ಬ್ಯಾಂಕ್‌ ಖಾತೆ ಇದ್ದರಷ್ಟೇ ಅಕ್ಕಿ ಹಣ ಗ್ಯಾರಂಟಿ..!

By Kannadaprabha News  |  First Published Jul 16, 2023, 8:26 PM IST

ಖಾತೆ ಇದ್ದರೂ ಆಧಾರ ಕಾರ್ಡ್‌ ಜೋಡಣೆ, ಇ-ಕೆವೈಸಿ ಸೇರಿದಂತೆ ಇತರೆ ಕಾರಣಗಳಿಂದ ನಗದು ಭಾಗ್ಯದಿಂದ ವಂಚಿತವಾಗುವ ಪರಿಸ್ಥಿತಿ


ಶ್ರೀಶೈಲ ಮಠದ

ಬೆಳಗಾವಿ(ಜು.16): ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರಿಗೆ ತಲಾ 5 ಕೆಜಿಯಂತೆ ಅಕ್ಕಿ ಬದಲು .170 ನಗದು ನೇರವಾಗಿ ಖಾತೆಗೆ ಜಮೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದರೆ, ಸಾವಿರಾರು ಪಡಿತರ ಚೀಟಿದಾರರ ಬ್ಯಾಂಕ್‌ ಖಾತೆಗಳೇ ಲಭ್ಯವಾಗುತ್ತಿಲ್ಲ. ಖಾತೆ ಇದ್ದರೂ ಆಧಾರ ಕಾರ್ಡ್‌ ಜೋಡಣೆ, ಇ-ಕೆವೈಸಿ ಸೇರಿದಂತೆ ಇತರೆ ಕಾರಣಗಳಿಂದ ನಗದು ಭಾಗ್ಯದಿಂದ ವಂಚಿತವಾಗುವ ಪರಿಸ್ಥಿತಿ ಎದುರಾಗಿದೆ.

Latest Videos

undefined

37,72,315 ಫಲಾನುಭವಿಗಳು:

ಜಿಲ್ಲೆಯಲ್ಲಿ ಒಟ್ಟು 3,20,500 ಪಡಿತರ ಚೀಟಿ ಹೊಂದಿರುವ ಮುಖ್ಯಸ್ಥರ ಬ್ಯಾಂಕ್‌ ಖಾತೆ ಲಭ್ಯವಾಗುತ್ತಿಲ್ಲ. ಹೀಗಾಗಿ ಇವರು ಇರುವ ಖಾತೆಯನ್ನು ಸಕ್ರಿಯಗೊಳಿಸಬೇಕು. ಇಲ್ಲ ಆಧಾರ್‌ ಕಾರ್ಡ್‌ ಜೋಡಿಸಬೇಕು. ಇಲ್ಲವಾದರೆ ಹೊಸ ಖಾತೆಯನ್ನೇ ತೆರೆಯಬೇಕು. ಬ್ಯಾಂಕ್‌ ಖಾತೆಯನ್ನು ಎಷ್ಟುಬೇಗ ಸಕ್ರಿಯಗೊಳಿಸುತ್ತಾರೋ ಅಷ್ಟುಬೇಗ ರಾಜ್ಯ ಸರ್ಕಾರದ ಧನಭಾಗ್ಯ ಲಭಿಸಲಿದೆ.

ಅನ್ನಭಾಗ್ಯ ಯೋಜನೆಗೆ ಮತ್ತೆರಡು ಷರತ್ತುಗಳು ಅನ್ವಯ: ನೀವು ಹಣ ಪಡೆಯಲು ಅರ್ಹರೇ..

ಜಿಲ್ಲೆಯಲ್ಲಿ 68,636 ಅಂತ್ಯೋದಯ, 10,80,880 ಪಿಎಚ್‌ಎಚ್‌ (ಬಿಪಿಎಲ್‌) ಹಾಗೂ 3,21,237 ಎನ್‌ಪಿಎಚ್‌ಎಚ್‌ (ಎಪಿಎಲ್‌) ಸೇರಿ ಒಟ್ಟು 14,70,753 ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. ಅನ್ನಭಾಗ್ಯ ಯೋಜನೆಯಡಿ ಒಟ್ಟು 37,72,315 ಫಲಾನುಭವಿಗಳು ಉಚಿತವಾಗಿ ಇದರ ಸದುಪಯೋಗ ಪಡೆಯಲಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿರುವ 11,49,501 ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿಗಳು ಚಾಲ್ತಿಯಲ್ಲಿದೆ. ಈ ಪೈಕಿ ಎನ್‌ಐಸಿಯಿಂದ 8,29,001 ಪಡಿತರ ಚೀಟಿಗಳ ಕುಟುಂಬದ ಮುಖ್ಯಸ್ಥರ ಬ್ಯಾಂಕ್‌ ಖಾತೆಗೆ ಡಿಬಿಟಿ ಮೂಲಕ .46,54,18520 ಹಣ ವರ್ಗಾವಣೆ ಮಾಡಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಬ್ಯಾಂಕ್‌ ಖಾತೆ ಲಭ್ಯವಿಲ್ಲದ ಕುಟುಂಬಗಳ ಪಡಿತರ ಚೀಟಿದಾರರನ್ನು ಬಿಟ್ಟು ಉಳಿದ ಎಲ್ಲ ಪಡಿತರದಾರರ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗುತ್ತದೆ.

ಸದ್ಯ ಅರ್ಹರಿರುವ ಅಂತ್ಯೋದಯ ಹಾಗೂ ಆದ್ಯತಾ ಪಡಿತರ ಚೀಟಿದಾರರ ಮುಖ್ಯಸ್ಥರ ಹೆಸರಿನ ಜತೆ ಕುಟುಂಬ ಸದಸ್ಯರು ಸೇರಿ ಒಟ್ಟು ಎಷ್ಟುಹಣ ಖಾತೆಗೆ ಜಮೆ ಆಗಲಿದೆ ಎಂಬ ಮಾಹಿತಿ ಆಹಾರ ಇಲಾಖೆ ವೆಬ್‌ಸೈಟ್‌ನಲ್ಲಿ ಲಭ್ಯವಾಗುತ್ತಿದೆ. ಒಂದು ವೇಳೆ ಇದನ್ನು ತೋರಿಸದಿದ್ದರೇ ಅವರ ಬ್ಯಾಂಕ್‌ ಖಾತೆ ಲಿಂಕ್‌ ಆಗಿಲ್ಲ ಎಂದು ಅರ್ಥ. ಹಣ ಎಷ್ಟುಜಮೆಯಾಗಲಿದೆ ಎಂಬುವವರಿಗೆ ಇನ್ನು ಕೆಲವೇ ದಿನಗಳಲ್ಲಿ ಅವರ ಖಾತೆ ಹಣ ಜಮೆಯಾಗಲಿದೆ.

ಖಾತೆ ಇ-ಕೆವೈಸಿ ಮಾಡಿಕೊಳ್ಳಿ

ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲು ನಗದು ನೇರವಾಗಿ ಫಲಾನುಭವಿಗಳಿಗೆ ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ. ಈ ಸಂಬಂಧ ಕುಟುಂಬದ ಮುಖ್ಯಸ್ಥರು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್‌, ಇಲ್ಲವೇ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರಬೇಕು. ಈ ಉಳಿತಾಯ ಖಾತೆ ಇ ಕೆವೈಸಿ ಮಾಡಿಕೊಂಡಿರಬೇಕು. ಅಲ್ಲದೇ ಕಳೆದ 3 ತಿಂಗಳಿಂದ ಸತತವಾಗಿ ಬಯೋ ನೀಡಿ ಪಡಿತರ ಪಡೆದಿರಬೇಕು. ಅಂತಹ ಫಲಾನುಭವಿಗಳಿಗೆ ಮಾತ್ರ ಡಿಬಿಟಿ ಮೂಲಕ ಇಲಾಖೆಯಿಂದ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ. ಖಾತೆ ಲಿಂಕ್‌ ಆಗದವರ ಪಡಿತದಾರರ ಹೆಸರನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರದರ್ಶಿಸಲು ಸೂಚಿಸಲಿದೆ. ಅವರಿಗೆ ಬ್ಯಾಂಕ್‌ ಖಾತೆ ಮಾಡಿಸಲು ಅಥವಾ ಸಕ್ರಿಯಗೊಳಿಸಲು ಅಥವಾ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿಸಲು ಆಯಾ ಜಿಲ್ಲೆಯ ಆಹಾರ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ಎಲ್ಲ ನ್ಯಾಯಬೆಲೆ ಅಂಗಡಿಗಳು, ಆಹಾರ ಶಿರಸ್ತೇದಾರರು ಹಾಗೂ ಆಹಾರ ನಿರೀಕ್ಷಕರಿಗೆ ಸೂಚಿಸಲಾಗಿದೆ.

ಗ್ಯಾರಂಟಿಗಳು ಬಿಟ್ಟರೇ, ಯಾವುದೇ ಅಭಿವೃದ್ಧಿ ಕಾರ್ಯಗಳು ಬಜೆಟ್‌ನಲ್ಲಿ ಇರುವುದಿಲ್ಲ: ಆರ್‌.ಅಶೋಕ್‌

ಆಧಾರ್‌ ಸಂಖ್ಯೆಗೆ ಚಾಲ್ತಿಯಲ್ಲಿರುವ ಬ್ಯಾಂಕ್‌ ಖಾತೆಗೆ ಲಿಂಕ್‌ ಮಾಡದಿರುವುದು, ಪಡಿತರ ಚೀಟಿಯಲ್ಲಿ ಒಂದಕ್ಕಿಂತ ಹೆಚ್ಚು ಮುಖಸ್ಥರಿದ್ದಾಗ ಅಥವಾ ಮುಖ್ಯಸ್ಥರೇ ಇಲ್ಲದಿದ್ದಾಗ ಆಧಾರ್‌ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದಾಗ, ಬ್ಯಾಂಕ್‌ನಲ್ಲಿ ಇ-ಕೆವೈಸಿ ಕಾರ್ಯ ಪೂರ್ಣಗೊಳಿಸದಿರುವಾಗ ಹಾಗೂ ಕಳೆದ 3 ತಿಂಗಳಲ್ಲಿ ಒಂದು ತಿಂಗಳಾದರೂ ಪಡಿತರವನ್ನು ಪಡೆಯದೇ ಇರುವ ಪಡಿತರಚೀಟಿದಾರರು ನೇರ ನಗದು ಸೌಲಭ್ಯ ಪಡೆಯಲು ಸಾಧ್ಯವಿಲ್ಲ.

ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳಲ್ಲಿನ ಮುಖ್ಯಸ್ಥರು ಬ್ಯಾಂಕ್‌ ಖಾತೆಗಳನ್ನು ತೆರೆಯದೇ ಇರುವ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಆಗದೇ ಇರುವ ಮತ್ತು ಆಧಾರ್‌ ಸಂಖ್ಯೆ ತಪ್ಪಾಗಿ ಲಿಂಕ್‌ ಆಗಿರುವ ಪಡಿತರ ಚೀಟಿಗಳ ಫಲಾನುಭವಿಗಳಿಗೆ ನೇರ ನಗದು ವ್ಯವಸ್ಥೆ ಮೂಲಕ ಅನ್ನಭಾಗ್ಯ ಯೋಜನೆಯ ಹಣವನ್ನು ವರ್ಗಾಯಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಡಿತರ ಚೀಟಿಯಲ್ಲಿನ ಮುಖ್ಯಸ್ಥರು ಚಾಲ್ತಿಯಲ್ಲಿರುವ ಬ್ಯಾಂಕ್‌ ಖಾತೆಗಳನ್ನು ಕಡ್ಡಾಯವಾಗಿ ಹೊಂದಲು ಹಾಗೂ ಬ್ಯಾಂಕ್‌ ಖಾತೆಗಳನ್ನು ಹೊಂದಿರುವವರು ತಪ್ಪದೇ ಆಧಾರ್‌ ಲಿಂಕ್‌ ಮಾಡಿಸಿಕೊಳ್ಳಬೇಕು ಅಂತ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. 

click me!