Mysuru Dasara: ದಸರಾ ಗಜಪಡೆ ತೂಕ ಪರೀಕ್ಷೆ, ಶ್ರೀಕಂಠನಿಗೆ ನಂಬರ್ 1 ಸ್ಥಾನ; ಕ್ಯಾಪ್ಟನ್ ಆಯ್ಕೆ ಹೇಗಿರುತ್ತೆ?

Published : Aug 30, 2026, 04:54 PM IST
mysuru elephant

ಸಾರಾಂಶ

ಮೈಸೂರು ದಸರಾ ಜಂಬೂ ಸವಾರಿಗಾಗಿ ಗಜಪಡೆಯ ತಾಲೀಮು ಆರಂಭವಾಗಿದೆ. ಮೊದಲ ಹಂತದಲ್ಲಿ ಬಂದ 9 ಆನೆಗಳ ತೂಕ ಪರೀಕ್ಷೆ ನಡೆಸಲಾಗಿದ್ದು, ಶ್ರೀಕಂಠ ಆನೆ ಅತಿ ಹೆಚ್ಚು ತೂಕ ಹೊಂದಿದೆ. ಅಂಬಾರಿ ಹೊರುವ ಕ್ಯಾಪ್ಟನ್ ಆನೆಯ ಆಯ್ಕೆ ಪ್ರಕ್ರಿಯೆಗೂ ಚಾಲನೆ ಸಿಕ್ಕಿದ್ದು, ಕುತೂಹಲ ಹೆಚ್ಚಿಸಿದೆ.

ಮೈಸೂರು: ನಾಡಹಬ್ಬ ಮೈಸೂರು ದಸರಾ 2026ರ ಸಿದ್ಧತೆಗಳು ಜೋರಾಗಿದ್ದು, ಇಂದಿನಿಂದ ಜಂಬೂ ಸವಾರಿ ತಾಲೀಮು ಆರಂಭವಾಗಿದೆ. ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳೊಂದಿಗೆ ತಾಲೀಮು ಶುರುವಾಗಿದ್ದು, ಇದೇ ವೇಳೆ ದಸರಾ ಗಜಪಡೆಯ ಆನೆಗಳಿಗೆ ತೂಕ ಪರೀಕ್ಷೆಯನ್ನೂ ನಡೆಸಲಾಗಿದೆ. ಶ್ರೀಕಂಠ ಆನೆ ತೂಕದಲ್ಲಿ ನಂ1 ಆಗಿದ್ರೆ, ಕ್ಯಾಪ್ಟನ್ ಯಾರು ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಈ ಕುರಿತ ವರದಿ ಇಲ್ಲಿದೆ.

ಇಂದಿನಿಂದಲೇ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಗೆ ಚಾಲನೆ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ದಸರಾ ಗಜಪಡೆಯ ತಾಲೀಮು ಇಂದಿನಿಂದ ಆರಂಭವಾಗಿದೆ. ಮೈಸೂರು ಅರಮನೆಯಿಂದ ಗಜಪಡೆ ಮೊದಲ ಹಂತದ ತಾಲೀಮು ಆರಂಭಿಸಿದ್ದು, ತಾಲೀಮಿನ ಮೊದಲ ಹಂತವಾಗಿ , ಮೊದಲನೇ ಹಂತದಲ್ಲಿ ಆಗಮಿಸಿರುವ ಧನಂಜಯ (5,530), ಪ್ರಶಾಂತ (5,205), ಮಹೇಂದ್ (5,490)ರ, ಏಕಲವ್ಯ (5,600), ಗೋಪಿ (5,170), ಶ್ರೀಕಂಠ (5,790), ಲಕ್ಷ್ಮಿ (3,990), ಕಾವೇರಿ (3,075) ಹಾಗೂ ಶ್ರೀರಾಮ (4,820) ಆನೆಗಳಿಗೆ ತಾಲೀಮಿನ ಜೊತೆಗೆ ತೂಕ ಪರೀಕ್ಷೆಯಲ್ಲಿ ಭಾಗವಹಿಸಿವೆ. ಈ ಬಾರಿ ಕ್ಯಾಪ್ಟನ್ ಆನೆ ಆಯ್ಕೆಯಾಗುವ ಮುನ್ನವೇ ತಾಲೀಮು ಆರಂಭವಾಗಿದ್ದು, ಇಂದಿನಿಂದಲೇ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.

ಯಾವ ಆನೆ ತೂಕ ಎಷ್ಟಿದೆ?

ತಾಲೀಮಿನ ಜೊತೆಗೆ ಮೈಸೂರಿನ ಧನ್ವಂತರಿ ಸಾಯಿರಾಂ ತೂಕ ಮಾಪನ ಕೇಂದ್ರದಲ್ಲಿ 9 ಆನೆಗಳಿಗೆ ತೂಕ ಪರೀಕ್ಷೆ ನಡೆಸಲಾಯಿತು. ತೂಕ ಪರೀಕ್ಷೆಯಲ್ಲಿ ಶ್ರೀಕಂಠ ಆನೆ 5,790 ಕೆ.ಜಿ. ತೂಕದೊಂದಿಗೆ ಮೊದಲ ಸ್ಥಾನ ಪಡೆದರೆ, ಏಕಲವ್ಯ 5,600 ಕೆ.ಜಿ., ಧನಂಜಯ 5,530 ಕೆ.ಜಿ., ಮಹೇಂದ್ರ 5,490 ಕೆ.ಜಿ. ತೂಕ ಹೊಂದಿರುವುದು ದಾಖಲಾಗಿದೆ. ಉಳಿದ ಆನೆಗಳ ತೂಕವನ್ನೂ ಅರಣ್ಯ ಇಲಾಖೆ ಪರಿಶೀಲನೆ ನಡೆಸಿದೆ.

ಅಂಬಾರಿ ಹೊರುವ ಕ್ಯಾಪ್ಟನ್ ಆನೆ ಆಯ್ಕೆ ಹೇಗಿರುತ್ತದೆ?

ಆನೆಗಳ ಆರೋಗ್ಯವೇ ಇಲಾಖೆಯ ಮೊದಲ ಆದ್ಯತೆಯಾಗಿದ್ದು, ತೂಕ ಹೆಚ್ಚಿಸುವುದಕ್ಕಿಂತ ಆರೋಗ್ಯ ಕಾಪಾಡುವುದು ಮುಖ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದ್ದು, ಹಂತ ಹಂತವಾಗಿ ತಾಲೀಮು ನಡೆಸಲಾಗುತ್ತದೆ. ತಾಲೀಮಿನ ಬಳಿಕ ಜಂಬೂ ಸವಾರಿಯಲ್ಲಿ ಅಂಬಾರಿ ಹೊರುವ ಕ್ಯಾಪ್ಟನ್ ಆನೆ ಆಯ್ಕೆ ಮಾಡಲಾಗುತ್ತದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಸುಳ್ಳು ಮಾಹಿತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ

ಇದೇ ವೇಳೆ ದಸರಾ ಆನೆಗಳ ವೀಕ್ಷಣೆಗೆ ಟಿಕೆಟ್ ನೀಡಲಾಗುತ್ತಿದೆ ಎಂಬ ವದಂತಿಗಳನ್ನು ಅರಣ್ಯ ಇಲಾಖೆ ತಳ್ಳಿಹಾಕಿದೆ. ಆನೆಗಳ ಬಳಿ ಸಾರ್ವಜನಿಕರಿಗೆ ತೆರಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿರುವ ಅಧಿಕಾರಿಗಳು, ಸುಳ್ಳು ಮಾಹಿತಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಗಜಪಡೆಗಳ ಸುರಕ್ಷತೆಗಾಗಿ ಪೊಲೀಸ್ ಬಿಗಿ ಭದ್ರತೆಯನ್ನೂ ನಿಯೋಜಿಸಲಾಗಿದೆ.

ಜಂಬೂ ಸವಾರಿಗೆ ಗಜಪಡೆಗಳ ಸದ್ದು!

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಗಳ ತಾಲೀಮು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಕ್ಯಾಪ್ಟನ್ ಆನೆ ಆಯ್ಕೆ ಹಾಗೂ ಅಂಬಾರಿ ತಾಲೀಮು ಮತ್ತಷ್ಟು ಕುತೂಹಲ ಮೂಡಿಸಿದೆ.

ಒಟ್ಟಾರೆ ದಸರಾ ಗಜಪಡೆಯ ತಾಲೀಮು ಮತ್ತು ಆರೋಗ್ಯ ಪರೀಕ್ಷೆಗಳು ಆರಂಭವಾಗಿದ್ದು, ಜಂಬೂ ಸವಾರಿಗೆ ಗಜಪಡೆಗಳನ್ನು ಸಜ್ಜುಗೊಳಿಸುವ ಕಾರ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ. (ವರದಿ: ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು) 

PREV
Read more Articles on
click me!

Recommended Stories

ಹಡಗಿನಷ್ಟೇ ಅಗ್ಗ, ವಿಮಾನದಷ್ಟೇ ವೇಗ: ನೀರಿನ ಮೇಲೆಯೇ ಲ್ಯಾಂಡಿಂಗ್, ಶಕ್ತಿಶಾಲಿ ಯುರೇಕಾಗೆ ಬೆಂಗಳೂರಿನ ಕಂಪನಿ ಚಾಲನೆ!
ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್‌ನ್ಯೂಸ್; ಉಚಿತ ವಿದ್ಯುತ್ ಯೋಜನೆಯ ಮಹತ್ವದ ಅಪ್‌ಡೇಟ್ ಕೊಟ್ಟ ಬೆಸ್ಕಾಂ ಎಂಡಿ