ಜಿಲ್ಲೆಯಲ್ಲಿ ಈಗಾಗಲೇ 1,511 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 113 ಹೊಸ ಅಂಗನವಾಡಿ ಮಂಜೂರು ಮಾಡುವಂತೆ ಜಿಲ್ಲಾ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಬಾಲಕೃಷ್ಣ ಜಾಡಬಂಡಿ
ಹುಬ್ಬಳ್ಳಿ (ಡಿ.2) : ಜಿಲ್ಲೆಯಲ್ಲಿ ಈಗಾಗಲೇ 1,511 ಅಂಗನವಾಡಿಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ 113 ಹೊಸ ಅಂಗನವಾಡಿ ಮಂಜೂರು ಮಾಡುವಂತೆ ಜಿಲ್ಲಾ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಜಿಲ್ಲೆ ಬೆಳೆದಂತೆ ಜನಸಂಖ್ಯೆ ಹಾಗೂ ಮಕ್ಕಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಅಂಗನವಾಡಿ ಸ್ಥಾಪನೆಗೆ ಒತ್ತಾಯ, ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಇದರಿಂದಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಒಟ್ಟು 4250 ಹೊಸ ಅಂಗನವಾಡಿ ಸ್ಥಾಪಿಸಲು ಚಿಂತನೆ ನಡೆಸಿದೆ.
ಅಂಗನವಾಡಿಗೆ ಜಾಗ ಲಭ್ಯವಾದರೆ ಕಟ್ಟಡ ನಿರ್ಮಾಣ: ಕಾಗೇರಿ
ಆ ನಿಟ್ಟಿನಲ್ಲಿ ಹೊಸ ಅಂಗನವಾಡಿ ನಿರ್ಮಿಸುವ ಉದ್ದೇಶದಿಂದ ಜಿಲ್ಲಾ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಇಲಾಖೆಗೆ ನವೆಂಬರ್‌ನಲ್ಲಿ ಪ್ರಸ್ತಾವ ಸಲ್ಲಿಸಿದ್ದಾರೆ. ಇದಕ್ಕೆ ಶೀಘ್ರದಲ್ಲಿ ಅನುಮೋದನೆ ದೊರೆಯಲಿದೆ ಎನ್ನುತ್ತಾರೆ ಅಧಿಕಾರಿಗಳು.
1511 ಅಂಗನವಾಡಿಗಳಲ್ಲಿ 853ಕ್ಕೆ ಸ್ವಂತ ಕಟ್ಟಡ, 372 ಬಾಡಿಗೆ, 27 ಪಂಚಾಯಿತಿ ಕಟ್ಟಡದಲ್ಲಿವೆ. 141 ಸಮುದಾಯ ಭವನ, 6 ಯುವಕ ಹಾಗೂ ಮಹಿಳಾ ಮಂಡಳ, 110 ಅಂಗನವಾಡಿಗಳು ಶಾಲಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 48 ಅಂಗನವಾಡಿ ಕಟ್ಟಡ ನಿರ್ಮಾಣದ ಕಾಮಗಾರಿ ಸದ್ಯ ಚಾಲ್ತಿಯಲ್ಲಿವೆ. ನಬಾರ್ಡ್, ಗ್ರಾಪಂ, ತಾಪಂ ಸೇರಿ ಸ್ಥಳೀಯ ಸಂಸ್ಥೆಗಳ ವಿವಿಧ ಯೋಜನೆಗಳ ಅನುದಾನದಡಿ ಕಟ್ಟಡ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದೆ. ಅಂಗನವಾಡಿ ಅಭಿವೃದ್ಧಿ, ಮಕ್ಕಳ ಆಟಿಕೆ ಸಾಮಗ್ರಿ ಖರೀದಿಗೆ ತಾಲೂಕು ಪಂಚಾಯಿತಿ ನೆರವು ನೀಡುತ್ತಿದೆ.
ನರೇಗಾ ಸಹಭಾಗಿತ್ವ:
ಗ್ರಾಮೀಣ ಭಾಗದ ಜನರಿಗೆ ಉದ್ಯೋಗದ ವರ ನೀಡಿದ್ದ ನರೇಗಾ ಯೋಜನೆ ಮಕ್ಕಳ ಶಿಕ್ಷಣಕ್ಕೂ ಕೈಜೋಡಿಸಿದೆ. ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನರೇಗಾ ಸಹಭಾಗಿತ್ವದಡಿ ಒಟ್ಟು 6 ಅಂಗನವಾಡಿಗೆ ಸೂಕ್ತ ಕಟ್ಟಡ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಜಿಲ್ಲೆಯ ಧಾರವಾಡ ಗ್ರಾಮೀಣ ತಾಲೂಕಿನ ಶಿವನಗರ, ನರೇಂದ್ರದಲ್ಲಿ ತಲಾ 1, ಕುಂದಗೋಳದ ಗುರುವಿನಹಳ್ಳಿ, ಕೊಂಕಣಕುರಹಟ್ಟಿತಲಾ 1, ನವಲಗುಂದದ ಹನಸಿ, ಅಡ್ನೂರದಲ್ಲಿ ತಲಾ 1 ಅಂಗನವಾಡಿ ನಿರ್ಮಿಸಲು ಈಗಾಗಲೇ ಅನುದಾನ ಮಂಜೂರಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ . 15 ಲಕ್ಷ, ನರೇಗಾ ಯೋಜನೆಯಡಿ . 5 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಸದ್ಯ ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ.
ಅಪೌಷ್ಟಿಕತೆ ಸಮಸ್ಯೆ ಶಮನಕ್ಕೆ ಪೌಷ್ಟಿಕಯುಕ್ತ ಸಿರಿಧಾನ್ಯ ಲಡ್ಡು ವಿತರಣೆ ರಾಯಚೂರು ಜಿಲ್ಲಾಡಳಿತ ಪ್ಲಾನ್
ತಾಲೂಕು ಅಂಗನವಾಡಿ ಸಂಖ್ಯೆ
ಬೇಡಿಕೆ ಇರುವ ಹಿನ್ನೆಲೆ ಹೆಚ್ಚುವರಿ ಅಂಗನವಾಡಿ ಮಂಜೂರಾತಿಗೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಎಲ್ಲ ಅಂಗನವಾಡಿಗೆ ಸೂಕ್ತ ಕಟ್ಟಡ, ಕಾಂಪೌಂಡ್ ನಿರ್ಮಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ. ಸ್ವಂತ ಕಟ್ಟಡವಿಲ್ಲದ ಅಂಗನವಾಡಿಗೆ ನಿವೇಶನ ಒದಗಿಸುವಂತೆ ಪಾಲಿಕೆ, ತಾಪಂ, ಗ್ರಾಪಂಗೆ ಪತ್ರ ಬರೆಯಲಾಗಿದೆ.
ಎಚ್.ಎಚ್. ಕುಕನೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ
ನರೇಗಾ ಯೋಜನೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗುತ್ತಿದೆ. ಜಿಪಂ, ತಾಪಂ, ಗ್ರಾಪಂ ವಿವಿಧ ಅನುದಾನದಡಿ ಮಕ್ಕಳಿಗೆ ಅಗತ್ಯವಿರುವ ಆಟಿಕೆ ಸಾಮಗ್ರಿ ಖರೀದಿಸಿ ಮಕ್ಕಳ ಸ್ನೇಹಿ ಅಂಗನವಾಡಿ ನಿರ್ಮಿಸಲಾಗುತ್ತಿದೆ.
ಡಾ. ಸುರೇಶ ಇಟ್ನಾಳ ಜಿಪಂ ಸಿಇಒ