
ಹುಣಸೂರು[ಸೆ.07]: ಶಾಸಕ ಎಚ್.ವಿಶ್ವನಾಥ್ 25 ವರ್ಷಗಳಿಂದ ಸಾರಿಗೆ ಬಸ್ ಸೌಲಭ್ಯ ಪಡೆಯದ ಗ್ರಾಮಗಳಿಗೆ ಬಸ್ ಸೇವೆ ಸಮರ್ಪಿಸಿ ಬಸ್‌ನಲ್ಲಿಯೇ ಗ್ರಾಮಸ್ಥರೊಂದಿಗೆ ಪ್ರಯಾಣಿಸಿದರು.
ತಾಲೂಕಿನ ಗಾವಡಗೆರೆ ಹೋಬಳಿ ವ್ಯಾಪ್ತಿಯಲ್ಲಿ ಕೆ.ಆರ್. ನಗರ ಮಾರ್ಗವಾಗಿ ತಾಲೂಕಿನ ಗಡಿಭಾಗವಾದ ಮುಳ್ಳೂರು, ಹೆಜ್ಜೋಡ್ಲು,ರಾಯನಹಳ್ಳಿ, ಕೆಬ್ಬೆಕೊಪ್ಪಲು ಮೂಲಕ ಹುಣಸೂರು ಸೇರುವ ಬಸ್ ಸೇವೆಗೆ ಚಾಲನೆ ನೀಡಿದರು. ತಾವೂ ಅದೇ ಬಸ್‌ನಲ್ಲಿ ಪ್ರಯಾಣಿಸಿ ಸಹ ಪ್ರಯಾಣಿಕ ಗ್ರಾಮೀಣರೊಂದಿಗೆ ಆ ಭಾಗದ ಸಮಸ್ಯೆಗಳು ಕುರಿತು ಚರ್ಚಿಸಿದರು.
ಶಾಸಕರ ಈ ನಡೆ ಈ ಭಾಗದ ಗ್ರಾಮಸ್ಥರಲ್ಲಿ ಸಂತಸ ಉಂಟು ಮಾಡಿತ್ತು. ಇದೇ ಸಂದರ್ಭದಲ್ಲಿ ಹೆಜ್ಜೋಡ್ಲು ಗ್ರಾಮದಲ್ಲಿ ತಿಂಗಳ ಹಿಂದೆ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ರೈತ ಯೋಗೇಶ್ ಅವರ ಪತ್ನಿ ಸವಿತಾ ಕುಟುಂಬದವರಿಗೆ ಸೆಸ್ಕ್ ವತಿಯಿಂದ 1 ಲಕ್ಷ ರೂ. ಪರಿಹಾರ ಧನವನ್ನು ಶಾಸಕರು ವಿತರಿಸಿದರು. ಈ ಸಂದರ್ಭದಲ್ಲಿ ಸೆಸ್ಕ್ ಮತ್ತು ಸಾರಿಗೆ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳು ಮತ್ತು ಪಕ್ಷದ ಹಿರಿಯ ಅಧಿಕಾರಿಗಳು ಹಾಜರಿದ್ದರು.