಂದ ಇಂತಹ ಮಾತುಗಳು ಬರಬಾರದಿತ್ತು ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದ್ದಾರೆ. ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಇಡೀ ದೇಶವೇ ಒಪ್ಪಿದೆ. ಹೀಗಿದ್ದರೂ ಹರಿಪ್ರಸಾದ್‌ರಂತಹವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವುದು ದುರಂತ ಎಂದರು. ಪಿ.ವಿ.ನರಸಿಂಹರಾವ್‌, ರಾಜೀವ್‌ ಗಾಂಧಿಯಂತಹವರ ಸಹಕಾರ ಇರಲಿಲ್ಲವೆಂದರೆ ಆಗುತ್ತಿರಲಿಲ್ಲ. ಅಲ್ಲೊಂದು, ಇಲ್ಲೊಂದು ಒಡಕು ಧ್ವನಿ ಬರುವುದು ಸರಿಯಲ್ಲ ಎಂದು ತಿಳಿಸಿದರು. ರಾಜ್ಯ ಸರ್ಕಾರದ ರಕ್ಷಣೆಯ ಅವಶ್ಯಕತೆ ಇಲ್ಲವೆನಿಸುತ್ತದೆ. ಶ್ರೀರಾಮಚಂದ್ರನೇ ಜನರಿಗೆ ರಕ್ಷಣೆ ಕೊಡುತ್ತಾನೆ ಎಂದು ಈಶ್ವರಪ್ಪ ಹೇಳಿದರು.

ಯೋಗಿ ಆದಿತ್ಯನಾಥ್‌ ಬಿಟ್ಟರೆ ಬೇರೆ ಸಿಎಂಗೆ ಆಹ್ವಾನಿಸಿಲ್ಲ

ಅಯೋಧ್ಯೆಯಲ್ಲಿ ಜ.22ರಂದು ನಡೆಯುವ ಶ್ರೀರಾಮ ಮಂದಿರ ಉದ್ಘಾಟನೆಗೆ ಲಾಲ್‌ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ ಸೇರಿ ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಮುಖ್ಯಮಂತ್ರಿಗಳ ಪೈಕಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರನ್ನು ಸಮಾರಂಭಕ್ಕೆ ಆಹ್ವಾನಿಸಿದ್ದು, ಬೇರೆ ಯಾವುದೇ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. 

click me!