ಧಾರವಾಡ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಅಧಿಕ ಮತದಾರರ ಹೆಸರು ಡಿಲಿಟ್‌!

By Kannadaprabha NewsFirst Published Dec 2, 2022, 9:47 AM IST
Highlights

2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಭಯದಿಂದಾಗಿ ಬಿಜೆಪಿ ಮತದಾರ ಹೆಸರು ಡಿಲಿಟ್‌ ಮಾಡಿಸುವ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಖಾಸಗಿ ಕಂಪನಿಯೊಂದರಿಂದ ಸಮೀಕ್ಷೆ ನೆಪದಲ್ಲಿ 1 ಲಕ್ಷಕ್ಕೂ ಅಧಿಕ ಮತದಾರರ ಹೆಸರು ಡಿಲಿಟ್‌ ಮಾಡಿಸಿದೆ. ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿ (ಡಿ.2) : 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಭಯದಿಂದಾಗಿ ಬಿಜೆಪಿ ಮತದಾರ ಹೆಸರು ಡಿಲಿಟ್‌ ಮಾಡಿಸುವ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಖಾಸಗಿ ಕಂಪನಿಯೊಂದರಿಂದ ಸಮೀಕ್ಷೆ ನೆಪದಲ್ಲಿ 1 ಲಕ್ಷಕ್ಕೂ ಅಧಿಕ ಮತದಾರರ ಹೆಸರು ಡಿಲಿಟ್‌ ಮಾಡಿಸಿದೆ. ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ತಿಳಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಿಂದ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಎಎಸ್‌ಆರ್‌ ಕಂಪನಿ ಪ್ರತಿನಿಧಿಗಳು ಸಮೀಕ್ಷೆ ನಡೆಸುತ್ತಿದ್ದಾರೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಇರುವಂತಹ ವಾರ್ಡ್‌ಗಳಲ್ಲೇ ಸಮೀಕ್ಷೆ ನಡೆಸಲಾಗುತ್ತಿದೆ. ಇವರು ಜಾತಿ, ವೋಟರ್‌ ಐಡಿ, ಯಾವ ರಾಜಕೀಯ ಪಕ್ಷ, ಯಾವ ಅಭ್ಯರ್ಥಿ ಉತ್ತಮ ಎಂಬೆಲ್ಲ ಪ್ರಶ್ನೆಗಳನ್ನು ಕೇಳಿ ಸಮೀಕ್ಷೆ ನಡೆಸುತ್ತಿದ್ದಾರೆ. ತಮ್ಮ ‘ಗೋ ಸರ್ವೇ’ ಎಂಬ ಆ್ಯಪ್‌ನಲ್ಲಿ ಮತದಾರರು ಹೇಳುವ ಮಾಹಿತಿಯನ್ನೆಲ್ಲ ನಮೂದಿಸುತ್ತಾರೆ. ಬಳಿಕ ಅಧಿಕಾರಿಗಳಿಂದ ಆ ಮತದಾರರ ಹೆಸರು ಡಿಲಿಟ್‌ ಮಾಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಧಾರವಾಡದಲ್ಲಿ ಯುವ ಮತದಾರರ ಸೇರ್ಪಡೆ ಅಭಿಯಾನ, 18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ಸೇರ್ಪಡೆ

 

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರ 10ರಿಂದ 11 ಸಾವಿರ, ಪೂರ್ವ 6 ಸಾವಿರ, ಪಶ್ಚಿಮ 15 ಸಾವಿರ, ಕುಂದಗೋಳ 18 ಸಾವಿರ, ನವಲಗುಂದ 9 ಸಾವಿರ, ಕಲಘಟಗಿ 11 ಸಾವಿರ, ಧಾರವಾಡ 11 ಸಾವಿರಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಸರಿಸುಮಾರು 1 ಲಕ್ಷಕ್ಕೂ ಅಧಿಕ ಮತದಾರರನ್ನು ಜಿಲ್ಲೆಯಲ್ಲಿ ಕಡಿತಗೊಳಿಸಲಾಗಿದೆ. ಈ ರೀತಿ ನವ ಆನಂದನಗರದಲ್ಲಿ ಸಮೀಕ್ಷೆ ನಡೆಸುತ್ತಿದ್ದ ಐವರನ್ನು ಕಾಂಗ್ರೆಸ್‌ ಕಾರ್ಯಕರ್ತರು ಇವತ್ತು ಪತ್ತೆ ಹಚ್ಚಿದ್ದಾರೆ. ಐವರಲ್ಲಿ ಇಬ್ಬರು ಪರಾರಿಯಾಗಿದ್ದು, ಮೂವರನ್ನು ಠಾಣೆಗೆ ಒಪ್ಪಿಸಲಾಗಿದೆ. ಎಫ್‌ಐಆರ್‌ ಕೂಡ ದಾಖಲಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೂ ದೂರು ನೀಡಲಾಗಿದೆ ಎಂದ ಅವರು, ಕೆಪಿಸಿಸಿ ಗಮನಕ್ಕೆ ತರಲಾಗುವುದು. ಅಲ್ಲಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಪೂರ್ವ ಕ್ಷೇತ್ರದಲ್ಲೂ ಮಹಿಳೆಯರಿಬ್ಬರು ಇದೇ ರೀತಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದರು. ಅವರನ್ನು ವಿಚಾರಣೆಗೊಳಪಡಿಸುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಅಲ್ತಾಫ್‌ ಹೇಳಿದರು.

ಧಾರವಾಡ ಪಾಲಿಕೆ ಆವರಣದಲ್ಲಿ ಭರ್ಜರಿ ಬಾಡೂಟ: ಕಚೇರಿ ಉದ್ಘಾಟನೆಗೆ ಅಡುಗೆ

ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಜತ್‌ ಉಳ್ಳಾಗಡ್ಡಿಮಠ ಮಾತನಾಡಿ, ಗುರುವಾರ ವಶಕ್ಕೆ ಸಿಕ್ಕಿರುವ ಮೂವರು ಬಿಜೆಪಿ ಶಾಸಕರ ಹೆಸರು ಹೇಳುತ್ತಿದ್ದಾರೆ. ಜೂನ್‌ ತಿಂಗಳಲ್ಲಿ ಜಿಎಸ್‌ಆರ್‌ ಹಾಗೂ ಐಎಂಎಂಟಿ ಕಂಪನಿ ಹೆಸರಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಆಗಲೂ ಕೆಲವೊಂದಿಷ್ಟುಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈ ಬಿಡಲಾಗಿತ್ತು. ಅದೇ ರೀತಿ ಇದೀಗ ಎಎಸ್‌ಆರ್‌ ಕಂಪನಿ ಹೆಸರಲ್ಲಿ ಮಾಡಲಾಗುತ್ತಿದೆ. ಸೋಲಿನ ಭಯದಿಂದಾಗಿ ಬಿಜೆಪಿಗರೇ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿ ಕಾನೂನಾತ್ಮಕವೂ ಹೋರಾಟ ನಡೆಸಲಾಗುವುದು. ಜತೆಗೆ ರಸ್ತೆಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

click me!