ನೆರೆ ಸಂತ್ರಸ್ತರ ಪರಿಹಾರ ಸಾಮಗ್ರಿ ಕಂಡವರ ಪಾಲು!ದಾನಿಗಳು ಕೊಟ್ಟಿದ್ದು ವ್ಯರ್ಥ

By Kannadaprabha NewsFirst Published Feb 10, 2020, 10:12 AM IST
Highlights

ದಾನಿಗಳು ಕೊಟ್ಟ ದವಸ-ಧಾನ್ಯ ಸಂತ್ರಸ್ತರಿಗೆ ತಲುಪಿಸುವಲ್ಲಿ ಧಾರವಾಡ ಜಿಲ್ಲಾಡಳಿತ ವಿಫಲ| ನೆರೆ ಸಂತ್ರಸ್ತರ ಬದಲು ನೌಕರರ ಮನೆಗೆ ಹೋದ ಅಪಾರ ಪ್ರಮಾಣದ ಸಾಮಗ್ರಿ| ನಾಲ್ಕು ತಿಂಗಳು ಕಾಲ ಕೂಡಿಟ್ಟ ಅಕ್ಕಿ ಪಾಕೀಟು ಈಗ ಹಾಸ್ಟೇಲ್‌ಗಳಿಗೆ ವಿತರಣೆ| ಬ್ರಾಂಡೆಡ್‌ ಅಕ್ಕಿ ಹೊತ್ತೊಯ್ದ ನೌಕರರು, ಕಳಪೆ ಅಕ್ಕಿ ಹಾಸ್ಟೆಲ್‌ಗಳಿಗೆ ಪೂರೈಕೆ|

ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ(ಫೆ.10): ಉಕ್ಕಿ ಹರಿದ ನೆರೆಗೆ ಬದುಕು ಕಳೆದುಕೊಂಡು ಸೂರು, ಅನ್ನ, ಬಟ್ಟೆ, ಹೊದಿಕೆ ಇಲ್ಲದೇ ಅತಂತ್ರರಾಗಿದ್ದ ನೆರೆ ಸಂತ್ರಸ್ತರಿಗೆ ನೆರವಾಗಲೆಂದು ರಾಜ್ಯದ ದಾನಿಗಳು ನೀಡಿದ್ದ ಅಪಾರ ಪ್ರಮಾಣದ ಸಾಮಗ್ರಿಗಳು ಧಾರವಾಡ ಜಿಲ್ಲೆಯಲ್ಲಿ ಸಂತ್ರಸ್ತರ ಕೈ ಸೇರದೇ ಕಂಡವರ ಪಾಲಾಗಿವೆ!

ಕಳೆದ ಆಗಸ್ಟ್ 5 ರಿಂದ 11ರ ವರೆಗೆ ಮತ್ತು ಅಕ್ಟೋಬರ್‌ 20 ರಿಂದ 26ರ ವರೆಗೆ ರಾಜ್ಯದ ಇತಿಹಾಸದಲ್ಲಿಯೇ ಕಂಡರಿಯದ ನೆರೆ ಉಕ್ಕೇರಿತ್ತು. ಅದರಿಂದ ಲಕ್ಷಗಟ್ಟಲೇ ಜನ ಸರಿಸುಮಾರು ತಿಂಗಳುಗಳ ಕಾಲ ಸಂತ್ರಸ್ತರಾಗಿ ಬೀದಿ ಬದಿಯ ಟೆಂಟ್‌, ಸರ್ಕಾರಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಬದುಕು ಕಳೆದುಕೊಂಡ ಈ ನೆರೆ ಸಂತ್ರಸ್ತರ ನೋವಿಗೆ ಸ್ಪಂದಿಸಿದ ಜನತೆ ತಮ್ಮ ಶಕ್ತ್ಯಾನುಸಾರ ಬಟ್ಟೆ, ಹಾಸಿಗೆ, ಧಾನ್ಯ, ಅಡುಗೆ ಸಾಮಗ್ರಿ, ಬಿಸ್ಕತ್‌, ಔಷಧಿ ಸೇರಿದಂತೆ ವಿವಿದ ಬಗೆಯ ಪರಿಹಾರ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದರು.

ಹೀಗೆ ಹರಿದು ಬಂದ ಅಪಾರ ಪ್ರಮಾಣದ ಪರಿಹಾರ ಸಾಮಗ್ರಿಗಳನ್ನು ಸರಿಯಾಗಿ ಸಂಗ್ರಹಿಸಿ, ವಿಂಗಡಿಸಿ ಕಿಟ್‌ ತಯಾರಿಸಿ ಅರ್ಹ ಸಂಗ್ರಸ್ತರಿಗೆ ವಿತರಿಸುವುದಾಗಿ ಹೇಳಿದ್ದ ಜಿಲ್ಲಾಡಳಿತ ಇದೀಗ ನಾಲ್ಕು ತಿಂಗಳ ಬಳಿಕ ಹಾಸ್ಟೆಲ್‌ಗಳಿಗೆ ಅವುಗಳನ್ನು ಸಾಗಿಸಿ ಕೈ ತೊಳೆದುಕೊಳ್ಳುವ ಮೂಲಕ ನೆರೆ ಸಂತ್ರಸ್ತರ ನೋವಿಗೆ ಬೆನ್ನು ತೋರಿದೆ.

ಹಾಸ್ಟೆಲ್‌ಗೆ 32 ಕ್ವಿಂಟಲ್‌ ಅಕ್ಕಿ:

ಪ್ರವಾಹದ ವೇಳೆ ಧಾರವಾಡದ ಅಕ್ಕನ ಬಳಗದ ಹಾಲ್‌ನಲ್ಲಿ ದಾನಿಗಳ ನೆರವಿನ ಈ ಸಾಮಗ್ರಿಗಳನ್ನು ಸಂಗ್ರಹಿಸಲಾಗುತ್ತಿತ್ತು ಮತ್ತು ಅಲ್ಲಿಂದಲೇ ಬೇರೆ ಬೇರೆ ಪರಿಹಾರ ಕೇಂದ್ರ, ಹಳ್ಳಿಹಳಿಗೆ ಕಳುಹಿಸಿ ಸಂತ್ರಸ್ತರಿಗೆ ವಿತರಿಸಲಾಗುತ್ತಿತ್ತು. ಆ ಎಲ್ಲವನ್ನೂ ಸಂತ್ರಸ್ತರಿಗೆ ವಿತರಿಸುವ ಮೂಲಕ ಧಾರವಾಡ ಜಿಲ್ಲಾಡಳಿತ ದಾನಿಗಳ ವಿಶ್ವಾಸ ಉಳಿಸಿಕೊಂಡಿದೆ ಎಂದು ಎಲ್ಲರೂ ನಂಬಿದ್ದರು. ಆದರೆ, ಹುಬ್ಬಳ್ಳಿ ಟೌನ್‌ ಹಾಲ್‌ನಲ್ಲಿ ಕಳೆದ ನಾಲ್ಕು ತಿಂಗಳಿಂದ ಅಪಾರ ಪ್ರಮಾಣದ ಅಕ್ಕಿ ದಾಸ್ತಾನಾಗಿರುವುದು ಇದೀಗ ಬೆಳಕಿಗೆ ಬಂದಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶುಕ್ರವಾರ (7.2.20) ಮಹಾನಗರ ಪಾಲಿಕೆಯ ವಲಯ ಅಧಿಕಾರಿ ರಾಜೇಂದ್ರ ಕೊಕ್ಕಲಾಕಿ ಅವರ ನೇತೃತ್ವದಲ್ಲಿ ಸಿದ್ಧಾರೂಢ ಮಠದ ಆವರಣದಲ್ಲಿನ ಸರ್ಕಾರಿ ಕಿವುಡ ಮೂಗರ ಶಾಲೆಯ ಹಾಸ್ಟೆಲ್‌ಗೆ 75 ಪಾಕೇಟ್‌ ಅಕ್ಕಿ (16.40 ಕ್ವಿಂಟಲ್‌) ಮತ್ತು ಹುಬ್ಬಳ್ಳಿ ಎಪಿಎಂ ಆವರಣದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಹಾಸ್ಟೆಲ್‌ಗೆ 75 ಪಾಕೀಟ್‌ ಅಕ್ಕಿ (16.50 ಕ್ವಿಂಟಲ್‌) ವಿತರಿಸಲಾಯಿತು. ಇಲ್ಲಿ ಸಂಗ್ರಹವಾಗಿದ್ದು ಇದಿಷ್ಟೆಯೇ ಅಥವಾ ಇನ್ನೂ ಇದೆಯೆ ?

ಹೀಗೆ ಸಂಗ್ರಹಿಸಿದ್ದ ಈ ನೆರವಿನ ಅಕ್ಕಿಯನ್ನು ನಾಲ್ಕು ತಿಂಗಳುಗಳ ಕಾಲ ಕಾವಲು ಮಾಡಲಾಗಿದೆ. ಆದರೆ ಇಲ್ಲಿ ಇದನ್ನು ಯಾಕೆ ಸಂಗ್ರಹ ಮಾಡಲಾಗಿತ್ತು ಮತ್ತು ಎಷ್ಟುಅಕ್ಕಿ ಮತ್ತು ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು ? ಆಯಾ ಸಂದರ್ಭದಲ್ಲಿಯೇ ನೆರೆ ಸಂತ್ರಸ್ತರಿಗೆ ಇದನ್ನೆಲ್ಲ ಏಕೆ ವಿತರಿಸಲಿಲ್ಲ? ಸಂತ್ರಸ್ತರು ಈ ಅಕ್ಕಿ ತಿರಸ್ಕರಿಸಿದ್ದರೆ ? ಇತ್ಯಾದಿ ಪ್ರಶ್ನೆಗಳಿಗೆ ಜಿಲ್ಲೆಯ ಯಾವುದೇ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗುತ್ತಿಲ್ಲ.

ಧಾರವಾಡ ಜಿಲ್ಲಾ ಆಹಾರ ಮತ್ತು ನಾಗರೀಕ ಪೂರೈಕೆ ಹಿರಿಯ ಉಪನಿರ್ದೇಶಕ ಸದಾಶಿವ ಮರ್ಜಿ ಮಾತ್ರ ‘ಆಗಲೇ ನಾವು ದಾನಿಗಳು ನೀಡಿದ ಎಲ್ಲ ಪರಿಹಾರ ಸಾಮಗ್ರಿಗಳನ್ನು ಸೇರಿಸಿ ಕಿಟ್‌ ಮಾಡಿ ಕಂದಾಯ ಇಲಾಖೆಗೆ ಒಪ್ಪಿಸಿದ್ದೇವೆ. ಆಯಾ ತಹಸೀಲ್ದಾರರು ತಮ್ಮಲ್ಲಿನ ನೆರೆ ಸಂತ್ರಸ್ತರಿಗೆ ಅವನ್ನೆಲ್ಲ ವಿತರಿಸಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಹೀಗೆ 32 ಕ್ವಿಂಟಲ್‌ ಅಕ್ಕಿಯನ್ನು ಈ ವರೆಗೆ ಉಳಿಸಿಕೊಂಡು ಏಕಕಾಲಕ್ಕೆ ಹಾಸ್ಟೆಲ್‌ಗೆ ನೀಡಿದ್ದು ಏಕೆ ? ಎನ್ನುವ ಪ್ರಶ್ನೆಗೆ ಅವರಿಂದಲೂ ಉತ್ತರವಿಲ್ಲ. ಮತ್ತು ಅದು ತಮಗೆ ಸಂಬಂಧಿಸಿದ್ದಲ್ಲ ಎನ್ನುವುದು ಅವರ ನಿಲುವು.

ಬ್ರಾಂಡೆಡ್‌ ಅಕ್ಕಿ ಹೊತ್ತೊಯ್ದರು:

ಟೌನ್‌ ಹಾಲ್‌ನಲ್ಲಿ ಸಂಗ್ರಹಿಸಿದ್ದ ಅಕ್ಕಿಯನ್ನು ಹಾಸ್ಟೆಲ್‌ಗಳಿಗೆ ಪೂರೈಸಲಾಗುತ್ತದೆ ಎನ್ನುವ ಸುದ್ದಿ ಗೊತ್ತಾಗುತ್ತಿದ್ದಂತೆ ಅಲ್ಲಿನ ಬ್ರಾಂಡೆಡ್‌ ಅಕ್ಕ ಪಾಕೀಟುಗಳು ಮಟಾಮಾಯ! ಸ್ವಸ್ಥಿಕ್‌, ಮಲೇಬೆನ್ನೂರು, ಬಸವೇಶ್ವರ, ನಂದಿ ಬ್ರಾಂಡ್‌ನ ಸೋನಾ ಮಸೂರಿ, ಜೀರಾ ಸೇರಿದಂತೆ ಗುಣಮಟ್ಟದ ಅಕ್ಕಿಯ ಪಾಕೀಟುಗಳು ಅಲ್ಲಿದ್ದವು. ವಾಹನ ಟೌನ್‌ ಹಾಲ್‌ಗೆ ಬರುವ ಹೊತ್ತಿಗೆ ಅವೆಲ್ಲ ಮಾಯವಾಗಿ, ಕಳಪೆ ದರ್ಜೆಯ, ಹುಳು ಹಿಡಿದ 150 ಪಾಕೀಟುಗಳು ಮಾತ್ರ ಉಳಿದಿದ್ದವು. ಅವನ್ನು ಎರಡು ಹಾಸ್ಟೆಲ್‌ಗಳಿಗೆ ಸಾಗಿಸಲಾಯಿತು ಎಂದು ಹೆಸರು ಹೇಳಲಿಚ್ಚಿದ ನೌಕರರೊಬ್ಬರು ಈ ಹಗರಣ ಬಿಚ್ಚಿಟ್ಟಿದ್ದಾರೆ.

ಅದರಂತೆ ದಾನಿಗಳು ನೀಡಿದ್ದ ಕುಕ್ಕರ್‌, ಗ್ಯಾಸ್‌ ಸ್ಟೌ, ಅಡುಗೆ ಸಾಮಗ್ರಿ, ಬ್ರಾಂಡೆಡ್‌ ಬಟ್ಟೆ, ಗುಣಮಟ್ಟದ ಹೊದಿಕೆಗಳು, ಹಾಲಿನ ಪುಡಿ, ಸಕ್ಕರೆ, ಚಹಾ ಪುಡಿ, ಟೂತ್‌ ಪೇಸ್ಟ್‌, ಅಡುಗೆ ಎಣ್ಣೆ, ಸಾಬೂನು ಕೂಡ ಹೀಗೆಯೇ ನೆರೆ ಸಂತ್ರಸ್ತರ ಬದಲು ಯಾರಾರ‍ಯರದೋ ಮನೆ ಸೇರಿವೆ ಎನ್ನುವ ಆರೋಪವೂ ದಟ್ಟವಾಗಿದೆ. ಸಮಗ್ರ ತನಿಖೆಯಾದರೆ ದೊಡ್ಡ ಮತ್ತು ಅತ್ಯಂತ ಅಮಾನವೀಯ ಹಗರಣವೊಂದು ಹೊರಬೀಳಲಿದೆ.

ಆದರೆ, ಜಿಲ್ಲಾಧಿಕಾರಿ ದೀಪಾ ಚೋಳನ್‌ ಈ ನೆರೆ ಪರಿಹಾರ ಸಾಮಗ್ರಿ ಹಗರಣ ಕುರಿತು ತನಿಖೆ ಮಾಡಿಸುತ್ತಾರಾ ? ಕಾದು ನೋಡಬೇಕಿದೆ.

ದಾನಿಗಳು ನೀಡಿದ ಪರಿಹಾರ ಸಾಮಗ್ರಿಗಳನ್ನು ಧಾರವಾಡ ಅಕ್ಕನ ಬಳಗದ ಹಾಲ್‌ನಲ್ಲಿ ಸಂಗ್ರಹಿಸಿದ್ದೆವು. ಅವುಗಳನ್ನು ವಿಂಗಡಿಸಿ ಕಿಟ್‌ ಮಾಡಿ ಕಂದಾಯ ಇಲಾಖೆಗೆ ಒಪ್ಪಿಸಿದ್ದೇವೆ. ಆಯಾ ತಹಸೀಲ್ದಾರರು ತಮ್ಮಲ್ಲಿನ ನೆರೆ ಸಂತ್ರಸ್ತರಿಗೆ ಅವನ್ನೆಲ್ಲ ವಿತರಿಸಿದ್ದಾರೆ ಎಂದು ಧಾರವಾಡ ಜಿಲ್ಲಾ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಹಿರಿಯ ಉಪನಿರ್ದೇಶಕ ಸದಾಶಿವ ಮರ್ಜಿ ಅವರು ಹೇಳಿದ್ದಾರೆ. 

ಹಿರಿಯ ಅಧಿಕಾರಿಗಳ ನಿರ್ದೇಶನದಂತೆ 150 ಪಾಕೀಟ್‌ (32 ಕ್ವಿಂಟಲ್‌) ಅಕ್ಕಿಯನ್ನು ಎರಡು ಹಾಸ್ಟೆಲ್‌ಗಳಿಗೆ ವಿತರಿಸಿದ್ದೇವೆ. 8ರ ವಲಯಾಧಿಕಾರಿ ಗಣಾಚಾರಿ ಅವರು ನಮಗೆ ಸಹಯೋಗ ನೀಡಿದ್ದರು. ಹೆಚ್ಚಿನ ಮಾಹಿತಿ ಇಲ್ಲ, ಆದೇಶ ಪಾಲಿಸಿದ್ದೇವೆ ಅಷ್ಟೇ ಎಂದು ಮಹಾನಗರ ಪಾಲಿಕೆ 5ರ ವಲಯಧಿಕಾರಿ ರಾಜೇಂದ್ರ ಕೊಕ್ಕಲಾಕಿ ತಿಳಿಸಿದ್ದಾರೆ. 

click me!