ಯುವನಿಧಿ ಯೋಜನೆ: ಉದ್ಯೋಗಕ್ಕೆ ನಿರುದ್ಯೋಗ ಭತ್ಯೆ ನೆರವಾಗಲಿ, ಸಚಿವ ಮಧು ಬಂಗಾರಪ್ಪ

By Kannadaprabha News  |  First Published Jan 5, 2024, 12:00 AM IST

ಪದವಿ ಮುಗಿದರೂ ಉದ್ಯೋಗ ಸಿಗದೇ ಉದ್ಯೋಗಕ್ಕೆ ಅಲೆದಾಡುತ್ತಿರುತ್ತಾರೆ. ಅಂಥವರು ಮನೆಯಲ್ಲೂ ಖರ್ಚಿಗೆ ಹಣ ಕೇಳಲಾಗದ ಪರಿಸ್ಥಿತಿ ಇದೆ. ಉದ್ಯೋಗ ಹುಡುಕಿಕೊಳ್ಳಲು ಯುವಜನತೆಗೆ ಅನುಕೂಲವಾಗಲು ಸರ್ಕಾರ ನಿರುದ್ಯೋಗ ಭತ್ಯೆ ನೀಡುತ್ತಿದೆ. ಇದರಿಂದ ಲಕ್ಷಾಂತರ ಮಂದಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ಸಹಾಯವಾಗಲಿದೆ: ಸಚಿವ ಮಧು ಬಂಗಾರಪ್ಪ 


ಶಿವಮೊಗ್ಗ(ಜ.05):  ಪದವಿ ಮುಗಿಸಿದರು ಪೋಷಕರಿಗೆ ನಾವು ಭಾರವಾಗಿದ್ದೇವೆ ಎಂಬ ಆತಂಕ ಯುವಜನರಲ್ಲಿ ಬೇಡ. ಕಾಂಗ್ರೆಸ್‌ ಸರ್ಕಾರ ನಿಮ್ಮ ಪರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಬುಧವಾರ ಯುವನಿಧಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಪದವಿ ಮುಗಿದರೂ ಉದ್ಯೋಗ ಸಿಗದೇ ಉದ್ಯೋಗಕ್ಕೆ ಅಲೆದಾಡುತ್ತಿರುತ್ತಾರೆ. ಅಂಥವರು ಮನೆಯಲ್ಲೂ ಖರ್ಚಿಗೆ ಹಣ ಕೇಳಲಾಗದ ಪರಿಸ್ಥಿತಿ ಇದೆ. ಉದ್ಯೋಗ ಹುಡುಕಿಕೊಳ್ಳಲು ಯುವಜನತೆಗೆ ಅನುಕೂಲವಾಗಲು ಸರ್ಕಾರ ನಿರುದ್ಯೋಗ ಭತ್ಯೆ ನೀಡುತ್ತಿದೆ. ಇದರಿಂದ ಲಕ್ಷಾಂತರ ಮಂದಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ಸಹಾಯವಾಗಲಿದೆ ಎಂದು ತಿಳಿಸಿದರು.

Tap to resize

Latest Videos

ಕಾಂಗ್ರೆಸ್‌ ಸರ್ಕಾರಕ್ಕೆ 5ನೇ ಗ್ಯಾರಂಟಿಯೇ ಪ್ರಮುಖ ಅಸ್ತ್ರ: ಸಚಿವ ಮಧು ಬಂಗಾರಪ್ಪ

ಜ.12ರಂದು ಕಾಂಗ್ರೆಸ್ ಸರ್ಕಾರ 5ನೇ ಗ್ಯಾರಂಟಿಗೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಿಂದ ಅಧಿಕೃತ ಚಾಲನೆ ನೀಡಲಿದೆ. ನಾವು ನುಡಿದಂತೆ ನಡೆದಿದ್ದೇವೆ. ಯುವಕರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಿ. ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಜೊತೆ ಸಭೆ ನಡೆಸಿದ್ದೇವೆ. ಕೌಶಲ್ಯಾಭಿವೃದ್ಧಿ ಇಲಾಖೆ ಈಗಾಗಲೇ ಸಿದ್ಧತೆ ನಡೆಸಿದೆ. ಕಾರ್ಯಕರ್ತರು ನಿರುದ್ಯೋಗಿ ಯುವಕರ ಗಮನಕ್ಕೆ ತಂದು ಕಾರ್ಯಕ್ರಮಕ್ಕೆ ಕರೆತರಬೇಕು ಎಂದು ಕರೆ ನೀಡಿದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, ಈಗಾಗಲೇ 4 ಗ್ಯಾರಂಟಿಗಳನ್ನು ನೀಡಿದ್ದೇವೆ. ಅರ್ಹ ಫಲಾನುಭವಿಗಳನ್ನು ಇಲಾಖೆ ಗುರುತಿಸಿ, ಈ ಯೋಜನೆಯಂತೆ ಯುವಕರಿಗೆ ಸಹಕಾರ ನೀಡುತ್ತೇವೆ. ನಿರುದ್ಯೋಗಿ ಯುವಕರು ತಲೆಯೆತ್ತಿ ನಿಲ್ಲುವಂತೆ ಮಾಡಿದ್ದೇವೆ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್‌ಪ್ರಕಾಶ್ ಪಾಟೀಲ್ ಮಾತನಾಡಿ, ಯುವನಿಧಿ ಯೋಜನೆಯಲ್ಲಿ ಸೂಕ್ತ ಫಲಾನುಭವಿಗಳಿಗೆ ಪದವಿದರರಿಗೆ ಉದ್ಯೋಗ ಸಿಗುವವರೆಗೆ ಪ್ರತಿ ತಿಂಗಳು ₹3000, ಡಿಪ್ಲೊಮೋ ಪದವಿದರರಿಗೆ ₹1500 ಧನಸಹಾಯ ನೀಡಲಿದ್ದೇವೆ. ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ, ಕ್ರಿಯಾಶೀಲಾ ಮಂತ್ರಿ ಮಧು ಬಂಗಾರಪ್ಪ ಅವರು ಈ ಯೋಜನೆ ಅನುಷ್ಠಾನಕ್ಕೆ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್, ಭದ್ರಾವತಿ ಶಾಸಕ ಸಂಗಮೇಶ್, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಪ್ರಮುಖರಾದ ಆಯನೂರು ಮಂಜುನಾಥ್, ಆರ್.ಎಂ. ಮಂಜುನಾಥ್‌ಗೌಡ, ಎಂ.ಶ್ರೀಕಾಂತ್, ಆರ್.ಪ್ರಸನ್ನಕುಮಾರ್, ಇಸ್ಮಾಯಿಲ್ ಖಾನ್, ಬಲ್ಖೀಶ್ ಬಾನು, ಅನಿತಾಕುಮಾರಿ, ಕಲಗೋಡು ರತ್ನಾಕರ್, ಹಲವರು ಉಪಸ್ಥಿತರಿದ್ದರು.

ಅಯೋಧ್ಯೆಗೆ ಸಿಎಂ ಸಾಹೇಬ್ರಿಗೆ ಕರೆದಿಲ್ಲ, ಇಲ್ಲಿಂದಲೇ ಕೈ ಮುಗಿತೀವಿ: ಶಾಸಕ ಬೇಳೂರು ಗೋಪಾಲಕೃಷ್ಣ

ಅಸಮಾಧಾನ ಹೊರಹಾಕಿದ ಕಾರ್ಯಕರ್ತರು

ಕಾಂಗ್ರೆಸ್‌ ಭವನದಲ್ಲಿ ಬುಧವಾರ ಯುವನಿಧಿ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಮೂವರು ಸಚಿವರ ಎದುರು ಕಾರ್ಯಕರ್ತರು ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು. ಪಕ್ಷ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ಇನ್ನೂ ನಿಗಮ ಮಂಡಳಿಗಳಿಗೆ ಅಧ್ಯಕ್ಷ ನೇಮಕ ಮಾಡಿಲ್ಲ. ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆಯಲ್ಲಿ ಕಾರ್ಯಕರ್ತರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಅಲ್ಪಸಂಖ್ಯಾತರು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದರೂ, ನಮ್ಮನ್ನು ಪಕ್ಷದವರೇ ಕಡೆಗಣಿಸುತ್ತಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್‌ ಅವರು ಅತ್ಯಂತ ತುಚ್ಛವಾಗಿ ಅಲ್ಪಸಂಖ್ಯಾತರನ್ನು ಅವಮಾನಿಸಿದ್ದಾರೆ. ಆದರೂ, ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸಲಿಲ್ಲ. ನಿಮಗೂ, ಬಿಜೆಪಿಗೂ ಏನೂ ವ್ಯತ್ಯಾಸವಿಲ್ಲವೇ? ಎಲ್ಲವನ್ನು ಅಲ್ಪಸಂಖ್ಯಾತರು ಒಪ್ಪಿಕೊಳ್ಳಬೇಕಾ ಎಂದು ಭದ್ರಾವತಿಯ ಸಿ.ಎಂ.ಖಾದರ್ ಸಚಿವರನ್ನು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಬಳಿಕ ಇದಕ್ಕೆ ಪ್ರತಿಕ್ರಿಯಿಸದೇ ಸಚಿವರು ಸಭೆಯಿಂದ ತೆರಳಿದರು.

click me!