
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ನ.24): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಡಿ ಈಗಾಗಲೇ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿದ್ದು, ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಪ್ರಕರಣ ರಾಜ್ಯದ ಬೆಳಕಿಗೆ ಬಂದ ಕೂಡಲೇ ಅನೇಕ ಸಮುದಾಯದ ಮುಖಂಡರು ಅನೇಕ ಬಾರಿ ಹಲವು ಸಭೆಗಳನ್ನು ನಡೆಸಿ ಮುರುಘಾ ಶ್ರೀ ಕೂಡಲೇ ಪೀಠತ್ಯಾಗ ಮಾಡಬೇಕು ಎಂದು ಒತ್ತಾಯ ಮಾಡಿದರು. ಇದ್ಯಾವುದಕ್ಕೂ ಕ್ಯಾರೇ ಎನ್ನದೇ ಜೈಲಿನಲ್ಲಿಯೇ ಇರುವ ಮುರುಘಾ ಶ್ರೀ ತಮ್ಮ ಅನುಯಾಯಿಗಳಾದ ದಾವಣಗೆರೆ ವಿರಕ್ತ ಮಠದ ಸ್ವಾಮೀಜಿಗಳಾದ ಬಸವಪ್ರಭು ಶ್ರೀಗಳನ್ನು ಮುರುಘಾ ಮಠದ ಉಸ್ತುವಾರಿ ಶ್ರೀಗಳಾಗಿ ನೇಮಿಸಿದ್ದಾರೆ.
ಇದೆಲ್ಲದರ ಮಧ್ಯೆ ಅನೇಕ ವೀರಶೈವ ಲಿಂಗಾಯತ ಮುಖಂಡರ ಸಭೆಗಳಲ್ಲಿಮುಖಂಡರು ಮುರುಘಾ ಶ್ರೀ ವಿರುದ್ದವಾಗಿ ಪತ್ಯಕ್ಷ್ಯವಾಗಿ ಪರೋಕ್ಷವಾಗಿ ಟೀಕೆ ನಡೆಸಿದ ಅನೇಕ ಉದಾಹರಣೆಗಳಿವೆ. ಅಲ್ಲದೇ ಖುದ್ದು ಚಿತ್ರದುರ್ಗ ಲಿಂಗಾಯತ ಮಹಾಸಭಾದ ವತಿಯಿಂದಲೂ ಹಲವು ಸಭೆಗಳನ್ನು ನಡೆಸಿ ಮುರುಘಾ ಶ್ರೀ ಪೀಠ ತ್ಯಾಗ ಮಾಡಲೇಬೇಕು ಎಂದು ಹಕ್ಕೊತ್ತಾಯ ಮಾಡಿದ್ದಲ್ಲದೇ, ಮಾಜಿ ಸಚಿವ ಹೆಚ್ ಏಕಾಂತಯ್ಯ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿ ಬಂದಿದ್ದರು. ಆದ್ರೂ ಮುರುಘಾ ಮಠದಲ್ಲಿ ಯಾವುದೇ ಬದಲಾವಣೆಗಳು ಆಗಿರಲಿಲ್ಲ.
Uttara Kannada: ಕರಾವಳಿಯ ಅಖಾಡದಲ್ಲಿ ಬಿಜೆಪಿ ವಿರುದ್ದ ತೊಡೆ ತಟ್ಟಿದ ಕಾಂಗ್ರೆಸ್
ಆದ್ರೆ ಇಂದು ಚಿತ್ರದುರ್ಗಕ್ಕೆ ಆಗಮಿಸಿದ್ದ ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಣಬೇರು ರಾಜಣ್ಣ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಮುಂದಿನ ತಿಂಗಳು ಡಿಸೆಂಬರ್ 24 ಮತ್ತು 25ರಂದು ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಮಹಾಸಭಾ ಅಧಿವೇಶನ ಕಾರ್ಯಕ್ರಮ ನಡೆಯಲಿದೆ. ನಮ್ಮ ಸಮುದಾಯದ ಹಿರಿಯ ನಾಯಕರಾದ ಶಾಮನೂರು ಶಿವಶಂಕ್ರಪ್ಪ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. ಇನ್ನೂ ಮಹಾಸಭಾ ಅಧಿವೇಶನ ಕಾರ್ಯಕ್ರಮದಲ್ಲಿ ಮುರುಘಾ ಮಠದ ವಿಚಾರವೂ ಚರ್ಚೆ ಆಗುವ ಸಾಧ್ಯತೆಗಳು ಹೆಚ್ಚಿದೆ. ಮುರುಘಾ ಶ್ರೀ ವಿರುದ್ದ ಫೋಕ್ಸೋ ಕೇಸ್ ದಾಖಲಾದ ಮೇಲೆ ಕೂಡಲೇ ಅವರು ಪೀಠ ತ್ಯಗ ಮಾಡಬೇಕಿತ್ತು.
Tumakuru: ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಡಾ.ಜಿ.ಪರಮೇಶ್ವರ್
ಪುಟ್ಟಿಯಲ್ಲಿರುವ ಒಂದು ಹಣ್ಣು ಕೆಟ್ಟರೆ ಆ ಹಣ್ಣು ತೆಗೆಯಬೇಕು ಈ ಬಗ್ಗೆ ಆಧಿವೇಶನದಲ್ಲಿ ಚರ್ಚಿಸಿ ಸರಿಪಡಿಸುತ್ತೇವೆ ಎಂದು ಮುರುಘಾ ಶ್ರೀ ವಿರುದ್ದ ವ್ಯಂಗ್ಯವಾಡಿದರು. ಯಾವುದೇ ಮಠಗಳು ಭಕ್ತರಿಗೆ ಸೇರಿದ ಮಠಗಳೇ ಆಗಿರುತ್ತವೆ. ಏಕ ಸದಸ್ಯ ಟ್ರಸ್ಟ್ ರಚಿಸಿ ಮಠ ಶ್ರೀಗಳ ಅಧಿಕಾರದಲ್ಲಿ ಇರುವುದು ಸರಿಯಲ್ಲ. ಇತ್ತೀಚೆಗೆ ಬಹುತೇಕ ಮಠಾಧೀಶರು ಸೋಲೋ ಟ್ರಸ್ಟ್ ರಚಿಸಿಕೊಂಡಿದ್ದಾರೆ. ಇದರ ಉದ್ದೇಶ ಯಾವುದೇ ಸರ್ಕಾರ ಮಧ್ಯ ಪ್ರವೇಶ ಮಾಡಬಾರದು ಎಂಬುದು ಅವರ ಉದ್ದೇಶ. ಆದುದರಿಂದಲೇ ಮುರುಘಾ ಮಠಕ್ಕೆ ಆಡಳಿತಾಧಿಕಾರಿ, ಉತ್ತರಾಧಿಕಾರಿ ನೇಮಿಸಲಾಗದಂತೆ ಮಾಡಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಮಹಾಸಭಾ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮಹಾಸಭಾ ಉಪಾಧ್ಯಕ್ಷ ಅಣಬೇರು ರಾಜಣ್ಣ ತಿಳಿಸಿದರು.