ಮಳೆ ಆರ್ಭಟ ಜೋರು: ಬೆಳಗಾವಿಯಲ್ಲಿ 5ಕ್ಕೂ ಹೆಚ್ಚು ಸೇತುವೆಗಳು ಜಲಾವೃತ

By Kannadaprabha NewsFirst Published Jul 21, 2023, 9:30 PM IST
Highlights

ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಕೃಷ್ಣಾ ಮತ್ತು ಅದರ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಮಾಂಜರಿ-ಬಾವನಸೌಂದತ್ತಿ,ಮಲಿಕವಾಡ-ದತ್ತವಾಡ, ಭೀವಶಿ- ಜತ್ರಾಟ, ಭೋಜ- ಕಾರದಗಾ,ಬಾರವಾಡ-ಕುನ್ನೂರ ಈ ಐದು ಸೇತುವೆ ಜಲಾವೃತಗೊಂಡಿವೆ. 

ಬೆಳಗಾವಿ(ಜು.21): ನೆರೆಯ ಮಹಾರಾಷ್ಟ್ರದ ಘಟ್ಟಪ್ರದೇಶ ಹಾಗೂ ಜಿಲ್ಲೆಯಲ್ಲಿ ಗುರುವಾರವೂ ಎಡೆಡಿದೇ ಅಬ್ಬರದ ಮಳೆ ಮುಂದುವರೆದಿದೆ. ಜಿಲ್ಲೆಯ ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಐದು ಸೇತುವೆ ಜಲಾವೃತಗೊಂಡಿವೆ. ಸಂಚಾರ ಸ್ಥಗಿತಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಕೃಷ್ಣಾ ಮತ್ತು ಅದರ ಉಪನದಿಗಳಾದ ವೇದಗಂಗಾ, ದೂಧಗಂಗಾ ನದಿಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಮಾಂಜರಿ-ಬಾವನಸೌಂದತ್ತಿ,ಮಲಿಕವಾಡ-ದತ್ತವಾಡ, ಭೀವಶಿ- ಜತ್ರಾಟ, ಭೋಜ- ಕಾರದಗಾ,ಬಾರವಾಡ-ಕುನ್ನೂರ ಈ ಐದು ಸೇತುವೆ ಜಲಾವೃತಗೊಂಡಿವೆ. ಮುಂಜಾಗ್ರತಾ ಕ್ರಮವಾಗಿ ಸೇತುವೆ ಎರಡೂ ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಸೇತುವೆ ಬಳಿ ಸಂಚಾರ ನಿಷೇಧಿಸಲಾಗಿದೆ. ಚಿಕ್ಕೋಡಿ ತಾಲೂಕಿನಲ್ಲಿ ಆರು ಕೆಳಹಂತದ ಸೇತುವೆಗಳು ಮುಳುಗುವ ಹಂತಕ್ಕೆ ನೀರು ಹರಿಯುತ್ತಿದೆ.

ಖಾನಾಪುರದಲ್ಲಿ ವರುಣನ ಅಬ್ಬರ: ತುಂಬಿ ಹರಿಯುತ್ತಿರುವ ಮಲಪ್ರಭೆ

ಜಿಲ್ಲೆಯಲ್ಲಿ ಪ್ರಮುಖ ನದಿಗಳು , ಹಳ್ಳಗಳು ಸೇರಿದಂತೆ 83 ಸೇತುವೆಗಳ ಮೇಲೂ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ. ಸೇತುವೆಗಳಲ್ಲಿ ಹೈಅಲರ್ಟ ಘೋಷಿಸಲಾಗಿದೆ. ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಪೊಲೀಸ್‌ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ನದಿ ನೀರಿನಲ್ಲಿ ಜಲಾವೃತಗೊಂಡಿರುವ ಐದು ಸೇತುವೆಗಳ ಸಂಚಾರ ಸ್ಥಗಿತಗೊಳಿಸಿದೆ. ಸೇತುವೆ ಎರಡೂ ಬದಿಯಲ್ಲಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. ರಸ್ತೆ ಸಂಚಾರ ಸ್ಥಗಿತಗೊಂಡಿದ್ದು, ಪರ್ಯಾಯ ಮಾರ್ಗದ ಮೂಲಕ ಸಂಚಾರ ವ್ಯವಸ್ಥೆಯಿದೆ.

ಖಾನಾಪುರ ಅರಣ್ಯ ಪ್ರದೇಶದಲ್ಲಿಯೂ ಮಳೆ ಆರ್ಭಟ ಮುಂದುವರೆದಿದೆ. ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಕಾಡಂಚಿನಲ್ಲಿರುವ 40ಕ್ಕೂ ಅಧಿಕ ಹಳ್ಳಿಗಳ ಸಂಪರ್ಕ ಕಡಿತವಾಗಿದೆ. ಅಲ್ಲದೇ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಖಾನಾಪುರ ತಾಲೂಕಿನಲ್ಲಿನ ರಸ್ತೆಗಳು ಹಾಳಾಗಿವೆ. ರಸ್ತೆಯಲ್ಲಿ ದೊಡ್ಡ ದೊಡ್ಡ ತೆಗ್ಗುಗಳು ನಿರ್ಮಾಣವಾಗಿವೆ.

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಆರ್ಭಟ ಮುಂದುವರೆದಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಬೆಳಗಾವಿ ನಗರದಲ್ಲಿಯೂ ಮಳೆ ಅಬ್ಬರ ಜೋರಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ತುಂಬಿ ಹರಿಯುತ್ತಿದೆ. ರಸ್ತೆಗಳೆಲ್ಲವೂ ನದಿಗಳಂತೆ ಭಾಸವಾಗುತ್ತಿವೆ. ಮಳೆಯ ನಡುವೆಯೇ ವಾಹನ ಸವಾರರು ಓಡಾಡುತ್ತಿರುವುದು ಕಂಡುಬಂದಿತು. ಶಾಲಾ ಮಕ್ಕಳು ಕೂಡ ಮಳೆಯಲ್ಲೇ ತಮ್ಮ ಪಾಲಕರ ಜೊತೆಯಲ್ಲಿ ಬೈಕ್‌ಗಳ ಮೇಲೆ ಹೋಗುತ್ತಿರುವುದು ಸಾಮಾನ್ಯವಾಗಿತ್ತು. ಕೆಲವೆಡೆ ಗಾಳಿ ಮಳೆಗೆ ಮರಗಳು ಧರೆಗುರುಳಿವೆ.

ರಸ್ತೆ ದುರಸ್ತಿಗೊಳಿಸಿ

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಖಾನಾಪುರ ತಾಲೂಕಿನಲ್ಲಿನ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿವೆ. ಅದರಲ್ಲಿಯೂ ಬೈಕ್‌ ಸವಾರರು ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು. ಸ್ವಲ್ಪ ಮೈಮರೆತರೆಂದರೆ ಅಪಘಾತ ತಪ್ಪಿದ್ದಲ್ಲ. ಮುಂಜಾಗ್ರಾತಾ ಕ್ರಮವಾಗಿ ಹಾಳಾಗಿರುವ ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸುವಂತೆ ಎಸ್ಪಿ ಡಾ.ಸಂಜೀವ ಪಾಟೀಲ ಅವರು ಖಾನಾಪುರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ಹಾಳಾದ ರಸ್ತೆಗಳ ಫೋಟೋ ಸಮೇತವಾಗಿ ಪತ್ರ ಬರೆದಿದ್ದಾರೆ.

ಬೆಳಗಾವಿ: ಖಾನಾಪುರದಲ್ಲಿ ರಣಮಳೆ, ಶಾಲೆಗಳಿಗೆ ನಾಳೆ ‌ರಜೆ ಘೋಷಣೆ

ಮಳೆಯಿಂದಾಗಿ ರಸ್ತೆಗಳಲ್ಲಿ ಡಾಂಬರೀಕರಣ ಕಿತ್ತುಹೋಗಿದೆ. ರಸ್ತೆ ಮಾರ್ಗದುದ್ದಕ್ಕೂ ಅಲ್ಲಲ್ಲಿ ದೊಡ್ಡ ದೊಡ್ಡ ಕಂದಕಗಳು ನಿರ್ಮಾಣಗೊಂಡಿವೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಈ ರಸ್ತೆಗಳೆಲ್ಲವೂ ಸಂಚಾರಕ್ಕೆ ಅಯೋಗ್ಯವಾಗಿವೆ. ಕೂಡಲೇ ತುರ್ತಾಗಿ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಮನವಿ ಮಾಡಿದ್ದಾರೆ.

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಬೆಳಗಾವಿ ಜಿಲ್ಲೆಯಲ್ಲಿ ನದಿ, ಹಳ್ಳ ತುಂಬಿ ಹರಿಯುತ್ತಿವೆ. ನದಿಗಳು, ಹಳ್ಳಗಳು ಸೇರಿದಂತೆ 83 ಸೇತುವೆಗಳ ಮೇಲೆ ತೀವ್ರ ನಿಗಾ ಇಡಲಾಗಿದೆ. ಚಿಕ್ಕೋಡಿ, ನಿಪ್ಪಾಣಿ ತಾಲೂಕಿನಲ್ಲಿ ಐದು ಸೇತುವೆ ಮುಳುಗಡೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ಸೇತುವೆ ಬಳಿ ಬ್ಯಾರಿಕೇಡ್‌ ಹಾಕಿ, ಪೊಲೀಸ್‌ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಅಂತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.  

click me!