ಬೇರೆ ಬೇರೆ ಜಿಲ್ಲೆಗಳಿಂದ ಬಂದವರ ತಪಾಸಣಾ ವರದಿಗಳತ್ತ ಎಲ್ಲರ ಚಿತ್ತ| ಬುಧವಾರ ಸಂಜೆಯವರೆಗೂ 4200ಕ್ಕೂ ಅಧಿಕ ಜನರು ಗದಗ ಜಿಲ್ಲೆಗೆ ವಾಪಸ್| ಇವರೆಲ್ಲರ ಆರೋಗ್ಯ ತಪಾಸಣೆ, ಸೋಂಕಿನ ಲಕ್ಷಣಗಳಿಲ್ಲದಿದ್ದರೂ 14 ದಿನಗಳ ಕಡ್ಡಾಯ ಕಾರಂಟೈನ್|
ಗದಗ(ಮೇ.14): ದೇಶದ ಹಲವಾರು ರಾಜ್ಯಗಳಿಂದ ಸಾರ್ವಜನಿಕರು ತಮ್ಮ ತವರಿಗೆ ಮರಳುತ್ತಿದ್ದು, ಬುಧವಾರ ಸಂಜೆಯವರೆಗೂ 4200ಕ್ಕೂ ಅಧಿಕ ಜನರು ಜಿಲ್ಲೆಗೆ ಮರಳಿದ್ದು, ಇವರೆಲ್ಲರ ಆರೋಗ್ಯ ತಪಾಸಣೆ, ಸೋಂಕಿನ ಲಕ್ಷಣಗಳಿಲ್ಲದಿದ್ದರೂ 14 ದಿನಗಳ ಕಡ್ಡಾಯ ಕಾರಂಟೈನ್ ಹೀಗೆ ಜಿಲ್ಲೆಯ ಜನರ ಚಿತ್ತವೀಗ ಹೊರಗಿನಿಂದ ಬಂದವರತ್ತ ನೆಟ್ಟಿದೆ.
ಇದಕ್ಕೆ ಸಾಕ್ಷಿ ಎನ್ನುವಂತೆ ಮಂಗಳವಾರ ಮೂರು ಹೊಸ ಪ್ರಕರಣಗಳು ಪತ್ತೆಯಾಗಿವೆ. ಆದರೆ ಬುಧವಾರ ಮಾತ್ರ ಯಾವುದೇ ಹೊಸ ಪ್ರಕರಣಗಳಿಲ್ಲ. ಹಳೆಯ 5 ಪ್ರಕರಣ ಸೇರಿದಂತೆ ಒಟ್ಟು 8 ಕೊರೋನಾ ದೃಢಪಟ್ಟಿದ್ದು ಇವರಲ್ಲಿ 4 ಜನ ಈಗಾಗಲೇ ಗುಣಮುಖವಾಗಿ ಮನೆಗೆ ಮರಳಿದ್ದು ಕೊಂಚ ನಿರಾಳತೆಗೆ ಕಾರಣವಾಗಿದೆ.
undefined
ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಉಡಿ ತುಂಬಿ ಸನ್ಮಾನ
ದಿನೇ ದಿನೇ ಹೆಚ್ಚುತ್ತಿದೆ ಆತಂಕ
ಜಿಲ್ಲೆಯಾದ್ಯಂತ ಲಾಕ್‌ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ದಿನ ಕಳೆದಂತೆ ಮಾಸ್ಕ್ ಬಳಸುವುದನ್ನು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಆಸಕ್ತಿ ವಹಿಸದೇ ಇರುವುದು, ಅನಾವಶ್ಯಕವಾಗಿ ರಸ್ತೆಯಲ್ಲಿ ಸಂಚರಿಸುವುದು ಸಾಮಾನ್ಯವಾಗಿದೆ. ಇದರ ಮಧ್ಯೆಯೇ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪೂರ ಗರ್ಭಿಣಿ ಮಹಿಳೆಯ ಸೋಂಕಿನ ನಂಟಿನಿಂದಾಗಿ ರೋಣ ತಾಲೂಕಿನ 5ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಇಂದಿಗೂ ಆರೋಗ್ಯ ಇಲಾಖೆ ಸಮೀಕ್ಷೆ ನಡೆಸುತ್ತಿದ್ದು, ಇದರಿಂದಾಗಿ ಗ್ರಾಮಗಳಲ್ಲಿ ಆತಂಕ ಹೆಚ್ಚಾಗುತ್ತಲೇ ಇದ್ದು, ಯಾವಾಗ ಯಾರಿಗೆ ಸೋಂಕು ಧೃಡಪಡುತ್ತದೆ ಎನ್ನುವ ದುಗುಡ ಹೆಚ್ಚಾಗುತ್ತಿದೆ.
ಕಂಟೈನ್‌ಮೆಂಟ್‌ನಲ್ಲಿ ಪರದಾಟ:
ಗದಗ ನಗರದ ರಂಗನವಾಡಾ ಹಾಗೂ ಗಂಜಿಬಸವೇಶ್ವರ ಓಣಿಯ ಭಾಗದಲ್ಲಿಯೇ 7 ಕೊರೋನಾ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಆ ಭಾಗವನ್ನು ಜಿಲ್ಲಾಡಳಿತ ಕಂಟೈನಮೆಂಟ್ ಪ್ರದೇಶವೆಂದು ಘೋಷಣೆ ಮಾಡಿ, ಹಲವಾರು ನಿಬಂಧನೆಗಳನ್ನು ಹಾಕಿ, ಮೇ. 28ರಂದು ಸೀಲ್‌ಡೌನ್ ಮಾಡಿದ್ದು ಅಲ್ಲಿನ ಯಾರೊಬ್ಬರೂ ಹೊರಗೆ ಬರದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಆ ಪ್ರದೇಶದಲ್ಲಿ ವಾಸಿಸುವ ಇನ್ನುಳಿದ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವಲ್ಲಿ ಜಿಲ್ಲಾಡಳಿತ ಮಾತ್ರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಅದರಲ್ಲಿಯೂ ಬಿಪಿ, ಶುಗರ್ ಸೇರಿದಂತೆ ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ತೀವ್ರ ಸಮಸ್ಯೆಯಾಗಿದ್ದು ಈ ಬಗ್ಗೆ ಈ ಹಿಂದೆ ನಗರಸಭೆ ಸದಸ್ಯರಾಗಿದ್ದ ವಾರ್ಡ್ ನಂಬರ್ 20, 21, 22 ಹಾಗೂ 23 ಸದಸ್ಯರ ಗಮನಕ್ಕೆ ತಂದರೂ ಯಾರೂ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಕನ್ನಡಪ್ರಭಕ್ಕೆ ದೂರವಾಣಿಯ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.