ಶಿವಮೊಗ್ಗ, ಮಲೆನಾಡು ಭಾಗದ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಸಂಸದ ರಾಘವೇಂದ್ರ

Published : Oct 12, 2026, 07:29 AM IST
Talaguppa BY Raghavendra

ಸಾರಾಂಶ

ಶಿವಮೊಗ್ಗ ಮತ್ತು ಮಲೆನಾಡು ಭಾಗದ ರೈಲು ಪ್ರಯಾಣಿಕರಿಗೆ ದಸರಾ ಹಬ್ಬದ ಕೊಡುಗೆಯಾಗಿ ಆಧುನಿಕ ಎಲ್.ಎಚ್.ಬಿ ಬೋಗಿಗಳನ್ನು ಅಳವಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಮೈಸೂರು-ತಾಳಗುಪ್ಪ ಮತ್ತು ತಾಳಗುಪ್ಪ-ಶಿವಮೊಗ್ಗ ಟೌನ್ ರೈಲುಗಳಲ್ಲಿ ಈ ಹೊಸ ಬೋಗಿಗಳು ಅಕ್ಟೋಬರ್ 20 ಮತ್ತು 21ರಿಂದ ಬಳಕೆಗೆ ಬರಲಿವೆ.

ಶಿವಮೊಗ್ಗ: ಶಿವಮೊಗ್ಗ-ಮಲೆನಾಡು ಭಾಗದ ರೈಲು ಪ್ರಯಾಣಿಕರಿಗೆ ಉತ್ತಮ ಪ್ರಯಾಣಾನುಭವ ಒದಗಿಸುವ ನಿಟ್ಟಿನಲ್ಲಿ, ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್ ಹಾಗೂ ತಾಳಗುಪ್ಪ–ಶಿವಮೊಗ್ಗ ಟೌನ್ ರೈಲುಗಳೂ ಸೇರಿದಂತೆ ನೈರುತ್ಯ ರೈಲ್ವೆಯ ಆರು ರೈಲುಗಳಲ್ಲಿ (ಪರಸ್ಪರ ಮೂಲ ನಿಲ್ದಾಣ ಮತ್ತು ಗಮ್ಯನಿಲ್ದಾಣಗಳ ನಡುವೆ) ಹಳೆಯ ಬೋಗಿಗಳ ಬದಲಿಗೆ ಆಧುನಿಕ ಎಲ್‌.ಎಚ್‌.ಬಿ (ಲಿಂಕ್-ಹಾಫ್‌ಮನ್-ಬುಷ್) ಬೋಗಿಗಳನ್ನು ಅಳವಡಿಸುವ ರೈಲ್ವೆ ಇಲಾಖೆ ನಿರ್ಧಾರ ಸ್ವಾಗತಾರ್ಹ ಮತ್ತು ಸಂತಸದ ಸಂಗತಿ ಎಂದು ಸಂಸದ ಬಿ.ವೈ. ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.

ದೇಶದ ರೈಲ್ವೆ ವ್ಯವಸ್ಥೆಯನ್ನು ಆಧುನೀಕರಿಸುವುದರ ಜೊತೆಗೆ ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ಉತ್ತಮ ಸೇವೆಗಳನ್ನು ಒದಗಿಸಲು ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನಿರಂತರವಾಗಿ ಕೈಗೊಳ್ಳುತ್ತಿರುವ ಕ್ರಮಗಳು ಶ್ಲಾಘನೀಯ. ಇದರಿಂದ ನಮ್ಮ ಜಿಲ್ಲೆಯ ನಾಗರಿಕರಿಗೂ ಉತ್ತಮ ಪ್ರಯಾಣಿಕ ಸೌಲಭ್ಯ ಮತ್ತು ಸವಲತ್ತುಗಳು ಲಭ್ಯವಾಗುತ್ತಿವೆ.

ದಸರಾ ಹಬ್ಬದ ಕೊಡುಗೆ

ನವರಾತ್ರಿ ಹಾಗೂ ನಾಡಹಬ್ಬ ದಸರೆಯ ಸಂದರ್ಭದಲ್ಲಿ ಈ ಸುರಕ್ಷಿತ, ಆರಾಮದಾಯಕ ಮತ್ತು ಉತ್ತಮ ಸೇವೆ ನಮ್ಮ ಜಿಲ್ಲೆಗೆ ಲಭ್ಯವಾಗುತ್ತಿರುವುದು ದಸರಾ ಹಬ್ಬದ ಕೊಡುಗೆ ಎಂದೇ ನಾನು ಭಾವಿಸುತ್ತೇನೆ. ಇದಕ್ಕಾಗಿ ಮಾನ್ಯ ಪ್ರಧಾನಿ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣನವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಸಂಸದ ರಾಘವೇಂದ್ರ ಹೇಳಿದ್ದಾರೆ.

ಶಿವಮೊಗ್ಗ ಹಾಗೂ ಮಲೆನಾಡು ಭಾಗದ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಸೌಲಭ್ಯಗಳ ಸುಧಾರಣೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸಹಕಾರ, ನೆರವುಗಳು ಇದೇ ರೀತಿ ಮುಂದುವರಿಯುವ ವಿಶ್ವಾಸವಿದೆ ಎಂದಿದ್ದಾರೆ.

ಆಧುನಿಕ ಎಲ್‌.ಎಚ್‌.ಬಿ ಬೋಗಿಗಳು

ನೈರುತ್ಯ ರೈಲ್ವೆಯ ಅಧಿಕೃತ ಆದೇಶದ ಪ್ರಕಾರ, ಮೈಸೂರು–ತಾಳಗುಪ್ಪ ಎಕ್ಸ್‌ಪ್ರೆಸ್‌ನಲ್ಲಿ ಅಕ್ಟೋಬರ್ 20ರಿಂದ ಹಾಗೂ ತಾಳಗುಪ್ಪ–ಶಿವಮೊಗ್ಗ ಟೌನ್ ರೈಲಿನಲ್ಲಿ ಅ.21ರಿಂದ ಹೊಸ ಬೋಗಿಗಳ ಅಳವಡಿಕೆ ಜಾರಿಗೆ ಬರಲಿದೆ. ಎಲ್‌.ಎಚ್‌.ಬಿ ಬೋಗಿಗಳು ಆಧುನಿಕ ವಿನ್ಯಾಸ, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಉತ್ತಮ ಪ್ರಯಾಣಾನುಭವಕ್ಕೆ ಹೆಸರುವಾಸಿಯಾಗಿವೆ.

ಹಳೆಯ ಬೋಗಿಗಳ ಬದಲಿಗೆ ಇಂತಹ ಆಧುನಿಕ ಬೋಗಿಗಳನ್ನು ಅಳವಡಿಸುವುದರಿಂದ ಶಿವಮೊಗ್ಗ–ಮಲೆನಾಡು ಭಾಗದ ಜನರಿಗೆ ರೈಲು ಪ್ರಯಾಣದ ಗುಣಮಟ್ಟ ಸುಧಾರಿಸಲಿದೆ. ಹೆಚ್ಚಿನ ಸೌಲಭ್ಯ ಮತ್ತು ಸುರಕ್ಷತೆಗಳ ಜೊತೆಗೆ, ಆಯಾ ರೈಲುಗಳಲ್ಲಿ ಪ್ರಯಾಣಿಕರಿಗೆ ಲಭ್ಯವಿರುವ ಒಟ್ಟು ಸ್ಥಾನಗಳ ಸಂಖ್ಯೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಈ ಸುಧಾರಣೆಯಿಂದ ಬೆಂಗಳೂರಿಗೆ ಸಂಚರಿಸುವ ಮಲೆನಾಡಿನ ಜನರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಪ್ರವಾಸಿಗರಿಗೆ ಉತ್ತಮ ರೈಲು ಪ್ರಯಾಣದ ಅನುಭವ ಒದಗಿಸಲು ಸಹಕಾರಿಯಾಗಲಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

PREV
Read more Articles on
click me!

Recommended Stories

ಮಂಗಳೂರು: ಶಿರ್ಲಾಲು ಗ್ರಾಮದಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಅಪರೂಪದ ಕರಿಚಿರತೆ!
ತೀರ್ಥಹಳ್ಳಿಯ ನಂದಿಹೊಳೆಯಲ್ಲಿ ಅಪರೂಪದ ವೀರಗಲ್ಲು ಪತ್ತೆ, ಹುಲಿಯೊಂದಿಗೆ ಹೋರಾಡಿ ಪತಿ ವೀರಮರಣ ಪತ್ನಿಯ ಸಹಗಮನ!