*ಶಸ್ತ್ರಾಸ್ತ್ರ ಕಾಯ್ದೆಯಡಿ ರದ್ದತಿಗೆ ಕೋರ್ಟ್ ನಕಾರ
*ಲೈಸೆನ್ಸಿಲ್ಲದೆ 2 ವರ್ಷ ಶಸ್ತ್ರಾಸ್ತ್ರ ಹೊಂದಿದ್ದ ಶಾಸಕ
*ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 21(1)(ಬಿ) ಅಡಿಯಲ್ಲಿ ಎಫ್‌ಐಆರ್
ಬೆಂಗಳೂರು (ಜ.4): ಪರವಾನಗಿ ನವೀಕರಿಸದೆ ರಿವಾಲ್ವರ್ ಇಟ್ಟುಕೊಂಡಿದ್ದ ಸಂಬಂಧ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ (G. Somashekara Reddy) ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ಹೈಕೋರ್ಟ್ (High Court) ನಿರಾಕರಿಸಿದೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಶಾಸಕ ಸೋಮಶೇಖರ ರೆಡ್ಡಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಏಕ ಸದಸ್ಯ ನ್ಯಾಯಪೀಠ ಅರ್ಜಿ ತಿರಸ್ಕರಿಸಿ ಸೋಮವಾರ ಆದೇಶಿಸಿತು.
ಬಳ್ಳಾರಿ ಶಾಸಕ ಜಿ. ಸೋಮಶೇಖರ ರೆಡ್ಡಿ ಹೊಂದಿದ್ದ ರಿವಾಲ್ವರ್ ಪರವಾನಗಿ ಅವಧಿ 2009ರ ಡಿ.31ಕ್ಕೆ ಮುಗಿದಿತ್ತು. ಆದರೆ, ರಿವಾಲ್ವರ್ ಅನ್ನು 2011ರ ನ.10ರಂದು ಸರ್ಕಾರಕ್ಕೆ ಹಿಂದಿರುಗಿಸಿ, ಪರವಾನಗಿ ನವೀಕರಿಸುವಂತೆ ಕೋರಿ ನ.16ರಂದು ಅರ್ಜಿ ಸಲ್ಲಿಸಿದ್ದರು. ಅದರಂತೆ ಎರಡು ವರ್ಷಕ್ಕೂ ಅಧಿಕ ಕಾಲ ಪರವಾನಗಿ ನವೀಕರಿಸದೆ ಅಕ್ರಮವಾಗಿ ರಿವಾಲ್ವರ್ ಇರಿಸಿಕೊಂಡಿದ್ದ ಆರೋಪ ಮಾಡಿ ಜಿಲ್ಲಾಧಿಕಾರಿಯು ಎಸ್ಪಿಗೆ ಪತ್ರ ಬರೆದಿದ್ದರು. ಅದರಂತೆ ಕೇಸುದಾಖಲಾಗಿತ್ತು.
undefined
ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 21(1)(ಬಿ) ಅಡಿಯಲ್ಲಿ ಎಫ್‌ಐಆರ್
ಆ ಪತ್ರವನ್ನು ಬಳ್ಳಾರಿಯ ಗ್ರಾಮಾಂತರ ಪೊಲೀಸ್ ಠಾಣೆಗೆ ರವಾನಿಸಲಾಗಿತ್ತು. ಅದನ್ನು ಆಧರಿಸಿ ಪೊಲೀಸರು ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 21(1)(ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಬ್ರೂಸ್ ಪೇಟೆ ಠಾಣಾ ಪೊಲೀಸರಿಗೆ ವರ್ಗಾವಣೆ ಮಾಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಅನಧಿಕೃತವಾಗಿ ಶಸ್ತ್ರಾಸ್ತ್ರ ಹೊಂದಿದ ಆರೋಪದ ಮೇಲೆ ಸೋಮಶೇಖರ ರೆಡ್ಡಿ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಪ್ರಕರಣ ಸದ್ಯ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
ಇದನ್ನೂ ಓದಿ: ನಾನು ಸಚಿವನಾದ್ರೂ ಸೋಮಶೇಖರ ರೆಡ್ಡಿ ಮಂತ್ರಿ ಆದಂತೆ: ಆನಂದ ಸಿಂಗ್
ಇದರಿಂದ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸೋಮಶೇಖರ್ ರೆಡ್ಡಿ, ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿದ್ದರು.ಆದರೆ, ಆ ಅರ್ಜಿಯನ್ನು ತಿರಸ್ಕರಿಸಿರುವ ಹೈಕೋರ್ಟ್, ಈಗಾಗಲೇ ಪ್ರಕರಣದ ತನಿಖೆ ಪೂರ್ಣಗೊಳಿಸಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಲಾಗಿದೆ. ವಿಚಾರಣಾ ನ್ಯಾಯಾಲಯ ಪ್ರಕರಣ ವಿಚಾರಣೆ ನಡೆಸುತ್ತಿದೆ. ಈ ಹಂತದಲ್ಲಿ ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿ ಪ್ರಕರಣ ರದ್ದುಪಡಿಸಲು ನಿರಾಕರಿಸಿ ಆದೇಶಿಸಿದೆ.