
ಬೆಂಗಳೂರು: ಬೆಂಗಳೂರಿನ ಕಾಳೇನ ಅಗ್ರಹಾರ-ತಾವೇರೆಕೆರೆ ಮಾರ್ಗದ ನಡುವೆ ಸಂಚರಿಸುವ ಗುಲಾಬಿ ನಮ್ಮ ಮೆಟ್ರೊ (Namma Metro Pink Line)ಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ. ಹಲವಾರು ಡೆಡ್ಲೈನ್ ಮೀರಿದ ನಂತರ ಇದೀಗ ನಮ್ಮ ಮೆಟ್ರೋದ ಗುಲಾಬಿ ಮಾರ್ಗದ ಕಾಮಗಾರಿ ಮುಕ್ತಾಯವಾಗಿದ್ದು, ಕೇಂದ್ರ ಸರ್ಕಾರ ಓಕೆ ಎಂದರೆ, ಇದೇ ತಿಂಗಳಿನಲ್ಲಿಯೇ ಸಂಚಾರ ಆರಂಭಕ್ಕೆ ತಯಾರು ಇರುವುದಾಗಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ ಉದ್ಘಾಟನೆ ದಿನಾಂಕ ನಿಗದಿ ಮಾಡಬೇಕಿದ್ದು, ನಮ್ಮಿಂದ ಎಲ್ಲಾ ರೆಡಿ ಇದೆ ಎಂದಿದ್ದಾರೆ.
ಇಂದು ಅವರು ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಸಂಚಾರ ನಡೆಸಿ ಪರಿಶೀಲನೆ ನಡೆಸಿದ ಬಳಿಕ ಈ ಹೇಳಿಕೆ ಕೊಟ್ಟಿದ್ದಾರೆ. ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ತೆರಳಿ ನಿಲ್ದಾಣದ ಕಾಮಗಾರಿ, ಭದ್ರತೆ ಮತ್ತು ಸಂಚಾರ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಂದ ಇದೇ ವೇಳೆ ಸಚಿವರು ಸಂಪೂರ್ಣ ಮಾಹಿತಿ ಪಡೆದರು. ಬಳಿಕ ಸಚಿವರು ಮತ್ತು ತೇಜಸ್ವಿ ಸೂರ್ಯ ಅವರೊಂದಿಗೆ ಮೆಟ್ರೋ ಲೋಕೋ ಪೈಲಟ್ ಕ್ಯಾಬಿನ್ ನಲ್ಲಿ ಕುಳಿತು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೂ ಸಂಚರಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳಿಂದ ಮತ್ತಷ್ಟು ಮಾಹಿತಿಗಳನ್ನು ಪಡೆದುಕೊಂಡರು.
ನಾವು ರೆಡಿ ಇದ್ದೇವೆ. ಕೇಂದ್ರ ಸರ್ಕಾರದಿಂದ ದಿನಾಂಕ ನಿಗದಿಯಾಗುತ್ತಿದ್ದಂತೆಯೇ, ಕಾಳೇನ ಅಗ್ರಹಾರದಿಂದ (ಬನ್ನೇರುಘಟ್ಟ ರಸ್ತೆ) ತಾವರೆಕೆರೆಯವರೆಗಿನ 7.5 ಕಿ.ಮೀ. ಉದ್ದದ ನಮ್ಮ ಮೆಟ್ರೋ ಹೊಸ ಪಿಂಕ್ ಲೈನ್ ಮಾರ್ಗ ಉದ್ಘಾಟನೆಯಾಗಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ. ನಾವು ಸಂಪೂರ್ಣ ಸಿದ್ಧರಾಗಿದ್ದೇವೆ. ಸೆಪ್ಟೆಂಬರ್ ಒಳಗಾಗಿ ಉದ್ಘಾಟನೆಗೆ ಸೂಕ್ತ ದಿನಾಂಕ ಸಿಗುವ ಭರವಸೆ ನಮಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಇದರ ಹೊರತಾಗಿಯೂ ಒಂದು ಸಮಸ್ಯೆ ಉಳಿದುಕೊಂಡಿದೆ. ರೈಲುಗಳು ಓಡಾಟ ಪ್ರಾರಂಭಿಸುವ ಮೊದಲು, ಒಂದು ಪ್ರಮುಖ ಪ್ರಶ್ನೆ ಉಳಿದಿದೆ: ಪ್ರಯಾಣಿಕರು ಸುರಕ್ಷಿತವಾಗಿ ನಿಲ್ದಾಣಗಳನ್ನು ಹೇಗೆ ತಲುಪುತ್ತಾರೆ? ನಗರದ ಇತರ ಹಲವಾರು ನಮ್ಮ ಮೆಟ್ರೋ ಕಾರಿಡಾರ್‌ಗಳಂತೆ, ಪಾದಚಾರಿ ಮೂಲಸೌಕರ್ಯವು ಒಂದು ಪ್ರಮುಖ ಕಳವಳವಾಗಿ ಉಳಿದಿದೆ ಮತ್ತು ಬನ್ನೇರುಘಟ್ಟ ರಸ್ತೆಯ ಎರಡೂ ಬದಿಗಳಲ್ಲಿ ವಾಸಿಸುವ ನಿವಾಸಿಗಳು ಮೆಟ್ರೋ ನಿಲ್ದಾಣಗಳನ್ನು ಪ್ರವೇಶಿಸಲು ಕಠಿಣ ಸಮಯವನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ ಕೂಡಲೇ ಅಧಿಕಾರಿಗಳು ಗಮನ ಹರಿಸಬೇಕು ಎನ್ನುವುದು ಪ್ರಯಾಣಿಕರ ಆಶಯ.