ಡಿ.ಜೆ. ಕೆ.ಜಿ.ಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರತಿಭಟನೆ| ಶಾಸಕರ ಮನೆ ಮೇಲೆ ದಾಳಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಪ್ರಚೋದನೆ| ಮಾಜಿ ಮೇಯರ್, ಮಾಜಿ ಕಾರ್ಪೋರೇಟರ್ ಸಂಚು| ಆಪ್ತ ಕಾರ‍್ಯದರ್ಶಿ, ಕಾರು ಚಾಲಕ ಉಸ್ತುವಾರಿ| ಸಿಸಿಬಿ ಚಾರ್ಜ್‌ಶೀಟ್ ಸಲ್ಲಿಕೆ|
ಬೆಂಗಳೂರು(ಅ.13): ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಹಿಂದೆ ಪುಲಿಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ವಿರುದ್ಧ ಸ್ಥಳೀಯ ಕಾಂಗ್ರೆಸ್ಸಿಗರ ರಾಜಕೀಯ ದ್ವೇಷ ಬಹುಮುಖ್ಯ ಕಾರಣವಾಗಿದೆ ಎಂದು ಪ್ರಕರಣ ಸಂಬಂಧ ತನಿಖೆ ನಡೆಸಿದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಹೇಳಿದೆ.
ಗಲಭೆ ದಿನ ಶಾಸಕರ ಮನೆ ಮತ್ತು ಕಚೇರಿಗೆ ಬೆಂಕಿ ಹಾಕಿದ ಪ್ರಕರಣದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರಾದ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್, ಅವರ ಆಪ್ತ ಸಹಾಯಕ ಅರುಣ್, ಕಾರು ಚಾಲಕ ಸಂತೋಷ್, ಮಾಜಿ ಕಾರ್ಪೋರೇಟರ್ ಅಬ್ದುಲ್ ಜಾಕೀಬ್ ಜಾಕೀರ್ ಹಾಗೂ ಮಜ್ನು ಸೇರಿದಂತೆ ಸುಮಾರು 60 ಆರೋಪಿಗಳ ವಿರುದ್ಧ ಸಿಸಿಬಿ ದೋಷಾರೋಪ ಹೊರಿಸಿದೆ. ಶಾಸಕರ ಮನೆಗೆ ಬೆಂಕಿ ಹಾಕಲು ಉದ್ರಿಕ್ತರ ಗುಂಪನ್ನು ಈ ಕಾಂಗ್ರೆಸ್ ನಾಯಕರು ಪ್ರಚೋದಿಸಿದ್ದರು ಎಂದು ಸಿಸಿಬಿ ಉಲ್ಲೇಖಿಸಿದೆ ಎನ್ನಲಾಗಿದೆ.
undefined
ಬಂಧನ ಭೀತಿ:
ಗಲಭೆ ಪ್ರಕರಣದ ಆರೋಪ ಪಟ್ಟಿಯಲ್ಲಿ ತಮ್ಮ ಹೆಸರು ಪ್ರಸ್ತಾಪವಾದ ಬೆನ್ನಲ್ಲೇ ಮಾಜಿ ಮೇಯರ್ ಸಂಪತ್‌ರಾಜ್ ಹಾಗೂ ಜಾಕೀರ್‌ಗೆ ಬಂಧನ ಭೀತಿ ಶುರುವಾಗಿದೆ. ಕೊರೋನಾ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವ ಸಂಪತ್ ರಾಜ್ ಅವರನ್ನು ಕೆಲವೇ ದಿನಗಳಲ್ಲಿ ಸಿಸಿಬಿ ಬಂಧಿಸುವ ಸಾಧ್ಯತೆಗಳು ಬಹುತೇಕ ಖಚಿತವಾಗಿದೆ. ಇನ್ನೊಂದೆಡೆ ಪ್ರಕರಣದ ಸಂಬಂಧ ನೋಟಿಸ್ ನೀಡಿದ್ದರೂ ಸೋಮವಾರ ವಿಚಾರಣೆಗೆ ಗೈರಾಗಿ ತಪ್ಪಿಸಿಕೊಂಡಿರುವ ಜಾಕೀರ್ ಪತ್ತೆಗೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು ಗಲಭೆ: ಕಾಂಗ್ರೆಸ್ ಮುಖಂಡನಿಗೆ ಬಂಧನ ಭೀತಿ?
ಶಾಸಕರ ಮನೆಗೆ ಬೆಂಕಿ ಹಾಕಿದ ಪ್ರಕರಣ:
ಆ.11ರಂದು ಸೋಮವಾರ ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮ ಗುರು ಮಹಮ್ಮದ್ ಫೈಗಂಬರ್ ಕುರಿತು ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸೋದರ ಸಂಬಂಧಿ ನವೀನ್ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಎಂಬ ಕಾರಣಕ್ಕೆ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‌ಭೈರಸಂದ್ರ ವ್ಯಾಪ್ತಿಯಲ್ಲಿ ಗಲಭೆ ನಡೆದಿತ್ತು. ಅಂದು ಪೋಸ್ಟ್ ಮಾಡಿದ್ದನ್ನು ವಿರೋಧಿಸಿ ಕಾವಲ್‌ಭೈರಸಂದ್ರದಲ್ಲಿರುವ ನವೀನ್ ಮನೆ ಮುಂದೆ ಕೆಲವರು ಪ್ರತಿಭಟನೆ ನಡೆಸುತ್ತಿದ್ದರು.
ಮೊದಲಿನಿಂದಲೂ ಶಾಸಕರ ವಿರುದ್ಧ ರಾಜಕೀಯ ದ್ವೇಷ ಸಾಧಿಸುತ್ತಿದ್ದ ಮಾಜಿ ಮೇಯರ್ ಸಂಪತ್‌ರಾಜ್ ಹಾಗೂ ಮಾಜಿ ಕಾರ್ಪೋರೇಟರ್ ಜಾಕೀರ್, ಈ ಪರಿಸ್ಥಿತಿ ಲಾಭ ಪಡೆಯಲು ಸಂಚು ರೂಪಿಸಿದ್ದರು. ಆಗ ನವೀನ್ ಮನೆ ಮುಂದೆ ಗಲಾಟೆ ಮಾಡುತ್ತಿದ್ದ ಗುಂಪಿಗೆ ಪ್ರಚೋದಿಸಿದ ಆರೋಪಿಗಳು, ನವೀನ್ ಮನೆ ಹತ್ತಿರದಲ್ಲೇ ಇದ್ದ ಶಾಸಕರ ಮನೆ ಮತ್ತು ಕಚೇರಿಗೆ ಮೇಲೆ ದಾಳಿಗೆ ಉದ್ರಿಕ್ತರ ಗುಂಪನ್ನು ಕಳುಹಿಸಿದ್ದರು. ಈ ಕೃತ್ಯದಲ್ಲಿ ಸಂಪತ್‌ರಾಜ್ ಸೂಚನೆ ಮೇರೆಗೆ ಅವರ ಆಪ್ತ ಸಹಾಯಕ ಅರುಣ್ ಹಾಗೂ ಕಾರು ಚಾಲಕ ಸಂತೋಷ್, ಜಾಕೀರ್ ಶಿಷ್ಯ ಮಜ್ನು ಮೂಲಕ ಸಂಚನ್ನು ಕಾರ್ಯರೂಪಕ್ಕಿಳಿಸಿದ್ದರು ಎಂದು ಸಿಸಿಬಿ ಆರೋಪ ಪಟ್ಟಿಯಲ್ಲಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಮಾಜಿ ಮೇಯರ್ ವಿರುದ್ಧ ಪ್ರತ್ಯೇಕ ಆರೋಪ ಪಟ್ಟಿ?
ಶಾಸಕರ ಮನೆಗೆ ಬೆಂಕಿ ಹಾಕಿದ ಕೃತ್ಯದಲ್ಲಿ ನ್ಯಾಯಾಲಯಕ್ಕೆ ಪ್ರಾಥಮಿಕ ಹಂತದ ಆರೋಪ ಪಟ್ಟಿಯನ್ನು ಸಲ್ಲಿಸಿ ಸಿಸಿಬಿ ತನಿಖೆ ಮುಂದುವರೆಸಿದೆ. ಹೀಗಾಗಿ ಈಗ ಕೃತ್ಯದಲ್ಲಿ ಮಾಜಿ ಮೇಯರ್ ಪಾತ್ರವನ್ನು ಮಾತ್ರವಷ್ಟೇ ಉಲ್ಲೇಖಿಸಿದೆ. ಮುಂದೆ ಅವರನ್ನು ಬಂಧಿಸಿ ತನಿಖೆ ಮುಗಿಸಿದ ಬಳಿಕ ಪ್ರಕರಣದಲ್ಲಿ ಮಾಜಿ ಮೇಯರ್ ಪಾತ್ರದ ವಿಸ್ತಾರ ರೂಪದ ಬಗ್ಗೆ ಪ್ರತ್ಯೇಕ ಆರೋಪ ಪಟ್ಟಿಸಲ್ಲಿಸಲು ಸಿಸಿಬಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಡಿ.ಜೆ.ಹಳ್ಳಿ-ಕೆ ಜಿ.ಹಳ್ಳಿ ಗಲಭೆ ಸಂಬಂಧ ಎರಡು ಠಾಣೆಗಳಲ್ಲಿ 72 ಎಫ್‌ಐಆರ್‌ಗಳು ದಾಖಲಾಗಿದ್ದು, ಒಟ್ಟು 421 ಆರೋಪಿಗಳು ಬಂಧಿತರಾಗಿದ್ದಾರೆ. ಇದರಲ್ಲಿ ಪೊಲೀಸರು ಗುಂಡು ಹಾರಿಸಿರುವ ಸಂಬಂಧ ದಾಖಲಾಗಿದ್ದ ಎರಡು ಎಫ್‌ಐಆರ್‌ಗಳ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಶಾಸಕರ ಮನೆ ಮತ್ತು ಕಚೇರಿ ಮೇಲಿನ ದಾಳಿ ಪ್ರಕರಣವನ್ನು ಸಿಸಿಬಿ ತನಿಖೆ ನಡೆಸುತ್ತಿದೆ. ಇನ್ನುಳಿದ ಕೃತ್ಯಗಳ ಬಗ್ಗೆ ಪೂರ್ವ ವಿಭಾಗದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
400 ಪುಟ, 60 ಆರೋಪಿಗಳು
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮತ್ತು ಕಚೇರಿಗೆ ಬೆಂಕಿ ಹಾಕಿದ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸುಮಾರು 400 ಪುಟಗಳ ಆರೋಪ ಪಟ್ಟಿಯನ್ನು ಸಿಸಿಬಿ ಸಲ್ಲಿಸಿದೆ. ಇದರಲ್ಲಿ ಮಾಜಿ ಮೇಯರ್ ಸಂಪತ್ ರಾಜ್, ಅವರ ಆಪ್ತ ಸಹಾಯಕ ಅರುಣ್, ಕಾರು ಚಾಲಕ ಸಂತೋಷ್, ಮಾಜಿ ಕಾರ್ಪೋರೇಟರ್ ಅಬ್ದುಲ್ ಜಾಕೀರ್ ಹಾಗೂ ಆತನ ಶಿಷ್ಯ ಮಜ್ನು ಸೇರಿದಂತೆ 60 ಆರೋಪಿಗಳ ಹೆಸರು ಉಲ್ಲೇಖಿಸಲಾಗಿದೆ. ಅಲ್ಲದೆ, ಶಾಸಕ ಶ್ರೀನಿವಾಸಮೂರ್ತಿ, ಅವರ ಸೋದರರು, ನವೀನ್ ಕುಟುಂಬ ಸದಸ್ಯರು ಒಳಗೊಂಡಂತೆ ಹಲವು ಜನರ ಹೇಳಿಕೆಗಳು ದಾಖಲಾಗಿವೆ. ಹಾಗೆಯೇ 18 ಜನ ಸಾಕ್ಷಿದಾರರ ಹೇಳಿಕೆಗಳು ಕೂಡ ಪ್ರಸ್ತಾಪವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.