* ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ರಾಷ್ಟ್ರೀಯ ಹಸಿರು ಪೀಠ ಆಘಾತ
* ಉಡುಪಿಯ ಯುಪಿಸಿಎಲ್‌ಗೆ 52 ಕೋಟಿ ರೂ. ದಂಡ
* ಪರಿಸರದ ನಿಯಮಗಳನ್ನು ಉಲ್ಲಂಘಿಸಿದಕ್ಕೆ ದಂಡ
ಉಡುಪಿ, (ಜೂನ್.02): ಆರಂಭದಿಂದಲೂ ಪರಿಸರ ವಿರೋಧಿ ಎಂಬ ಹಣೆಪಟ್ಟಿ ಹೊತ್ತುಕೊಂಡಿರುವ ಉಡುಪಿಯ ಪಡುಬಿದ್ರೆಯ ಎಲ್ಲೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ರಾಷ್ಟ್ರೀಯ ಹಸಿರು ಪೀಠ ಆಘಾತ ನೀಡಿದೆ . ಬರೋಬ್ಬರಿ 52 ಕೋಟಿ ರೂಪಾಯಿ ದಂಡ ವಿಧಿಸಿ ಎಚ್ಚರಿಸಿದೆ.
ನಂದಿಕೂರು ಜನಜಾಗೃತಿ ಸಮಿತಿಯು 2005ರಲ್ಲಿ ಈ ಕುರಿತು ರಾಷ್ಟ್ರೀಯ ಹಸಿರು ಪೀಠದಲ್ಲಿ ದಾವೆ ಹೂಡಿತ್ತು. ವಿಶೇಷ ತಂಡಗಳ ಮೂಲಕ ಅಧ್ಯಯನ ನಡೆಸಿದ ಪೀಠ, ಮೇ 31ರಂದು ಯುಪಿ ಎಲ್‌ಗೆ 52 ಕೋಟಿ ರೂ. ದಂಡ ವಿಧಿಸಿದೆ.
ಎಲ್ಲೂರು ಗ್ರಾಮದಲ್ಲಿ ಕಳೆದ ಒಂದೂವರೆ ದಶಕದಿಂದ ಸಕ್ರಿಯವಾಗಿರುವ, ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಕಾರ್ಯಾಚರಿಸುತ್ತಿದೆ .ಈ ಯೋಜನೆಯು ಪರಿಸರದ ನಿಯಮಗಳನ್ನು ಉಲ್ಲಂಘಿಸಿರುವುದು ಮತ್ತು ಯೋಜನಾ ಪರಿಸರದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗಿರುವುದನ್ನು ಪರಿಗಣಿಸಿ ಬೃಹತ್ ಮೊತ್ತದ ದಂಡ ಪಾವತಿಸುವಂತೆ ಸೂಚಿಸಲಾಗಿದೆ.
CRZ ವ್ಯಾಪ್ತಿಯ ಮರಳು ಮಾರುವಂತಿಲ್ಲ ಎನ್‌ಜಿಟಿ ಆದೇಶ
ಈ ಮೊದಲೇ ಯುಪಿಸಿಯಲ್ ಸ್ಥಾವರವು ಐದು ಕೋಟಿ ರೂಪಾಯಿಯನ್ನು ಠೇವಣಿ ಯಾಗಿ ಇರಿಸಿದೆ. ಈ ಮೊತ್ತವನ್ನು ದಂಡದ ಸ್ವರೂಪದಲ್ಲಿ ವಿನಿಯೋಗ ಮಾಡಿಕೊಳ್ಳಲು ಹಸಿರು ಪೀಠ ಸೂಚಿಸಿದೆ. ಬರುವ ಮೂರು ತಿಂಗಳ ಒಳಗಾಗಿ ಯುಪಿಸಿಎಲ್ ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿಗೆ ದಂಡದ ಮೊತ್ತವನ್ನು ಪಾವತಿಸಬೇಕೆಂದು ಹೇಳಿದೆ. ಈ ಹಣವನ್ನು ಪರಿಸರದ ಸುರಕ್ಷತೆಯ ದೃಷ್ಟಿಯಿಂದ ಬಳಸಿಕೊಳ್ಳುವಂತೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ಹಸಿರುಪೇಟೆ ನಿರ್ದೇಶನ ನೀಡಿದೆ.
ಯುಪಿಸಿಎಲ್ ಪರಿಸರದ 10 ಕಿ.ಮೀ. ಪ್ರದೇಶ ದಲ್ಲಿ ಪರಿಸರ, ಬೆಳೆ ಹಾನಿ, ಮಣ್ಣಿನ ಫಲವತ್ತತೆಯ ಪರೀಕ್ಷೆ ಮಾಡಬೇಕು. ಈ ಪರಿಸರದ ಕುಡಿಯುವ ನೀರು ಕಪ್ಪು ವರ್ಣಕ್ಕೆ ತಿರುಗಿರುವ ಬಗ್ಗೆಯೂ ದೂರು ಕೇಳಿಬಂದಿದೆ. ಗಾಳಿಯ ಗುಣಮಟ್ಟ ಪರಿಶೀಲನೆಗಳನ್ನು ಮಾಡಬೇಕು. ಗ್ರಾಮದ ರೈತ ಹಾಗೂ ಪರಿಸರದ ಮನೆಮಂದಿ ಯನ್ನೂ ಸೇರಿದಂತೆ ಎಲ್ಲರನ್ನೂ ಭೇಟಿ ಮಾಡಿ ಯುಪಿಸಿಎಲ್ ನಿಂದಾಗಿರುವ ನಷ್ಟವನ್ನು ಅಂದಾಜಿಸಲು ಸಮಿತಿ ಯೊಂದನ್ನು ರಚಿಸಲು ಸೂಚಿಸಿದೆ.
ಈ ಸಮಿತಿಯಲ್ಲಿ ಉಡುಪಿ ಜಿಲ್ಲಾಧಿ ಕಾರಿ ಅಥವಾ ಸಹಾಯಕ ಕಮಿಷನರ್ ಅಥವಾ ತಾಲೂಕು ದಂಡಾಧಿಕಾರಿಗಳ ಸಹಿತ ಯು ಪಿಸಿ ಎಲ್‌ನ ಓರ್ವ ಪ್ರತಿನಿಧಿ ಇರಬಹುದು. ಉಳಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು, ಹಿರಿಯ ವಿಜ್ಞಾನಿಗಳು ಈ ವಿಶೇಷ ಸಮಿತಿಯಲ್ಲಿರುತ್ತಾರೆ. ಸಮಿತಿಯು ಅಂದಾಜಿಸುವ ಮೊತ್ತವನ್ನು ಯುಪಿಸಿಎಲ್ ಮೂಲಕ ಆಯಾಯ ರೈತರಿಗೆ, ಸಂತ್ರಸ್ತರಿಗೆ ತಲಪುವಂತೆಯೂ ನೋಡಿ ಕೊಳ್ಳಬೇಕೆಂದು ಪೀಠವು ಆದೇಶಿಸಿದೆ.