ಸಿಎಂ ಮನೆ ಮುಂದೆ ಧರಣಿ : ಸರ್ಕಾರಕ್ಕೆ ಶಾಸಕ ಎಚ್ಚರಿಕೆ

By Kannadaprabha NewsFirst Published Apr 28, 2021, 2:52 PM IST
Highlights

ರೈತರಿಗೆ ಹಣ ನೀಡದೇ ಸರ್ಕಾರ ಸತಾಯಿಸುತ್ತಿದ್ದು ಸಂಕಷ್ಟಎದುರಿಸುತ್ತಿರುವ ರೈತರಿಗೆ ಇನ್ನೊಂದು ವಾರದಲ್ಲಿ ಹಣ ಪಾವತಿಸದಿದ್ದರೆ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ನಡೆಸುವುದು  ಶಾಸಕ ಶಿವಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ. 

 ಅರಸೀಕೆರೆ (ಏ.28):  ನ್ಯಾಫೆಡ್‌ ಮೂಲಕ ತಾಲೂಕಿನ ರೈತರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸಿರುವ ಸರ್ಕಾರ ಮೂರು ತಿಂಗಳು ಕಳೆದರೂ ರೈತರಿಗೆ ಹಣ ಪಾವತಿಸದೆ ಸತಾಯಿಸುತ್ತಿದ್ದು, ಇದರಿಂದ ಸಂಕಷ್ಟಎದುರಿಸುತ್ತಿರುವ ರೈತರಿಗೆ ಇನ್ನೊಂದು ವಾರದಲ್ಲಿ ಹಣ ಪಾವತಿಸದಿದ್ದರೆ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ನಡೆಸುವುದಾಗಿ ಶಾಸಕ ಕೆ ಎಂ ಶಿವಲಿಂಗೇಗೌಡ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರುಕಟ್ಟೆಫೆಡರೇಷನ್‌ ಮಧ್ಯಸ್ತಿಕೆ ಯಲ್ಲಿ ತಾಲೂಕಿನ ರೈತ ರಿಂದ 7.30 ಲಕ್ಷ ಕ್ವಿಂಟಲ್‌ ರಾಗಿ ಖರೀದಿಸಿದ್ದು, ಇದಕ್ಕೆ .244 ಕೋಟಿ ಆಗಿದ್ದು, ಇದಕ್ಕೆ ಸರ್ಕಾರ ಕೇವಲ .8 ಕೋಟಿ ಹಣ ನೀಡಿ ಉಳಿದ .236 ಕೋಟಿ ಹಣ ನೀಡಲು ದಿನದೂಡುತ್ತ ಬಂದಿರುವುದರಿಂದ ಮೊದಲೇ ಸಂಕಷ್ಟದಲ್ಲಿರುವ ತಾಲೂಕಿನ ರೈತರು ಮತ್ತಷ್ಟುಸಂಕಷ್ಟಕ್ಕೆ ಒಳಗಾಗುವಂತೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಏಕಾಏಕಿ ನಿರ್ಧಾರ ಬದಲಿಸಿದ ಬಿಎಸ್‌ವೈ: ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಪಾಟೀಲ್‌..!

ಬೀಜ ಖರೀದಿಗೆ ಹಣವಿಲ್ಲದೆ ಪರದಾಟ:  ರಾಗಿ ಖರೀದಿ ಕೇಂದ್ರ ಸ್ಥಗಿತಗೊಂಡು ತಿಂಗಳು ಕಳೆಯುತ್ತ ಬಂದಿದೆ ಇನ್ನೇನು ಮಳೆಗಾಲ ಆರಂಭವಾಗುತ್ತಿದ್ದು ರೈತರು ಪೂರ್ವ ಮುಂಗಾರು ಬೆಳೆ ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಗೊಬ್ಬರ ಬಿತ್ತನೆ ಬೀಜ ಖರೀದಿಗೆ ಹಣವಿಲ್ಲದೆ ಪರದಾಡುವಂತಾಗಿದೆ. ನ್ಯಾಪೆಡ್‌ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದ ಕಡೆಗೆ ಬೆಟ್ಟು ಮಾಡುತ್ತಾರೆ ಜಿಲ್ಲಾಧಿಕಾರಿಗಳು ಕೇಳಿದರೆ ಹಣ ಬಿಡುಗಡೆ ಆಗಿಲ್ಲ ಎಂಬ ಉತ್ತರ ನೀಡುತ್ತಾರೆ ಈ ಎಲ್ಲ ನಡೆಗಳನ್ನು ನೋಡಿದರೆ ಕೇವಲ ಇನ್ನೂರ ಮೂವತ್ತಾರು ಕೋಟಿ ಹಣ ನೀಡಲಾಗದಷ್ಟುದುಸ್ಥಿತಿಯಲ್ಲಿ ಸರ್ಕಾರ ಇದೆಯೇ ಎಂದು ಕಿಡಿಕಾರಿದರು.

'ನಾನು ನೂರಕ್ಕೆ ನೂರರಷ್ಟು ಏಕಪತ್ನಿ ವ್ರತಸ್ಥ, ಒಬ್ಬಳೇ ಹೆಂಡತಿ, ಬೇರೆ ಯಾವುದೇ ಸಂಬಂಧವಿಲ್ಲ' .

1 ತಿಂಗಳಿಂದ ಮುಚ್ಚಿರುವ ಖರೀದಿ ಕೇಂದ್ರ:  ಸರ್ಕಾರ ಜಿಲ್ಲಾಧಿಕಾರಿಗಳಿಗೆ ಹಣ ಹಾಕಬೇಕು. ಜಿಲ್ಲಾಧಿಕಾರಿಗಳು ಮಾರ್ಕೇಟಿಂಗ್‌ ಫೇಡರೇಷನ್‌ಗೆ ಹಣ ಹಾಕಿದರೆ ಅವರು ರಾಗಿ ಮಾರಾಟ ಮಾಡಿರುವ ಎಲ್ಲಾ ರೈತರ ಅಕೌಂಟಿಗೆ ಹಣ ಹಾಕುತ್ತಾರೆ. ಆದರೆ ಖರೀದಿ ಮಾಡಿ 3 ತಿಂಗಳಾಗಿದೆ. ಖರೀದಿ ಕೇಂದ್ರ ಮುಚ್ಚಿ 1 ತಿಂಗಳಾಗಿದೆ ಆದರೆ ಸರ್ಕಾರಕ್ಕೆ ಇವರಿಗೆ ಹಣ ಕೊಡಲು ಸಾಧ್ಯವಾಗುತ್ತಿಲ್ಲ ಎಂದರೆ ರೈತರ ಕಷ್ಟವನ್ನು ಯಾರು ನಿವಾರಣೆ ಮಾಡುತ್ತಾರೆ. ಈ ಪುರುಷಾರ್ಥಕ್ಕಾಗಿ ಖರೀದಿ ಕೇಂದ್ರ ತೆರಯಬೇಕಿತ್ತೆ ಎಂದು ಪ್ರಶ್ನಿಸಿದ ಅವರು, ರೈತರ ಸಂಕಷ್ಟದ ಅರಿವು ನಿಮಗಿದ್ದರೆ ತಕ್ಷಣವೇ ರೈತರ ಖಾತಿಗೆ ಹಣ ಹಾಕಿ ಎಂದು ಒತ್ತಾಯಿಸಿದರು .

ಸಿಎಂ ಮನೆ ಮುಂದೆ ಧರಣಿ:  ನ್ಯಾಫೆಡ್‌ಗೆ ರಾಗಿ ಬಿಟ್ಟಿರುವ ತಾಲೂಕಿನ ರೈತರ ಖಾತೆಗೆ ಒಂದೆರಡು ದಿನಗಳಲ್ಲಿ ಸರ್ಕಾರ ಹಣ ಜಮಾ ಮಾಡದೆ ಹೋದರೆ ಕೊರೋನಾವನ್ನೂ ಲೆಕ್ಕಿಸದೆ ಮುಖ್ಯಮಂತ್ರಿಗಳ ನಿವಾಸದೆದುರು ಏಕಾಂಗಿಯಾಗಿ ಧರಣಿ ನಡೆಸಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಕೆಎಂಎಸ್‌ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಜಯ್‌, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಕಾಂತರಾಜ್‌ ಮತ್ತಿತರರು ಉಪಸ್ಥಿತರಿದ್ದರು .

click me!