ಜುಲೈ 23ರಿಂದ ಕುಂದಾಪ್ರ ಕನ್ನಡ ಹಬ್ಬ, ಬೆಂಗಳೂರಿನಲ್ಲಿ ಕುಂದಾಪುರ ಕನ್ನಡಿಗರ ಸಮಾಗಮ

By Suvarna News  |  First Published Jul 21, 2023, 8:13 PM IST

ಇದೇ ಜುಲೈ 23ರ ಭಾನುವಾರ ರಾಜಧಾನಿಯ ಅತ್ತಿಗುಪ್ಪೆಯ ಬಂಟರ ಸಂಘದಲ್ಲಿ 5ನೇ ವರ್ಷದ ಕುಂದಾಪ್ರ ಕನ್ನಡ ಹಬ್ಬ ಆಯೋಜಿಸಲಾಗಿದೆ.


ವರದಿ: ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್

ನಮ್ಮದು ಭಾಷೆಯಲ್ಲ ಬದ್ಕ್ ಎಂದೇ ತಮ್ಮ ಬದುಕಿನ ವಿಭಿನ್ನ ಸಂಸ್ಕೃತಿಯನ್ನೇ ಆಚರಣೆಯನ್ನಾಗಿಸಿಕೊಂಡು ಬದುಕು ಕಟ್ಟಿಕೊಂಡವರು ಕುಂದಾಪುರ ಕನ್ನಡಿಗರು. ಪ್ರತೀ ವರ್ಷ ಕರ್ಕಾಟಕ ಮಾಸದ ಮೊದಲ ದಿನ ಅಂದರೆ ಆಷಾಢ ಅಮಾಸಿಯ ದಿನವನ್ನು ಕುಂದಾಪುರ ಕನ್ನಡಿಗರು ವಿಶ್ವ ಕುಂದಾಪುರ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ನೆಲೆಸಿರುವ ಕುಂದಗನ್ನಡಿಗರನ್ನು ಭಾಷೆ, ಸಂಸ್ಕೃತಿ ಆಚರಣೆಯೊಂದಿಗೆ ಒಂದುಗೂಡಿಸಲು ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ನಿರ್ಧರಿಸಿದೆ. ಹಾಗಾಗಿ ಮತ್ತೊಂದು ಕುಂದಾಪುರ ಹಬ್ಬಕ್ಕೆ ಸಜ್ಜಾಗಿದ್ದಾರೆ ಬೆಂಗಳೂರಿನ ಕುಂದಗನ್ನಡಿಗರು. ಇದೇ ಜುಲೈ 23ರ ಭಾನುವಾರ ರಾಜಧಾನಿಯ ಅತ್ತಿಗುಪ್ಪೆಯ ಬಂಟರ ಸಂಘದಲ್ಲಿ 5ನೇ ವರ್ಷದ ಕುಂದಾಪ್ರ ಕನ್ನಡ ಹಬ್ಬ ಆಯೋಜಿಸಲಾಗಿದೆ.

Latest Videos

undefined

6 ವರ್ಷದಲ್ಲಿಯೇ ಎರಡು ವಿಶ್ವದಾಖಲೆ ಮುಡಿಗೇರಿಸಿಕೊಂಡ ಚಿತ್ರದುರ್ಗದ ಪೋರ!

ಈ ಹಿಂದೆ ಕೆಲವೇ ಕೆಲವು ಗಂಟೆಗಳಲ್ಲಿ ಆಚರಿಸಲ್ಪಡುತ್ತಿದ್ದ ಕುಂದಾಪ್ರ ಹಬ್ಬ ಇದೇ ಮೊದಲ ಬಾರಿಗೆ ದಿನಪೂರ್ತಿ ಆಚರಿಸಲ್ಪಡುತ್ತಿದೆ. ಬೆಳಗ್ಗೆ ಒಂಭತ್ತು ಗಂಟೆಗೆ ಕಂಬಳ ಕ್ಷೇತ್ರದ ಸಾಧಕ ಶಾಂತರಾಮ ಶೆಟ್ಟಿ ಬಾರ್ಕೂರು ಕುಂದಾಪ್ರ ಹಬ್ಬವನ್ನು ಉದ್ಘಾಟಿಸಲಿದ್ದು ಶಾಸಕರಾದ ಕಿರಣ್ ಕೂಡ್ಗಿ ಹಾಗೂ ಗುರುರಾಜ್ ಗಂಟಿಹೊಳಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉಪಸ್ಥಿತರಿದ್ದು ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ, ಬಂಟರ ಸಂಘ ಬೆಂಗಳೂರು ಅಧ್ಯಕ್ಷ ಎಂ. ಮುರಳೀಧರ ಹೆಗ್ಡೆ ಉಪಸ್ಥಿತರಿರಲಿದ್ದು  ರಾತ್ರಿ 9 ಗಂಟೆಯವರೆಗೆ ಕಾರ್ಯಕ್ರಮ ಇರಲಿದೆ.

ಈ ಬಾರಿಯ ಕುಂದಾಪ್ರ ಕನ್ನಡ ಹಬ್ಬದ ಮೆರುಗು ಹೆಚ್ಚಿಸಲಿರುವ  ತಾರ ಗಣ
ಕುಂದಾಪ್ರ ಹಬ್ಬದಲ್ಲಿ ಅನೇಕ ಸ್ಟಾರ್ ನಟ-ನಟಿಯರು ಭಾಗವಹಿಸಲಿದ್ದು ಕುಂದಾಪ್ರ ಹಬ್ಬದ ಮೆರುಗು ಹೆಚ್ಚಿಸಲಿದೆ. ಕಾಂತಾರ ಸಿನಿಮಾ ಮೂಲಕ ದೇಶ - ವಿದೇಶಗಳಲ್ಲಿ ಮನೆಮಾತಾಗಿರುವ ರಿಷಬ್ ಶೆಟ್ಟಿ , ಪ್ರಮೋದ್ ಶೆಟ್ಟಿ, ಬಿಗ್ ಬಾಸ್ ಮೂಲಕ ನಾಡಿನ ಮನೆಮಾತಾಗಿರುವ ಕಿರುತೆರೆ ಕಲಾವಿದಾರಾದ ಭೂಮಿಕಾ ಶೆಟ್ಟಿ, ಶೈನ್ ಶೆಟ್ಟಿ ಅತಿಥಗಳಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಕುಂದಾಪುರ ಮೂಲದವರೇ ಆದ ಉಪೇಂದ್ರ ಹಾಗೂ ಯೋಗರಾಜ್ ಭಟ್ರು ಕುಂದಾಪ್ರ ಹಬ್ಬದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ತಿಳಿಸಿದೆ.

ಇನ್ನು ಕುಂದಾಪ್ರ ಕನ್ನಡ ಹಬ್ಬದಲ್ಲಿ ಊರ ಗೌರವ ಎಂಬ ಸನ್ಮಾನವನ್ನು ಪ್ರತೀ ವರ್ಷದಂತೆ ಈ ವರ್ಷವೂ ಇಬ್ಬರು ಸಾಧಕರಿಗೆ ನೀಡಲಾಗಿದೆ. ಪ್ರೊ. ಎ.ವಿ ನಾವಡ ಮತ್ತು ಸಂಗೀತ ನಿರ್ದೇಶಕ ರವಿ ಬಸ್ರೂರು ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳೆ ಕೊಡಗಿನ ಮಗಳು, 10 ವರ್ಷದಲ್ಲಿ 1500

ಆಗಮಿಸುವವರಿಗಾಗಿ ವಿವಿಧ ಆಟೋಟಗಳು ಹಾಗೂ ಕರಾವಳಿ ಖಾದ್ಯ ವೈವಿಧ್ಯ
ಕುಂದಾಪ್ರ ಕನ್ನಡ ಹಬ್ಬಕ್ಕೆ ಆಗಮಿಸುವ ಬೆಂಗಳೂರಿನ ನಿವಾಸಿಗರಿಗಾಗಿ ವಿಶೇಷ ದೇಶಿಯ ಆಟಗಳು ಹಾಗೂ ಕರಾವಳಿಯ ಖಾದ್ಯಗಳನ್ನು ಈ ಬಾರಿ ಹಮ್ಮಿಕೊಳ್ಳಲಾಗಿದ್ದು ಕುಂದಾಪ್ರ ಕನ್ನಡ ಹಬ್ಬಕ್ಕೆ ಆಗಮಿಸಿದವರಿಗೆ ಭರಪೂರ ಮನರಂಜನೆ ದೊರಕಲಿದೆ.  

ಮಕ್ಕಳಿಗಾಗಿ ಹೂವಾಡಗಿತ್ತಿ, ಸೈಕಲ್ ಟೈರ್ ಓಟ, ಹಣೆಬೊಂಡ ಓಟ, ಗಿರ್ಗಿಟ್ಲಿ ಓಟ, ಚಿತ್ರಕಲೆ ಸ್ಪರ್ಧೆಗಳಿದ್ದರೆ ಮಹಿಳೆಯರಿಗಾಗಿ ಹಲಸಿನ ಕೊಟ್ಟೆ ಕಟ್ಟುವುದು, ಮಡ್ಲ್ ನೆಯ್ಯುವ ಸ್ಪರ್ಧೆಗಳಿವೆ. ವಯಸ್ಕರಿಗಾಗಿ ಹಗ್ಗಜಗ್ಗಾಟ ಹಾಗೂ ದಂಪತಿಗಳಿಗಾಗಿಯೇ ವಿಶೇಷ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರ ಜೊತೆಗೆ ಕುಂದಾಪುರ ನೆಲದ ಹೋಳಿ ಕುಣಿತ ಹಾಗೂ ಸೌಕೂರು ಬ್ಯಾಂಡ್ ಹಬ್ಬಕ್ಕೆ ಇನ್ನಷ್ಟು ಕಳೆ ನೀಡಲಿವೆ. 

ಕುಂದಾಪುರದ ವಿಶೇಷ ಖಾದ್ಯಗಳಾದ ಹಾಲಬಾಯಿ, ಕೊಟ್ಟೆ ಕಡುಬು, ಗೋಲಿಬಜೆ, ಬನ್ಸ್, ಸುಕ್ಕಿನ್ ಉಂಡೆ, ಎಳ್ ಬಾಯ್ರ್, ಹೆಸ್ರು ಬಾಯ್ರ್ ನಂತಹ ವಿವಿಧ ಪಾನಕಗಳು, ವಿಶೇಷ ತರಕಾರಿ ಊಟ, ಕುಂದಾಪ್ರ ಕೋಳಿ ಸುಕ್ಕ, ಬಿರಿಯಾನಿ, ಚಟ್ಲಿ ಸಾರು ಇನ್ನಿತರ ಅಪರೂಪದ ಖಾದ್ಯಗಳು ಖಾದ್ಯ ಪ್ರಿಯರಿಗೆ ಸಂಡೆ ವಿಶೇಷ ರುಚಿಯುಣಿಸಲಿದೆ.

ಕುಂದಾಪ್ರ ಹಬ್ಬದಲ್ಲಿ ಸಾಂಸ್ಕೃತಿಕ ರಸದೌತಣ: 
ಕುಂದಾಪ್ರ ಹಬ್ಬದಲ್ಲಿ ವಿವಿಧ ಕಲಾಪ್ರದರ್ಶನಗಳು ಮೇಳೈಸಲಿದ್ದು ಕುಂದಾಪ್ರ ಕನ್ನಡ ಹಬ್ಬದ ತೂಕ ಹೆಚ್ಚಿಸಲಿದೆ. ಕಲಾಸಕ್ತರಿಗಾಗಿ ಆಲ್ವಿನ್ ಅಂದ್ರಾದೆ ಮತ್ತು ಸಹಕಲಾವಿದರು ಸಾಸ್ತಾನ - ಪಾಂಡೇಶ್ವರ ಇಲ್ಲಿಯ ಕಲಾವಿದರಿಂದ ತಿಳಿ ಹಾಸ್ಯ ಪ್ರದರ್ಶನ ನಡೆಯಲಿದೆ. ಜೊತೆಗೆ ಟೀಂ ಕುಂದಾಪುರಿಯನ್ಸ್ ಪ್ರಸ್ತುತ ಪಡಿಸಲಿರುವ ಅರಿವು ಎಂಬ ಕಿರು ಪ್ರಹಸನ ಕುಂದಾಪುರ ಹಬ್ಬದಲ್ಲಿ ಪ್ರದರ್ಶನಗೊಳ್ಳಲಿದೆ.  ಕುಂದಾಪುರದ ಒಂದಿಷ್ಟು ದೇಶೀಯ ಸಾಹಿತ್ಯವನ್ನೊಳಗೊಂಡ ಸ್ವರ ಕುಂದಾಪುರ ಕಾಡುವ ಹಾಡುಗಳ ಕಲರವ ಸಂಗೀತದ ಇಂಪು ನೀಡಲಿದೆ. ಭಾಷೆಯ ಬಹು ಆಯಾಮದ ಮಾತಿನ ಮಂಟಪದಲ್ಲಿ ರೇಖಾ ವಿ. ಬನ್ನಾಡಿ, ಉಪೇಂದ್ರ ಶೆಟ್ಟಿ, ಹೆಚ್. ದುಂಡಿರಾಜ್ ನುಡಿ ಚಾವಡಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಿರುತೆರೆ ಖ್ಯಾತಿಯ ಶ್ರಾವ್ಯ ಮರವಂತೆ, ಸಮೃದ್ದಿ ಕುಂದಾಪುರ, ಪ್ರೀತಮ್ ಇವರಿಂದ ಚಿತ್ರಪಟ ರಾಮಾಯಣ ಕಾರ್ಯಕ್ರಮ ನಡೆಯಲಿದೆ. ಖ್ಯಾತ ಮಾತುಗಾರ ಮನು ಹಂದಾಡಿಯವರಿಂದ ಲಘದಾಟಿಯ ಬಿಗುಭಾಷಣ ಹೆಸರಿನ ಹಾಸ್ಯದ ಮಾತುಗಳು ಮೇಳೈಸಲಿವೆ. 

ಕರಾವಳಿಯ ಗಂಡುಕಲೆ ಯಕ್ಷಗಾನ. ಯಕ್ಷಗಾನ ಇಲ್ಲದೇ ಹೋದರೆ ಕರಾವಳಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅಪೂರ್ಣ. ಕುಂದಾಪುರ ಕನ್ನಡ ಹಬ್ಬದಲ್ಲಿ ಎರಡು ಪ್ರಸಂಗಗಳು ಪ್ರದರ್ಶನಗೊಳ್ಳಲಿದ್ದು ಕಲಾಕದಂಬ ಆರ್ಟ್ ಇವರಿಂದ ವೀರ ಬರ್ಬರಿಕ ಹಾಗೂ ಪ್ರಸಿದ್ಧ ಕಲಾವಿದರಿಂದ ಬೇಡರ ಕಣಪ್ಪ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ ಬಿಡುವನೇ ಬ್ರಹ್ಮಲಿಂಗ?! ಕಾರಣಿಕ ಕ್ಷೇತ್ರದ ಪುಣ್ಯಕಥಾನಕದ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.

ಸಾವಿರಾರು ಜನ ಸೇರುವ ನಿರೀಕ್ಷೆ! ಮೆಟ್ರೋ ಬಳಸುವಂತೆ ಆಯೋಜಕರ ಮನವಿ
ಈಗಾಗಲೇ ಆಟೋಟಗಳಿಗಾಗಿ ಆನ್ಲೈನ್ ರಿಜಿಸ್ಟ್ರೇಷನ್ ವ್ಯವಸ್ಥೆ ಮಾಡಲಾಗಿದ್ದು ಸಾಕಷ್ಟು ಜನ ಈಗಾಗಲೇ ರಿಜಿಸ್ಟ್ರಾರ್ ಮಾಡಿಕೊಂಡಿದ್ದಾರೆ. ಹಾಗಾಗಿ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವ ನಿರೀಕ್ಷೆಯಿದ್ದು ಪಾರ್ಕಿಂಗ್ ಗಾಗಿ ಈಗಾಗಲೇ ಸ್ಥಳ ನಿಗದಿಪಡಿಸಲಾಗಿದೆ. ಇದರ ಹೊರತಾಗಿಯೂ ಮೆಟ್ರೋ ಸೇವೆ ಸಮೀಪದಲ್ಲೇ ಇರುವುದರಿಂದ ಎಲ್ಲರೂ ಮೆಟ್ರೋ ಸೇವೆಯನ್ನೇ ಬಳಸಬೇಕಾಗಿ ಆಯೋಜಕರು ಮನವಿ ಮಾಡಿಕೊಂಡರು. ದೇಶವಿದೇಶಗಳಲ್ಲಿ ನೆಲೆಸಿರುವ ಕುಂದಗನ್ನಡಿಗರಿಗಾಗಿ ಯೂಟ್ಯೂಬ್ ಲೈವ್ ವ್ಯವಸ್ಥೆಯೂ ಇರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

click me!