ಚಿರತೆ ದಾಳಿಯಿಂದ ಕಂಗೆಟ್ಟಿದ್ದ ಜಿಲ್ಲೆ ಜನ್ರಿಗೆ ಇದೀಗ ಹುಲಿ ಆತಂಕ ಎದುರಾಗಿದೆ. ತಿ. ನರಸೀಪುರದಲ್ಲಿ ಚಿರತೆ ದಾಳಿಗೆ ನಾಲ್ಕು ಮಂದಿ ಬಲಿಯಾದ್ರೆ, ಹೆಚ್‌ಡಿ ಕೋಟೆ ವ್ಯಾಪ್ತಿಯಲ್ಲಿ ಹುಲಿದಾಳಿಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹುಲಿ ದಾಳಿಗೆ ಯುವಕನೊಬ್ಬ ಬಲಿಯಾಗಿದ್ದಾನೆ.
ವರದಿ: ಮಧು.ಎಂ.ಚಿನಕುರಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಮೈಸೂರು (ಜ.23): ಚಿರತೆ ದಾಳಿಯಿಂದ ಕಂಗೆಟ್ಟಿದ್ದ ಜಿಲ್ಲೆ ಜನ್ರಿಗೆ ಇದೀಗ ಹುಲಿ ಆತಂಕ ಎದುರಾಗಿದೆ. ತಿ. ನರಸೀಪುರದಲ್ಲಿ ಚಿರತೆ ದಾಳಿಗೆ ನಾಲ್ಕು ಮಂದಿ ಬಲಿಯಾದ್ರೆ, ಹೆಚ್‌ಡಿ ಕೋಟೆ ವ್ಯಾಪ್ತಿಯಲ್ಲಿ ಹುಲಿದಾಳಿಗೆ ನಾಲ್ಕು ಮಂದಿ ಬಲಿಯಾಗಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಹುಲಿ ದಾಳಿಗೆ ಯುವಕನೊಬ್ಬ ಬಲಿಯಾಗಿದ್ದಾರೆ. ಡಿ.ಬಿ. ಕುಪ್ಪೆ ಅರಣ್ಯ ವಲಯದ ಬಳ್ಳೆ ಹಾಡಿಯ ಬಿ.ಕಾಳ ಎಂಬುವರ ಮಗ ಮಂಜು ಹುಲಿ ದಾಳಿಗೆ ಬಲಿಯಾಗಿದ್ದಾನೆ. ನಿನ್ನೆ ಬೆಳಿಗ್ಗೆ ಹಾಡಿ ಪಕ್ಕದಲ್ಲೇ ಇರುವ ಅರಣ್ಯ ಇಲಾಖೆಗೆ ಸೇರಿದ ವಸತಿಗೃಹ ಹಿಂಭಾಗದ ಅರಣ್ಯ ಪ್ರದೇಶಕ್ಕೆ ಸೌದೆ ಸಂಗ್ರಹಿಸಲೆಂದು ಒಬ್ಬನೇ ತೆರಳಿದ್ದಾನೆ. ಈ ವೇಳೆ ಪೊದೆಯ ಒಳಗೆ ಅವಿತು ಕುಳಿತಿದ್ದ ಕಬಿನಿ ಹಿನ್ನೀರು ಪ್ರದೇಶದ ಹೆಣ್ಣು ಹುಲಿ ದಾಳಿ ಮಾಡಿದೆ. ಮಿದುಳು ಹಾಗೂ ಮಾಂಸ ಕಿತ್ತು ಬರುವಂತೆ ಬಾಲಕನ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಅರಣ್ಯ ಇಲಾಖೆ ವಸತಿಗೃಹದ ಹಿಂಭಾಗ ಹುಲಿಯ ಚೀರಾಟ ಕೇಳಿ, ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್ ಎಫ್‌ಒ ಮಧು ಹಾಗೂ ಸಿಬ್ಬಂದಿ ಓಡಿಹೋಗಿ ನೋಡಿದ್ದಾರೆ. ಇದೇ ವೇಳೆ ಹುಲಿ ಇವರನ್ನು ನೋಡಿ ಮೃತ ದೇಹ ಬಿಟ್ಟು ಅರಣ್ಯದ ಪೊದೆಯೊಳಗೆ ಸೇರಿಕೊಂಡಿದೆ. ತಕ್ಷಣ ಮೃತ ದೇಹವನ್ನು ಹುಲಿ ಎಳೆದೋಗಬಹುದು ಎಂದು ಭಾವಿಸಿ ಅರಣ್ಯ ಇಲಾಖೆಯ ವಾಹನದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹ ರವಾನಿಸಿದ್ದಾರೆ.
ಇನ್ನೂ, ಅರಣ್ಯ ಇಲಾಖೆ ಅಧಿಕಾರಿಗಳು ಹಾಡಿ ಜನರ ಗಮನಕ್ಕೆ ತರದೆ, ಬಾಲಕನ ಮೃತದೇಹವನ್ನು ಏಕಾಏಕಿ ಸ್ಥಳ ಮಹಾಜರು ಮಾಡದೆ ಕುಟುಂಬಸ್ಥರ ಗಮನಕ್ಕೆ ತಾರದೆ ಆರ್‌ಎಸ್‌ಓ ಮಧು ಮತ್ತು ಸಿಬ್ಬಂದಿ ಮೃತ ದೇಹವನ್ನು ಗೋಣಿಚೀಲದಲ್ಲಿ ಹಾಕಿಕೊಂಡು ಎಚ್.ಡಿ. ಕೋಟೆ ಆಸ್ಪತ್ರೆಗೆ ಸಾಗಿಸಿದ್ದಾರೆ ಎಂದು ಆರೋಪಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಯುವಕನ ಬಲಿ ಪಡೆದ ಜಾಗದಲ್ಲೇ ಹುಲಿ ಪ್ರತ್ಯಕ್ಷವಾಗಿದ್ದು, ಬಳ್ಳೆ ಅರಣ್ಯ ಕಚೇರಿ ಪಕ್ಕದಲ್ಲೇ ಸುಮಾರು ಮೂರು ಗಂಟೆಗಳ ಕಾಲ ಪೋದೆಯಲ್ಲೇ ಹುಲಿ ಕುಳಿತಿದೆ. ಹುಲಿ ಕಂಡು ಹಾಡಿ ಜನ್ರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.
ಇನ್ನೂ ಡಿ.ಬಿ.ಕುಪ್ಪೆ ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ಇದುವರೆಗೆ ನಾಲ್ವರು ಬಲಿಯಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮಾನಿಮೂಲೆ ಹಾಡಿ ಹಾಗೂ ಸೇಬಿನ ಕೊಲ್ಲಿ ಹಾಡಿಯ ಇಬ್ಬರು ಆದಿವಾಸಿಗಳು ಹಾಗೂ ಗುಂಡ್ರೆ ಹುಲ್ ಮೆಟ್ಲು ವ್ಯಕ್ತಿ ಸೇರಿ ಮೂವರನ್ನು ಒಂದೇ ಹುಲಿ ದಾಳಿ ಮಾಡಿ ಬಲಿ ತೆಗೆದುಕೊಂಡಿತ್ತು. ನಂತರ ಅರಣ್ಯ ಇಲಾಖೆ ವಿರುದ್ಧ ಜನರು ಪ್ರತಿಭಟನೆ ಮಾಡಿದಾಗ ಮಳ್ಳೂರು ಗೇಟ್ ಸಮೀಪ ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲಾಗಿತ್ತು.
ಮತ್ತೊಂದೆಡೆ ಟಿ.ನರಸೀಪುರದಲ್ಲಿ ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ಚುರುಕು ಮಾಡಿದ್ದಾರೆ. ಸಿಎಂ ಆದೇಶದ ಮೇಲೆ ಕೂಂಬಿಂಗ್ ಚುರುಕುಗೊಳಿಸಿದ ಅರಣ್ಯ ಸಿಬ್ಬಂದಿ ಸದ್ಯ ಟಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಹಾಗೂ ಕನ್ನಾಯಕನ ಹಳ್ಳಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮಾಡುತ್ತಿದ್ದಾರೆ. 10 ತಂಡಗಳಾಗಿ ವಿಂಗಡಿಸಿಕೊಂಡು ಕಾರ್ಯಾಚರಣೆ ಮಾಡಿ ಕುರುಚಲು ಪ್ರದೇಶ ಸೇರಿ ಕಬ್ಬಿನ ಗದ್ದೆಗಳ ಸುತ್ತಮುತ್ತ ಕೂಂಬಿಂಗ್ ಮಾಡುತ್ತಿದ್ದಾರೆ.
ಮೈಸೂರಿನಲ್ಲಿ ಚಿರತೆ ಹಾವಳಿ: 15 ದಿನಗಳೊಳಗೆ ಕಬ್ಬು ಕಟಾವಿಗೆ ಡಿಸಿ ಸೂಚನೆ
ಇನ್ನು ತನ್ನ ಮಗನ ಸಾವಿನ ಬಗ್ಗೆ ತಂದೆ ದಶಕಂಠ ನೋವಿನಿಂದ ವಿವರಣೆ ನೀಡಿದ್ದಾರೆ. ಮಗ ಜಯಂತ್ ಸಂಜೆ 3 ಗಂಟೆ ಸುಮಾರಿಗೆ ಸ್ನೇಹಿತನ ಮನೆಗೆ ಹೋಗಿದ್ದ. ಅಲ್ಲಿ ಸಾವು ಆಗಿದ್ದ ಕಾರಣ ಬೇಗ ಆತನನ್ನ ಮನೆಗೆ ಕಳುಹಿಸಿದ್ದಾರೆ. ಅಲ್ಲಿಂದ ಹೊರಳ ಹಳ್ಳಿಯಲ್ಲೇ ಇದ್ದ ಅತ್ತೆ ಮನೆಗೆ ಹೋಗಿದ್ದಾನೆ. ಅಲ್ಲಿ ಮಗನಿಗೆ ಬಿಸ್ಕೆಟ್ ಕೊಟ್ಟು ಕಳುಹಿಸಿದ್ದಾರೆ. ಅಲ್ಲಿಂದ ಮುಖ್ಯ ರಸ್ತೆಗೆ ಬಂದಾಗ ಚಿರತೆ ಆತನನ್ನ ಹಿಡಿದುಕೊಂಡು ಹೋಗಿದೆ. ಎಲ್ಲರೂ ನೋಡಿದ್ದಾರೆ, ಆದರೆ ನಾಯಿ ಎಂದು ಕೊಂಡಿದ್ದಾರೆ ಎಂದು ನೋವಿನಿಂದ ಸಂಗತಿ ಬಿಚ್ಚಿಟ್ಟಿದ್ದಾರೆ.
ಚಿರತೆಯ ವಿರುದ್ಧ ಹೋರಾಡಿ ಜೀವ ಉಳಿಸಿಕೊಂಡ ನಾಯಿ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಇನ್ನೂ, ಮೃತನ ಕುಟುಂಬಕ್ಕೆ 2.5. ಲಕ್ಷ ಪರಿಹಾರವನ್ನು ವಿತರಣೆ ಮಾಡಲಾಗಿದೆ. ಸೂಕ್ತ ರಕ್ಷಣೆಗಾಗಿ ಹಾಡಿ ಜನ್ರು ಒತ್ತಾಯಿಸಿದ್ದಾರೆ. ಮತ್ತೊಂದು ಕಡೆ ನರಸೀಪುರದಲ್ಲಿ ಚಿರತೆ ದಾಳಿ ಸಂಬಂಧ ಅಲಾರ್ಟ್ ಆಗಿರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದ್ದು , ಒಬ್ಬಂಟಿಯಾಗಿ ಓಡಾಟ ಮಾಡದಂತೆ ಮನವಿ ಮಾಡಿದೆ. ಇನ್ನೂ ಚಿರತೆ ಕಂಡಲ್ಲಿ ಮಾಹಿತಿ ನೀಡುವಂತೆ ಟಾಲ್ ಫ್ರೀ ನಂಬರ್ ಬಿಡುಗಡೆ ಮಾಡಿದ್ದಾರೆ.