ಇರಿತಕ್ಕೊಳಗಾದವನನ್ನು 1 ಕಿ.ಮೀ. ಹೊತ್ತು ತಂದ ಸ್ನೇಹಿತ!

By Kannadaprabha NewsFirst Published Sep 14, 2019, 9:54 AM IST
Highlights

ಗಣೇಶ ಉತ್ಸವದ ವೇಳೆ ಇರಿತಕ್ಕೆ ಒಳಗಾದ ತನ್ನ ಗೆಳೆಯನನ್ನು ಚಿಕಿತ್ಸೆಗಾಗಿ ಒಂದು ಕಿ.ಮೀಗೂ ಹೆಚ್ಚು ದೂರ ಗೆಳೆಯ ಹೊತ್ತುಕೊಂಡು ಸಾಗಿದ್ದಾನೆ. ಆದರೆ ಆತ ಕೊನೆಯುಸಿರಳೆದಿದ್ದಾನೆ.

ಹುಬ್ಬಳ್ಳಿ [ಸೆ.14]:  ಗಣೇಶೋತ್ಸವ ಮೆರವಣಿಗೆ ಸಂದರ್ಭ ನಗರದ ತುಳಜಾಭವಾನಿ ದೇವಸ್ಥಾನ ರಸ್ತೆಯಲ್ಲಿ ಶುಕ್ರವಾರ ಬೆಳಗಿನ ಜಾವ ಚೂರಿ ಇರಿತಕ್ಕೆ ಒಳಗಾದ ಸ್ನೇಹಿತ ಬಸವರಾಜನನ್ನು ಸುನೀಲ ಹಡಪದ ಉಳಿದ ಸ್ನೇಹಿತರ ಸಹಾಯದೊಂದಿಗೆ ಒಂದು ಕಿ.ಮೀ. ಎತ್ತಿಕೊಂಡು ಬಂದು ಕಾಪಾಡಲು ಯತ್ನಿಸಿದ್ದಾನೆ. ಆದರೆ ವಿಧಿಯಾಟ ಸ್ನೇಹಿತನ ಪ್ರಯತ್ನ ಫಲಕಾರಿಯಾಗಿಸಲಿಲ್ಲ.

ರೈತನ ಮಗನಾದ ಬಸವರಾಜ ಶಿವೂರ ಮೆರಿಟ್‌ ವಿದ್ಯಾರ್ಥಿ. ಸಂಕ್ರಿಕೊಪ್ಪದಲ್ಲಿ ಶಿಕ್ಷಣ ಮುಗಿಸಿ ಇಲ್ಲಿನ ಕೆಎಲ್‌ಇ ನರ್ಸಿಂಗ್‌ ಕಾಲೇಜಿನಲ್ಲಿ ಜೆಎನ್‌ಎಂ 2ನೇ ವರ್ಷದ ಅಂತಿಮ ಪರೀಕ್ಷೆ ಬರೆದಿದ್ದ. ಈತನ ಸ್ನೇಹಿತರು ಪರೀಕ್ಷೆ ಮುಗಿಸಿ ಊರಿಗೆ ತೆರಳಿದ್ದರೆ, ಈತ ಗಣಪತಿ ವಿಸರ್ಜನೆ ನೋಡುವ ಸಲುವಾಗಿ ಉಳಿದಿದ್ದ.

ಪ್ರಕರಣದ ಬಗ್ಗೆ ದೂರು ನೀಡಿರುವ ಸ್ನೇಹಿತ ಸುನೀಲ ಹಡಪದ ಮಾತನಾಡಿ, ನಾವು ದುರ್ಗ, ಪ್ರವೀಣ, ಬಸವರಾಜ ಸೇರಿ ಇನ್ನೊಬ್ಬ ಸ್ನೇಹಿತನ ಜತೆಗೂಡಿ ಗಣಪತಿ ನೋಡಲು ಹೋಗಿದ್ದೆವು. ತುಳಜಾಭವಾನಿ ರಸ್ತೆಯ ಬಳಿ ನೃತ್ಯ ಮಾಡಿ ನಿಂತಿದ್ದಾಗ ಎದುರಿನಿಂದ ಬಂದವನೊಬ್ಬ ನೀವ್ಯಾಕೆ ಇಲ್ಲಿ ನೃತ್ಯ ಮಾಡುತ್ತಿದ್ದೀರಿ ಎಂದು ಕೇಳಿದ. ಅದಕ್ಕೆ ಬಸವರಾಜ, ನಾವು ನೃತ್ಯ ಮಾಡುತ್ತಿದ್ದೇವೆ, ನೀನೂ ಬೇಕಾದರೆ ಮಾಡು ಎಂದು ಹೇಳಿದ. ಅಷ್ಟಕ್ಕೇ ಆತ ಚೂರಿ ಇರಿದಿದ್ದಾನೆ. ಕುಸಿದುಬಿದ್ದ ಬಸವರಾಜನನ್ನು ಎತ್ತಿಕೊಂಡು ಸುಮಾರು ಒಂದು ಕಿ.ಮೀ. ನಡೆದು ಚೆನ್ನಮ್ಮ ವೃತ್ತದವರೆಗೆ ಬಂದೆ. ಸ್ನೇಹಿತರು ಜೊತೆಗಿದ್ದು ಸಹಾಯ ಮಾಡಿದರು. ಅಲ್ಲಿಂದ ಪೊಲೀಸರ ಸಹಕಾರದಲ್ಲಿ ಕಿಮ್ಸ್‌ಗೆ ಕರೆತಂದು ದಾಖಲಿಸಿದೆ. ಆದರೆ, ಈಗ ಬಸವರಾಜ ನಮ್ಮಿಂದ ದೂರವಾಗಿದ್ದಾನೆ ಎಂಬುದು ನಂಬಲಾಗುತ್ತಿಲ್ಲ ಎಂದು ದುಃಖ ತೋಡಿಕೊಂಡ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೃತಪಟ್ಟಬಸವರಾಜ ದೊಡ್ಡಪ್ಪ ಜಿ.ಬಿ.ಶಿವೂರ ಮಾತನಾಡಿ, ಅವನ ಮೇಲೆ ತಮ್ಮ ತುಂಬಾ ಭರವಸೆ ಇಟ್ಟುಕೊಂಡಿದ್ದ. ಮನೆಯಲ್ಲೂ ಚೂಟಿಯಾಗಿದ್ದ ಹುಡುಗ ಎಲ್ಲ ಕೆಲಸದಲ್ಲೂ ಭಾಗಿಯಾಗುತ್ತಿದ್ದ. ಇನ್ನೊಂದು ವರ್ಷ ಓದಿದ್ದರೆ ಎಲ್ಲಾದರೂ ಕೆಲಸ ಪಡೆದು ಜೀವನ ಕಟ್ಟಿಕೊಳ್ಳುತ್ತಾನೆ ಎಂಬ ಆಸೆ ನಮ್ಮಲ್ಲಿತ್ತು. ಆದರೆ, ಅಷ್ಟರಲ್ಲಿ ಸಾವು ಅವನನ್ನೇ ಇಲ್ಲವಾಗಿಸಿದೆ ಎಂದರು.

ಶಿಗ್ಗಾಂವಿಯ ಸರ್ಕಾರಿ ಪ್ರೌಢಶಾಲೆಯೊಂದರ ಪ್ರಾಚಾರ್ಯರಾಗಿರುವ ಇವರು ಸುದ್ದಿ ಕೇಳಿದ ತಕ್ಷಣ ತಮ್ಮ ಮಗನೊಡನೆ ಕಿಮ್ಸ್‌ಗೆ ಧಾವಿಸಿದ್ದರು.

ಮಕ್ಕಳು ಇಂಥ ಕೆಲಸ ಮಾಡಿಕೊಂಡು ಹೋದರೆ ಪಾಲಕರು ಜೀವನಪೂರ್ತಿ ಅನುಭವಿಸಬೇಕು. ಬಸವರಾಜ ಮೆರಿಟ್‌ ಮೇಲೆ ನರ್ಸಿಂಗ್‌ ಸೀಟು ಪಡೆದಿದ್ದ. ಹದಿನೈದು ದಿನಗಳ ಹಿಂದಷ್ಟೆಮನೆಗೆ ಬಂದು ಹೋಗಿದ್ದ. ಅವನ ಅಜ್ಜಿಗೆ ಮೊಮ್ಮಕ್ಕಳಲ್ಲಿ ಬಸವ ಎಂದರೆ ಹೆಚ್ಚಿನ ಪ್ರೀತಿ, ಆಕೆಗೆ ವಿಷಯ ಹೇಗೆ ಹೇಳಬೇಕೊ ಗೊತ್ತಾಗುತ್ತಿಲ್ಲ ಎಂದರು. ತಮ್ಮನ ಇನ್ನೊಬ್ಬ ಮಗ ಧಾರವಾಡದಲ್ಲಿ ಎಂಎಸ್‌ಸಿ ಮಾಡುತ್ತಿದ್ದಾನೆ. ಆತ ಕರೆ ಮಾಡಿ ವಿಷಯ ತಿಳಿದ ತಕ್ಷಣ ಬಂದಿದ್ದೇವೆ. ತಮ್ಮನ ಪರಿಸ್ಥಿತಿ ನೋಡಲಾಗುತ್ತಿಲ್ಲ ಎಂದು ಬೇಸರ ತೋಡಿಕೊಂಡರು.

click me!