
ಮೈಸೂರು (ಸೆ.24): ನಾಡಹಬ್ಬ ದಸರಾ ಮಹೋತ್ಸವ ಆಚರಣೆಯ ಜಂಬೂಸವಾರಿ, ಪಂಜಿನ ಕವಾಯತು, ಡ್ರೋನ್ ಷೋ ವೀಕ್ಷಣೆಗೆ ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಆನ್ ಲೈನ್ ಮುಖಾಂತರ ಬುಕ್ಕಿಂಗ್ ಅನ್ನು ಸೋಮವಾರದಿಂದ ಆರಂಭವಾಗಿದೆ.
ದಸರಾ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದಸರಾ ಸಂಬಂಧ ಅ.21 ರಂದು ನಡೆಯಲಿರುವ ಜಂಬೂಸವಾರಿ ಹಾಗೂ ಪಂಜಿನ ಕವಾಯತು ಹಾಗೂ ಡ್ರೋನ್ ಷೋ ಕಾರ್ಯಕ್ರಮಗಳ ವೀಕ್ಷಣೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಗಳನ್ನು ಆನ್ ಲೈನ್ ಮುಖಾಂತರ ಬುಕ್ಕಿಂಗ್ ಮಾಡಬಹುದಾಗಿದೆ.
ದಸರಾ ಕಾರ್ಯಕ್ರಮಗಳ ವೀಕ್ಷಣೆಗೆ ಮೈಸೂರು ದಸರಾ https://mysoredasara.gov.in/ ಅಧಿಕೃತ ವೆಬ್ ಸೈಟ್ ಮೂಲಕ ಆನ್ ಲೈನ್ ಮೂಲಕ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಗಳನ್ನು ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಂಡು ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಗಳನ್ನು ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ ಎಂದು ದಸರಾ ವಿಶೇಷಾಧಿಕಾರಿಯಾದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.
ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಗಳ ದರಗಳು ಕಳೆದ ವರ್ಷದಂತೆಯೇ ಇದೆ. ದಸರಾ ಗೋಲ್ಡ್ ಕಾರ್ಡ್ 6500 ರೂ., ಡ್ರೋನ್ ಶೋ ಟಿಕೆಟ್ 1000 ರೂ. (ಎರಡು ದಿನ ನಡೆಯಲಿದ್ದು, ಎರಡು ದಿನಕ್ಕೊ ಪ್ರತ್ಯೇಕ ಟಿಕೆಟ್), ದಸರಾ ಜಂಬೂಸವಾರಿ ಟಿಕೆಟ್ 3500 ರೂ. ಹಾಗೂ ಪಂಜಿನ ಕವಾಯತು ಟಿಕೆಟ್ 1500 ರೂ. ನಿಗದಿಪಡಿಸಲಾಗಿದೆ.
ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಜಂಬೂಸವಾರಿ, ಪಂಜಿನ ಕವಾಯತು, ಚಾಮುಂಡಿಬೆಟ್ಟ, ಮೃಗಾಲಯ, ಮೈಸೂರು ಅರಮನೆ ಹಾಗೂ ಒಂದು ದಿನದ ಡ್ರೋನ್ ಷೋ ಕಾರ್ಯಕ್ರಮ ವೀಕ್ಷಣೆಗೆ ಅವಕಾಶವಿರುತ್ತದೆ. ಒಂದು ಗೋಲ್ಡ್ ಕಾರ್ಡ್ ಅಥವಾ ಒಂದು ಟಿಕೆಟ್ ನಲ್ಲಿ ಒಬ್ಬರಿಗೆ ಮಾತ್ರ ಪ್ರವೇಶಾವಕಾಶ ಇರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.