ಅಯ್ಯೋ, ಪಾಪಿಗಳಾ.. ಬಸ್ ನಿಲ್ದಾಣದಲ್ಲಿ 10 ದಿನದ ಕಂದಮ್ಮನ ಬಿಟ್ಟು ಹೋದ ಅಪ್ಪ-ಅಮ್ಮ

Published : Jul 06, 2026, 10:38 AM IST
shivamogga newborn baby

ಸಾರಾಂಶ

ಶಿವಮೊಗ್ಗ ಜಿಲ್ಲೆಯ ಗವಟೂರು ಗ್ರಾಮದ ಬಸ್ ನಿಲ್ದಾಣದಲ್ಲಿ ಕೈಚೀಲವೊಂದರಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಮಗುವನ್ನು ರಕ್ಷಿಸಲಾಗಿದ್ದು, ಪೊಲೀಸರು ಮಗುವನ್ನು ಬಿಟ್ಟುಹೋದ ಪೋಷಕರಿಗಾಗಿ ತನಿಖೆ ನಡೆಸುತ್ತಿದ್ದಾರೆ.

ಶಿವಮೊಗ್ಗ: ಹೆತ್ತ ಕರುಳನ್ನು ರಕ್ಷಿಸಬೇಕಾದವರೇ ಅನಾಥವಾಗಿ ಬಿಟ್ಟು ಹೋದ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಹಾಲಿನ ಬಾಟಲಿಯನ್ನು ಪಕ್ಕದಲ್ಲಿಟ್ಟು, ಮಗುವನ್ನು ಕೈಚೀಲವೊಂದರಲ್ಲಿ ತುಂಬಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋದ ಅಮಾನವೀಯ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಗವಟೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಮಗುವಿನ ಅಳು ಕೇಳಿ ಓಡಿ ಬಂದ ನಿವಾಸಿಗಳು

ಗವಟೂರು ಹೊಳೆಯ ಸಮೀಪವಿರುವ ಬಸ್ ನಿಲ್ದಾಣವು ನಿರ್ಜನ ಪ್ರದೇಶದಲ್ಲಿದೆ. ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಬಸ್ ನಿಲ್ದಾಣದ ಹಿಂಭಾಗ ನಿವಾಸಿಯೊಬ್ಬರಿಗೆ ಮಗುವಿನ ಅಳುವಿನ ಶಬ್ದ ಕೇಳಿಸಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದಾಗ, ಕೈಚೀಲವೊಂದರಲ್ಲಿ ಬಟ್ಟೆಯಿಂದ ಸುತ್ತಿದ ಸ್ಥಿತಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ.

ಸ್ಥಳೀಯರು ತಕ್ಷಣವೇ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಪಿಎಸ್‌ಐ ರಾಜುರೆಡ್ಡಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸುಮಾರು 10 ರಿಂದ 15 ದಿನದ ಪ್ರಾಯದ ಈ ಹೆಣ್ಣು ಮಗು 1.6 ಕೆ.ಜಿ ತೂಕವಿದ್ದು, ಸದ್ಯ ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.

ರಕ್ಷಿಸಲಾದ ಮಗುವನ್ನು ಮೊದಲು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಆರೈಕೆ ಮಾಡಲಾಯಿತು. ನಂತರ ಮಗುವಿನ ಹೆಚ್ಚಿನ ಆರೈಕೆ ಮತ್ತು ಪಾಲನೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮಗು ವೈದ್ಯರ ಮೇಲ್ವಿಚಾರಣೆಯಲ್ಲಿದೆ.

ತನಿಖೆ ಚುರುಕು

ಮಗುವನ್ನು ಅನಾಥವಾಗಿ ಬಿಟ್ಟು ಹೋದವರು ಯಾರು? ಯಾವ ಕಾರಣಕ್ಕಾಗಿ ಈ ರೀತಿ ಮಾಡಿದ್ದಾರೆ? ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಗು ಸಿಕ್ಕ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಇತ್ತೀಚೆಗೆ ಹೆರಿಗೆಯಾದವರ

ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಅನಾಥವಾಗಿ ಬಿದ್ದಿದ್ದ ಮಗುವನ್ನು ಸಮಯಪ್ರಜ್ಞೆಯಿಂದ ರಕ್ಷಿಸಿದ ಸಾರ್ವಜನಿಕರು ಹಾಗೂ ತಕ್ಷಣವೇ ಸ್ಪಂದಿಸಿದ ಪೊಲೀಸರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. ಹಾಲಿನ ಬಾಟಲಿ ಪಕ್ಕದಲ್ಲಿ ಇಟ್ಟು ಹೋದ ಆ 'ಹೆತ್ತವರ' ಮನಸ್ಥಿತಿಗೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.

PREV
Read more Articles on
click me!

Recommended Stories

ಮುಂಗಾರು ಮಳೆ ಆರ್ಭಟ: ತುಂಬಿದ ಜಲಾಶಯ, ಮುಳುಗಿದ ಸೇತುವೆಗಳು, ರೈತರ ಮೊಗದಲ್ಲಿ ಮಂದಹಾಸ
ತಮ್ಮ ಅಜ್ಜಿಯನ್ನೇ ಕೊಚ್ಚಿ ಕೊಂದ ಮೊಮ್ಮಗನ ಕಾಲಿಗೆ ಶಿವಮೊಗ್ಗ ಪೊಲೀಸರ ಗುಂಡೇಟು! ಎಸ್ಕೇಪ್ ಆಗಲು ಯತ್ನಿಸಿದ್ದ ಕೊಲೆ ಆರೋಪಿ