
ಮೈಸೂರು (ಜ.28): ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ಶಾಸಕ ಜಿ.ಟಿ.ದೇವೇಗೌಡ ಅವರೂ ಹಗರಣ ಎಸಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಲೋಕಾಯುಕ್ತ ಇಲಾಖೆಯಲ್ಲಿ ದೂರು ದಾಖಲಾಗಿದೆ.
ಮುಡಾ ನಿವೇಶನ ಹಂಚಿಕೆಯಲ್ಲಿ ಶಾಸಕ ಜಿ.ಟಿ. ದೇವೇಗೌಡ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿ ಬೇನಾಮಿ ವ್ಯವಹಾರ ಮಾಡಿರುವ ಬಗ್ಗೆ ಪೋಟೋ ಸಾಕ್ಷಿ ಸಮೇತ ದೂರು ಕೊಡಲಾಗಿದೆ. ದೇವನೂರು ಗ್ರಾಮದ ಶಂಕರಯ್ಯ ಕುಟುಂಬದ ಜೊತೆ ಶಾಸಕರಾದ ಜಿ.ಟಿ.ದೇವೇಗೌಡ ಹಾಗೂ ಶಾಸಕ ಜಿ.ಡಿ.ಹರೀಶ್‌ಗೌಡ ವ್ಯವಹಾರ ನಡೆಸಿರುವ ಪೋಟೋಗಳನ್ನು ಇಡಿ ಹಾಗೂ ಲೋಕಾಯುಕ್ತ ಇಲಾಖೆಗೆ ಕೊಡಲಾಗಿದೆ. ಇದರಲ್ಲಿ ಜಮೀನಿನ ಮಾಲೀಕರ ಕುಟುಂಬಸ್ಥರನ್ನು ಭೇಟಿ ಮಾಡಿ ಚಕ್ ನೀಡುತ್ತಿರುವ ಸಾಕ್ಷಿ ಸಲ್ಲಿಕೆ ಮಾಡಲಾಗಿದೆ.
ಶಾಸಕ ಜಿ.ಟಿ.ದೇವೇಗೌಡ ತಮ್ಮ ಸಹೋದರಿ ಮಗ ಮಹೇಂದ್ರ ಮೂಲಕ ಬೇನಾಮಿ ಆಸ್ತಿ ಖರೀದಿಸಿದ್ದಾರೆ. ಅಂದಿನ ತಹಸಿಲ್ದಾರ್ ರಕ್ಷಿತ್ ಮೇಲೆ ಪ್ರಭಾವ ಬೀರಿ ಮುಡಾ ಆಸ್ತಿಗೆ ಪರಿಹಾರ ಪಡೆದಿದ್ದಾರೆ. ಅಂದಿನ ತಹಸಿಲ್ದಾರ್ ರಕ್ಷಿತ್ ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಭೂಮಿಯನ್ನು ಶಾಸಕ ಜಿ.ಿ. ದೇವೇಗೌಡ ಅವರ ಸಂಬಂಧಿಕ ಮಹೇಂದ್ರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ದೇವನೂರು ಎರಡನೇ ಹಂತದ ಸರ್ವೆ ನಂ 81/2ರಲ್ಲಿ 20ಕ್ಕೂ ಹೆಚ್ಚು ಮನೆ ಇದ್ದರೂ ಪರಿಹಾರ ತೆಗೆದುಕೊಂಡಿದ್ದಾರೆ. ಇದಲ್ಲಿ ಜಿ.ಟಿ.ದೇವೇಗೌಡ ಪ್ರಭಾವ, ಬೇನಾಮಿ ಆಸ್ತಿ ಹೊಂದಿರುವುದು ಹಾಗೂ ಅಧಿಕಾರಿಯ ತಪ್ಪು ಎದ್ದು ಕಾಣುತ್ತಿದೆ. ಇದರ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂಬುದು ನನ್ನ ಮನವಿ ಎಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.
ಇದನ್ನೂ ಓದಿ: ಕನ್ನಡ ಹೋರಾಟಗಾರರ ಕೇಸ್‌ಗಳು ವಾಪಸ್: ಸಿಎಂ ಸಿದ್ದರಾಮಯ್ಯ
ಮುಡಾದಿಂದ ಜಿ.ಟಿ.ದೇವೇಗೌಡ ಸೋದರಳಿಯ ಮಹೇಂದ್ರ ಹೆಸರಿಗೆ ನೀಡಿರುವ 19 ನಿವೇಶನಗಳನ್ನು ನೀಡಲಾಗಿದೆ. ದೇವನೂರು ಬಡಾವಣೆ 2ನೇ ಹಂತದ ಬಡಾವಣೆ ರಚನೆ ವೇಳೆ 50-50 ಆಧಾರದಲ್ಲಿ ಪರಿಹಾರವಾಗಿ 19 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ದೇವನೂರು ಗ್ರಾಮ ಸರ್ವೆ ನಂ 81/2ರಲ್ಲಿ 2.22 ಎಕರೆ ಭೂಮಿಗೆ ಪರಿಹಾರ ನೀಡಲಾಗಿದೆ. ಆದರೆ, ಮುಡಾ ನಿವೇಶನ ಹಂಚಿಕೆ ಮಾಡಿರುವ 19 ನಿವೇಶನಗಳ ವಿಚಾರದಲ್ಲಿ ಜಿ.ಟಿ.ದೇವೇಗೌಡ ಬೇನಾಮಿ ಆಗಿದ್ದಾರೆ ಎಂದು ಆರೋಪಿಸಲಾಗಿದೆ.
ದೇವನೂರು ಗ್ರಾಮ ಶಂಕರಯ್ಯ ಎಂಬುವರಿಗೆ ಸೇರಿದ ಭೂಮಿಯನ್ನು 1984ರಲ್ಲಿ ಮುಡಾ ವಶಪಡಿಸಿಕೊಂಡಿತ್ತು. ಆದರೆ, ಇದರ ಪರಿಹಾರ ಇತ್ಯರ್ಥ ಆಗಿರಲಿಲ್ಲ. 2021ರಲ್ಲಿ ಜಿ.ಟಿ.ದೇವೇಗೌಡ ಕುಟುಂಬ ಆ ಭೂಮಿಯನ್ನು ಶಂಕರಯ್ಯ ಕುಟುಂಬದಿಂದ ಖರೀದಿಸಿದೆ. ಇದೇ ಭೂಮಿಗೆ 50-50 ನಿಯಮದಲ್ಲಿ 19 ನಿವೇಶನ ಪರಿಹಾರ ಪಡೆದಿದ್ದಾರೆ. ಮುಡಾ ಅಭಿವೃದ್ಧಿ ಪಡಿಸಿದ ಜಾಗದಲ್ಲಿ ಅಕ್ರಮವಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಪರಿಹಾರ ಪಡೆದಿದ್ದಾರೆ ಎನ್ನುವುದು ಆರೋಪ. ಜಿ.ಟಿ.ದೇವೇಗೌಡ ತಮ್ಮ ಸಹೋದರಿ ಮಗನ ಹೆಸರಿನಲ್ಲಿ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಸ್ನೇಹಮಯಿಕೃಷ್ಣ ದೂರು ನೀಡಿದ್ದಾರೆ.