ಬೆಂಗಳೂರಲ್ಲಿ ಕಸದ ಮಾದರಿಯಲ್ಲೇ 'ಕರಿದ ಅಡುಗೆ ಎಣ್ಣೆ' ದುಡ್ಡು ಕೊಟ್ಟು ಸಂಗ್ರಹ: ಬಯೋಡೀಸೆಲ್ ತಯಾರಿಕೆಗೆ ಬಿಗ್ ಪ್ಲಾನ್!

Published : Oct 08, 2026, 06:27 PM IST
Karnataka health department UT khader

ಸಾರಾಂಶ

ಬೆಂಗಳೂರಿನಲ್ಲಿ ಕರಿದ ಅಡುಗೆ ಎಣ್ಣೆಯ ಅಪಾಯಕಾರಿ ಮರುಬಳಕೆಯನ್ನು ತಡೆಯಲು ಆರೋಗ್ಯ ಇಲಾಖೆಯು ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಮನೆ ಮತ್ತು ಹೋಟೆಲ್‌ಗಳಿಂದ ಬಳಸಿದ ಎಣ್ಣೆಯನ್ನು ಆ್ಯಪ್ ಮೂಲಕ ಸಂಗ್ರಹಿಸಿ, ಹಣ ನೀಡಿ ಬಯೋಡೀಸೆಲ್ ಉತ್ಪಾದನೆಗೆ ಬಳಸಲಾಗುತ್ತದೆ. ಇದರಿಂದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳನ್ನು ತಡೆಗಟ್ಟುವ ಗುರಿ ಹೊಂದಲಾಗಿದೆ.

ಬೆಂಗಳೂರು: ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಮನೆಗಳಲ್ಲಿ ಪದೇ ಪದೆ ಕರಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ಉಂಟಾಗುತ್ತಿರುವ ತೀವ್ರ ಆರೋಗ್ಯ ಅಪಾಯಗಳಿಗೆ ಕಡಿವಾಣ ಹಾಕಲು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ದೇಶದಲ್ಲೇ ಮಾದರಿಯಾದ ಮಹತ್ವದ ಯೋಜನೆಯೊಂದಕ್ಕೆ ಚಾಲನೆ ನೀಡಲು ಮುಂದಾಗಿದೆ.

ಇನ್ಮುಂದೆ ಬೆಂಗಳೂರು ನಗರದಲ್ಲಿ ಮನೆ-ಮನೆ ಕಸ ಸಂಗ್ರಹಣೆಯ ಮಾದರಿಯಲ್ಲೇ, ಮರುಬಳಕೆಯ ಅಡುಗೆ ಎಣ್ಣೆಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಅದನ್ನು ಸಂಪೂರ್ಣವಾಗಿ ಬಯೋಡೀಸೆಲ್ (ಜೈವಿಕ ಇಂಧನ) ಉತ್ಪಾದನೆಗೆ ಮಾತ್ರ ಪೂರೈಸಲು ಕಟ್ಟುನಿಟ್ಟಿನ ನಿಯಮಾವಳಿ ರೂಪಿಸಲಾಗುತ್ತಿದೆ.

ಏನಿದು ಹೊಸ ಯೋಜನೆ? ಕಾರ್ಯನಿರ್ವಹಣೆ ಹೇಗೆ?

ಸಾರ್ವಜನಿಕರ ಆರೋಗ್ಯ ರಕ್ಷಣೆ ಮತ್ತು ಪರಿಸರ ನೈರ್ಮಲ್ಯದ ಹಿತದೃಷ್ಟಿಯಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಾಗೂ ಬೃಹತ್ ಬೆಂಗಳೂರು ಪ್ರಾಧಿಕಾರದ (GBA) ಸಹಯೋಗದೊಂದಿಗೆ ಆರೋಗ್ಯ ಇಲಾಖೆಯು ಈ ಪ್ರಾಯೋಗಿಕ ಯೋಜನೆಯನ್ನು ಜಾರಿಗೆ ತರುತ್ತಿದೆ.

ಸಾರ್ವಜನಿಕರು ಹಾಗೂ ಹೋಟೆಲ್ ಮಾಲೀಕರು ತಮ್ಮ ಬಳಿ ಇರುವ ಬಳಕೆಯಾದ ಅಡುಗೆ ಎಣ್ಣೆಯನ್ನು ಸುಲಭವಾಗಿ ನೀಡಲು 'ವಿಶೇಷ ಮೊಬೈಲ್ ಆ್ಯಪ್' ಒಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗಾರ್ಬೇಜ್ ಕಲೆಕ್ಷನ್ ಮಾದರಿಯಲ್ಲೇ ವಾಹನಗಳ ಮೂಲಕ ಪ್ರತಿಯೊಂದು ಮನೆ ಹಾಗೂ ವಾಣಿಜ್ಯ ಘಟಕಗಳಿಂದ ಬಳಸಿದ ಎಣ್ಣೆಯನ್ನು ಸಂಗ್ರಹಿಸಲಾಗುತ್ತದೆ.

ಸಾರ್ವಜನಿಕರು ಅಥವಾ ಹೋಟೆಲ್‌ನವರು ನೀಡುವ ಪ್ರತೀ ಲೀಟರ್ ಬಳಸಿದ ಎಣ್ಣೆಗೆ ಸರ್ಕಾರ ನಿಗದಿಪಡಿಸುವ ನಿರ್ದಿಷ್ಟ ದರವನ್ನು ಹಣದ ರೂಪದಲ್ಲಿ ಸ್ಥಳದಲ್ಲೇ ನೀಡಲಾಗುತ್ತದೆ. ಕೇವಲ 1 ಲೀಟರ್ ಎಣ್ಣೆ ಇದ್ದರೂ ಕೂಡ ನೀಡಲು ಅವಕಾಶವಿರಲಿದೆ. ಹೀಗೆ ಸಂಗ್ರಹಿಸಿದ ಸಂಪೂರ್ಣ ಎಣ್ಣೆಯನ್ನು ಅಧಿಕೃತ ಜೈವಿಕ ಇಂಧನ ತಯಾರಿಕಾ ಕಂಪನಿಗಳಿಗೆ ಮಾತ್ರ ತಲುಪಿಸಲಾಗುತ್ತದೆ.

ಹೋಟೆಲ್‌ಗಳಿಂದ ಎಣ್ಣೆ ದುರ್ಬಳಕೆ: ಆರೋಗ್ಯಕ್ಕೆ ಮಾರಕ !

ನಗರ ಹಾಗೂ ಟೈರ್-1 ಪಟ್ಟಣಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಎಣ್ಣೆ ದುರ್ಬಳಕೆಯ ಜಾಲ ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿದೆ. ಪ್ರಸಿದ್ಧ ಫೈವ್ ಸ್ಟಾರ್ ಹೋಟೆಲ್ ಹಾಗೂ ಪ್ರಮುಖ ರೆಸ್ಟೋರೆಂಟ್‌ಗಳು ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಸುಮಾರು 50% ರಿಯಾಯಿತಿ ದರದಲ್ಲಿ ಸ್ಥಳೀಯ ದರ್ಶಿನಿಗಳಿಗೆ ಮಾರಾಟ ಮಾಡುತ್ತವೆ.

ದರ್ಶಿನಿ ಹೋಟೆಲ್‌ಗಳಲ್ಲಿ ಮತ್ತೆ ಮತ್ತೆ ಕರಿದ ಅದೇ ಎಣ್ಣೆಯನ್ನು ಕೊನೆಗೆ ರಸ್ತೆಬದಿಯ ಸಣ್ಣಪುಟ್ಟ ತಳ್ಳುವ ಗಾಡಿ ಹಾಗೂ ತಿಂಡಿ ಅಂಗಡಿಗಳಿಗೆ ತೀರಾ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಅಡುಗೆ ಎಣ್ಣೆಯನ್ನು ಪದೇ ಪದೇ ಕಾಯಿಸುವುದರಿಂದ ಅದರಲ್ಲಿ 'ಟೋಟಲ್ ಪೋಲಾರ್ ಕಾಂಪೌಂಡ್ಸ್' (TPC) ಪ್ರಮಾಣ ಹೆಚ್ಚಾಗಿ, ವಿಷಕಾರಿಯಾಗಿ ಮಾರ್ಪಡುತ್ತದೆ. ಇದು ಕ್ಯಾನ್ಸರ್, ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಕರುಳಿನ ಸಂಬಂಧಿ ಕಾಯಿಲೆಗಳಿಗೆ ನೇರ ಕಾರಣವಾಗುತ್ತಿದೆ.

ಇಲಾಖೆಯಿಂದ ಮಹತ್ವದ ಸಭೆ ಹಾಗೂ ಕಟ್ಟುನಿಟ್ಟಿನ ನಿಯಮ

ಈ ಮಾರಕ ಜಾಲಕ್ಕೆ ಪೂರ್ಣವಿರಾಮ ಇಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯುಟಿ ಖಾದರ್ ನೇತೃತ್ವದಲ್ಲಿ ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗಿದೆ.

ಬಳಸಿದ ಅಡುಗೆ ಎಣ್ಣೆ ಎಲ್ಲಿಂದ ಉತ್ಪತ್ತಿಯಾಗುತ್ತಿದೆ, ಯಾರ ಕೈಗೆ ತಲುಪುತ್ತಿದೆ ಎಂಬುದನ್ನು ಸಂಪೂರ್ಣವಾಗಿ ಟ್ರ್ಯಾಕ್ ಮಾಡಲು ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು (Standard Operating Procedure - SOP) ಸಿದ್ಧಪಡಿಸಲಾಗುತ್ತಿದೆ. ಹೊಸ ನಿಯಮಾವಳಿಗಳ ಪ್ರಕಾರ, ಹೋಟೆಲ್ ಅಥವಾ ಆಹಾರ ಘಟಕಗಳು ತಮ್ಮ ಬಳಕೆಯಾದ ಎಣ್ಣೆಯನ್ನು ಯಾವುದೇ ಕಾರಣಕ್ಕೂ ಇತರ ಸಣ್ಣ ಹೋಟೆಲ್ ಅಥವಾ ವ್ಯಕ್ತಿಗಳಿಗೆ ಮಾರಾಟ ಮಾಡುವಂತಿಲ್ಲ. ಅದನ್ನು ಕಡ್ಡಾಯವಾಗಿ ಬಯೋಡೀಸೆಲ್ ಉತ್ಪಾದಕರಿಗೆ ಮಾತ್ರ ಹಸ್ತಾಂತರಿಸಬೇಕಾಗುತ್ತದೆ. ಆರೋಗ್ಯ ಇಲಾಖೆಯ ಈ ದಿಟ್ಟ ಹಾಗೂ ವಿನೂತನ ಯೋಜನೆಯು ಬೆಂಗಳೂರಿನಲ್ಲಿ ಯಶಸ್ವಿಯಾದ ನಂತರ ರಾಜ್ಯದ ಇತರ ಪ್ರಮುಖ ನಗರಗಳಿಗೂ ವಿಸ್ತರಣೆಯಾಗಲಿದೆ.

PREV
Read more Articles on
click me!

Recommended Stories

ಜಗತ್ತಿನ ಬೆಸ್ಟ್ ವಿಸ್ಕಿ, 'ಇಂದ್ರಿ'ಯ ದೀಪಾವಳಿ ಕಲೆಕ್ಟರ್ಸ್ ಎಡಿಷನ್ 2026 ಭಾರತದ ಮಾರುಕಟ್ಟೆಗೆ ಲಗ್ಗೆ, ಬೆಂಗಳೂರಲ್ಲೂ ಲಭ್ಯ!
KPSC Scam: 80 ಕೀ ಆನ್ಸರ್‌ಗೆ ತಲಾ 50 ಲಕ್ಷ ಹಣ ಕೇಳಿದ್ದ ಶಿವು ಮತ್ತು ಗೀತಾ!