Mysuru : ಮೂರೂ ಪಕ್ಷಗಳಿಂದ ಮಹಿಳೆಯರಿಗೆ ಟಿಕೆಟ್‌ ಇಲ್ಲ!

By Kannadaprabha News  |  First Published Apr 18, 2023, 7:32 AM IST

ಮೈಸೂರು- ಚಾಮರಾಜನಗರ ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಮಹಿಳೆಯರಿಗೆ ಟಿಕೆಟ್‌ ನೀಡಿಲ್ಲ.


 ಅಂಶಿ ಪ್ರಸನ್ನಕುಮಾರ್‌

 ಮೈಸೂರು :  ಮೈಸೂರು- ಚಾಮರಾಜನಗರ ಜಿಲ್ಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಮಹಿಳೆಯರಿಗೆ ಟಿಕೆಟ್‌ ನೀಡಿಲ್ಲ.

Latest Videos

undefined

ತಲಾ ಒಂದು ಬಾರಿ ಹನೂರಿನಿಂದ ಆಯ್ಕೆಯಾಗಿದ್ದ ಪರಿಮಳಾ ನಾಗಪ್ಪ ಹಾಗೂ ಗುಂಡ್ಸುಪೇಟೆಯಿಂದ ಗೆದ್ದಿದ್ದ ಡಾ.ಗೀತಾ ಮಹದೇವಪ್ರಸಾದ್‌ ಅವರು ಪುತ್ರರಿಗಾಗಿ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಹನೂರಿನಲ್ಲಿ ಪರಿಮಳಾ ನಾಗಪ್ಪ ಅವರ ಪುತ್ರ ಡಾ. ಪ್ರೀತನ್‌ ನಾಗಪ್ಪ ಸತತ ಎರಡನೇ ಬಾರಿ ಬಿಜೆಪಿ ಅಭ್ಯರ್ಥಿ. ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವಪ್ರಸಾದ್‌ ಪುತ್ರ ಎಚ್‌.ಎಂ. ಗಣೇಶಪ್ರಸಾದ್‌ ಮೊದಲ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ.

ಈವರೆಗೆ ಎಂಟು ಮಂದಿ ಆಯ್ಕೆ

ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಕಳೆದ ಏಳು ದಶಕಗಳಲ್ಲಿ ಮಹಿಳಾ ಪ್ರಾತಿನಿಧ್ಯ ಎರಡಂಕಿಯನ್ನು ತಲುಪಿಲ್ಲ. ಕೇವಲ ಬೆರಳೆಣಿಕೆಯಷ್ಟುಮಹಿಳೆಯರು, ಅಂದರೆ ಎಂಟು ಮಂದಿ ಮಾತ್ರ ಆಯ್ಕೆಯಾಗಿದ್ದಾರೆ.

ಬಿಜೆಪಿ-ಕಾಂಗ್ರೆಸ್ಸಿನಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಳ: ಎಚ್‌.ಡಿ.ಕುಮಾರಸ್ವಾಮಿ

ಗುಂಡ್ಲುಪೇಟೆಯಿಂದ ಕೆ.ಎಸ್‌. ನಾಗರತ್ನಮ್ಮ ಅವರು 1957, 1962, 1967, 1972, 1983, 1985 ಹಾಗೂ 1989- ಹೀಗೆ ಏಳು ಬಾರಿ ಆಯ್ಕೆಯಾಗಿದ್ದರು. ಮಹಿಳಾ ಮೀಸಲು ಇಲ್ಲದೇ ಸಾಮಾನ್ಯ ಕ್ಷೇತ್ರದಿಂದ ಏಳು ಬಾರಿ ಗೆದ್ದ, ರಾಜ್ಯದ ಮೊದಲ ಮಹಿಳಾ ಸ್ವೀಕರ್‌, ಪ್ರತಿಪಕ್ಷ ನಾಯಕಿ ಎನಿಸಿಕೊಂಡ ನಾಗರತ್ನಮ್ಮ ಅವರು ಆರೋಗ್ಯ ಮತ್ತು ಕುಟಂಬ ಕಲ್ಯಾಣ, ಸಾಂಸ್ಥಿಕ ಹಣಕಾಸು ಸಚಿವೆಯಾಗಿಯೂ ಕೆಲ,ಸ ಮಾಡಿದ್ದಾರೆ.

ಕೊಳ್ಳೇಗಾಲ ದ್ವಿಸದಸ್ಯ ಕ್ಷೇತ್ರದಿಂದ ಕೆಂಪಮ್ಮ ಅವರು 1957 ರಲ್ಲಿ ಆಯ್ಕೆಯಾಗಿದ್ದರು. 27 ವರ್ಷಗಳ ತರುವಾಯ ಅವರಿಗೆ 1994 ರಲ್ಲಿ ಮತ್ತೆ ಕಾಂಗ್ರೆಸ್‌ ಟಿಕೆಟ್‌ ನೀಡಲಾಗಿತ್ತು. ಆದರೆ ಸೋತರು. ಎಚ್‌.ಡಿ. ಕೋಟೆ ಕ್ಷೇತ್ರದಿಂದ 1978 ರಲ್ಲಿ ಸುಶೀಲಾ ಚಲುವರಾಜ್‌ ಆಯ್ಕೆಯಾಗಿದ್ದರು. 1983 ರಲ್ಲಿ ಸೋತರು. ಹುಣಸೂರು ಕ್ಷೇತ್ರದಿಂದ ಚಂದ್ರಪ್ರಭಾ ಅರಸು 1983 ಹಾಗೂ 1989 ರಲ್ಲಿ ಆಯ್ಕೆಯಾಗಿದ್ದರು. 1985, 1994 ಹಾಗೂ 1999 ರಲ್ಲಿ ಸೋತರು. ಮೈಸೂರು ನಗರದ ನರಸಿಂಹರಾಜ ಕ್ಷೇತ್ರದಿಂದ 1985 ರಲ್ಲಿ ಮುಕ್ತರುನ್ನೀಸಾ ಬೇಗಂ ಆಯ್ಕೆಯಾಗಿದ್ದರು. 2004 ರಲ್ಲಿ ಹನೂರು ಕ್ಷೇತ್ರದಿಂದ ಪರಿಮಳಾ ನಾಗಪ್ಪ ಗೆದ್ದರು. 2008 ಹಾಗೂ 2013 ರಲ್ಲಿ ಸೋತರು. ಬನ್ನೂರು ಕ್ಷೇತ್ರದಿಂದ ಜೆ. ಸುನೀತಾ ವೀರಪ್ಪಗೌಡ 2004 ರಲ್ಲಿ ಗೆದ್ದರು. ಬೇಗಂ ಹಾಗೂ ಸುನೀತಾ ಅವರಿಗೆ ಮತ್ತೆ ಸ್ಪರ್ಧಿಸುವ ಅವಕಾಶ ಸಿಗಲಿಲ್ಲ. 2017ರ ಉಪ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಿಂದ ಡಾ.ಗೀತಾ ಮಹದೇವಪ್ರಸಾದ್‌ ಆಯ್ಕೆಯಾದರು. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋತರು.

ಎಚ್ಡಿಕೆ ಆಸ್ಪತ್ರೆ ಕಟ್ಟಿಸದಿದ್ದರೆ ಜನ ಸಾಯಬೇಕಿತ್ತು: ಎಚ್‌.ಡಿ.ರೇವಣ್ಣ

ಸೋತವರು

1998ರ ಉಪ ಚುನಾವಣೆಯಲ್ಲಿ ಭಾರತಿ ಅರಸು ಹುಣಸೂರಿನಲ್ಲಿ ಲೋಕಶಕ್ತಿ- ಬಿಜೆಪಿ ಅಭ್ಯರ್ಥಿಯಾಗಿ, 1999 ರಲ್ಲಿ ಶಶಿಕಲಾ ನಾಗರಾಜ್‌ ಟಿ. ನರಸೀಪುರದಲ್ಲಿ ವಾಟಾಳ್‌ ಪಕ್ಷದ ಅಭ್ಯರ್ಥಿಯಾಗಿ ಸೋತರು. 2004 ರಲ್ಲಿ ಮಾಜಿ ಶಾಸಕ ಎಸ್‌. ಪುಟ್ಟಸ್ವಾಮಿ ಅವರ ಪುತ್ರಿ ಡಾ.ಬಿ.ಪಿ. ಮಂಜುಳಾ ಚಾಮರಾಜನಗರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋತರು. ಚಾಮರಾಜದಲ್ಲಿ ಬಿಜೆಪಿ ವಿ. ಮೈಥಿಲಿ, ಎಚ್‌.ಡಿ. ಕೋಟೆಯಲ್ಲಿ ಬಿ. ರಾಧಾ, ಗುಂಡ್ಲುಪೇಟೆಯಲ್ಲಿ ಡಾ.ಗಿರಿಜಾ ಮಹೇಶನ್‌ ಬಿಜೆಪಿ ಅಭ್ಯರ್ಥಿಗಳಾಗಿ ಸೋತರು.

ಇದಲ್ಲದೆ ವೈ. ರಮಾಬಾಯಿ, ವೆಂಕಮ್ಮ ಪಾಲಹಳ್ಳಿ ಸೀತಾರಾಮಯ್ಯ, ಡಾ.ಜೆ. ಕಮಲಾರಾಮನ್‌, ಎಚ್‌.ಆರ್‌. ಲಲಿತ, ಶಹಜಾನಮ್ಮ, ಎನ್‌. ವಿಮಲಾ, ನಿಂಗಮ್ಮ, ಮಹಾದೇವಿ, ನಳಿನಿ ಮಹದೇವಸ್ವಾಮಿ, ಟಿ. ಹೇಮಾವತಿ, ಎಸ್‌. ಲತಾ, ಯಶೋದಾ ರಾಮಯ್ಯ, ಗೌರಮ್ಮ, ಎಸ್‌.ಎಸ್‌. ಮಾಲತಿ, ದೇವನೂರು ಮಹಾದೇವಮ್ಮ, ಸರೋಜಾ ಶಂಕರ್‌, ಸಿ. ಕಮಲಮ್ಮ, ಸಣ್ಣಮ್ಮ, ಜಯಕುಮಾರಿ, ಪುಷ್ಪ ಅರಸು, ಡಿ.ಆರ್‌. ನಂದಿನಿಗೌಡ, ಹೇಮಾವತಿ, ವಿಜಯಲಕ್ಷ್ಮಿ ಸಿಂಗ್‌, ರೇಷ್ಮಾ ಬಾನು, ಲಕ್ಷ್ಮಿ, ಕೆ.ಎಸ್‌. ನಂದಿನಿ, ಮಂಜುಳಾ ರಾಜು, ಜಾಜಿ, ಕಮಲಾ ಪೀಟರ್‌, ಎಂ. ಭಾರತಿ, ಉಮಾದೇವಿ, ಎಂ.ಎಸ್‌. ಹೇಮಾವತಿ, ನಿರ್ಮಲಾಕುಮಾರಿ, ಎನ್‌. ರುಕ್ಮಿಣಿ, ಶ್ವೇತಾ ಗೋಪಾಲ್‌, ಮಾಲವಿಕ ಗುಬ್ಬಿವಾಣಿ ಸ್ಪರ್ಧಿಸಿ, ಸೋತರು.

ಈ ಬಾರಿ ಟಿಕೆಟ್‌ ವಂಚಿತರು

ಈ ಬಾರಿ ಚಾಮರಾಜನಗರಿಂದ ಬಿಜೆಪಿ ಟಿಕೆಟ್‌ಗೆ ಜಿಪಂ ಮಾಜಿ ಸದಸ್ಯೆ ನಾಗಶ್ರೀ ಪ್ರತಾಪ್‌, ಕೆ.ಆರ್‌. ನಗರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗೆ ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್‌ ಆಕಾಂಕ್ಷಿಗಳಾಗಿದ್ದರು. ಆದರೆ ಚಾಮರಾಜನಗರದಲ್ಲ ವಸತಿ ಸಚಿವ ವಿ. ಸೋಮಣ್ಣ, ಕೆ.ಆರ್‌. ನಗರದಲ್ಲಿ ಜಿಪಂ ಮಾಜಿ ಸದಸ್ಯ ಡಿ. ರವಿಶಂಕರ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.

ಕೆಪಿಸಿಸಿ ಮಹಿಳಾ ವಿಭಾಗದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್‌, ಕೆ.ಆರ್‌. ನಗರದ ಶ್ವೇತಾ ಗೋಪಾಲ್‌, ಜಿಪಂ ಮಾಜಿ ಸದಸ್ಯೆ, ಜಿಲ್ಲಾ ಬಿಜೆಪಿ ಅಧ್ಯಕ್ಷೆ ಮಂಗಳಾ ಸೋಮಶೇಖರ್‌ ಮತ್ತಿತರುರು ಟಿಕೆಟ್‌ ಕೇಳಿದ್ದರು. ಆದರೆ ಬಯಕೆ ಈಡೇರಿಲ್ಲ.

ಇತರೆ ಪಕ್ಷಗಳಿಂದ 8 ಮಂದಿ ನಾಮಪತ್ರ

ಈ ಬಾರಿ ಈವರೆಗೆ ಇತರೆ ರಾಜಕೀಯ ಪಕ್ಷಗಳಿಂದ 8 ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ.ಕೃಷ್ಣರಾಜ- ಪಿ.ಎಸ್‌. ಸಂಧ್ಯಾ (ಎಸ್‌ಯುಸಿಐ), ಎಸ್‌. ಸುಮಲತಾ (ಉತ್ತಮ ಪ್ರಜಾಕೀಯ), ಚಾಮರಾಜ- ಮಾಲವಿಕ ಗುಬ್ಬಿವಾಣಿ (ಆಮ್‌ ಆದ್ಮಿಪಾರ್ಟಿ), ಜಿ.ಎಸ್‌. ಸೀಮಾ (ಎಸ್‌ಯುಸಿಐ), ವಿ. ಪ್ರಭಾ (ಉತ್ತಮ ಪ್ರಜಾಕೀಯ), ನರಸಿಂಹರಾಜ- ಧರ್ಮಶ್ರೀ (ಆಮ್‌ ಆದ್ಮಿ ಪಾರ್ಟಿ), ಜಿ.ಎಸ್‌. ಲೀಲಾವತಿ (ಉತ್ತಮ ಪ್ರಜಾಕೀಯ), ಎಚ್‌.ಡಿ. ಕೋಟೆ- ರೂಪಾ (ಬಿಜೆಪಿ ಹೆಸರಿನಲ್ಲಿ) ನಾಮಪತ್ರ ಸಲ್ಲಿಸಿದ್ದಾರೆ.

ಐವರು ಮಹಿಳೆಯರು ಮಂತ್ರಿಗಳು

17 ಎಂವೈಎಸ್‌31- ಯಶೋದರಾ ದಾಸಪ್ಪ, ರಾಣಿ ಸತೀಶ್‌

ಅವಿಭಜಿತ ಮೈಸೂರು ಜಿಲ್ಲೆಯಿಂದ ಈವರೆಗೆ ಐವರು ಮಹಿಳೆಯರು ಮಂತ್ರಿಗಳಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಎಚ್‌.ಸಿ. ದಾಸಪ್ಪ ಅವರ ಪತ್ನಿ ಯಶೋದರ ದಾಸಪ್ಪ ಅವರು ಎಸ್‌. ನಿಜಲಿಂಗಪ್ಪ ಅವರ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವೆಯಾಗಿದ್ದರು. ಪಾನ ನಿಷೇಧ ಜಾರಿ ಮಾಡಲಿಲ್ಲ ಎಂದು ಮಂತ್ರಿಗಿರಿಗೆ ರಾಜೀನಾಮೆ ಸಲ್ಲಿಸಿದ್ದರು.

ಕೆ.ಎಸ್‌. ನಾಗರತ್ನಮ್ಮ ಅವರು 1990- 93ರ ಅವಧಿಯಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಅದಕ್ಕೂ ಮೊದಲು ಅವರು ಸ್ವೀಕರ್‌ ಹಾಗೂ ಪ್ರತಿಪಕ್ಷ ನಾಯಕಿಯಾಗಿದ್ದರು. ಹುಣಸೂರಿನಿಂದ ಎರಡು ಬಾರಿ ಶಾಸಕಿ ಹಾಗೂ ಮೈಸೂರು ಲೋಕಸಭಾ ಕ್ಷೇತ್ರದಿಂದ ಒಮ್ಮೆ ಆಯ್ಕೆಯಾಗಿದ್ದ ಚಂದ್ರಪ್ರಭಾ ಅರಸು ಅವರು 1983 ರಲ್ಲಿ ಪ್ರಥಮ ಬಾರಿ ಜನತಾಪಕ್ಷದ ಟಿಕೆಟ್‌ ಮೇಲೆ ಗೆದ್ದಾಗ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾಪಕ್ಷದ ಸರ್ಕಾರದಲ್ಲಿ ರೇಷ್ಮೆ ಖಾತೆ ಸಚಿವೆಯಾಗಿದ್ದರು.

ವಿಧಾನ ಪರಿಷತ್‌ ಸದಸ್ಯೆಯಾಗಿದ್ದ ರಾಣಿ ಸತೀಶ್‌ ಅವರು ಎಸ್‌.ಎಂ. ಕೃಷ್ಣ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದರು. ರಾಣಿ ಸತೀಶ್‌ ಅವರು ಉಪ ಸಭಾಪತಿ ಕೂಡ ಆಗಿದ್ದರು.

ಗುಂಡ್ಲುಪೇಟೆಯಿಂದ ಆಯ್ಕೆಯಾಗಿರುವ ಡಾ.ಗೀತಾ ಮಹದೇವಪ್ರಸಾದ್‌ ಸಣ್ಣ ಕೈಗಾರಿಕೆ ಹಾಗೂ ಸಕ್ಕರೆ ಸಚಿವರು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಮಂತ್ರಿಯೂ ಆಗಿದ್ದರು.

ಲೋಕಸಭೆಗೆ ಆಯ್ಕೆಯಾಗಿದ್ದು ಚಂದ್ರಪ್ರಭಾ ಮಾತ್ರ

ಲೋಕಸಭಾ ಚುನಾವಣೆಯಲ್ಲಿ ಈವರೆಗೆ ಗೆದ್ದವರು ಚಂದ್ರಪ್ರಭಾ ಅರಸು (1991) ಮಾತ್ರ. 2013 ರಲ್ಲಿ ಮೈಸೂರಿನಲ್ಲಿ ಎಂ.ವಿ. ಪದ್ಮಮ್ಮ ಆಮ್‌ ಆದ್ಮಿ ಪಾರ್ಟಿಯಿಂದ ಸ್ಪರ್ಧಿಸಿ ಸೋತರು. ಲೋಕಶಕ್ತಿಯು 1998 ರಲ್ಲಿ ಚಾಮರಾಜನಗರದಲ್ಲಿ ಸುಶೀಲಾ ಕೇಶವಮೂರ್ತಿ ಅವರಿಗೆ ಟಿಕೆಟ್‌ ನೀಡಿತ್ತು. ಅವರು ಸೋತರು.

click me!