ರೇಣುಕಾಸ್ವಾಮಿ ಪ್ರಕರಣ: ದರ್ಶನ್ ಮನವಿ ತಿರಸ್ಕರಿಸಿದ ಕೋರ್ಟ್, ಪ್ರದೂಷ್ ಹಾಜರಿ ದಿನಾಂಕ ಬದಲಾವಣೆಗೆ ಕೋರ್ಟ್ ನಕಾರ

Published : Sep 24, 2026, 04:09 PM IST
pradosh darshan renukaswamy case

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೂಷ್‌ಗೆ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಲು ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ನಟ ದರ್ಶನ್ ಪರ ವಕೀಲರು ಸಲ್ಲಿಸಿದ್ದ ಆಕ್ಷೇಪಣೆಯನ್ನು ಕೋರ್ಟ್ ತಿರಸ್ಕರಿಸಿದ್ದು, ಪವಿತ್ರಾಗೌಡ ಜಾಮೀನು ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಲಾಗಿದೆ.

ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ 'ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ'ದ ವಿಚಾರಣೆ ನಡೆಸುತ್ತಿರುವ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಶುಕ್ರವಾರ ಪ್ರಮುಖ ಆದೇಶ ನೀಡಿದೆ. ಪ್ರಕರಣದ 14ನೇ ಆರೋಪಿ (A14) ಪ್ರದೂಷ್‌ಗೆ ಮಾಫಿ ಸಾಕ್ಷಿ (Approver) ಹೇಳಿಕೆ ದಾಖಲಿಸಲು ಸಮನ್ಸ್ ಜಾರಿ ಮಾಡಿದ್ದು, ಬರುವ ಸೆಪ್ಟೆಂಬರ್ 28 ರಂದು ಸೂಕ್ತ ಪೊಲೀಸ್ ಭದ್ರತೆಯಲ್ಲಿ ಖುದ್ದು ಹಾಜರುಪಡಿಸುವಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ.

ಅಲ್ಲದೆ, ಪ್ರದೂಷ್ ಹಾಜರಾತಿ ಮತ್ತು ಸಮನ್ಸ್ ಜಾರಿಗೆ ತಡೆ ಕೋರಿ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ಸಲ್ಲಿಸಿದ್ದ ವಾದ ಹಾಗೂ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ

ಪ್ರದೂಷ್ ಹಾಜರಾತಿ ಮತ್ತು ವಿವಿ ಕ್ಲೈಮ್

ವಿಚಾರಣೆ ವೇಳೆ ವಿಶೇಷ ಸಾರ್ವಜನಿಕ ಅಭಿಯೋಜಕರು (SPP) ನ್ಯಾಯಪೀಠಕ್ಕೆ ಸುದೀರ್ಘ ವಾದ ಮಂಡಿಸಿದರು. ಪ್ರದೂಷ್ ತನ್ನ ಹೇಳಿಕೆ ದಾಖಲಿಸುವುದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ನ್ಯಾಯಾಲಯ ಗುರುವಾರ ವಜಾಗೊಳಿಸಿದೆ. ಆದ್ದರಿಂದ, ಪ್ರದೂಷ್‌ಗೆ ಸಮನ್ಸ್ ಜಾರಿಗೊಳಿಸಿ ಅವರ ಪ್ರಕಟಿತ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಸೂಕ್ತ ದಿನಾಂಕ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು.

ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಆಕ್ಷೇಪಣೆ:

ಹೈಕೋರ್ಟ್ ಆದೇಶದ ಪ್ರತಿ ಲಭ್ಯವಾಗುವವರೆಗೆ ಪ್ರದೂಷ್‌ಗೆ ಸಮನ್ಸ್ ನೀಡುವುದು ಸೂಕ್ತವಲ್ಲ ಎಂದು ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

"ಹೈಕೋರ್ಟ್ ನಿನ್ನೆ ನೀಡಿದ ಆದೇಶದ ಪ್ರತಿ ಇನ್ನೂ ಅಧಿಕೃತವಾಗಿ ಕೈಸೇರಿಲ್ಲ. ಹೈಕೋರ್ಟ್ ಆದೇಶದಲ್ಲಿ ಹಲವು ನಿರ್ದಿಷ್ಟ ಷರತ್ತುಗಳಿರಬಹುದು. ಕೇವಲ ಎಸ್‌ಪಿಪಿ ಅವರ ಮೌಖಿಕ ಮಾಹಿತಿಯನ್ನಷ್ಟೇ ಆಧರಿಸಿ ಸಮನ್ಸ್ ಜಾರಿ ಮಾಡುವುದು ಹೇಗೆ ಸಾಧ್ಯ? ಹೈಕೋರ್ಟ್ ಪ್ರತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವಷ್ಟೇ ಮುಂದಿನ ನಡಾವಳಿ ಕೈಗೊಳ್ಳಬೇಕು. ಜೊತೆಗೆ ಪ್ರದೂಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಸ್ವೀಕರಿಸುವುದನ್ನು ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದೇವೆ. ಹೀಗಾಗಿ ಹೇಳಿಕೆ ದಾಖಲಿಸುವುದನ್ನು ಮುಂದೂಡಬೇಕು" ಎಂದು ಹಷ್ಮತ್ ಪಾಷಾ ವಾದಿಸಿದರು.

ಎಸ್‌ಪಿಪಿ ಪ್ರತಿವಾದವೇನು?

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿಪಿ, ಹೈಕೋರ್ಟ್ ಆದೇಶ ವಜಾ ಸಂಬಂಧ ಮೆಮೋ ಸಲ್ಲಿಸುವುದಾಗಿ ತಿಳಿಸಿದರು. ಹಾಗೂ ಕೇವಲ ಸಾಕ್ಷಿಗಳ ವಿಚಾರಣೆ ಸಮಯದಲ್ಲಿ ಮಾತ್ರ ಆರೋಪಿಗಳ ಖುದ್ದು ಹಾಜರಾತಿ ಕಡ್ಡಾಯ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ ಎಂದರು.

ಮನವಿಯನ್ನು ನಿರಾಕರಿಸಿದ ನ್ಯಾಯಾಧೀಶರು, "ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಪ್ರಕರಣದ ಟ್ರಯಲ್ ನಿಯಮಿತವಾಗಿ ನಡೆಯಬೇಕಿದೆ. ಅದಕ್ಕಾಗಲೇ ದಿನಾಂಕ ನಿಗದಿಯಾಗಿದ್ದು, ಅದನ್ನು ಬದಲಾಯಿಸಲು ಸಾಧ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು. ಕಳೆದ ನಾಲ್ಕು ದಿನಗಳಿಂದ ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ವಿಳಂಬವಾಗಿರುವುದನ್ನು ಜಡ್ಜ್‌ ಗಮನಕ್ಕೆ ತಂದರು.

ಪ್ರಮುಖ ಬೆಳವಣಿಗೆಗಳು

ಪ್ರದೂಷ್‌ಗೆ ಸಮನ್ಸ್ ಹಾಗೂ ಭದ್ರತೆ: ಸೆಪ್ಟೆಂಬರ್ 28 ರಂದು ಕೋರ್ಟ್‌ಗೆ ಪ್ರದೂಷ್‌ರನ್ನು ಹಾಜರುಪಡಿಸಲು ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಜೈಲು ಸಿಬ್ಬಂದಿಗೆ ಕೋರ್ಟ್ ಸೂಚಿಸಿದೆ.

ಪವಿತ್ರಾಗೌಡ ಜಾಮೀನು ನಿರ್ಧಾರ

ಪ್ರಕರಣದ ಮೊದಲನೇ ಆರೋಪಿ (A1) ಪವಿತ್ರಾಗೌಡ ಅವರ ಜಾಮೀನು ಅರ್ಜಿಯ ಮೇಲಿನ ತೀರ್ಪಿನ ಆದೇಶವನ್ನು ಶನಿವಾರಕ್ಕೆ ಕೋರ್ಟ್ ಕಾಯ್ದಿರಿಸಿದೆ. ಆರೋಪಿ ಜಗದೀಶ್ (A6) ಮತ್ತು ಅನುಕುಮಾರ್ (A7) ಅವರನ್ನು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸುವಂತೆ ಪ್ರತ್ಯೇಕ ಅರ್ಜಿ ಸಲ್ಲಿಕೆಯಾಗಿದೆ.

ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ದರ್ಶನ್ ನಿರ್ಧಾರ

ಪ್ರದೂಷ್ ಮಾಫಿ ಸಾಕ್ಷಿಯಾಗುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ದರ್ಶನ್ ಕಾನೂನು ತಂಡ ತೀವ್ರ ಸಿದ್ಧ

PREV
Read more Articles on
click me!

Recommended Stories

KPSC ಬ್ಯಾನ್ ಮಾಡಲು ಸಾಧ್ಯವೇ? ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯಕ್ಕೆ ಹೊಣೆ ಯಾರು? ಸಂವಿಧಾನ ಏನು ಹೇಳುತ್ತದೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!
'ದೇವರೇ ಈ ದೇಶವನ್ನು ಕಾಪಾಡಲಿ' ರೈಲಿನಲ್ಲಾದ ಕಹಿ ಅನುಭವ ಬಿಚ್ಚಿಟ್ಟ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ!