
ಮೈಸೂರು (ಸೆ.24): ಗುಂಡ್ಲುಪೇಟೆ ತಾಲೂಕಿನ ಹುಂಡೀಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ (PACS) ಬರೋಬ್ಬರಿ ₹1.72 ಕೋಟಿ ಮೊತ್ತದ ಅಕ್ರಮ ಕೃಷಿ ಸಾಲ ಬಿಡುಗಡೆ ಮಾಡಿರುವ ಹಗರಣಕ್ಕೆ ಸಂಬಂಧಿಸಿದಂತೆ, ಎಂಸಿಡಿಸಿಸಿ (MCDCC) ಬ್ಯಾಂಕಿನ ಇಬ್ಬರು ಜವಾಬ್ದಾರಿಯುತ ಅಧಿಕಾರಿಗಳನ್ನು ಬ್ಯಾಂಕ್ ಆಡಳಿತ ಮಂಡಳಿಯು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಎಂಸಿಡಿಸಿಸಿ ಬ್ಯಾಂಕ್ ಗುಂಡ್ಲುಪೇಟೆ ಶಾಖಾ ವ್ಯವಸ್ಥಾಪಕ ಶಿವಪ್ರಸಾದ್ ಹಾಗೂ ಕಿರಿಯ ಮೇಲ್ವಿಚಾರಕ ಜಿ.ಕಾರ್ತಿಕ್ ಅಮಾನತುಗೊಂಡ ಅಧಿಕಾರಿಗಳಾಗಿದ್ದು, ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಶಂಕರ್ ಅವರು ಈ ಆದೇಶ ಹೊರಡಿಸಿದ್ದಾರೆ.
ಕಳೆದ ಮಾರ್ಚ್ 17ರಂದು ಹುಂಡೀಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 68 ರೈತ ಸದಸ್ಯರಿಗೆ ನಿಯಮಬಾಹಿರವಾಗಿ ₹1.72 ಕೋಟಿ ಕೃಷಿ ಸಾಲವನ್ನು ಬಿಡುಗಡೆ ಮಾಡಲಾಗಿತ್ತು. ಕಿರಿಯ ಮೇಲ್ವಿಚಾರಕ ಜಿ.ಕಾರ್ತಿಕ್ ಅವರು ಈ ಸಾಲ ಬಿಡುಗಡೆಗೆ ಶಿಫಾರಸು ಮಾಡಿದ್ದರೆ, ಶಾಖಾ ವ್ಯವಸ್ಥಾಪಕ ಶಿವಪ್ರಸಾದ್ ಸಾಲವನ್ನು ಮಂಜೂರು ಮಾಡಿ ಬಿಡುಗಡೆಗೊಳಿಸಿದ್ದರು.
ಸಂಘದ ಲೆಕ್ಕಪತ್ರಗಳನ್ನು ಸರಿಯಾಗಿ ಪರಿಶೀಲಿಸದೆ, ಬ್ಯಾಂಕಿನ ಸಾಲದ ನಿಯಮಾವಳಿಗಳನ್ನು ಗಾಳಿಗೆ ತೂರಿ, ಬೇಜವಾಬ್ದಾರಿಯಿಂದ ವರ್ತಿಸಿರುವ ಈ ಅಧಿಕಾರಿಗಳು ಬ್ಯಾಂಕ್ ಹಾಗೂ ಸಹಕಾರ ಸಂಘದ ಆರ್ಥಿಕ ಪರಿಸ್ಥಿತಿಗೆ ಹಾನಿ ಉಂಟುಮಾಡಿದ್ದಾರೆ ಎಂದು ಅಮಾನತು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಮಾನವ ಸಂಪನ್ಮೂಲ ನಿಯಮಾವಳಿ ಉಲ್ಲಂಘನೆ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದ್ದು, ವಿಚಾರಣೆಯನ್ನು ಕಾಯ್ದಿರಿಸಲಾಗಿದೆ. ಅಮಾನತು ಅವಧಿಯಲ್ಲಿ ಇಬ್ಬರಿಗೂ ಶೇ.50ರಷ್ಟು ಜೀವನಾಂಶ ಭತ್ಯೆ ಸಿಗಲಿದೆ.
ಹುಂಡೀಪುರ ಫ್ಯಾಕ್ಸ್ (FACS) ಅಧ್ಯಕ್ಷ ಎಸ್.ಎಂ. ವೀರಪ್ಪ ಅವರು ಸುಮಾರು 5-6 ತಿಂಗಳ ಹಿಂದೆಯೇ ಈ ಅಕ್ರಮ ಸಾಲ ವಿತರಣೆ ಬಗ್ಗೆ ದೂರು ದಾಖಲಿಸಿದ್ದರು. ಫ್ಯಾಕ್ಸ್ ಆಡಳಿತ ಮಂಡಳಿಯ ಗಮನಕ್ಕೆ ತರದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ಸಾಲ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ದೂರು ನೀಡಿ ತಿಂಗಳುಗಳೇ ಕಳೆದರೂ ಈಗ ಅಮಾನತುಗೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಾಂಗ್ರೆಸ್‌ನ ಪ್ರಭಾವಿ ಶಾಸಕರೂ ಹಾಗೂ ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕರಾದ ಎಚ್.ಎಂ. ಗಣೇಶ್ ಪ್ರಸಾದ್ ಅವರ ತವರು ಕ್ಷೇತ್ರದಲ್ಲೇ ಈ ಕೋಟ್ಯಂತರ ರೂ.ಗಳ ಹಗರಣ ನಡೆದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಹಕಾರಿಗಳು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.