ಮಾನಸಿಕವಾಗಿ ಭಾರ ಹೊರಲು ಇಷ್ಟ ಪಡದ ಮಹೇಂದ್ರ ಕ್ಯಾಪ್ಟನ್ ಸ್ಥಾನದಿಂದ ಔಟ್, ಅಂಬಾರಿ ಹೊರಲು ಧನಂಜಯನ ಹೆಸರು ಮುಂಚೂಣಿಗೆ

Published : Oct 09, 2026, 10:44 AM IST
elephant Mahendra

ಸಾರಾಂಶ

ಮೈಸೂರು ದಸರಾದ ಚಿನ್ನದ ಅಂಬಾರಿ ಹೊರಬೇಕಿದ್ದ ಮಹೇಂದ್ರ ಆನೆಯು ತಾಲೀಮಿನ ವೇಳೆ ಅರ್ಧಕ್ಕೇ ನಿಂತ ಕಾರಣ ಆತನನ್ನು ರೇಸ್‌ನಿಂದ ಕೈಬಿಡಲಾಗಿದೆ. ದೈಹಿಕವಾಗಿ ಫಿಟ್ ಆಗಿದ್ದರೂ ಮಾನಸಿಕ ಹಿಂಜರಿಕೆಯಿಂದ ಆನೆ ಈ ವರ್ತನೆ ತೋರಿದೆ. ಇದೀಗ ಧನಂಜಯ ಆನೆಯು ಅಂಬಾರಿ ಹೊರುವ ಪ್ರಬಲ ನಾಯಕನಾಗಿ ಮುಂಚೂಣಿಯಲ್ಲಿದ್ದಾನೆ.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ 'ಕ್ಯಾಪ್ಟನ್' ಆನೆಯ ಆಯ್ಕೆ ಪ್ರಕ್ರಿಯೆಯಲ್ಲಿ ನಾಟಕೀಯ ತಿರುವು ಸಿಕ್ಕಿದೆ. ರಾಜಮಾರ್ಗದಲ್ಲಿ ನಡೆಯುತ್ತಿದ್ದ ಮರದ ಅಂಬಾರಿ ತಾಲೀಮಿನ ವೇಳೆ, ಮುಂಚೂಣಿಯಲ್ಲಿದ್ದ ಮಹೇಂದ್ರ ಆನೆಯು ಆಯುರ್ವೇದಿಕ್ ವೃತ್ತದ ಬಳಿ ದಿಢೀರನೆ ಹೆಜ್ಜೆ ಮುಂದಿಡದೆ ಅರ್ಧಕ್ಕೇ ನಿಂತ ಪರಿಣಾಮ, ತಾಲೀಮನ್ನು ಮೊಟಕುಗೊಳಿಸಬೇಕಾಯಿತು. ಈ ಅನಿರೀಕ್ಷಿತ ಹಿನ್ನಡೆಯಿಂದಾಗಿ ಮಹೇಂದ್ರ ಆನೆಯನ್ನು ಈ ಬಾರಿಯ ಮೈಸೂರು ದಸರಾದ ಅಂಬಾರಿ ಹೊರಬಲ್ಲ ನಾಯಕತ್ವದ ರೇಸ್‌ನಿಂದ ತಾತ್ಕಾಲಿಕವಾಗಿ ಹೊರಗಿಡಲಾಗಿದೆ.

ದೈಹಿಕವಾಗಿ ಫಿಟ್, ಆದರೆ ಮಾನಸಿಕ ಹಿಂಜರಿಕೆ

ಮಹೇಂದ್ರ ಆನೆಯ ವರ್ತನೆ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ಡಿಸಿಎಫ್ (DCF) ಪ್ರಭುಗೌಡ ಅವರು ಪ್ರಕರಣದ ಹಿಂದಿನ ನೈಜ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಮಹೇಂದ್ರ ಆನೆಗೆ ಯಾವುದೇ ದೈಹಿಕ ತೊಂದರೆಯಿಲ್ಲ. ಆನೆಯ ಕಾಲುಗಳನ್ನು ಹಾಗೂ ಲದ್ದಿಯನ್ನು ಲ್ಯಾಬ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಳು ಸಂಪೂರ್ಣ ನಾರ್ಮಲ್ ಆಗಿವೆ. ಆದರೆ ಆನೆಗೆ ಮಾನಸಿಕವಾಗಿ ಭಾರ ಹೊರಲು ಇಷ್ಟವಿಲ್ಲದಿರುವುದು ಕಂಡುಬಂದಿದೆ.

ಅರ್ಧಕ್ಕೇ ನಿಲ್ಲಲು ಕಾರಣವೇನು?

ಕಳೆದ ಸೆ.25 ರಂದು ಮೊದಲ ದಿನ ಮರದ ಅಂಬಾರಿ ಹೊತ್ತಿದ್ದ ಮಹೇಂದ್ರ ಆನೆ ಜೋರು ಮಳೆಯ ನಡುವೆ ತಾಲೀಮಿಗೆ ತೆರಳಲು ಒಲ್ಲೆ ಎಂದ ಕಾರಣ ಮರದ ಅಂಬಾರಿಯ ತಾಲೀಮು ಬಲರಾಮ ದ್ವಾರದಲ್ಲಿ ಮೊಟಕುಗೊಂಡಿತ್ತು. ಅಧಿಕಾರಿಗಳು ಮಧ್ಯದಾರಿಯಲ್ಲೇ ತಾಲೀಮು ನಿಲ್ಲಿಸಿ ಮಹೇಂದ್ರನ ಮೇಲಿದ್ದ ಭಾರವನ್ನು ಇಳಿಸಿದ್ದರು. ನಾನು ಸುಮ್ಮನೆ ನಿಂತರೆ ಬೆನ್ನ ಮೇಲಿರುವ ಭಾರವನ್ನು ಇಳಿಸುತ್ತಾರೆ ಎಂಬ ಭಾವನೆ ಮಹೇಂದ್ರನ ಮನಸ್ಸಿನಲ್ಲಿ ಬಲವಾಗಿ ಅಚ್ಚೊತ್ತಿದೆ. ಹೀಗಾಗಿ ನಿನ್ನೆಯ ತಾಲೀಮಿನಲ್ಲೂ ಅದೇ ಆಲೋಚನೆಯಿಂದ ಅರ್ಧ ಹಾದಿಯಲ್ಲಿ ನಿಂತಿದ್ದಾನೆ. ಪ್ರಸ್ತುತ ಮಾವುತರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಆನೆಯ ಮನಸ್ಸಿನಿಂದ ಈ ಹಿಂಜರಿಕೆಯನ್ನು ಹೋಗಲಾಡಿಸುವ ತರಬೇತಿಯಲ್ಲಿ ನಿರತರಾಗಿದ್ದಾರೆ.

ಶ್ರೀರಂಗಪಟ್ಟಣ ದಸರಾಗೆ ಮಹೇಂದ್ರ ಬಳಕೆ?

ಮಹೇಂದ್ರ ಆನೆಯು ಕಳೆದ ನಾಲ್ಕು ವರ್ಷಗಳಿಂದ ಶ್ರೀರಂಗಪಟ್ಟಣ ದಸರಾವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಅನುಭವ ಹೊಂದಿದ್ದಾನೆ. ಮೈಸೂರು ದಸರಾದ ಅಂಬಾರಿ ರೇಸ್‌ನಿಂದ ಔಟ್ ಆಗಿದ್ದರೂ, ಇನ್ನು ಎರಡು ದಿನಗಳಲ್ಲಿ ನಿರ್ಧರಿಸಲಾಗುವ ಶ್ರೀರಂಗಪಟ್ಟಣ ದಸರಾಗೆ ಮಹೇಂದ್ರ ಆನೆಯನ್ನೇ ಅಂತಿಮಗೊಳಿಸುವ ಸಾಧ್ಯತೆ ದಟ್ಟವಾಗಿದೆ.

1,000 ಕೆಜಿ ಭಾರ ಹೊತ್ತು ಸಾಗಿದ 4 ಆನೆಗಳು

ಮಹೇಂದ್ರ ರೇಸ್‌ನಿಂದ ಹಿಂದೆ ಸರಿದ ಬೆನ್ನಲ್ಲೇ, ಪರ್ಯಾಯ ಆನೆಗಳ ತಾಲೀಮು ಚುರುಕುಗೊಂಡಿದೆ. ಧನಂಜಯ, ಪ್ರಶಾಂತ, ಸುಗ್ರೀವ ಹಾಗೂ ಏಕಲವ್ಯ ಆನೆಗಳು ಗರಿಷ್ಠ 1,000 ಕೆಜಿ ಭಾರವನ್ನು ಯಶಸ್ವಿಯಾಗಿ ಹೊತ್ತು ಸಾಗುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿವೆ.

ಮುಂಚೂಣಿಯಲ್ಲಿ ಧನಂಜಯ

ಅಂಬಾರಿ ಆನೆ ಆಯ್ಕೆ ಕುರಿತು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಈ ಹಿಂದೆ ಸುಳಿವು ನೀಡುತ್ತಾ, "ಧನಂಜಯ ಆನೆಗೆ ಹೆಚ್ಚಿನ ಅವಕಾಶವಿದೆ" ಎಂದು ಹೇಳಿದ್ದರು. ಪ್ರಸ್ತುತ ಬೆಳವಣಿಗೆಗಳ ನಂತರ ಧನಂಜಯ ಆನೆಯೇ 750 ಕೆಜಿ ಚಿನ್ನದ ಅಂಬಾರಿಯನ್ನು ಹೊರುವ ಪ್ರಬಲನಾಗಿ ಹೊರಹೊಮ್ಮಿದ್ದಾನೆ. ಧನಂಜಯನ ಜೊತೆಗೆ ಏಕಲವ್ಯ, ಸುಗ್ರೀವ ಮತ್ತು ಶ್ರೀಕಂಠ ಆನೆಗಳ ಹೆಸರುಗಳೂ ಸಹ ಪರಿಶೀಲನೆಯಲ್ಲಿವೆ.

ದಿಗ್ಗಜ 'ಅಭಿಮನ್ಯು' ಆನೆಯ ನಂತರ ಮುಂದಿನ ದಸರಾ ಸಾರಥಿ ಯಾರು ಎಂಬ ಕುತೂಹಲ ಹೆಚ್ಚಾಗಿದ್ದು, ಆನೆಗಳ ಆರೋಗ್ಯ, ಶಕ್ತಿ ಮತ್ತು ಮಾನಸಿಕ ಸ್ಥಿರತೆಯನ್ನು ಸಂಪೂರ್ಣವಾಗಿ ವಿಶ್ಲೇಷಿಸಿದ ನಂತರ ಅರಣ್ಯ ಇಲಾಖೆಯು ಅಧಿಕೃತ ನಾಯಕನ ಹೆಸರನ್ನು ಪ್ರಕಟಿಸಲಿದೆ.

PREV
Read more Articles on
click me!

Recommended Stories

ಕೇಂದ್ರ ಸಚಿವ, ಬಿಜೆಪಿ ನಾಯಕರಿಂದ ಸ್ಟಿಂಗ್ ಸುಪಾರಿ! ವಾರದೊಳಗೆ ಪೆನ್‌ಡ್ರೈವ್ ದಾಖಲೆ ಬಿಚ್ಚಿಡ್ತೀನಿ- ಶಾಸಕ ಗಣಿಗ ರವಿ
₹8,000 ಕೊಟ್ಟು ಕುಕ್‌ ಇಟ್ಟುಕೊಂಡ ಬೆಂಗಳೂರಿನ ಮಹಿಳೆ; ‘ನನ್ನ ಹಣ ಉಳಿಸೋದು ಇದರಿಂದಲೇ’ ಎಂದಿದ್ದೇಕೆ?