
ಬೆಂಗಳೂರು (ಸೆ. 24): ಲೈಫಲ್ಲಿ ನೀವು ಒಮ್ಮೆಯಾದ್ರೂ ಪೊಲೀಸ್ (Police) ಯೂನಿಫಾರ್ಮ್ ಹಾಕಿ ಕೆಲಸ ಮಾಡಬೇಕಾ? ಶಿಸ್ತಿನ ಸಿಪಾಯಿಗಳಂತೆ ಬೆಂಗಳೂರಿನ (Bengaluru) ರಸ್ತೆಗಳಲ್ಲಿ ಕಾಣಿಸಿಕೊಳ್ಳಬೇಕಾ? ಡೋಂಟ್ ವರಿ ಆ ನಿಮ್ಮ ಕನಸನ್ನ ನನಸು ಮಾಡೋದಕ್ಕೆ ಏಷ್ಯಾನೆಟ್ ಸುವರ್ಣನ್ಯೂಸ್ ಬಿಗ್3 (Big 3) ಒಂದೊಳ್ಳೆ ವೇದಿಕೆ ಕಲ್ಪಿಸಿಕೊಟ್ಟಿದೆ. ಯೆಸ್.. ಪೊಲೀಸ್.. ಪೊಲೀಸ್.. ಪೊಲೀಸ್. ಹೆಸರು ಕೇಳ್ತಿದ್ದಂತೆ ಮೈಯಲ್ಲ ರೋಮಾಂಚನ ಆಗುತ್ತೆ. ಒಂದು ಗತ್ ಇರುತ್ತೆ. ಲೈಫಲ್ಲಿ ಒಮ್ಮೆ ಆದ್ರೂ ಆ ಯೂನಿಫಾರ್ಮ್ ಹಾಕಬೇಕು ಅನಿಸುತ್ತೆ. ಆ ನಿಮ್ಮ ಕನಸನ್ನ ನನಸು ಮಾಡಲು, ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್3 ಹೀರೋ ವೇದಿಕೆ ಒಂದೊಳ್ಳೆ ಅವಕಾಶವನ್ನ ಕಲ್ಪಿಸಿದೆ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ತಮ್ಮ ವೃತ್ತಿ ಜೀವನ ನಡೆಸಿದ್ರೆ ಸಾಕು ಅನ್ನುವವರ ಮಧ್ಯೆ, ಜನರ ಸೇವೆ ಮಾಡಬೇಕೆನ್ನುವವರು ತೀರಾ ಕಡಿಮೆ. ಅಂತಹದರಲ್ಲಿ ಬೆಂಗಳೂರಿನ ಟ್ರಾಫಿಕ್ ವಾರ್ಡನ್ ಆರ್ಗನೈಸೇಶನ್ (Traffic Warden Organisation)ತಮ್ಮ ದಿನದ ಸಮಯವನ್ನ ಮುಡಿಪಾಗಿಟ್ಟುಕೊಂಡು ಜನರ ಸೇವೆಗಿಳಿದಿದೆ. ರಾಜಧಾನಿಯಲ್ಲಿ ಟ್ರಾಫಿಕ್ ಪೊಲೀಸರಿಗೆ ಸಹಾಯಕವಾಗುವಂತೆ ಈ ಟೀಂ ತಮ್ಮದೇ ಆದ ಆರ್ಗನೈಸೇಶನ್ ಹೊಂದಿದೆ. ಪ್ರತಿ ದಿನ ಟ್ರಾಫಿಕ್ ಸಮಸ್ಯೆಯ ಅರಿವನ್ನ ಮೂಡಿಸುತ್ತಾ, ಜನ ಜಾಗೃತಿ ಮೂಡಿಸುತ್ತಾ ಬಂದಿದೆ.
ಬೆಂಗಳೂರು ಟ್ರಾಫಿಕ್ ಸಮಸ್ಯೆ ಕಡಿವಾಣಕ್ಕೆ ಸಾಥ್: ಇನ್ನೂ ವಾರದಲ್ಲಿ ನಾಲ್ಕು ಗಂಟೆ, ತಿಂಗಳಿನಲ್ಲಿ 16 ಗಂಟೆಗಳಂತೆ ತಮ್ಮ ಸಮಯವನ್ನ ಮುಡಿಪಾಗಿಟ್ಟು ರಸ್ತೆಗಿಳಿದು ಟ್ರಾಫಿಕ್ ಸಮಸ್ಯೆ ನಿವಾರಿಸುವ ಕೆಲಸ ಮಾಡುತ್ತಿದೆ. ಆ ಮೂಲಕ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕೋದಕ್ಕೆ ಈ ಟೀಂ ಟ್ರಾಫಿಕ್ ಪೊಲೀಸರಿಗೆ ಸಾಥ್ ನೀಡ್ತಿದೆ.
ಟ್ರಾಫಿಕ್ ವಾರ್ಡನ್ ಆರ್ಗನೈಸೇಶನ್ ಥೀಮ್ ಏನು?: ಟ್ರಾಫಿಕ್ ವಾರ್ಡನ್ ಆರ್ಗನೈಸೇಶನ್ ವಿದ್ಯಾವಂತ ಹಾಗೂ ಕ್ರಿಯಾಶೀಲ ಆಸಕ್ತರನ್ನ ಮಾತ್ರ ನೇಮಕ ಮಾಡಿಕೊಳ್ಳುತ್ತದೆ. ಪಿಯುಸಿ ಅಥವಾ ಡಿಪ್ಲೊಮಾ ವಿದ್ಯಾಭ್ಯಾಸ ಹೊಂದಿರಬೇಕು. ಇಲ್ಲಿ ಸೇರುವವರ ವಯಸ್ಸು 25 ರಿಂದ 55ವರ್ಷದವರು ಆಗಿರಬೇಕು. ನಗರದಾದ್ಯಂತ 700ಕ್ಕೂ ಹೆಚ್ವು ಸೇವಾ ಮನೋಭಾವ ಉಳ್ಳವರು ಇದರಲ್ಲಿ ಸೇರಿದ್ದಾರೆ. ಅದರಲ್ಲಿ ಬಹುತೇಕ 60ಕ್ಕೂ ಹೆಚ್ಚು ಜನ ಮಹಿಳೆಯರೇ ಇದ್ದಾರೆ ಅನ್ನೋದು ಮತ್ತೊಂದು ಹೆಮ್ಮೆ.
ಇನ್ನೂ ಈ ಟ್ರಾಫಿಕ್ ವಾರ್ಡನ್ ಆರ್ಗನೈಸೇಶನ್ನಲ್ಲಿ ಸೇರುವವರು ಯಾವುದಾದರೊಂದು ಕೆಲಸದಲ್ಲಿರಬೇಕು. ವಾರದಲ್ಲಿ ನಾಲ್ಕು ಗಂಟೆಗಳು ಮಾತ್ರ ಕಾರ್ಯ ನಿರ್ವಹಿಸಬೇಕು. ಈ ಟ್ರಾಫಿಕ್ ವಾರ್ಡನ್‌ಗಳಿಗೆ ರಸ್ತೆಯಲ್ಲಿ ಟ್ರಾಫಿಕ್ ನಿರ್ವಹಣೆ, ಸಾರ್ವಜನಿಕ ವಲಯ, ಶಾಲಾ ಕಾಲೇಜುಗಳಲ್ಲಿ ಜನಜಾಗೃತಿ ಮೂಡಿಸುವ ಟಾಸ್ಕಗಳನ್ನ ನೀಡಲಾಗುತ್ತದೆ. ಬೆಂಗಳೂರಿನಲ್ಲಿ 8 ವಲಯಗಳಿದ್ದು ಈ ಟ್ರಾಫಿಕ್ ವಾರ್ಡನ್‌ಗಳು ರಾಜಧಾನಿಯಲ್ಲಿ ಶಿಸ್ತಿನ ಸಿಪಾಯಿಗಳಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.
Big 3 Hero: ಅಕ್ಷಯ್ ಕೋಟ್ಯಾನ್: ಎಲೆ ಮೇಲೆ ನೂರಾರು ಕಲಾಕೃತಿ ರಚಿಸುವ ಕಲಾವಿದ
ಒಟ್ಟಾರೆ ಸಮಾಜ ಸೇವೆಗೆ ನೂರೊಂದು ದಾರಿ ಅನ್ನೋ ಹಾಗೆ, ಮೈಮೇಲೆ ಯೂನಿಫಾರ್ಮ್ ಹಾಕಿ ರಾಜಧಾನಿಯ ರಸ್ತೆಗಳಲ್ಲಿ ಘರ್ಜಿಸೋಕೆ ನಿಮಗೂ ಆಸೆ ಇದ್ದರೆ ಖಂಡಿತ ಈ ಟ್ರಾಫಿಕ್ ವಾರ್ಡನ್ ಸೇವೆ ಮಾಡಬಹುದು.