
ಧಾರವಾಡ: ಮಳೆ ಕೊರತೆ ಎದುರಿಸುತ್ತಿರುವ ಧಾರವಾಡ ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಜಿಲ್ಲೆಯ ಮೇಲುಸ್ತುವಾರಿ ಆಗಿರುವ ಸತೀಶ ಜಾರಕಿಹೊಳಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಪ್ರತಿಶತ ಕೃಷಿ ಭೂಮಿಯಲ್ಲಿ ಬಿತ್ತನೆಯಾಗಿದ್ದು, ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಮೋಡಗಳಿದ್ದರೂ ಮಳೆ ಸುರಿಯದೇ ರೈತರು ನಿರಾಶರಾಗುತ್ತಿದ್ದಾರೆ. ಮಳೆಯ ಕೊರತೆ ಬರೀ ಕೃಷಿಗೆ ಮಾತ್ರವಲ್ಲದೇ ಕುಡಿಯುವ ನೀರು, ಜಾನುವಾರುಗಳಿಗೆ ನೀರು, ಮೇವಿಗೂ ಕೊರತೆ ಉಂಟಾಗಿದೆ. ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಂತೂ ತೀವ್ರ ಮಳೆ ಕೊರತೆ ಉಂಟಾಗಿ ಬೆಳೆಗಳು ಒಣಗಿ ಹೋಗಿವೆ. ರೈತರು ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಆದ್ದರಿಂದ ರಾಜ್ಯ ಸರ್ಕಾರ ರೈತರ ಪರ ನಿಲ್ಲಬೇಕಿದೆ. ಹವಾಮಾನ ತಜ್ಞರ ಸಲಹೆ ಮೇರೆಗೆ ಧಾರವಾಡ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯವನ್ನು ಶೀಘ್ರವಾಗಿ ಕಂದಾಯ, ಕೃಷಿ, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕೈಗೊಂಡು ಮಳೆ ಕೊರತೆ ನೀಗಿಸಬೇಕು ಎಂದು ಕೋನರಡ್ಡಿ ಮನವಿ ಮಾಡಿದ್ದಾರೆ.
ಇನ್ನು, ಹಾವೇರಿ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಜು. 7ರಿಂದ ಮೂರು ದಿನಗಳ ಕಾಲ ಜಿಲ್ಲೆಯ ಎಲ್ಲ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದ್ದು, ಈ ಕಾರ್ಯಕ್ಕೆ ರಾಜ್ಯ ಸರ್ಕಾರ ಸಹ ಒಪ್ಪಿಗೆ ಸೂಚಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ವಾಡಿಕೆಗಿಂತ ಕಡಿಮೆ ಮಳೆಯಿಂದಾಗಿ ತೀವ್ರ ಆತಂಕದಲ್ಲಿದ ಜಿಲ್ಲೆಯ ರೈತರಿಗೆ ಜುಲೈ ತಿಂಗಳಿಂದ ಶುರುವಾಗಿರುವ ನಿರಂತರ ಮಳೆಯು ನೆಮ್ಮದಿಯ ನಿಟ್ಟಿಸಿರು ಬಿಡುವಂತೆ ಮಾಡಿದೆ. ಇನ್ನೇನು ಬೆಳೆಗಳು ಒಣಗಿ ಹೋದವು ಎನ್ನುವಷ್ಟರಲ್ಲಿ ಮರುಭೂಮಿಯಲ್ಲಿ ಸಿಕ್ಕ ಓಯಸಿಸ್‌ನಂತೆ ಮಳೆ ರೈತರಲ್ಲಿ ಕೃಷಿ ಬಗ್ಗೆ ಮತ್ತಷ್ಟು ಭರವಸೆ ಮೂಡಿಸಿದೆ.
ಧಾರವಾಡ ಸೇರಿದಂತೆ ಜಿಲ್ಲಾದ್ಯಂತ ಕೆಲವು ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಬೆಳೆಗಳು ಮತ್ತೆ ಚಿಗುರಿ ನಿಂತಿವೆ. ಹೀಗಾಗಿ ರೈತ ಸಮುದಾಯದ ಆತ್ಮಸ್ಥೈರ್ಯ ಚಿಗುರಿದೆ. ಜಿಲ್ಲೆಯಲ್ಲಿ ಶೇ. 80ರಷ್ಟು ಬಿತ್ತನೆಯಾಗಿದ್ದು, ಹುಟ್ಟಿದ್ದ ಬೆಳೆಗಳ ಬೆಳವಣಿಗೆಯಾಗಲು ತೇವಾಂಶದ ಅಗತ್ಯವಿತ್ತು. ಆದರೆ, ಇಡೀ ಜೂನ್ ತಿಂಗಳು ಮಳೆಯಾಗದೇ ರೈತರು ತೀವ್ರ ಕಂಗಾಲಾಗಿದ್ದರು.