ಲಂಬಾಣಿ ತಾಂಡಾದಲ್ಲಿನ ಮನೆಮನೆಗಳಿಗೆ ಸಾರಾಯಿ ಸರಬರಾಜು ಮಾಡಲಾಗುವುದು ಎಂಬ ರಾಜ್ಯದ ಅಬಕಾರಿ ಸಚಿವ ನಾಗೇಶ್ ಹೇಳಿಕೆ ಖಂಡಿಸಿ ಅಣಕು ಶವಯಾತ್ರೆ ನಡೆಸಲಾಗಿದೆ. ಶಿವಮೊಗ್ಗದ ಶಿಕಾರಿಪುರ ತಾಲೂಕು ಕಚೇರಿ ಮುಂದೆ ಪ್ರತಿಭಟನಾ ಸಭೆ ನಡೆಯಿತು. ಸಚಿವ ನಾಗೇಶ್ ಹೇಳಿಕೆ ಲಂಬಾಣಿ ಸಮುದಾಯವನ್ನುಅಧೋಗತಿಗೆ ತಳ್ಳುವ ಹುನ್ನಾರ ಎಂದು ಜಿಪಂ ಸದಸ್ಯ ಎಚ್.ಪಿ. ನರಸಿಂಗನಾಯ್ಕ ಹೇಳಿದ್ದಾರೆ.
ಶಿವಮೊಗ್ಗ(ಸೆ.14): ಲಂಬಾಣಿ ತಾಂಡಾದಲ್ಲಿನ ಮನೆಮನೆಗಳಿಗೆ ಸಾರಾಯಿ ಸರಬರಾಜು ಮಾಡಲಾಗುವುದು ಎಂಬ ರಾಜ್ಯದ ಅಬಕಾರಿ ಸಚಿವ ನಾಗೇಶ್ ಹೇಳಿಕೆ ಲಂಬಾಣಿ ಸಮುದಾಯವನ್ನು ವ್ಯವಸ್ಥಿತವಾಗಿ ಅಧೋಗತಿಗೆ ತಳ್ಳುವ ಹುನ್ನಾರವಾಗಿದೆ ಎಂದು ಜಿಪಂ ಸದಸ್ಯ ಎಚ್.ಪಿ. ನರಸಿಂಗನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಶಿಕಾರಿಪುರ ತಾಲೂಕು ಬಂಜಾರ ಸಮಾಜದ ವತಿಯಿಂದ ರಾಜ್ಯದ ಅಬಕಾರಿ ಸಚಿವ ನಾಗೇಶ್, ಲಂಬಾಣಿ ತಾಂಡಾದ ಮನೆಮನೆಗೆ ಮದ್ಯ ಸರಬರಾಜು ಮಾಡಲಾಗುವುದು ಎಂಬ ಹೇಳಿಕೆ ಖಂಡಿಸಿ ತಾಲೂಕು ಕಚೇರಿ ಮುಂಭಾಗ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಕೀಳು ಹೇಳಿಕೆ:
ಬುಡಕಟ್ಟು ಲಂಬಾಣಿ ಜನಾಂಗ ರಾಜ್ಯಾದ್ಯಂತ ಅತಿ ಹೆಚ್ಚು ಸಂಖ್ಯೆಯಲ್ಲಿದ್ದು, ಹಿಂದುಳಿದಿದ್ದ ಜನಾಂಗ ಕಳೆದ 2-3 ದಶಕದಿಂದ ಆರ್ಥಿಕ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದೆ. ಇಂದಿಗೂ ಜೀವನ ಪದ್ಧತಿಯಲ್ಲಿ ಅಜಗಜಾಂತರ ವ್ಯತ್ಯಾಸವಿದ್ದು, ಅತ್ಯಂತ ಗೌರವಯುತವಾಗಿ ಬದುಕುತ್ತಿರುವ ಸಮುದಾಯದ ಬಗ್ಗೆ ಉನ್ನತ ಸ್ಥಾನದಲ್ಲಿರುವ ರಾಜ್ಯದ ಅಬಕಾರಿ ಸಚಿವ ನಾಗೇಶ್ ಕೀಳು ಮಟ್ಟದ ಹೇಳಿಕೆಯನ್ನು ನೀಡಿರುವುದು ಸಮುದಾಯದ ಬಗೆಗಿನ ಅತ್ಯಂತ ನಿಕೃಷ್ಟಧೋರಣೆಯ ಪ್ರತೀಕವಾಗಿದೆ ಎಂದು ದೂರಿದರು.
ಯುವಸಮುದಾಯದ ಮೇಲೆ ನಕಾರಾತ್ಮಕ ಪ್ರಭಾವ:
ಸಮುದಾಯ ಎಚ್ಚರವಾಗಿದ್ದು ಹಲವರು ಉನ್ನತ ಶಿಕ್ಷಣದ ಮೂಲಕ ಉನ್ನತ ಹುದ್ದೆಯಲ್ಲಿದ್ದಾರೆ. ಇಂತಹ ಕೀಳುಮಟ್ಟದ ಹೇಳಿಕೆ ಯುವಪೀಳಿಗೆಯಲ್ಲಿ ನಕಾರಾತ್ಮಕ ಧೋರಣೆಗೆ ಕಾರಣವಾಗಲಿದೆ. ಸಮುದಾಯವನ್ನು ಅಭಿವೃದ್ಧಿ ಪಡಿಸುವ ದಿಸೆಯಲ್ಲಿ ಹೊಸ ಯೋಜನೆಯನ್ನು ರೂಪಿಸುವ ಕರ್ತವ್ಯ ಮರೆತು ಸಮುದಾಯವನ್ನು ಅವಹೇಳನಗೊಳಿಸುವ ಪ್ರಯತ್ನವನ್ನು ಸಮಾಜ ತೀವ್ರವಾಗಿ ಖಂಡಿಸಲಿದೆ ಎಂದು ತಿಳಿಸಿದರು.
ಬಿಎಸ್‌ವೈ ರಾಜೀನಾಮೆ ಕೊಡಲಿ: ತವರಲ್ಲೇ ಸಿಎಂ ವಿರುದ್ಧ ಆಕ್ರೋಶ
ತಾಲೂಕು ಬಂಜಾರ ಸಮಾಜದ ಪ್ರಧಾನ ಕಾರ್ಯದರ್ಶಿ ಚಂದ್ರಾನಾಯ್ಕ ಮಾತನಾಡಿ, ಸಚಿವರು ಕಳ್ಳಭಟ್ಟಿದಂಧೆಯ ಕಿಂಗ್ ಎಂಬುದನ್ನು ಎಲುಬಿಲ್ಲದ ನಾಲಗೆಯಿಂದ ಸಾಬೀತುಪಡಿಸಿದ್ದು, ಲಂಬಾಣಿ ಸಮುದಾಯದ ಬಗ್ಗೆ ಮಾತನಾಡುವಾಗ ಎಚ್ಚರವಹಿಸಿ ತಪ್ಪಿದಲ್ಲಿ ರಾಜ್ಯಾದ್ಯಂತ ಲಂಬಾಣಿ ಸಮುದಾಯ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಆರಂಭದಲ್ಲಿ ಬಸ್ ನಿಲ್ದಾಣದ ಮೂಲಕ ಸಚಿವ ನಾಗೇಶ್ ಅಣಕು ಶವಯಾತ್ರೆಯನ್ನು ನಡೆಸಿ ತಾಲೂಕು ಕಚೇರಿ ಮುಂಭಾಗ ದಹಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಮಂಜಾನಾಯ್ಕ, ದೇಸ್ಯಾನಾಯ್ಕ, ರಾಘವೇಂದ್ರ ನಾಯ್ಕ ಸಹಿತ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರವಾಸೋದ್ಯಮ ಅಭಿವೃದ್ಧಿಗೆ ಬಂಡವಾಳ ಹೂಡಿಕೆದಾರರ ಸಮಾವೇಶ