
ಗದಗ: ಬಸ್ ಸೀಟ್ ಮೇಲೆ ದುಡ್ಡು ತುಂಬಿದ್ದ ಬ್ಯಾಗ್ ಇಟ್ಟು ಮರೆತು ಇಳಿದು ಹೋಗಿದ್ದ ವ್ಯಕ್ತಿಗೆ ಸಾರಿಗೆ ಸಿಬ್ಬಂದಿ ಹಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಉಡುಪಿ ಮೂಲದ ಶಾಂತಾರಾಮ್ ಶೆಟ್ಟಿ ಎಂಬ ವ್ಯಕ್ತಿ, ಹುಬ್ಬಳಿಗೆ ತೆರಳುವ ಉದ್ದೇಶದಿಂದ ಗದಗ ನಿಲ್ದಾಣದಿಂದ ತಿರುಪತಿ-ಹುಬ್ಬಳ್ಳಿ ಬಸ್ ಏರಿದ್ದರು. ಮಧ್ಯರಾತ್ರಿ ಗಡಿಬಿಡಿಯಲ್ಲಿ ಬಸ್ ನಲ್ಲಿ 1 ಲಕ್ಷ 10 ಸಾವಿರ ರೂಪಾಯಿ ಇರಿಸಿದ್ದ ಬ್ಯಾಗ್ ಮರೆತು ಇಳಿದಿದ್ದರು. ಬಸ್ ಇಳಿದಾಗಲೇ ಹಣದ ಬ್ಯಾಗ್ ಜೊತೆಯಲ್ಲಿ ಇಲ್ಲ ಅನ್ನೋ ವಿಷಯ ಶಾಂತಾರಾಮ್ ಅವರಿಗೆ ಗೊತ್ತಾಗಿತ್ತು.
ಅಸಹಾಯಕರಂತೆ ನಿಂತಿದ್ದ ಶಾಂತಾರಾಮ್, ಕೂಡಲೇ ಟಿಕೆಟ್ ಪರೀಕ್ಷಿಸಿದ್ದರು. ಟಿಕೆಟ್ ನೋಡಿದಾಗ ತಾನು ಬಂದಿರೋ ಬಸ್ ಗದಗ ಡಿಪೋಗೆ ಸೇರಿದ್ದು ಅನ್ನೋ ಮಾಹಿತಿ ಅವರಿಗೆ ತಿಳಿದಿರುತ್ತೆ. ಕೂಡಲೇ ಹುಬ್ಬಳ್ಳಿಯಿಂದ ಗದಗ ಬಸ್ ನಿಲ್ದಾಣಕ್ಕೆ ಬಂದು ವಿಚಾರಿಸಿದಾಗ ಹಣ ತುಂಬಿದ್ದ ಬ್ಯಾಗ್ ಸುರಕ್ಷಿತವಾಗಿ ಇರುವ ಬಗ್ಗೆ ಸಾರಿಗೆ ಸಿಬ್ಬಂದಿ ಖಾತ್ರಿ ಮಾಡಿದ್ದರು. ಹಣದ ಬ್ಯಾಗ್ ಕಂಡು ಶಾಂತಾರಾಮ್ ನಿಟ್ಟುಸಿರು ಬಿಟ್ಟಿದ್ದರು.
ಲಕ್ಕುಂಡಿಯಲ್ಲಿ ವ್ಯಾಪಾರ ಮಾಡ್ಕೊಂಡಿರೋ ಶಾಂತಾರಾಮ್, ಮನೆ ನಿರ್ಮಾಣಕ್ಕಾಗಿ ಹಣ ಹೊಂದಿಸಿಕೊಂಡು ಊರಿಗೆ ಹೊರಟಿದ್ದರು. ಮಧ್ಯರಾತ್ರಿಯಾಗಿದ್ದರಿಂದ ಲಾಂಗ್ ರೂಟ್ ಬಸ್ ಹತ್ತಿದ್ರಂತೆ. ಹುಬ್ಬಳ್ಳಿ ಸಮೀಪಿಸ್ತಿದ್ದಂತೆ ಬಸ್ ನಿಂದ ಶಾಂತಾರಾಮ್ ಇಳಿದಿದ್ದರು. ಬಸ್ ಸೀಟ್ ಪರೀಕ್ಷಿಸುವಾಗ ನಿರ್ವಾಹಕ ಪ್ರಭು ಹಿರೇಮಠ ಅವರ ಕಣ್ಣಿಗೆ ಹಣ ತುಂಬಿದ ಬ್ಯಾಗ್ ಕಂಡಿತ್ತು. ಈ ವಿಚಾರವನ್ನು ಬಸ್ ಚಾಲಕ ಯಲ್ಲಪ್ಪ ಜಗ್ಗಲ್ ಅವರಿಗೆ ತಿಳಿಸಿದ್ದರು.
ಹಣದ ಬ್ಯಾಗ್ ವಿಷ್ಯವನ್ನ ಇಬ್ಬರು ಡೀಪೋ ಸಿಬ್ಬಂದಿ ತಿಳಿಸಿ, ಹಣವನ್ನ ಸೆಕ್ಯೂರಿಟಿ ಸೆಕ್ಷನ್‌ನಲ್ಲಿ ಇಟ್ಟಿದ್ದರು. ಸಹಾಯಕ ಸಂಚಾರ ನಿರೀಕ್ಷಕರು ಎಂಬಿ ತಿಮ್ಮಗೌಡರ್ ಮತ್ತು ತಂಡ ಹಣ ತುಂಬಿದ್ದ ಬ್ಯಾಗ್ ನ್ನ ಭದ್ರವಾಗಿ ಇರಿಸಿದ್ದರು. ಸೂಕ್ತ ದಾಖಲೆ ಪರೀಕ್ಷಿಸಿ ಮೂಲ ಮಾಲೀಕ ಶಾಂತಾರಾಮ್ ಅವರಿಗೆ ಹಣ ಹಿಂತಿರುಗಿಸಿದ್ದಾರೆ.
ಹಣ ಹಿಂತಿರುಗಿಸುವಾಗ ಸಹಾಯಕ ಸಂಚಾರ ಅಧೀಕ್ಷಕರು ಶಾಂತಾಬಾಯಿ ಕದಾಂಪುರ, ಘಟಕ ವ್ಯವಸ್ಥಾಪಕ ಶರಣಬಸಪ್ಪ, ಡಿವಿಜನಲ್ ಮೆಕ್ಯಾನಿಕಲ್ ಇಂಜಿನಿಯರ್ ಬಿಎಲ್ ಗೆಣ್ಣೂರು ಹಾಜರಿದ್ದರು.