ಶಾಸಕ ಸಾರಾ ಸೂಚನೆ ಗಾಳಿಗೆ : ಜೆಡಿಎಸ್‌ ಮುಖಂಡ ರೇವಣ್ಣ ಆರೋಪ

By Kannadaprabha News  |  First Published Nov 16, 2021, 11:48 AM IST
  • ತಾಲೂಕಿನ ಅರಸನಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಿಸುವ ವಿಚಾರ
  •  ಶಾಸಕರು ನೀಡಿದ ಸೂಚನೆಯನ್ನು ಮೈಮುಲ್‌ ಅಧಿಕಾರಿಗಳು ಗಾಳಿಗೆ ತೂರಿದ್ದಾರೆ ಎಂದು ಗ್ರಾಮದ ಜೆಡಿಎಸ್‌ ಮುಖಂಡ ರೇವಣ್ಣ ಆರೋಪ

 ಕೆ.ಆರ್‌. ನಗರ (ನ.16): ತಾಲೂಕಿನ ಅರಸನ ಕೊಪ್ಪಲು ಗ್ರಾಮದಲ್ಲಿ ಹಾಲು (Milk) ಉತ್ಪಾದಕರ ಸಹಕಾರ ಸಂಘ ಆರಂಭಿಸಲು ಶಾಸಕರು ನೀಡಿದ ಸೂಚನೆಯನ್ನು ಮೈಮುಲ್‌ (MYMUL) ಅಧಿಕಾರಿಗಳು ಗಾಳಿಗೆ ತೂರಿದ್ದಾರೆ ಎಂದು ಗ್ರಾಮದ ಜೆಡಿಎಸ್‌ (JDS) ಮುಖಂಡ ರೇವಣ್ಣ (Revanna) ಆರೋಪಿಸಿದ್ದಾರೆ.

ಗ್ರಾಮದಲ್ಲಿ ಸಂಘ ಆರಂಭಿಸಲು ಮುಂದಾದ ಸಮಯದಲ್ಲಿ ಎರಡು ಗುಂಪುಗಳ ನಡುವೆ ಒಮ್ಮತ ಮೂಡದ ಕಾರಣ ವಿಚಾರವನ್ನು ಸಾ.ರಾ. ಮಹೇಶ್‌ (Sa Ra Mahesh) ಅವರ ಗಮನಕ್ಕೆ ತಂದಾಗ ಅಧಿಕಾರಿಗಳಿಗೆ (officers) ಸೂಚನೆ ನೀಡಿ ಯಥಾಸ್ಥಿತಿ ಕಾಪಾಡಿ ಎಂದು ತಿಳಿಸಿದರು. ಅವರ ಮಾತಿಗೆ ಬೆಲೆ ನೀಡದ ಅಧಿಕಾರಿಗಳು ಗ್ರಾಮದ ಪ್ರಮುಖರನ್ನು ಹೊರಗಿಟ್ಟು ಸಂಘ ನೋಂದಣಿ ಮಾಡಿಸಿ ಆರಂಭ ಮಾಡಲು ಮುಂದಾಗಿದ್ದಾರೆಂದು ದೂರಿದ್ದಾರೆ.

Latest Videos

undefined

ಗ್ರಾಮದ 40 ಕುಟುಂಬದ ಒಂದು ಷೇರನ್ನು ಪಡೆಯದ ಅಧಿಕಾರಿಗಳು ಅವರಿಗೆ ಬೇಕಾದ ಕುಟುಂಬಗಳಿಂದ ಮೂರರಿಂದ ನಾಲ್ಕು ಷೇರುಗಳನ್ನು ಸಂಗ್ರಹಿಸಿ ಜತೆಗೆ ಸಹಕಾರ ನಿಯಮ ಉಲ್ಲಂಘಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇಷ್ಟೆಲ್ಲ ಅವ್ಯವಸ್ಥೆಗೆ ಮಾರ್ಗ ವಿಸ್ತರಣಾಧಿಕಾರಿ ಕಾರಣರಾಗಿದ್ದು, ಶಾಸಕರ (MLA) ಆದೇಶವನ್ನು ಧಿಕ್ಕರಿಸಿ ಸರ್ವಾಧಿಕಾರಿ ಧೋರಣೆ ಅನುಸರಿಸಿರುವ ಇವರನ್ನ ಸೇವೆಯಿಂದ ಅಮಾನತ್ತು ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಮೈಮುಲ್‌ (MYMUL) ಸಹಾಯಕ ವ್ಯವಸ್ಥಾಪಕ ಸಣ್ಣತಮ್ಮೇಗೌಡ ಮತ್ತು ಹುಣಸೂರಿನ ಸಹಾಯಕ ನಿಬಂಧಕರ ಕಚೇರಿಯ ಭರತ್‌ಕುಮಾರ್‌ ಅವರಿಗೆ ಶಾಸಕರು ಸೂಚನೆ ನೀಡಿ ಈ ಸಂಬಂಧ ಗಮನ ಹರಿಸುವಂತೆ ತಿಳಿಸಿದ್ದರೂ ಸಹ ಸಾ.ರಾ. ಮಹೇಶ್‌ ಅವರ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲವೆಂದು ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅರಸನಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭಿಸುವ ಸಂಬಂಧ ಯಾವುದೇ ಗೊಂದಲ ಮತ್ತು ಗಲಾಟೆಗಳಾಗಿ ಶಾಂತಿ ಭಂಗವಾದರೆ ಮೈಮುಲ್‌ ಅಧಿಕಾರಿಗಳೆ ಹೊಣೆಗಾರಾರಬೇಕಾಗುತ್ತದೆಂದು ರೇವಣ್ಣ ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಸಂಘ ನೋಂದಣಿ ಮಾಡಿರುವುದನ್ನು ರದ್ದುಪಡಿಸಿದ್ದರೆ ಗ್ರಾಮಸ್ಥರೊಡಗೂಡಿ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮೈಮುಲ್ ಮಾದರಿಯಾಗಿಸಲು ಪ್ರಯತ್ನ : 

ಟಿ. ನರಸೀಪುರ : ಜಿಲ್ಲಾ ಹಾಲು ಒಕ್ಕೂಟವನ್ನು ರಾಜ್ಯದಲ್ಲಿಯೇ (karnataka) ಮಾದರಿ ಒಕ್ಕೂಟವನ್ನಾಗಿ ಮಾಡುವ ಮೂಲಕ ನಂ. 1 ಸ್ಥಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಮೈಮುಲ್‌ ಅಧ್ಯಕ್ಷ ಪಿ.ಎಂ. ಪ್ರಸನ್ನ (PM Prasanna) ಹೇಳಿದರು.

ಪಟ್ಟಣದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘವು ಜಿಲ್ಲಾ ಹಾಲು ಒಕ್ಕೂಟದ ನೂತನ ನಿರ್ದೇಶಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಉತ್ಪಾದಕರ ಸಹಕಾರ ಸಂಘವು ರಾಜ್ಯದಲ್ಲಿನ ಒಟ್ಟು 14 ಒಕ್ಕೂಟದಲ್ಲಿಯೇ ಹಾಲಿಗೆ (Milk) ಉತ್ತಮ ದರ ನೀಡುತ್ತಿರುವ ಏಕೈಕ ಒಕ್ಕೂಟವಾಗಿದ್ದು, ರೈತರ (Farmers) ಹಿತ ಕಾಯುವ ನಿಟ್ಟಿನಲ್ಲಿ ದಿಟ್ಟಹೆಜ್ಜೆ ಇಟ್ಟಿದೆ. ಮೈಸೂರು (Mysuru) ಹಾಲು ಒಕ್ಕೂಟವು ರೈತರು ಉತ್ಪಾದಿಸಿದ ಲೀಟರ್‌ ಹಾಲಿಗೆ . 27 ಕೊಡುತ್ತಿದ್ದರೆ, ಇತರೆಡೆ . 24 ನೀಡಲಾಗುತ್ತಿದೆ. ಇದರಿಂದಾಗಿ ಒಕ್ಕೂಟಕ್ಕೆ . 14 ಕೋಟಿ ನಷ್ಟವಾಗುತ್ತಿದೆಯಾದರೂ ರೈತರನ್ನು ಕೋವಿಡ್‌ ಕಾಲದಲ್ಲಿ ತೊಂದರೆಗೆ ಸಿಲುಕಿಸಬಾರದೆಂಬ ಸದುದ್ದೇಶದಿಂದ ಎಲ್ಲಾ ನಿರ್ದೇಶಕರ ಒಪ್ಪಿಗೆ ಮೇರೆಗೆ ಹಾಲಿನ ದರ ಇಳಿಕೆ ಮಾಡಲಾಗಲಿಲ್ಲ ಎಂದರು.

ಹಾಗೆಯೇ ರೈತರು ಉತ್ತಮ ಗುಣಮಟ್ಟದ ಹಾಲು ನೀಡುವ ಮೂಲಕ ಒಕ್ಕೂಟ ಮತ್ತಷ್ಟುಸಾಧನೆಗೈಯ್ಯಲು ಸಹಕಾರ ನೀಡಬೇಕಿದೆ. ಟಿ. ನರಸೀಪುರ ಹಿಂದುಳಿದ ತಾಲೂಕಿನ ಪಟ್ಟಿಯಲ್ಲಿ ಬರುವುದರಿಂದ ತಾಲೂಕಿನ ಹಾಲು ಉತ್ಪಾದಕರಿಗೆ ಸರ್ಕಾರದಿಂದ ದೊರಕಬೇಕಾದ ಎಲ್ಲ ಸವಲತ್ತನ್ನು ಪ್ರಾಮಾಣಿಕವಾಗಿ ಒದಗಿಸಿಕೊಡಲಾಗುತ್ತದೆ. ಅಲ್ಲದೆ ಜಿಲ್ಲಾ ಒಕ್ಕೂಟವನ್ನು ರಾಜ್ಯದಲ್ಲಿಯೇ ಮೊದಲ ಸ್ಥಾನಕ್ಕೆ ಕೊಂಡಯ್ಯಲು ನಿರ್ದೇಶಕರ ಸಹಕಾರದೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿ.ಓಂಪ್ರಕಾಶ್‌ ಮಾತನಾಡಿ, ತಾಲೂಕಿನ ಹಾಲು ಉತ್ಪಾದಕರ ಸಂಘದಲ್ಲಿ ಯಾವುದೇ ಸಮಸ್ಯೆ ಬಂದರೂ ದೂರವಾಣಿ ಮೂಲಕವೇ ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ಖುದ್ದಾಗಿಯೇ ಭೇಟಿ ಮಾಡಬೇಕೆಂಬುದು ಏನೂ ಇಲ್ಲ. ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣ ಮಾಡಲು ಜಿಲ್ಲಾ ನಿರ್ದೇಶಕರು ಸಹಾಯಧನ ದೊರಕಿಸಿಕೊಡಲಿದ್ದು ನಿವೇಶನ ಹಾಗು ಸಂಘದಲ್ಲಿ ಕನಿಷ್ಠ 5 ಲಕ್ಷ ಹಣ ಇಟ್ಟಿರುವವರಿಗೆ, ಆದ್ಯತೆ ಮೇಲೆ 7 ಮಂದಿ ನಿರ್ದೇಶಕರೂ ಸಹಾಯಧನ ನೀಡಲಿದ್ದಾರೆ ಎಂದು ತಿಳಿಸಿದರು.

ನಿರ್ದೇಶಕರಾದ ಕೆ.ಜಿ. ಮಹೇಶ್‌, ಕೆ. ಉಮಾಶಂಕರ್‌, ನೀಲಾಂಬಿಕೆ ಮಹೇಶ್‌, ಬಿ.ಎನ್‌. ಸದಾನಂದ, ಎಸ್‌.ಸಿ. ಅಶೋಕ್‌, ಮೈಮುಲ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್‌. ವಿಜಯಕುಮಾರ್‌, ವ್ಯವಸ್ಥಾಪಕ ಡಾ. ಸಣ್ಣತಮ್ಮೇಗೌಡ, ಉಪ ವ್ಯವಸ್ಥಾಪಕ ಡಾ.ಸಿ. ದಿವಾಕರ್‌, ಡಾ.ಎನ್‌. ಕುಮಾರ್‌, ಡಾ.ಕೆ.ಬಿ. ಶಿವಪ್ರಸಾದ್‌,   ಕರಿಬಸವರಾಜ, ಜಿ.ಎನ್‌. ಸಂತೋಷ್‌, ಸಹಾಯಕ ವ್ಯವಸ್ಥಾಪಕ ಡಾ.ಬಿ. ನಿಶ್ಚಿತ್‌ಕುಮಾರ್‌, ನಮ್ರತಾ, ವಿಸ್ತರಣಾಧಿಕಾರಿಗಳಾದ ಪ್ರಮೋದ್‌, ದಿವ್ಯಶ್ರೀ, ವಿನುತ, ಶೃತಿ, ಅನಿತಾ, ಕೆಂಪಯ್ಯನಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮುದ್ದೇಗೌಡ, ಕಾರ್ಯದರ್ಶಿಗಳಾದ ನಂಜುಂಡಸ್ವಾಮಿ, ಗರ್ಗೇಶ್ವರಿ ಮಾದೇವ, ರಾಜು ಇದ್ದರು.

click me!