ಜಿಲ್ಲೆಯಲ್ಲಿ 281 ಸರಕಾರಿ ಬಸ್ಸುಗಳು ನಿಗದಿತ ಅವಧಿ ಮೀರಿದ್ದರೂ ಸಂಚಾರ ನಡೆಸುತ್ತಿವೆ ಎಂದು ಸರಕಾರ ಮಾಹಿತಿ ನೀಡಿದೆ. ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅವರು ವಿಧಾನ ಸಭೆಯಲ್ಲಿ ಕೇಳಿರುವ ಪ್ರಶ್ನೆಗೆ ಸಾರಿಗೆ ಮತ್ತು ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಸೆ.24) : ಜಿಲ್ಲೆಯಲ್ಲಿ 281 ಸರಕಾರಿ ಬಸ್ಸುಗಳು ನಿಗದಿತ ಅವಧಿ ಮೀರಿದ್ದರೂ ಸಂಚಾರ ನಡೆಸುತ್ತಿವೆ ಎಂದು ಸರಕಾರ ಮಾಹಿತಿ ನೀಡಿದೆ. ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅವರು ವಿಧಾನ ಸಭೆಯಲ್ಲಿ ಕೇಳಿರುವ ಪ್ರಶ್ನೆಗೆ ಸಾರಿಗೆ ಮತ್ತು ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.
undefined
ಈಶಾನ್ಯ ಸಾರಿಗೆ ಇನ್ನು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ
ಶಾಸಕ ಯಶವಂತರಾಯಗೌಡ ಪಾಟೀಲ(Yashwantrai Gowda Patil) ಅವರು, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಕಳೆದ ಮೂರು ವರ್ಷಗಳಲ್ಲಿ ಹೊಸದಾಗಿ ಎಷ್ಟು ಬಸ್ಸುಗಳನ್ನು ಖರೀದಿಸಲಾಗಿದೆ? ಅವುಗಳ ಸ್ಥಿತಿಗತಿ ಹೇಗಿದೆ? ಈ ಬಸ್ಸುಗಳು ಎಷ್ಟು ಕಿ.ಮೀ. ಕ್ರಮಿಸಿವೆ? ಅತ್ಯಂತ ಹಳೆಯ ಬಸ್ಸುಗಳು ಇಂಡಿ ಡಿಪೋ ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ? ಹಳೆಯ ಬಸ್ಸುಗಳನ್ನು ಬದಲಾಯಿಸಲು ಕೈಗೊಂಡಿರುವ ಕ್ರಮಗಳೇನು? ಯಾವ ಕಾಲ ಮಿತಿಯಲ್ಲಿ ಹಳೆಯ ಬಸ್ಸುಗಳನ್ನು ಹಿಂದಕ್ಕೆ ಪಡೆಯಲಾಗುವುದು? ಎಂದು ಪ್ರಶ್ನೆಗಳನ್ನು ಕೇಳಿದ್ದರು.
ಇಂಡಿ ಶಾಸಕರ ಪ್ರಶ್ನೆಗೆ ಸಾರಿಗೆ ಸಚಿವರ ಉತ್ತರ:
ಈ ಪ್ರಶ್ನೆಗೆ ಉತ್ತರಿಸಿರುವ ಸಾರಿಗೆ ಮತ್ತು ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು(B.Sriramulu), ಕಳೆದ ಮೂರು ವರ್ಷಗಳಲ್ಲಿ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಿಂದ 2019-20ರಲ್ಲಿ ಗ್ರಾಮಾಂತರ ಸಾರಿಗೆಗಾಗಿ 49, 2020-21ರಲ್ಲಿ 1 ಮತ್ತು 2021-22 ರಲ್ಲಿ ಯಾವುದೇ ಬಸ್ಸು ಖರೀದಿ ಮಾಡಿಲ್ಲ. ಇವುಗಳಲ್ಲಿ 2019-20ರಲ್ಲಿ ಐದು ಬಸ್ಸುಗಳನ್ನು ಮಾತ್ರ ವಿಜಯಪುರಕ್ಕೆ ನೀಡಲಾಗಿದೆ. ಅವುಗಳಲ್ಲಿ ವಿಜಯಪುರ ಘಟಕ 1, 2, 3, ಸಿಂದಗಿ ಮತ್ತು ಇಂಡಿ ಡಿಪೊಗಳಿಗೆ ತಲಾ ಒಂದು ಬಸ್ ಹಂಚಿಕೆ ಮಾಡಲಾಗಿದೆ ಎಂದು ಲಿಖಿತ ಉತ್ತರ ನೀಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಎಷ್ಟೆಷ್ಟು ಬಸ್‌ಗಳದ ಓಡಾಟ?
ವಿಜಯಪುರದಲ್ಲಿ ಎಂಟು ವಿಭಾಗಗಳಿದ್ದು, ಒಟ್ಟು 746 ಬಸ್ಸುಗಳು ಸಂಚರಿಸುತ್ತಿವೆ. ವಿಜಯಪುರ ಘಟಕ-1ರಲ್ಲಿ 110, ವಿಜಯಪುರ ಘಟಕ-2 ರಲ್ಲಿ 84, ವಿಜಯಪುರ ಘಟಕ-3 ರಲ್ಲಿ 68, ಇಂಡಿ ಘಟಕದಲ್ಲಿ 109, ಸಿಂದಗಿ ಘಟಕದಲ್ಲಿ 101, ಮುದ್ದೇಬಿಹಾಳ ಘಟಕದಲ್ಲಿ 118, ತಾಳಿಕೋಟೆ ಘಟಕದಲ್ಲಿ 82 ಮತ್ತು ಬಸವನ ಬಾಗೇವಾಡಿ ಘಟಕದಲ್ಲಿ 74 ಸೇರಿದಂತೆ ಒಟ್ಟು 746 ಬಸ್ಸುಗಳು ಓಡಾಟ ನಡೆಸುತ್ತಿವೆ.
ವಿಜಯಪುರ ವಿಭಾಗದಲ್ಲಿ ಅಶೋಕ ಲೈಲ್ಯಾಂಡ್(Ashoka Leyland, ಟಾಟಾ(TATA) ಮತ್ತು ತತ್ಸಮಾನ ಮಾದರಿಯ ಸಾಮಾನ್ಯ ಬಸ್ಸುಗಳ ಜೀವಮಾನವನ್ನು 9 ಲಕ್ಷ ಕಿ. ಮೀ. ಹಾಗೂ ಹವಾನಿಯಂತ್ರಿತ ಸ್ಲೀಪರ್ ಬಸ್ಸುಗಳ ಜೀವಮಾನವನ್ನು 11 ಲಕ್ಷ ಕಿ. ಮೀಗೆ ನಿಗದಿಪಡಿಸಲಾಗಿದೆ. ಅಲ್ಲದೇ, 15 ವರ್ಷ ವಯೋಮಿತಿ ಮೇಲ್ಪಟ್ಟ ವಾಹನಗಳನ್ನು ಕಾರ್ಯಾಚರಣೆಯಿಂದ ಸ್ಥಗಿತಗೊಳಿಸಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಯೋಗ್ಯವಿಲ್ಲದ ಬಸ್‌ಗಳ ಓಡಾಟಕ್ಕೆ ಬ್ರೇಕ್ ಹಾಕುವ ಉತ್ತರ:
ಇಂಡಿ ಘಟಕ ಸೇರಿದಂತೆ ವಿಜಯಪುರ ವಿಭಾಗದ 746 ಬಸ್ಸುಗಳಲ್ಲಿ 281 ಬಸ್ಸುಗಳ ನಿಗದಿತ 9 ಲಕ್ಷ ಕಿ. ಮೀ. ಗಿಂತ ಹೆಚ್ಚಿಗೆ ಕ್ರಮಿಸಿದ್ದು, 485 ಬಸ್ಸುಗಳು 9 ಲಕ್ಷಕ್ಕಿಂತ ಕಡಿಮೆ ಸಂಚಾರ ಮಾಡಿವೆ. ನಿಗದಿತ 9 ಲಕ್ಷ ಕಿ. ಮೀ. ಕ್ರಮಿಸಿರುವ ವಾಹನಗಳ ಭೌತಿಕ ಮತ್ತು ತಾಂತ್ರಿಕ ಸ್ಥಿತಿಯನ್ನು ಪರಿಶೀಲನೆಗೆ ಒಳಪಡಿಸಿ ಕಾರ್ಯಾಚರಣೆಗೆ ಯೋಗ್ಯವಿರುವ ವಾಹನಗಳನ್ನು ಓಡಿಸಲಾಗುವುದು. ಸಂಚಾರಕ್ಕೆ ಯೋಗ್ಯವಿಲ್ಲದ ವಾಹಗಳನ್ನು ನಿಷ್ಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
2022-23ರ ಆರ್ಥಿಕ ವರ್ಷದಲ್ಲಿ ಆಗಸ್ಟ್ ವರೆಗೆ ವಿಜಯಪುರ ವಿಭಾಗದ ಬಸ್ಸುಗಳ ಅಪಘಾತ ಪ್ರಮಾಣ 0.04 ರಷ್ಟಿದೆ(ಪ್ರತಿ 10000 ಕಿ. ಮೀ. ಗೆ) ಇದೆ. ದೈನಂದಿನ, ವಾರದ ಹಾಗೂ ನಿಯತಕಾಲಿಕ ನಿರ್ವಹಣೆಗಳನ್ನು ಸಮರ್ಪಕವಾಗಿ ಮಾಡುವ ಮೂಲಕ ವಾಹನಗಳನ್ನು ಸುಸ್ಥಿತಿಯಲ್ಲಿಡಲು ಹಾಗೂ ಅವಘಡಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸಾರಿಗೆ ನೌಕರರ ದಾರಿ ತಪ್ಪಿಸಲಾಗುತ್ತಿದೆ: ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ತೇಲ್ಕೂರ್
ಹೊಸ ಬಸ್ ಖರೀದಿಗು ಪ್ರಕ್ರಿಯೆಯ ಉತ್ತರ;
ಹೊಸ ಬಸ್ಸುಗಳ ಖರೀದಿ ಪ್ರಕ್ರಿಯೆ ಅಲ್ಲದೇ, ಸಾರಿಗೆ ಕಾರ್ಯಾಚರಣೆ ಗುಣಮಟ್ಟ ಹೆಚ್ಚಿಸಲು ಈ ವರ್ಷದಲ್ಲಿ 650 ಹೊಸ ಬಸ್ಸುಗಳನ್ನು ಖರೀದಿಸಲು ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಈ ಪ್ರಕ್ರಿಯೆ ಮುಗಿದ ನಂತರ ಹೊಸ ವಾಹನಗಳ ಲಭ್ಯತೆಯ ಅನುಸಾರ ವಿಭಾಗವಾರು ಮತ್ತು ಘಟಕವಾರು ಅವಶ್ಯಕತೆಗನುಗುಣವಾಗಿ ಹೊಸ ವಾಹನಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಪರಿಶಿಷ್ಠ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ. ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಕೇಳಿದ ಮಾಹಿತಿಯಿಂದಾಗಿ ವಿಜಯಪುರ ಜಿಲ್ಲೆಯಲ್ಲಿರುವ ಸರಕಾರಿ ಬಸ್ಸುಗಳ ನಿಜಬಣ್ಣ ಬಯಲಾಗಿದೆ.