
ಬೆಳ್ತಂಗಡಿ: ಶಿರ್ಲಾಲು ಗ್ರಾಮದ ಮಣಿಲದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಅಪರೂಪದ ಕರಿ ಚಿರತೆಯೊಂದು ಸೆರೆಯಾಗಿದೆ. ಪದ್ಮನಾಭ ಅವರ ಮನೆಯ ಸಮೀಪ ಅರಣ್ಯ ಇಲಾಖೆ ಬೋನನ್ನು ಇರಿಸಿದ್ದು, ಶನಿವಾರ ಚಿರತೆ ಬೋನಿಗೆ ಬಿದ್ದಿದೆ.
ಶಿರ್ಲಾಲು ಗ್ರಾಮದ ಮಣಿಲ ಪರಿಸರದಲ್ಲಿ ಚಿರತೆಯ ಚಲನವಲನದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವೇಣೂರು ವಲಯದ ವತಿಯಿಂದ ಕೆಲವು ದಿನಗಳ ಹಿಂದೆ ಪದ್ಮನಾಭ ಅವರ ಮನೆಯ ಸಮೀಪ ಬೋನು ಇರಿಸಲಾಗಿತ್ತು. ಶನಿವಾರ ಈ ಬೋನಿಗೆ ಸುಮಾರು ಎರಡು ವರ್ಷ ಪ್ರಾಯದ ಗಂಡು ಚಿರತೆ ಬಿದ್ದಿರುವುದು ಗಮನಕ್ಕೆ ಬಂದಿದ್ದು, ತಕ್ಷಣವೇ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮುಂದಿನ ಕ್ರಮ ಕೈಗೊಂಡರು.
ಸಾಮಾನ್ಯವಾಗಿ ಚಿರತೆಗಳು ಹಳದಿ ಅಥವಾ ಕಂದು ಬಣ್ಣದ ಮೈಮೇಲೆ ಕಪ್ಪು ಚುಕ್ಕೆಗಳನ್ನು ಹೊಂದಿರುತ್ತವೆ. ಆದರೆ, ಕಪ್ಪು ಬಣ್ಣದ ಚಿರತೆಗಳು ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ. ಚಿರತೆಯು ಆರೋಗ್ಯವಾಗಿದ್ದು, ಅರಣ್ಯ ಇಲಾಖೆಯ ಪಶುವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಸುರಕ್ಷಿತವಾಗಿ ಸಂರಕ್ಷಿತಾರಣ್ಯಕ್ಕೆ ಬಿಡಲಾಗುವುದು ಎಂದು ವೇಣೂರು ವಲಯ ಅರಣ್ಯಾಧಿಕಾರಿ ಭರತ್ ಯು.ಜಿ. ತಿಳಿಸಿದ್ದಾರೆ.
ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಅಳದಂಗಡಿ ಶಾಖೆಯ ಉಪವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ಗಸ್ತು ವನಪಾಲಕ ಮಂಜುನಾಥ್ ಬಿ.ಎಸ್., ಅರಣ್ಯ ವೀಕ್ಷಕರಾದ ವೆಂಕಪ್ಪ ನಾಯ್ಕ ಮತ್ತು ಪೂವಪ್ಪ ನಾಯ್ಕ ಹಾಗೂ ಸ್ಥಳೀಯರು ಭಾಗವಹಿಸಿದ್ದರು. ಕಳೆದ ಕೆಲವು ಸಮಯದ ಹಿಂದೆ ಶಿರ್ಲಾಲಿನಲ್ಲಿ ಹಳದಿ ಬಣ್ಣದ ಚಿರತೆ ಅರಣ್ಯ ಇಲಾಖೆ ಇರಿಸಿದ ಬೋನಿಗೆ ಬಿದ್ದಿತ್ತು.