Dakshina Kannada: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯುವ ಸಾಧ್ಯತೆ ಹಿನ್ನೆಲೆ ಜುಲೈ 29ರಿಂದ ಆಗಸ್ಟ್ 01ರ ವರೆಗೆ ನೈಟ್ ಕರ್ಫ್ಯೂ ಹೇರಲಾಗಿದೆ.
ಮಂಗಳೂರು (ಜು. 29): ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯ ಉದ್ವಿಗ್ನತೆ ಸಹಜ ಸ್ಥಿತಿಗೆ ಮರಳುವ ಮೊದಲೇ ಮಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದೆ. ಸುರತ್ಕಲ್‌ನಲ್ಲಿ ರಾತ್ರಿ ಯುವಕನೊಬ್ಬನ ಮೇಲೆ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಈ ಬೆನ್ನಲ್ಲೇ ಜಿಲ್ಲೆಯಲ್ಲಿ ಖಾಕಿ ಹದ್ದಿನ ಕಣ್ಣು ಇಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯುವ ಸಾಧ್ಯತೆ ಹಿನ್ನೆಲೆ ಜುಲೈ 29ರಿಂದ ಆಗಸ್ಟ್ 06 (ಶನಿವಾರ) ರವರೆಗೆ ಸಂಜೆ 6 ಗಂಟೆಗೆ ಎಲ್ಲಾ ಅಂಗಡಿ-ಶಾಪ್ ಗಳನ್ನು ಬಂದ್ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ.
ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಕಾರ್ಯಾಚರಿಸಲು ಅವಕಾಶ ನೀಡಲಾಗಿದೆ. ಸಂಜೆ 6 ಗಂಟೆಯೊಳಗೆ ಎಲ್ಲಾ ರೀತಿಯ ವ್ಯಾಪಾರ ಕೇಂದ್ರಗಳ ಮುಚ್ಚುವಂತೆ ಆದೇಶಿಸಲಾಗಿದೆ. ಮೆಡಿಕಲ್, ಆಸ್ಪತ್ರೆ ಹಾಗೂ ತುರ್ತು ಸೇವೆಗಳಿಗೆ ಈ ಆದೇಶ ಅನ್ವಯ ಇಲ್ಲ. ಇಂದಿನಿಂದ ಅಗಸ್ಟ್ 6ರ ಮಧ್ಯರಾತ್ರಿಯವರೆಗೆ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಬಂಟ್ವಾಳ, ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಿಗೆ ಅನ್ವಯವಾಗಲಿದೆ.
ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ NIAಗೆ ಹಸ್ತಾಂತರ
ಜಿಲ್ಲಾಡಳಿತದಿಂದ ಶಾಂತಿ ಸಭೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಹಿತಕರ ಘಟನೆ ಸಾಧ್ಯತೆ ಹಿನ್ನೆಲೆ, ನಾಳೆ ಮಂಗಳೂರಿನಲ್ಲಿ ಜಿಲ್ಲಾಡಳಿತದ ವತಿಯಿಂದ ಶಾಂತಿ ಸಭೆ ಆಯೋಜಿಸಲಾಗಿದೆ. ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ ನಡೆಯಲಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಶಾಂತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಧಾರ್ಮಿಕ ಮುಖಂಡರು, ಪೊಲೀಸ್ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರ ಉಪಸ್ಥಿತಿಯಲ್ಲಿ ಈ ಸಭೆ ನಡೆಯಲಿದೆ. ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಕಮಿಷನರ್ ಶಶಿಕುಮಾರ್ ಸೇರಿ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ನೈಟ್ ಕರ್ಪ್ಯೂ ಅಲ್ಲ: "ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ ಮೂರು ದಿನ ಕಠಿಣ ಪರಿಸ್ಥಿತಿ ಇದೆ, ಹೀಗಾಗಿ ಸಂಜೆ ಆರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆ ತನಕ ಅಂಗಡಿ ಮುಂಗಟ್ಟು ಬಂದ್, ನಗರ ವ್ಯಾಪ್ತಿಗೂ ಬಂದ್ ಆದೇಶ ಅನ್ವಯವಾಗಲಿದೆ, ಇದು ನೈಟ್ ಕರ್ಪ್ಯೂ ಅಲ್ಲ, ಬದಲಾಗಿ ಜನ ಕಡಿಮೆ ಮಾಡಿ ಪೊಲೀಸರಿಗೆ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶ" ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಹೇಳಿದ್ದಾರೆ.
"ಅಗತ್ಯ ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ, ರಾತ್ರಿ ಸಿನಿಮಾ ಶೋ ಮಾಡದಂತೆ ಸೂಚನೆ ಮಾಡಲಾಗಿದೆ, ಸಾರ್ವಜನಿಕ ಸಭೆ ಸಮಾರಂಭ ಮಾಡುವಂತೆ ಇಲ್ಲ, ಆಯೋಜಕರಿಗೆ ಸೂಚನೆ ಮಾಡಲಾಗಿದೆ, ರಾತ್ರಿ ಅಗತ್ಯ ಪ್ರಯಾಣ ಮಾಡುವವರು ಟಿಕೆಟ್ ಗಳನ್ನು ತೋರಿಸಿ ಪ್ರಯಾಣ ಮಾಡಬಹುದು" ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಂಗಳೂರಲ್ಲಿ ಮದ್ಯಮಾರಾಟ ನಿಷೇಧ?: ಇನ್ನು ಇಡೀ ಜಿಲ್ಲೆಯಲ್ಲಿ ಮದ್ಯಮಾರಾಟ ನಿಷೇಧಕ್ಕೆ ಜಿಲ್ಲಾಡಳಿತದ ಚಿಂತನೆ ನಡೆಸಿದ್ದು, ಸದ್ಯ ಬಜ್ಪೆ, ಪಣಂಬೂರು, ಮೂಲ್ಕಿ ಸುರತ್ಕಲ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ದಕ್ಷಿಣ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧಕ್ಕೆ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಪೊಲೀಸರ ಜೊತೆಗೆ ಈ ಬಗ್ಗೆ ಮಾಹಿತಿ ಸಂಗ್ರಸುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಹೇಳಿದ್ದಾರೆ.