ಆಹಾರ ಮೇಳದಲ್ಲಿ ಇಡ್ಲಿ ತಿಂದು ಬಹುಮಾನ ಗೆದ್ದ ಮಹಿಳೆ

By Web DeskFirst Published Oct 12, 2018, 9:58 PM IST
Highlights

ದಸರಾ ಪ್ರಯುಕ್ತ ಆಯೋಜಿಸಿರುವ ಆಹಾರ ಮೇಳದಲ್ಲಿ ಎರಡನೇ ದಿನವಾದ ಗುರುವಾರ ಮಹಿಳೆಯರಿಗೆ ಇಡ್ಲಿ ಸಾಂಬಾರು ತಿನ್ನುವ ಸ್ಪರ್ಧೆ  ಏರ್ಪಡಿಸಲಾಗಿತ್ತು. ಒಟ್ಟು 18 ಮಂದಿ ಅರ್ಜಿ ಸಲ್ಲಿಸಿದ್ದು, ಆ ಪೈಕಿ 10 ಮಂದಿಯನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ನಿಗದಿತ ಅವಧಿಯೊಳಗೆ 6 ಇಡ್ಲಿಯನ್ನು ಪಡುವಾರಹಳ್ಳಿಯ ಲಲಿತಾ ಪುಟ್ಟೇಗೌಡ ತಿಂದು ಮುಗಿಸಿದರು. 

ಮೈಸೂರು[ಅ.12]: ‘ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತೆ’ ಎಂಬ ಗಾದೆ ಆಹಾರ ಮೇಳದಲ್ಲಿ ಉಲ್ಟಾ ಆಗಿದೆ. ನೀರು ಕುಡಿಯದೆ 200 ಗ್ರಾಂ. ಇಡ್ಲಿಯನ್ನು ಅಂದರೆ 6 ಇಡ್ಲಿಯನ್ನು ಕಡಿಮೆ ಅವಧಿಯಲ್ಲಿ ಗಂಟಲಿಗೆ ಇಳಿಸಿದ ಲಲಿತಾ ಪುಟ್ಟೇಗೌಡ ತಿಂದು ತೇಗಿದ ವೀರ ಮಹಿಳೆ ಎನಿಸಿಕೊಂಡರು!

ದಸರಾ ಪ್ರಯುಕ್ತ ಆಯೋಜಿಸಿರುವ ಆಹಾರ ಮೇಳದಲ್ಲಿ ಎರಡನೇ ದಿನವಾದ ಗುರುವಾರ ಮಹಿಳೆಯರಿಗೆ ಇಡ್ಲಿ ಸಾಂಬಾರು ತಿನ್ನುವ ಸ್ಪರ್ಧೆ  ಏರ್ಪಡಿಸಲಾಗಿತ್ತು. ಒಟ್ಟು 18 ಮಂದಿ ಅರ್ಜಿ ಸಲ್ಲಿಸಿದ್ದು, ಆ ಪೈಕಿ 10 ಮಂದಿಯನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ನಿಗದಿತ ಅವಧಿಯೊಳಗೆ 6 ಇಡ್ಲಿಯನ್ನು ಪಡುವಾರಹಳ್ಳಿಯ ಲಲಿತಾ ಪುಟ್ಟೇಗೌಡ ತಿಂದು ಮುಗಿಸಿದರು. ಅವರ ಬಳಿಕ ರಾಜಶ್ರೀ ದ್ವಿತೀಯ ಸ್ಥಾನ ಮತ್ತು ಕಾಂತಮಣಿ ತೃತೀಯ ಸ್ಥಾನ ಪಡೆದುಕೊಂಡರು. ಇಡ್ಲಿ ತಿನ್ನುವ ಸ್ಪರ್ಧೆ ಬಹಳ ರೋಚಕವಾಗಿತ್ತು. ಸ್ಪರ್ಧಿಗಳ ಬೆಂಬಲಿಗರು ಚಪ್ಪಾಳೆ ತಟ್ಟುತ್ತಲೆ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು.

ಒಲೆ ರಹಿತ ಅಡುಗೆ ಸ್ಪರ್ಧೆ: ಆಹಾರ ಮೇಳದಲ್ಲಿ ಬೆಳಗ್ಗೆ ಒಲೆರಹಿತ ಅಡುಗೆ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಒಂದಷ್ಟು ತರಕಾರಿ, ಹಣ್ಣುಗಳನ್ನು ನೀಡಿ ಅರ್ಧತಾಸಿನೊಳಗೆ ಅಡುಗೆ ತಯಾರಿಸುವ ಗುರಿ ನೀಡಲಾಗಿತ್ತು. ಮೈಸೂರು ನಗರದಿಂದ ಒಟ್ಟು 7 ಮಂದಿ ಭಾಗವಹಿಸಿ, ಆ ಪೈಕಿ 3 ಬಹುಮಾನಕ್ಕೆ ಭಾಜನರಾದರು. ಫ್ರೂಟ್ ಮತ್ತು ವೆಜ್ ಸಲಾಡ್ ತಯಾರಿಸಿದ ಉಮಾ ಶಿವಕುಮಾರ್ ಪ್ರಥಮ ಸ್ಥಾನ, ಇಟ್ಯಾಲಿಯನ್ ಶೈಲಿಯ ಫ್ರೂಟ್ ತಯಾರಿಸಿದ ರೂಪಾ, ಸಿರಿಧಾನ್ಯ ಮತ್ತು ಮೊಳಕೆ ಕಾಳುಗಳಿಂದ ಇಟ್ಯಾಲಿಕ್ ಶೈಲಿಯ ಮೇಥಿ ತಯಾರಿಸಿದ ಶ್ರುತಿ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಶುಕ್ರವಾರ ಗಂಡ-ಹೆಂಡತಿಯಿಂದ ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ ತಯಾರಿಕೆ ಸ್ಪರ್ಧೆ ಮತ್ತು ಪುರುಷರಿಗೆ ರಾಗಿಮುದ್ದೆ ನಾಟಿ ಕೋಳಿ ತಿನ್ನುವ ಸ್ಪರ್ಧೆ ಆಯೋಜಿಸಲಾಗಿದೆ.

ಈ ಸುದ್ದಿಯನ್ನು ಓದಿ: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ

click me!