ಯೋಗೇಶ್ವರ್ ಮೇಲೇಕೆ FIR ದಾಖಲಿಸಿಲ್ಲ?: ನಿಖಿಲ್ ಕುಮಾರಸ್ವಾಮಿ

Published : Oct 03, 2022, 06:15 AM ISTUpdated : Oct 03, 2022, 09:41 AM IST
ಯೋಗೇಶ್ವರ್ ಮೇಲೇಕೆ FIR ದಾಖಲಿಸಿಲ್ಲ?: ನಿಖಿಲ್ ಕುಮಾರಸ್ವಾಮಿ

ಸಾರಾಂಶ

 ಯೋಗೇಶ್ವರ್‌ ಮತ್ತು ಅವರ ಬೆಂಬಲಿಗರ ಮೇಲೆ ಎಫ್‌ಐಆರ್‌ ದಾಖಲಿಸಿ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆಗ್ರಹಿಸಿದರು.

 ಚನ್ನಪಟ್ಟಣ( ಅ.03):  ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಗುದ್ದಲಿಪೂಜೆ ರದ್ದು ಪಡಿಸುವಂತೆ ಆದೇಶ ಹೊರಡಿಸಿದ್ದರೂ, ಲೆಕ್ಕಿಸದೆ ಗುದ್ದಲಿಪೂಜೆ ನಡೆಸಿದ ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್‌ ಮತ್ತು ಅವರ ಬೆಂಬಲಿಗರ ಮೇಲೆ ಎಫ್‌ಐಆರ್‌ ದಾಖಲಿಸಿ ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆಗ್ರಹಿಸಿದರು.

ನಗರದ ಡಿವೈಎಸ್‌ಪಿ ಕಚೇರಿಗೆ ಭಾನುವಾರ ಭೇಟಿ ನೀಡಿ, ಶನಿವಾರದ ಘಟನೆಗೆ ಸಂಬಂಧಿಸಿದಂತೆ ಜೆಡಿಎಸ್‌ (JDS) ಕಾರ್ಯಕರ್ತರ ಮೇಲೆ ಎಫ್‌ಐಆರ್‌ ದಾಖಲಿಸಿರುವ ಕುರಿತಂತೆ ಡಿವೈಎಸ್‌ಪಿ (DYSP) ಓಂಪ್ರಕಾಶ್‌ ಅವರೊಂದಿಗೆ ಚರ್ಚಿಸಿದ ಅವರು, ರಾಂಪುರದಲ್ಲಿ ಗುದ್ದಲಿಪೂಜೆ ಕಾರ್ಯಕ್ರಮ ರದ್ದುಪಡಿಸುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೂ ತಾಲೂಕಿನ ಪಟ್ಲು ಹಾಗೂ ಬೈರಾಪಟ್ಟಣಗಳಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟದ್ದು ಏಕೆ ಎಂದು ಡಿವೈಎಸ್‌ಪಿಯನ್ನು ಪ್ರಶ್ನಿಸಿದರು.

ಯಾರ ಕುಮ್ಮಕ್ಕು ಕಾರಣ:
ರದ್ದು ಮಾಡಿದ್ದರೂ ಕಾರ್ಯಕ್ರಮ ನಡೆಸಲು ಅವಕಾಶ ಕೊಟ್ಟಿದ್ದರಿಂದಲೇ ಇಷ್ಟೆಲ್ಲ ಅವಾಂತರ ನಡೆದಿದೆ. ಈ ವಿಚಾರವನ್ನು ಪ್ರಶ್ನಿಸಲು ಹೋದ ಜೆಡಿಎಸ್‌ ಕಾರ್ಯಕರ್ತರ ಮೇಲೆ ಲಾಠಿ ಚಾಜ್‌ರ್‍ ನಡೆಸಲಾಗಿದೆ. ಅಮಾಯಕ ಕಾರ್ಯಕರ್ತರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ಯಾರ ಕುಮ್ಮಕ್ಕಿನಿಂದ ಹೀಗೆ ಮಾಡಲಾಗಿದೆ ಎಂದು ನಿಖಿಲ್ ಪ್ರಶ್ನಿಸಿದರು.

ಅವರ ಮೇಲೇಕೆ ಎಫ್‌ಐಆರ್‌ ದಾಖಲಿಸಿಲ್ಲ:

ರಾಮನಗರದ ಎಸ್‌ಪಿ ನಡೆದುಕೊಳ್ಳುವ ರೀತಿ ಸರಿ ಇಲ್ಲ. ನಮ್ಮ ಕಾರ್ಯಕರ್ತರು ಮಾತ್ರ ತಪ್ಪು ಮಾಡಿದರಾ? ಅವರ ಕಾರ್ಯಕರ್ತರು ತಪ್ಪು ಮಾಡಲಿಲ್ಲವಾ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಕಾರ್ಯಕರ್ತರ ಮೇಲು ಎಫ್‌ಐಆರ್‌ ದಾಖಲಿಸಿ ಎಂದು ಆಗ್ರಹಿಸಿದರು. ಶನಿವಾರದ ಘಟನೆಯಲ್ಲಿ ಕೇವಲ ಒಂದು ಪಕ್ಷದ ಕಾರ್ಯಕರ್ತರನ್ನೇ ಗುರಿಯಾಗಿಸಲಾಗಿದೆ. ನಮ್ಮ ಕಾರ್ಯಕರ್ತರು ಕಲ್ಲು ಹೊಡೆದಿದ್ದಾರೆ ಎನ್ನುವುದಕ್ಕೆ ಯಾವ ಸಾಕ್ಷಿ ಇದೆ. ಅವರ ಕಡೆಯವರೇ ಕಲ್ಲು ತೂರಿ ನಮ್ಮ ಮೇಲೆ ಆರೋಪ ಮಾಡಿದ್ದಾರೆ ಎಂದು ದೂರಿದರು.

ಕಾರ‍್ಯಕರ್ತರು ಆತಂಕವಾದಿಗಳ?
ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಎಂದಾದರೂ ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡಿದ್ದಾರಾ? ಯಾವ ಅಧಿಕಾರಿಗಳನ್ನಾಗಲಿ ಏಕವಚನದಲ್ಲಿ ಮಾತನಾಡಿದ್ದಾರಾ? ನಮ್ಮ ಕುಟುಂಬವಾಗಲಿ, ಪಕ್ಷವಾಗಲಿ ಎಂದೂ ಮೂಗು ತೂರಿಸಿಲ್ಲ. ಆದರೂ ನಮ್ಮ ಕಾರ್ಯಕರ್ತರಿಗೆ ಈ ರೀತಿ ಹೊಡೆದಿರುವುದು ಸರಿಯಲ್ಲ. ಕಾರ್ಯಕರ್ತರೇನು ಆತಂಕವಾದಿಗಳ ಅವರನ್ನು ಆ ರೀತಿ ಹೊಡೆದಿದ್ದೀರಲ್ಲ. ಈ ರೀತಿ ನಡೆದುಕೊಂಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಿಡಿಕಾರಿದರು.

ತಡೆಯದಿದ್ದರೆ ದೊಡ್ಡ ಗಲಭೆ:  ಡಿವೈಎಸ್‌ಪಿ ಓಂಪ್ರಕಾಶ್‌ ಮಾತನಾಡಿ, ನಿಮ್ಮ ಕಾರ್ಯಕರ್ತರನ್ನು ತಡೆಯದಿದ್ದರೇ ಇನ್ನು ದೊಡ್ಡ ಮಟ್ಟದ ಗಲಭೆಯಾಗುತ್ತಿತ್ತು. ಗಲಭೆಗೆ ಅವಕಾಶ ಕಲ್ಪಿಸಬಾರದು ಎಂಬ ಉದ್ದೇಶದಿಂದ ಕಾರ್ಯಕರ್ತರನ್ನು ತಡೆಯಲಾಯಿತೆ ಹೊರತು ಬೇರಾರ‍ಯವ ಉದ್ದೇಶದಿಂದಲೂ ಅಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಆದ್ಯತೆ. ಯಾವುದೇ ಕಾರ್ಯಕ್ರಮವಿರಲಿ ಅದಕ್ಕೆ ರಕ್ಷಣೆ ನೀಡುವುದು ನಮ್ಮ ಕೆಲಸ. ಕಾರ್ಯಕ್ರಮವನ್ನು ರದ್ದು ಮಾಡುವ ಅಧಿಕಾರವಾಗಲಿ ತಡೆಯುವ ಅಧಿಕಾರವಾಗಲಿ ನಮಗಿಲ್ಲ. ಅದನ್ನು ಮಾಡಬೇಕಾದದ್ದು ಸಂಬಂಧಿಸಿದ ಶಿಷ್ಟಾಚಾರ ಅಧಿಕಾರಿಯ ಕರ್ತವ್ಯ. ಅವರು ಕಾರ್ಯಕ್ರಮವನ್ನು ತಡೆಯುವಂತೆ ಹೇಳಿದ್ದರೆ ತಡೆಯಬಹುದಿತ್ತು ಎಂದು ಸ್ಪಷ್ಟನೆ ನೀಡಿದರು.

ಈ ಸಂದರ್ಭದಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಎಚ್‌.ಸಿ.ಜಯಮುತ್ತು, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್‌ ದೇವರಾಜು, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ನಗರಸಭೆ ಅಧ್ಯಕ್ಷ ಪ್ರಶಾಂತ್‌, ಸ್ಥಾಯಿ ಸಮಿತಿ ಸದಸ್ಯ ಮಂಜುನಾಥ್‌, ಜೆಡಿಎಸ್‌ ಮುಖಂಡ ಎಂ.ಸಿ.ಕರಿಯಪ್ಪ ಇತರರಿದ್ದರು.

  • ಗುದ್ದಲಿಪೂಜೆ ರದ್ದು ಪಡಿಸುವಂತೆ ಆದೇಶ ಹೊರಡಿಸಿದ್ದರೂ, ಲೆಕ್ಕಿಸದೆ ಗುದ್ದಲಿಪೂಜೆ ನಡೆಸಿದ ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್‌
  • ಯೋಗೇಶ್ವರ್‌ ಮತ್ತು ಅವರ ಬೆಂಬಲಿಗರ ಮೇಲೆ ಎಫ್‌ಐಆರ್‌ ದಾಖಲಿಸಿ ಎಂದ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ

PREV
Read more Articles on
click me!

Recommended Stories

ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌