ದಸರಾ ಉದ್ಘಾಟನೆ ಎಲ್ಲ ವೈದ್ಯರಿಗೆ ಸಂದ ಗೌರವ

By Kannadaprabha NewsFirst Published Oct 13, 2020, 8:10 AM IST
Highlights

ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ  ಜಯದೇವ ಆಸ್ಪತ್ರೆಯ ನಿರ್ದೇಶಕ ಮತ್ತು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಸೋಮವಾರ ಅಧಿಕೃತ ಆಮಂತ್ರಣ ನೀಡಿದರು.

ಬೆಂಗಳೂರು (ಅ.13):  ನಾಡಹಬ್ಬ ಮೈಸೂರು ದಸರಾವನ್ನು ಉದ್ಘಾಟಿಸುವಂತೆ ಜಯದೇವ ಆಸ್ಪತ್ರೆಯ ನಿರ್ದೇಶಕ ಮತ್ತು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಸೋಮವಾರ ಅಧಿಕೃತ ಆಮಂತ್ರಣ ನೀಡಿದರು.

ನಗರದ ಜಯದೇವ ಆಸ್ಪತ್ರೆಯ ನಿರ್ದೇಶಕರ ಕಚೇರಿಗೆ ಸೋಮವಾರ ತೆರಳಿ ಆಹ್ವಾನ ನೀಡಲಾಗಿದ್ದು, ಸಂಸದ ಪ್ರತಾಪ್‌ ಸಿಂಹ, ಮೈಸೂರು ಮೇಯರ್‌ ತಸ್ನಿಂ ಅವರು ಸಾಥ್‌ ನೀಡಿದರು. ಕುಟುಂಬಸಮೇತರಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸುವಂತೆ ಡಾ.ಮಂಜುನಾಥ್‌ ಅವರನ್ನು ಆಹ್ವಾನಿಸಲಾಯಿತು.

'ಮೈಸೂರು ಮಹಿಷಾ ದಸರಾ : ಅನುಮತಿ ಇಲ್ಲದಿದ್ರೂ ನಡೆಯುತ್ತೆ'

ಈ ವೇಳೆ ಮಾತನಾಡಿದ ಡಾ.ಮಂಜುನಾಥ್‌, ಇದು ನನ್ನೊಬ್ಬನಿಗೆ ಸಿಕ್ಕ ಗೌರವವಲ್ಲ. ಇಡೀ ವೈದ್ಯ ಸಮುದಾಯಕ್ಕೆ ಸಿಕ್ಕ ಮಾನ್ಯತೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ. ಈ ಗೌರವ ನೀಡಿದ ಮುಖ್ಯಮಂತ್ರಿಗಳಿಗೆ ಮತ್ತು ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ದಸರಾ ಸೇರಿದಂತೆ ನಾಡಿನ ಜನತೆ ಎಲ್ಲ ಕಡೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಜತೆಗೆ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ನಮ್ಮ ಹತ್ತಿರ ನಿಖರ ಔಷಧಗಳು ಇಲ್ಲ. ಹೀಗಾಗಿ ಕೊರೋನಾ ಜತೆಯಲ್ಲಿಯೇ ನಾವಿರಬೇಕಾದ್ದರಿಂದ ಯಾವುದೇ ನಿರ್ಲಕ್ಷ್ಯ ಬೇಡ ಎಂದು ಕರೆ ನೀಡಿದರು.

ಪಿಯುಸಿ, ಎಂ.ಡಿ. ಸೇರಿದಂತೆ ಶಿಕ್ಷಣದ ಹಲವು ಘಟ್ಟಗಳನ್ನು ಮೈಸೂರಿನಲ್ಲಿ ಕಳೆದಿದ್ದೇನೆ. ಆ ಸಮಯದಲ್ಲಿ ದಸರಾವನ್ನು ಸಂಭ್ರಮದಿಂದ ನೋಡುತ್ತಿದ್ದೆ. ಕಳೆದ ಎರಡು ವರ್ಷದ ಹಿಂದೆಯೂ ಸ್ನೇಹಿತರೊಡನೆ ದಸರಾಕ್ಕೆ ಹೋಗಿದ್ದೆ. ಜಂಬೂ ಸವಾರಿ, ಮೈಸೂರು ಅರಮನೆ, ಚಾಮುಂಡಿ ಬೆಟ್ಟದಿಂದ ನಿಂತು ಲೈಟಿಂಗ್ಸ್‌ ನೋಡುವುದೇ ಒಂದು ಆನಂದ ಎಂದರು.

ಸಚಿವ ಸೋಮಶೇಖರ್‌ ಮಾತನಾಡಿ, ದಸರಾ ಉನ್ನತ ಸಮಿತಿಯಲ್ಲಿ ಮೊದಲಿಗೆ ಆರು ಮಂದಿ ಕೊರೋನಾ ವಾರಿಯರ್‌ಗಳಿಂದ ಉದ್ಘಾಟನೆ ಮಾಡಿಸುವುದು ಎಂಬ ತೀರ್ಮಾನ ಮಾಡಲಾಗಿತ್ತು. ತರುವಾಯ ಒಬ್ಬರಿಂದ ಉದ್ಘಾಟಿಸಿ ಉಳಿದವರಿಗೆ ಸನ್ಮಾನಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಅಂತಿಮವಾಗಿ ಮುಖ್ಯಮಂತ್ರಿಗಳು ಡಾ.ಮಂಜುನಾಥ್‌ ಅವರನ್ನು ಆಯ್ಕೆ ಮಾಡಿದ್ದಾಗಿ ದೂರವಾಣಿ ಕರೆ ಮಾಡಿ ನನಗೆ ತಿಳಿಸಿದರು ಎಂದು ಹೇಳಿದರು.

ಈ ಬಾರಿ ಕೋವಿಡ್‌-19ರ ಹಿನ್ನೆಲೆಯಲ್ಲಿ ಸರಳ, ಸಾಂಪ್ರದಾಯಿಕ ದಸರಾಕ್ಕೆ ಮಾತ್ರ ಒತ್ತು ಕೊಡಲಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿನ ಕಾರ್ಯಕ್ರಮಕ್ಕೆ 200 ಮಂದಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 20 ಮಂದಿ ಮತ್ತು ಜಂಬೂ ಸವಾರಿಗೆ 300 ಜನರಿಗೆ ಮಾತ್ರ ಅವಕಾಶ ಕಲ್ಪಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಮಾಧ್ಯಮದವರು ಮತ್ತು ಸಾರ್ವಜನಿಕರಿಗೆ ಎಷ್ಟುಪ್ರಮಾಣದಲ್ಲಿ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂಬುದನ್ನು ಜಿಲ್ಲಾಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

click me!