ಮೈಸೂರು ದಸರಾ 2026: ಅಂಬಾರಿ ಭಾರ ಹೊರಲಾರದೆ ತಿಣುಕಾಡಿದ ಮಹೇಂದ್ರ, ಅರ್ಧ ದಾರಿಯಲ್ಲೇ ತಾಲೀಮು ಬಂದ್

Published : Oct 08, 2026, 06:28 PM IST
Mahendra Elephant Fails Wooden Ambari Rehearsal Again

ಸಾರಾಂಶ

ಮೈಸೂರು ದಸರಾ 2026ರ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲಿರುವ ಆನೆಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ವೇಳೆ ಪ್ರಮುಖ ಆನೆಯಾಗಿದ್ದ 'ಮಹೇಂದ್ರ' ಭಾರ ತಡೆಯಲಾಗದೆ ಸತತ ಎರಡನೇ ಬಾರಿಯೂ ತಾಲೀಮಿನಲ್ಲಿ ವಿಫಲವಾಗಿದೆ. ಇದರಿಂದಾಗಿ ಮಹೇಂದ್ರ ಆನೆ ಅಂಬಾರಿ ಹೊರುವ ರೇಸ್‌ನಿಂದ ಬಹುತೇಕ ಹೊರಬಿದ್ದಂತಾಗಿದೆ.

ಮೈಸೂರು (ಅ.8): ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ, ವಿಜಯದಶಮಿಯಂದು ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ಹೊರಲಿರುವ 'ಕ್ಯಾಪ್ಟನ್' ಆನೆಯ ಆಯ್ಕೆಗಾಗಿ ನಡೆಯುತ್ತಿದ್ದ ತಾಲೀಮಿನಲ್ಲಿ ಪ್ರಮುಖ ಆನೆಯಾಗಿದ್ದ 'ಮಹೇಂದ್ರ' ಎರಡನೇ ಬಾರಿಯೂ ವಿಫಲವಾಗಿದೆ. ಭಾರ ತಡೆಯಲಾಗದೆ ಅರ್ಧ ದಾರಿಯಲ್ಲೇ ತಿಣುಕಾಡಿ ನಿಂತಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ತಾಲೀಮನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

ಈ ಬಾರಿ ಅಂಬಾರಿ ಹೊರುವ ಪ್ರಮುಖ ಆನೆಗಳ ರೇಸ್ ಹಾಗೂ ಲಿಸ್ಟ್‌ನಲ್ಲಿದ್ದ ಮಹೇಂದ್ರ ಆನೆಗೆ, ಅರಣ್ಯ ಇಲಾಖೆಯ ಸಿಬ್ಬಂದಿ ಮರದ ಅಂಬಾರಿಯನ್ನಿಟ್ಟು ಅದರಲ್ಲಿ ಮರಳಿನ ಮೂಟೆಗಳನ್ನು ಹಾಕಿ ತೂಕ ಹೊರಿಸುವ ತಾಲೀಮು ನಡೆಸುತ್ತಿದ್ದರು. ಆದರೆ ತೂಕವನ್ನು ಹೊರಲು ಸಾಧ್ಯವಾಗದೆ ಮಹೇಂದ್ರ ಆನೆ ನಗರದ ಆಯುರ್ವೇದಿಕ್ ವೃತ್ತದ ಬಳಿ ಬರುವಷ್ಟರಲ್ಲೇ ಸುಧಾರಿಸಿಕೊಳ್ಳಲಾಗದೆ ಅರ್ಧದಲ್ಲೇ ನಿಂತುಬಿಟ್ಟಿದೆ.

ಮೊದಲ ದಿನವೂ ಬಲರಾಮ ದ್ವಾರದ ಬಳಿಯೇ ನಿಂತಿದ್ದ ಮಹೇಂದ್ರ

ಮಹೇಂದ್ರ ಆನೆಗೆ ಮರದ ಅಂಬಾರಿಯಲ್ಲಿ ಮರಳಿನ ಭಾರ ಹಾಕಿ ತಾಲೀಮು ನಡೆಸಿದ ಮೊದಲ ದಿನವೂ ಸಹ ಅದು ಅರಮನೆಯ ಬಲರಾಮ ದ್ವಾರದ ತನಕ ಮಾತ್ರ ಸಾಗಿ ಅಲ್ಲಿಯೇ ನಿಂತುಬಿಟ್ಟಿತ್ತು. ಮೊದಲ ಪ್ರಯತ್ನದಲ್ಲೂ ಮಹೇಂದ್ರ ಪೂರ್ಣ ಪ್ರಮಾಣದಲ್ಲಿ ಸಾಗಲು ವಿಫಲವಾಗಿ ತಾಲೀಮು ಅರ್ಧಕ್ಕೆ ಮೊಟಕುಗೊಂಡಿತ್ತು. ಆದರೆ, "ಅಂದು ಮಳೆ ಬಂದ ಕಾರಣಕ್ಕಾಗಿ ಮುನ್ನೆಚ್ಚರಿಕೆಯಾಗಿ ತಾಲೀಮನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದೇವೆ" ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು.

ಎರಡನೇ ಬಾರಿಯೂ ವಿಫಲ; ರಸ್ತೆಯಲ್ಲೇ ಅಂಬಾರಿ ತೆರವು!

ಮೊದಲ ತಾಲೀಮಿನ ಹಿನ್ನಡೆಯ ನಂತರ, ಇಂದು ಮತ್ತೆ ಮಹೇಂದ್ರ ಆನೆಗೆ ಮರದ ಅಂಬಾರಿ ಕಟ್ಟಿ ಮರಳಿನ ಮೂಟೆಗಳನ್ನು ಹೊರಿಸಿ ತರಬೇತಿ ಪುನರಾರಂಭಿಸಲಾಯಿತು. ಆದರೆ, ಅರಮನೆಯಿಂದ ಹೊರಟ ಮಹೇಂದ್ರ ಆನೆ ನಗರದ ಆಯುರ್ವೇದಿಕ್ ವೃತ್ತದ ವರೆಗೆ ಮಾತ್ರ ಭಾರ ಹೊತ್ತು ಸಾಗಲು ಸಾಧ್ಯವಾಯಿತು. ಅಲ್ಲಿಗೆ ತಲುಪುತ್ತಿದ್ದಂತೆ ತೂಕ ತಡೆಯಲಾಗದೆ ಆನೆ ಮುಂದೆ ಸಾಗದೇ ಸ್ಥಬ್ಧವಾಗಿ ನಿಂತಿತು.

ಆನೆ ಭಾರ ಹೊರಲಾರದೆ ತಿಣುಕಾಡುತ್ತಿದ್ದುದನ್ನು ತಕ್ಷಣವೇ ಗಮನಿಸಿದ ಅರಣ್ಯ ಇಲಾಖೆಯ ಜಾಗರೂಕ ಸಿಬ್ಬಂದಿಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿದರು. ಮರಕ್ಕೆ ದಾರಗಳನ್ನು ಕಟ್ಟಿ, ಮರದ ಮೇಲೆ ಹತ್ತಿದ ಸಿಬ್ಬಂದಿಗಳು ಸಾರ್ವಜನಿಕ ರಸ್ತೆಯಲ್ಲೇ ಮಹೇಂದ್ರ ಆನೆಯ ಬೆನ್ನ ಮೇಲಿದ್ದ ಮರದ ಅಂಬಾರಿಯನ್ನು ಜಾಗರೂಕತೆಯಿಂದ ತೆರವುಗೊಳಿಸಿದರು. ತದನಂತರ ಆ ಮರದ ಅಂಬಾರಿಯನ್ನು ಆಟೋದಲ್ಲಿ ಹೇರಿಕೊಂಡು ಅರಮನೆ ಆವರಣಕ್ಕೆ ತೆಗೆದುಕೊಂಡು ಹೋದರು.

ಆನೆ ಮುಂದೆ ಸಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಇಂದಿನ ತಾಲೀಮನ್ನು ಸಹ ಅರ್ಧಕ್ಕೇ ಮೊಟಕುಗೊಳಿಸಿದರು. ಜಂಬೂ ಸವಾರಿಯ ಕಠಿಣ ತಾಲೀಮಿನಲ್ಲಿ ಸತತ ಎರಡನೇ ಬಾರಿಯೂ ವಿಫಲವಾಗಿರುವುದರಿಂದ, ಈ ಬಾರಿಯ ದಸರಾದಲ್ಲಿ ಅಂಬಾರಿ ಹೊರುವ 'ಕ್ಯಾಪ್ಟನ್' ರೇಸ್‌ನಿಂದ ಮಹೇಂದ್ರ ಆನೆ ಬಹುತೇಕ ಔಟ್ ಆದಂತಾಗಿದೆ

PREV
Read more Articles on
click me!

Recommended Stories

ಬೆಂಗಳೂರಲ್ಲಿ ಕಸದ ಮಾದರಿಯಲ್ಲೇ 'ಕರಿದ ಅಡುಗೆ ಎಣ್ಣೆ' ದುಡ್ಡು ಕೊಟ್ಟು ಸಂಗ್ರಹ: ಬಯೋಡೀಸೆಲ್ ತಯಾರಿಕೆಗೆ ಬಿಗ್ ಪ್ಲಾನ್!
ಇತಿಹಾಸದಲ್ಲಿ ಇದೇ ಮೊದಲು! ಬಿಳಿಗಿರಿರಂಗನ ಬೆಟ್ಟ ಸಂರಕ್ಷಿತಾರಣ್ಯದಲ್ಲಿ ಹುಲಿಗಳ ಸಂಖ್ಯೆ ದಾಖಲೆಯ ಹೆಚ್ಚಳ