ಕೊರೋನಾ ಕಾಟ: ಯಹೂದಿ ಕ್ಯಾಂಪ್‌ನಂತಾದ ಕ್ವಾರಂಟೈನ್‌ ಕೇಂದ್ರಗಳು..!

By Kannadaprabha NewsFirst Published May 14, 2020, 8:58 AM IST
Highlights

ಕ್ವಾರಂಟೈನ್ ಕೇಂದ್ರಗಳಲ್ಲಿ ಸೋಂಕು ಹಬ್ಬುವ ಸಾಧ್ಯತೆ| ತುಂಬಿ ತುಳುಕುತ್ತಿರುವ ಅವ್ಯವಸ್ಥೆ: ಊಟಕ್ಕಾಗಿ ಪರದಾಟ, ನೀರಿಗಾಗಿ ಹೋರಾಟ| ಯಾದಗಿರಿ ಜಿಲ್ಲೆಯ ಕ್ವಾರಂಟೈನ್ ಕೇಂದ್ರಗಳ ದುಸ್ಥಿತಿ| ಕ್ವಾರಂಟೈನ್ ಕೇಂದ್ರಗಳೇ ಮುಂದೊಂದು ದಿನ ಕೊರೋನಾ ಸೋಂಕು ಹಬ್ಬಿಸುವ ಆತಂಕ|

ಆನಂದ್ ಎಂ. ಸೌದಿ

ಯಾದಗಿರಿ(ಮೇ.14): ಅನ್ಯರಾಜ್ಯಗಳಿಂದ ಜಿಲ್ಲೆಗೆ ವಾಪಸ್ಸಾದ ಸಾವಿರಾರು ವಲಸಿಗರು/ಕೂಲಿ ಕಾರ್ಮಿಕರ ತಾತ್ಕಾಲಿಕ ವಸತಿಗಾಗಿ ಜಿಲ್ಲೆಯ ವಿವಿಧೆಡೆಯ ಆರಂಭಿಸಲಾಗಿರುವ ಕ್ವಾರಂಟೈನ್ ಕೇಂದ್ರಗಳ ಪೈಕಿ ಕೆಲವುಗಳ ದುಸ್ಥಿತಿಯಂತೂ ಶೋಚನೀಯವಾಗಿದೆ. ಇಂತಹ ಕ್ವಾರಂಟೈನ್ ಕೇಂದ್ರಗಳಲ್ಲೇ ಸೋಂಕು ಹಬ್ಬುವ ಸಾಧ್ಯತೆಯನ್ನೂ ಅಲ್ಲಗೆಳೆಯುವಂತಿಲ್ಲ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಕೆಲವು ಕೇಂದ್ರಗಳಲ್ಲಿ ನೂರಾರು ಜನರನ್ನು ಒಂದೆಡೆಯೇ ಗುಂಪು ಗುಂಪಾಗಿ ಹಾಕಿ ಬೀಗ ಜಡಿದಿರವುದು, ಊಟ-ಉಪಾಹಾರಕ್ಕಾಗಿ ಅಲ್ಲಿ ಪರದಾಟ, ಕುಡಿಯುವ ನೀರಿಗಾಗಿ ನರಳಾಟ, ಶೌಚಾಲಯ, ವಿದ್ಯುತ್ ಅವ್ಯವಸ್ಥೆ ಮುಂತಾದ ಚಿತ್ರಣಗಳು ಬೆಚ್ಚಿ ಬೀಳಿಸುತ್ತವೆ. ಈ ಹಿಂದೆ ಜರ್ಮನಿಯಲ್ಲಿ ಯಹೂದಿಗಳನ್ನು ಶಿಕ್ಷಿಸಲು ಅಡಾಲ್ಫ್‌ ಹಿಟ್ಲರ್ ನಿರ್ಮಿಸಿದ್ದ ಲೇಬರ್ ಕ್ಯಾಂಪುಗಳ ಚಿತ್ರಣ ಕಣ್ಮುಂದೆ ಬಂದಂತೆ ಭಾಸವಾಗುತ್ತದೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.

‘ಹಸಿರಾ’ಗಿದ್ದ 3 ಜಿಲ್ಲೆಗಳಿಗೀಗ ಕೊರೋನಾ ಕೆಸರು!

ಕ್ವಾರಂಟೈನ್ ಮಾಡಿದರೂ ಪರವಾಗಿಲ್ಲ, 14 ದಿನಗಳ ನಂತರವಾದರೂ ತಮ್ಮೂರಿಗೆ ಹೋಗುತ್ತೇವಲ್ಲ ಅನ್ನೋ ಆಶಾಭಾವನೆಯಲ್ಲಿ ನೂರಾರು, ಸಾವಿರಾರು ಕಿ.ಮೀ. ದೂರ ಸವೆಸಿ ಬಂದ ಕಾರ್ಮಿಕರ ಕುಟುಂಬಗಳು ಕ್ವಾರಂಟೈನ್ ಕೇಂದ್ರದಲ್ಲಿನ ವ್ಯವಸ್ಥೆಗೆ ನಲುಗಿ ಹೋಗಿದ್ದಾರೆ. ಗರ್ಭಿಣಿಯರು, ಬಾಣಂತಿಯರು, ಹಸುಗೂಸುಗಳು, ವಯೋವೃದ್ಧರು ಮುಂತಾದವರು ತುತ್ತು ಊಟಕ್ಕಾಗಿ ಪರದಾಡುವಂತಾಗಿದೆ. ಅಲ್ಲಿನ ಹದಗೆಟ್ಟ ವ್ಯವಸ್ಥೆಯ ಬಗ್ಗೆ ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಮೊಬೈಲ್/ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಯಾದಗಿರಿ ಜಿಲ್ಲೆ ಶಹಾಪುರದ ಬೇವಿನಹಳ್ಳಿ (ಜೆ) ಕ್ರಾಸ್ ಬಳಿಯಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 171, ಮೊರಾರ್ಜಿ ವಸತಿ ಶಾಲೆಯಲ್ಲಿ 425 ಕಾರ್ಮಿಕರು, ಯಾದಗಿರಿಯ ಮುದ್ನಾಳ್ ರಸ್ತೆ ಸಮೀಪದ ಆದರ್ಶ ವಿದ್ಯಾಲಯದಲ್ಲಿ ವ್ಯವಸ್ಥೆ ಕೈಮೀರಿದಂತಿದೆ. ಒಂದೊಂದು ಕೋಣೆಯಲ್ಲಿ 10-15 ಜನರನ್ನು ಕೂಡಿ ಹಾಕಲಾಗುತ್ತಿದೆ ಎಂಬ ಆರೋಪಗಳು ಅಲ್ಲಿನವರಿಂದ ಕೇಳಿ ಬರುತ್ತಿವೆ.

ಅನ್ಯ ರಾಜ್ಯಗಳಿಂದ ನಾಲ್ಕು ಸಾವಿರ ಕಾರ್ಮಿಕರು ವಾಪಸ್

ಯಾದಗಿರಿ ಜಿಲ್ಲೆಗೆ ಕಳೆದೊಂದು ವಾರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 13 ಸಾವಿರಕ್ಕೂ ಹೆಚ್ಚು ಹಾಗೂ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಗುಜರಾತ್ ಸೇರಿದಂತೆ ಅನ್ಯ ರಾಜ್ಯಗಳಿಂದ 4 ಸಾವಿರಕ್ಕೂ ಹೆಚ್ಚು ವಲಸಿಗರು ವಾಪಸ್ಸಾಗಿದ್ದಾರೆ. ಇನ್ನೂ ಐದಾರು ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟೂ ಹೆಚ್ಚಾಗಲಿದೆ ಎಂದೂ ಖುದ್ದು ಜಿಲ್ಲಾಡಳಿತವೇ ಅಂದಾಜಿಸಿದೆ.

ಜಿಲ್ಲೆಯಲ್ಲಿ ಒಟ್ಟು 40 ಇನ್‌ಸ್ಟಿಟ್ಯೂಶನಲ್ ಕ್ವಾರಂಟೈನ್ ಕೇಂದ್ರಗಳಲ್ಲಿ, ಬುಧವಾರ 1256 ಸೇರಿದಂತೆ ಒಟ್ಟು 4,388  ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕಾರ್ಮಿಕರಿಗೆ/ವಲಸಿಗರಿಗೆ 14 ದಿನಗಳವರೆಗೆ ಹೋಂ ಕ್ವಾರಂಟೈನ್ ಹಾಗೂ ಅನ್ಯ ರಾಜ್ಯಗಳಿಂದ ಬಂದವರಿಗೆ 14 ದಿನಗಳ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ, ಸೂಕ್ಷ್ಮ ಪ್ರದೇಶ ಅಥವಾ ಹಾಟ್ ಸ್ಪಾಟ್ ಭಾಗಗಳಿಂದ ಆಗಮಿಸಿದ ವಲಸಿಗರ ದುಸ್ಥಿತಿ ಹೀಗೆ ಮುಂದುವರೆದರೆ ಕ್ವಾರಂಟೈನ್ ಕೇಂದ್ರಗಳೇ ಮುಂದೊಂದು ದಿನ ಕೊರೋನಾ ಸೋಂಕು ಹಬ್ಬಿಸುವ ಆತಂಕ ಎದುರಾಗಿದೆ ಎಂಬ ಮಾತುಗಳಿಗೆ ಬರವಿಲ್ಲ. ಏಕಾಏಕಿ ಸಾವಿರಾರು ಕಾರ್ಮಿಕರು ಜಿಲ್ಲೆಗೆ ವಾಪಸ್ ಆಗುತ್ತಿರುವುದರಿಂದ ಜಿಲ್ಲಾಡಳಿತಕ್ಕೆ ಇವುಗಳನ್ನು ನಿಭಾಯಿಸುವಲ್ಲಿ ಪರದಾಡುತ್ತಿದೆ ಎಂಬಂತಿದೆ.

ಕ್ವಾರಂಟೈನ್ ಕೇಂದ್ರಗಳಲ್ಲಿನ ಅವ್ಯವಸ್ಥೆ ಕುರಿತು ಗಮನ ಹರಿಸಲಾಗುವುದು. ಸಾವಿರಾರು ಕಾರ್ಮಿಕರು ಆಗಮಿಸಿದ್ದಾರೆ, ಅವರಿಗೆಲ್ಲ ಸೂಕ್ತ ತಪಾಸಣೆ ಹಾಗೂ ವ್ಯವಸ್ಥೆ ಮಾಡಿದ್ದೇವೆ. ಲೋಪವಾಗಿದ್ದಲ್ಲಿ ಸರಿಪಡಿಸಲಾಗುವುದು ಎಂದು ಯಾದಗಿರಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರಿ ಹೇಳಿದ್ದಾರೆ. 
 

click me!