ಗುಬ್ಬಿ: ಅವಧಿ ಮೀರಿದ ತಿಂಡಿ ತಿಂದ 20ಕ್ಕೂ ಹೆಚ್ಚು ಕುರಿಗಳ ಸಾವು

By Kannadaprabha NewsFirst Published Feb 10, 2020, 10:52 AM IST
Highlights

ತಿಂಡಿ ಪದಾರ್ಥ ಸೇವಿಸಿ 20ಕ್ಕೂ ಹೆಚ್ಚು ಕುರಿ ಸಾವು| ಚಿತ್ರದುರ್ಗ ಜಿಲ್ಲೆಯ ಕಕ್ಕೇನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ| ರಸ್ತೆಯ ಬದಿಯಲ್ಲಿ ಬೀಸಾಡಿದ್ದ ಪದಾರ್ಥಗಳು| ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೇ ಸಾವು|

ಗುಬ್ಬಿ(ಫೆ.10): ಅವಧಿ ಮೀರಿದ ತಿಂಡಿ ಪದಾರ್ಥಗಳನ್ನು ಸೇವಿಸಿ 20ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ತಾಲೂಕಿನ ಕಕ್ಕೇನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.

ಜಿಲ್ಲೆಯ ಹೊಸಹಳ್ಳಿ ಅರಣ್ಯ ಜಾಗದಲ್ಲಿ ಕಕ್ಕೇನಹಳ್ಳಿ ಗ್ರಾಮದ ರೈತರು ಎಂದಿನಂತೆ ಕುರಿಗಳು ಮೇಯಿಸಲು ಹೋದ ಸಂದರ್ಭದಲ್ಲಿ ಖಾಸಗಿ ಕಂಪನಿಗೆ ಸೇರಿದ ಅವಧಿ ಮುಗಿದ ತಿಂಡಿ ಪದಾರ್ಥಗಳು ರಸ್ತೆ ಬದಿಯಲ್ಲಿ ಬಿದ್ದಿದ್ದ ರಾಶಿಯನ್ನು ಸೇವಿಸಿದ ಕುರಿಗಳು ಸಂಜೆಯ ವೇಳೆಗೆ ಮನೆಗೆ ಮರಳಿದ ಬಳಿಕ ಅಸ್ವಸ್ತಗೊಂಡಿದ್ದವು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಂತರ ಪಶುವೈದ್ಯರಿಂದ ಪ್ರಾಥಮಿಕ ಚಿಕಿತ್ಸೆ ನೀಡಿದರಾದರೂ ಪ್ರಯೋಜನವಾಗಿಲ್ಲ. ಮುಂಜಾನೆ ವೇಳೆಗೆ 20 ಕುರಿಗಳು ಸಾವನ್ನಪ್ಪಿದವು. ಉಳಿದ ಕುರಿಗಳು ತೀವ್ರ ಅಸ್ವಸ್ತಗೊಂಡಿದ್ದವು. ರಸ್ತೆ ಬದಿ ಬಿಸಾಡಿದ್ದ ತಿಂಡಿ ಪದಾರ್ಥಗಳ ಪೊಟ್ಟಣಗಳ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದರು.

ವಿಷಯ ತಿಳಿದ ಕಸಬಾ ಕಂದಾಯ ನಿರೀಕ್ಷಕ ರಮೇಶ್‌ ಖಾಸಗಿ ಕಂಪನಿಗೆ ಸೇರಿದ ತಿಂಡಿ ತಿನಸಿನ ಪೊಟ್ಟಣಗಳು ಇಲ್ಲಿಗೆ ಬಂದ ಬಗ್ಗೆ ಪರಿಶೀಲಿಸಿದರು. ವಿವಿಧ ರೀತಿಯ ಬಿಸ್ಕೆಟ್ಸ್‌, ಬಾದಾಮಿ, ಬೋಟಿ, ಪಾನೀಯಗಳು, ಲೇಸ್‌ ಸೇರಿದಂತೆ ವಿವಿಧ ತಿಂಡಿಯ ರಾಶಿಯು ಅವಧಿ ಮುಗಿದಿದ್ದು ಕಂಡುಬಂತು. ತಕ್ಷಣ ಸಾವಿನ ಅಂಚಿನಲ್ಲಿರುವ ಕುರಿಗಳಿಗೆ ಚಿಕಿತ್ಸೆಗಳನ್ನು ಕೊಡಿಸಲಾಯಿತು. ಕಕ್ಕೇನಹಳ್ಳಿ ಗ್ರಾಮದ ಬಸವರಾಜ್‌, ರಂಗಪ್ಪ, ಶಾಂತಮ್ಮ, ಬಾಲಕೃಷ್ಣ, ಸದಾಶಿವ ಎಂಬುವವರಿಗೆ ಸೇರಿದ ಕೆಲವು ಕುರಿಗಳು ಚೇತರಿಕೆ ಕಂಡರೆ ಇನ್ನು ಕೆಲವು ಕುರಿಗಳು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದವು.

ನಮ್ಮ ಬದುಕಿನ ಆಧಾರವಾಗಿದ್ದ ಕುರಿಗಳು:

ಸಂತ್ರಸ್ತ ರೈತ ಬಸವರಾಜ್‌ ಮಾತನಾಡಿ, ರುಚಿಯಾದ ತಿಂಡಿ ತಿನಿಸುಗಳು ಕಂಡು ಕುರಿಗಳು ಹೊಟ್ಟೆತುಂಬಿಸಿಕೊಂಡು ಸಂಜೆ ವೇಳೆಗೆ ಅಸ್ವಸ್ತಗೊಂಡಿದೆ. ನಮ್ಮ ಗಮನಕ್ಕೆ ಬರುವ ಮುನ್ನ ಈ ಕೃತ್ಯ ನಡೆದಿತ್ತು. ಪ್ರಾಥಮಿಕ ಚಿಕಿತ್ಸೆ ಫಲಕಾರಿಯಾಗಿಲ್ಲ. ನಮ್ಮ ಬದುಕಿಗೆ ಆಧಾರವಾದ ಕುರಿಗಳು ಸಾವನ್ನಪ್ಪಿರುವುದು ಸಾವಿರಾರು ರು. ನಷ್ಟಉಂಟಾಗಿದೆ. ನಮ್ಮ ನೋವು ಆಲಿಸುವವರಿಲ್ಲ. ಅವಧಿ ಮೀರಿದ ತಿಂಡಿಗಳನ್ನು ಅರಣ್ಯ ಪ್ರದೇಶಕ್ಕೆ ತಂದು ಎಸೆದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕುರಿಗಳ ಸಾವಿಗೆ ಪರಿಹಾರ ನೀಡಬೇಕು ಎಂದು ತಮ್ಮ ಅಳಲು ತೋಡಿಕೊಂಡರು.

ಇದೇ ಸಂದರ್ಭದಲ್ಲಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಘಟನಾ ಸ್ಥಳಕ್ಕೆ ಭೇಟಿ ನೀಡಿ ನೊಂದ ರೈತ ಕುಟುಂಬಕ್ಕೆ ಸಾಂತ್ವಾನ ಹೇಳಿ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

click me!