ತ್ರಿಪಲ್ ರೈಡ್ ಹೋದವರಿಗೆ ಮೈಸೂರಿನಲ್ಲಿ ಹೊಸ ರೀತಿಯ ಟ್ರೀಟ್'ಮೆಂಟ್ !

By Web DeskFirst Published 7, Sep 2018, 3:23 PM IST
Highlights

ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದ ವೇಳೆ ವಿದ್ಯಾರ್ಥಿನಿಯರು ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುತ್ತಿದ್ದವರಿಗೆ ಗುಲಾಬಿ ಹೂ ನೀಡಿ, ಸಂಚಾರ ನಿಯಮ ಉಲ್ಲಂಘಿಸದಂತೆ ತಿಳಿ ಹೇಳಿದರು. 

ಮೈಸೂರು(ಸೆ.07): ಒಂದೇ ಬೈಕ್‌ನಲ್ಲಿ ತ್ರಿಪಲ್ ರೈಡ್ ಹೋಗುತ್ತಿದ್ದವರನ್ನು ಅಡ್ಡ ಹಾಕಿದ ವಿದ್ಯಾರ್ಥಿನಿಯರು ಹಾಗೂ ಸಂಚಾರ ಪೊಲೀಸರು ಗುಲಾಬಿ ಹೂ ನೀಡುವ ಮೂಲಕ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಿದರು. 

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಕೃಷ್ಣರಾಜ ಸಂಚಾರ ಠಾಣೆ ಪೊಲೀಸರು ರಾಮಸ್ವಾಮಿ ವೃತ್ತದಲ್ಲಿ ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದ ವೇಳೆ ವಿದ್ಯಾರ್ಥಿನಿಯರು ಸಂಚಾರ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುತ್ತಿದ್ದವರಿಗೆ ಗುಲಾಬಿ ಹೂ ನೀಡಿ, ಸಂಚಾರ ನಿಯಮ ಉಲ್ಲಂಘಿಸದಂತೆ ತಿಳಿ ಹೇಳಿದರು. 

ಜೊತೆಗೆ ಸಂಚಾರ ನಿಯಮ ಪಾಲಿಸುವ ಸೂಚನೆಗಳಿರುವ ಕರಪತ್ರಗಳನ್ನು ಹಂಚಿದರು. ಹೆಲ್ಮೆಟ್ ಧರಿಸಿ ತಲೆ ಉಳಿಸಿ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ, ಸಂಚಾರ ನಿಯಮಗಳನ್ನು ಪಾಲಿಸಿ ಅಪಘಾತ ತಪ್ಪಿಸಿ, ಶಬ್ದಮಾಲಿನ್ಯ ತಡೆಗಟ್ಟಿ... ಸೇರಿದಂತೆ ವಿವಿಧ ಘೋಷ ವಾಕ್ಯಗಳಿಂದ ಫಲಕಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಕೆ.ಆರ್. ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್, ಸಿಬ್ಬಂದಿ ಇದ್ದರು.

[ಸಾಂದರ್ಭಿಕ ಚಿತ್ರ]
 

Last Updated 9, Sep 2018, 10:03 PM IST