Covid19: ಸೋಂಕಿತರಲ್ಲೀಗ ಲಸಿಕೆ ಪಡೆದವರೇ ಹೆಚ್ಚು ಜನ..!

By Kannadaprabha NewsFirst Published Nov 29, 2021, 10:36 AM IST
Highlights

*   ನ.1ರಿಂದ 20 ದಿನಗಳಲ್ಲಿ ದೃಢಪಟ್ಟ ಕೇಸ್‌ಗಳಲ್ಲಿ ಲಸಿಕೆ ಪಡೆದವರು 72% ಮಂದಿ
*   ಲಸಿಕೆ ಪಡೆದರೆ ಸೋಂಕಿನ ತೀವ್ರತೆ ಕಡಿಮೆ, ಹೀಗಾಗಿ ಲಸಿಕೆ ಪಡೆಯಿರಿ
*   ಕೊರೋನಾ ಬಗ್ಗೆ ಯಾವುದೇ ನಿರ್ಲಕ್ಷ್ಯ ಬೇಡ
 

ಬೆಂಗಳೂರು(ನ.29):  ರಾಜಧಾನಿ ಬೆಂಗಳೂರಿನಲ್ಲಿ(Bengaluru) ನ.1ರಿಂದ 20 ದಿನಗಳಲ್ಲಿ ದೃಢಪಟ್ಟಿರುವ ಒಟ್ಟು ಕೊರೋನಾ(Coronavirus) ಸೋಂಕಿತರಲ್ಲಿ ಶೇ.72ರಷ್ಟು ಮಂದಿ ಲಸಿಕೆ ಪಡೆದವರಿಗೇ ಸೋಂಕು ಉಂಟಾಗಿದೆ. ಆದರೆ, ಲಸಿಕೆ ಪಡೆದವರಲ್ಲಿ ಸೋಂಕಿನ ತೀವ್ರತೆ ತೀರಾ ಕಡಿಮೆ ಇರುವುದು ದೃಢಪಟ್ಟಿದೆ. ಹೀಗಾಗಿ ಲಸಿಕೆ ಬಗ್ಗೆ ನಿರ್ಲಕ್ಷ್ಯ ಮಾಡದೆ ಕೂಡಲೇ ಲಸಿಕೆ ಪಡೆಯುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ನ.1ರಿಂದ 20ರವರೆಗೆ 20 ದಿನಗಳಲ್ಲಿ 2,953 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಟ್ರಯಾಜಿಂಗ್‌ ಕೇಂದ್ರಗಳಲ್ಲಿ 1,538 ಮಂದಿಯನ್ನು ಪರಿಶೀಲನೆ ನಡೆಸಿದ್ದು, 1,254 ಮಂದಿಗೆ ಲಸಿಕೆ(Vaccine) ಪಡೆದಿದ್ದರೂ ಸೋಂಕು ಉಂಟಾಗಿದೆ. ಈ ಪೈಕಿ ಶೇ.90ರಷ್ಟು ಮಂದಿ ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ.

Omicron Crisis: ಲಸಿಕೆ ಸಿಕ್ಕಿಲ್ಲ, ಹಾಗಾಗಿ ಹೊಸ ತಳಿ ಹುಟ್ಟಿದೆ: ಆಫ್ರಿಕಾ ಆಕ್ರೋಶ!

ಆದರೆ, 1,254 ಸೋಂಕಿತರಲ್ಲಿ ಒಬ್ಬರಿಗೆ ಮಾತ್ರ ಸೋಂಕು ತೀವ್ರ ಪ್ರಮಾಣದಲ್ಲಿ ಕಾಡಿದೆ. ವೆಂಟಿಲೇಟರ್‌ ಸಹಿತ ಐಸಿಯುನಲ್ಲಿ ಒಬ್ಬ ಸೋಂಕಿತ ಮಾತ್ರ ಚಿಕಿತ್ಸೆ ಪಡೆದಿದ್ದು, 3 ಮಂದಿ ಐಸಿಯುನಲ್ಲಿ(ICU) ಚಿಕಿತ್ಸೆ ಪಡೆದಿದ್ದಾರೆ. ಲಸಿಕೆ ಪಡೆಯದವರಲ್ಲಿನ ಸೋಂಕಿನ ತೀವ್ರತೆಗೆ ಹೋಲಿಸಿದರೆ ಇದು ತೀರಾ ಕಡಿಮೆ. ಲಸಿಕೆ ಪಡೆದರೂ ಸೋಂಕು ಉಂಟಾಗುತ್ತದೆ. ಆದರೆ, ತೀವ್ರತೆಯನ್ನು ತಗ್ಗಿಸಿ ಆಸ್ಪತ್ರೆಗೆ ದಾಖಲಾಗುವ ಅಗತ್ಯತೆಯನ್ನು ತಪ್ಪಿಸುತ್ತದೆ. ಕಳೆದ 20 ದಿನಗಳ ಪ್ರಕರಣಗಳಲ್ಲೂ ಇದು ಸಾಬೀತಾಗಿದ್ದು, ಹೊಸ ತಳಿ (Omicron) ಆತಂಕ ಹೆಚ್ಚಾಗಿರುವ ಈ ವೇಳೆಯಲ್ಲಿ ತ್ವರಿತವಾಗಿ ಲಸಿಕೆ ಪಡೆಯುವುದು ಅಗತ್ಯ ಎಂದು ತಜ್ಞರು(Experts) ಸಲಹೆ ನೀಡಿದ್ದಾರೆ.

ಲಸಿಕೆ ಪಡೆದವರಲ್ಲಿ ಸೋಂಕು ತೀವ್ರತೆ ಕಡಿಮೆ:

ಈ ಬಗ್ಗೆ ಕೊರೋನಾ ಪರೀಕ್ಷೆಗಳ ನೋಡಲ್‌ ಅಧಿಕಾರಿ ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯರಾದ ಡಾ.ಸಿ.ಎನ್‌. ಮಂಜುನಾಥ್‌(Dr CN Manjunath) ಮಾತನಾಡಿ, ಲಸಿಕೆಯ ಸಾಮರ್ಥ್ಯದ ಬಗೆಗಿನ ಅನುಮಾನಗಳಿಂದ ಯಾರೂ ಲಸಿಕೆ ಪಡೆಯುವುದರಿಂದ ಹಿಂದೆ ಸರಿಯಬಾರದು. ಹೊಸ ತಳಿ ಲಸಿಕೆಯ ಪ್ರಭಾವವನ್ನು ಕುಗ್ಗಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಎರಡೂ ಲಸಿಕೆ ಪಡೆದವರು ಆಸ್ಪತ್ರೆಗೆ(Hospital) ಸೇರುವ ಹಾಗೂ ತೀವ್ರ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಎರಡೂ ಡೋಸ್‌ ಲಸಿಕೆಯನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಇನ್ನು ವರ್ಷಾರಂಭದಲ್ಲೇ ಮೊದಲ ಡೋಸ್‌ ಲಸಿಕೆ ಪಡೆದು ಜೂನ್‌ ಒಳಗಾಗಿ ಎರಡೂ ಡೋಸ್‌ ಪಡೆದಿರುವ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್‌ ಡೋಸ್‌ ಲಸಿಕೆ ನೀಡುವ ಅವಶ್ಯಕತೆ ಇದೆ. ಕೇಂದ್ರ ಸಮ್ಮತಿಸಿದರೆ ಮುಂದಿನ ವಾರದಿಂದಲೇ ಲಸಿಕೆ ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

Omicron Varient: ಒಮಿಕ್ರೋನ್‌ ಬಗ್ಗೆ ಗಾಬರಿ ಬೇಡ, ಇದು ಮಾರಣಾಂತಿಕವಲ್ಲ: ತಜ್ಞರು

ನಿರ್ಲಕ್ಷ್ಯ ಬೇಡ:

ಹೊಸ ತಳಿಯ ಸೋಂಕು ಲಸಿಕೆ ಪಡೆದವರಿಗೂ ಕಾಡುತ್ತಿದೆ. ಹೀಗಾಗಿ ಕೊರೋನಾ ಜೀವಂತವಾಗಿದ್ದು, ರೂಪಾಂತರಗೊಳ್ಳುತ್ತಿದೆ. ಲಸಿಕೆಯ ಪ್ರಭಾವವನ್ನು ಕುಗ್ಗಿಸಲು ನಿರಂತರವಾಗಿ ಬದಲಾಗುತ್ತಿದೆ ಎಂಬುದು ಸಾಬೀತಾಗಿದೆ. ಹೀಗಾಗಿ ಕೊರೋನಾ ಬಗ್ಗೆ ಯಾವುದೇ ನಿರ್ಲಕ್ಷ್ಯ ಬೇಡ. ಮಾಸ್ಕ್‌(Mask), ಸಾಮಾಜಿಕ ಅಂತರದಂತಹ(Social Distance) ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಾಜ್ಯದ ಜಿನೋಮ್‌ ಸೀಕ್ವೆನ್ಸಿಂಗ್‌ ಸಮಿತಿ ಮುಖ್ಯಸ್ಥ ಡಾ. ವಿಶಾಲ್‌ರಾವ್‌ ಸಲಹೆ ನೀಡಿದ್ದಾರೆ.

ಕೊರೋನಾ ಹೊಸ ತಳಿಯ ಭಯ, ಮೂರನೇ ಅಲೆಯ ಆತಂಕ ಹಾಗೂ ಆರೋಗ್ಯ ಇಲಾಖೆಯ(Department of Health) ಬಿಗಿ ಕ್ರಮಗಳ ಪರಿಣಾಮ ಕೊರೋನಾ ಲಸಿಕೆ ನೀಡಿಕೆ ಅಭಿಯಾನ ಮತ್ತೆ ಚುರುಕು ಕಂಡಿದೆ.

ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಿದ್ದರೂ ಜನರು ಲಸಿಕೆ ಪಡೆಯಲು ಮುಂದೆ ಬಾರದ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳಿಂದ ಅಭಿಯಾನದ ವೇಗ ಕುಸಿದಿತ್ತು. ಈವರೆಗೆ ಮೊದಲ ಲಸಿಕೆ ಪಡೆಯದವರು ಲಕ್ಷಾಂತರ ಜನರಿದ್ದಾರೆ. ಮೊದಲ ಲಸಿಕೆ ಪಡೆದು ನಿಗದಿತ ಅವಧಿಯಲ್ಲಿ ಎರಡನೇ ಲಸಿಕೆ ಪಡೆಯದವರ ಸಂಖ್ಯೆ ಕೂಡಾ ಸಾಕಷ್ಟುದೊಡ್ಡ ಪ್ರಮಾಣದಲ್ಲಿ ಕಂಡುಬಂದಿತ್ತು. ಆದರೆ ದಕ್ಷಿಣ ಆಫ್ರಿಕಾದಲ್ಲಿ(South Africa) ಕಂಡುಬಂದ ಕೊರೋನಾ ಒಮಿಕ್ರೋನ್‌ ತಳಿ, ಕ್ಲಸ್ಟರ್‌ ಮಾದರಿಯಲ್ಲಿ ಸೋಂಕು ಪ್ರಕರಣ ಹೆಚ್ಚು ಕಂಡುಬರುತ್ತಿರುವುದರಿಂದ ಆತಂಕಗೊಂಡ ಜನರು ಈಗ ಲಸಿಕಾ ಕೇಂದ್ರಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದಾರೆ.
 

click me!