ಲಕ್ಷ ಲಕ್ಷ ಕೇಳಿದ ಆಸ್ಪತ್ರೆ: ಪತಿ ಶವವನ್ನೇ ಬಿಟ್ಟುಹೋದ ಪತ್ನಿ..!

Kannadaprabha News   | Asianet News
Published : Apr 28, 2021, 02:44 PM IST
ಲಕ್ಷ ಲಕ್ಷ ಕೇಳಿದ ಆಸ್ಪತ್ರೆ: ಪತಿ ಶವವನ್ನೇ ಬಿಟ್ಟುಹೋದ ಪತ್ನಿ..!

ಸಾರಾಂಶ

ದುಡ್ಡು ಹೊಂದಿಸಲಾಗದೆ ಊರಿಗೆ ಮರಳಿದ ಕುಟುಂಬ| 5 ದಿನ ಕಾದು ಆಸ್ಪತ್ರೆ ಸಿಬ್ಬಂದಿಯಿಂದಲೇ ಅಂತ್ಯಸಂಸ್ಕಾರ| ವಿಜಯಪುರದ ಪೇಂಟರ್‌ ಬೆಂಗಳೂರಲ್ಲಿ ಕೋವಿಡ್‌ಗೆ ಬಲಿ| ಮೃತನಿಗೆ ಕೇವಲ 39 ವರ್ಷ| 

ಬೆಂಗಳೂರು(ಏ.28): ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಕುಟುಂಬ ಚಿಕಿತ್ಸೆಗೆ ತಗುಲಿದ ನಾಲ್ಕು ಲಕ್ಷ ರು. ಪಾವತಿಸಲಾಗದೆ ಆಸ್ಪತ್ರೆಯಲ್ಲೇ ಪಾರ್ಥಿವ ಶರೀರ ಬಿಟ್ಟು ತಮ್ಮ ಊರು ವಿಜಯಪುರಕ್ಕೆ ಹಿಂತಿರುಗಿದೆ. ಐದು ದಿನ ಪಾರ್ಥಿವ ಶರೀರ ಇಟ್ಟುಕೊಂಡು ಬಾಕಿ ಪಾವತಿಗೆ ಕಾದ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಅಂತಿಮವಾಗಿ ತಾವೇ ಅಂತ್ಯಸಂಸ್ಕಾರ ನಡೆಸಿದ್ದಾರೆ.

ವಿಜಯಪುರ ಮೂಲದ ವ್ಯಕ್ತಿಯೊಬ್ಬರು ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ನೆಲೆಸಿದ್ದರು. ಪೇಂಟಿಂಗ್‌ ಕೆಲಸ ಮಾಡುತ್ತಿದ್ದ ಅವರಿಗೆ ಇತ್ತೀಚೆಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡಿತ್ತು. ಕೊರೋನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್‌ ವರದಿ ಬಂದಿತ್ತು. ಚಿಕಿತ್ಸೆಗಾಗಿ ಬಿಬಿಎಂಪಿಯನ್ನೂ ಸಂಪರ್ಕಿಸಿದರೂ ಲಾಭವಾಗಲಿಲ್ಲ.

ವಿಧಿಯಿಲ್ಲದೆ ನಂದಿನಿ ಲೇಔಟ್‌ನ ಖಾಸಗಿ ಆಸ್ಪತ್ರೆಯಲ್ಲಿ ಸೋಂಕಿತನನ್ನು ದಾಖಲಿಸಲಾಯಿತು. ಮೊದಲಿಗೆ 50 ಸಾವಿರ ರು. ಪಾವತಿಸಲು ಆಸ್ಪತ್ರೆ ಸಿಬ್ಬಂದಿ ಸೂಚಿಸಿದ್ದರು. ಅಷ್ಟು ಹಣ ಇಲ್ಲದೆ 20 ಸಾವಿರ ರು. ಪಾವತಿಸಲಾಗಿತ್ತು. ಸೋಂಕಿತ ಆಸ್ಪತ್ರೆಯಲ್ಲಿದ್ದ ವೇಳೆ ಕುಟುಂಬದ ಸದಸ್ಯರು ವೈದ್ಯರನ್ನು ವಿಚಾರಿಸಿದರೆ, ಶೇ.30ರಷ್ಟು ಗುಣಮುಖರಾಗಿದ್ದಾರೆ. ಶೀಘ್ರ ಆಸ್ಪತ್ರೆಯಿಂದ ಬಿಡುಗಡೆಯೂ ಆಗಲಿದ್ದಾರೆ ಎಂದು ತಿಳಿಸಿದ್ದರು. ಅದಾಗಿ ಎರಡನೇ ದಿನಕ್ಕೆ (ಏ.21ರಂದು) ಸೋಂಕಿತ ಮೃತಪಟ್ಟಿದ್ದಾನೆ. ಮೃತನಿಗೆ ಕೇವಲ 39 ವರ್ಷ.

ಲಾಕ್‌ಡೌನ್‌ನಿಂದ ಬಡವರಿಗೆ ಸಮಸ್ಯೆ ಎಂದ ಬಿಜೆಪಿ ಶಾಸಕ

ವ್ಯಕ್ತಿ ಮೃತನಾದ ನಂತರ ಆತನ ಚಿಕಿತ್ಸೆಗೆ ನಾಲ್ಕು ಲಕ್ಷ ರು. ಆಗಿದ್ದು, ಬಿಲ್‌ ಪಾವತಿಸುವಂತೆ ಮೃತನ ಕುಟುಂಬಕ್ಕೆ ಆಸ್ಪತ್ರೆಯವರು ಸೂಚಿಸಿದರು. ಅಷ್ಟು ಹಣ ಇಲ್ಲ ಎಂದು ತಿಳಿಸಿದಾಗ ಮೃತದೇಹವನ್ನು ಕುಟುಂಬದವರಿಗೆ ನೀಡಲು ಆಸ್ಪತ್ರೆ ನಿರಾಕರಿಸಿತ್ತು. ಇಷ್ಟು ಮೊತ್ತ ಪಾವತಿಸುವ ಶಕ್ತಿಯಿಲ್ಲದ ಕುಟುಂಬ ದೇಹವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಊರಿಗೆ ತೆರಳಿದೆ. ಐದು ದಿನ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹವು ಅನಾಥವಾಗಿತ್ತು. ಅಂತಿಮವಾಗಿ ನಾಲ್ಕು ಲಕ್ಷ ಹಣ ಪಾವತಿಸಲು ಕುಟುಂಬದವರ ಕೈಲಾಗುವುದಿಲ್ಲ ಎಂದು ಮನಗಂಡ ಆಸ್ಪತ್ರೆ, ಸೋಮವಾರ (ಏ.26ರಂದು) ಮೃತ ಸೋಂಕಿತನ ಅಂತ್ಯಕ್ರಿಯೆ ನಡೆಸಿದೆ.

ಈ ಬಗ್ಗೆ ಮೃತನ ಮಗಳು ಪ್ರತಿಕ್ರಿಯಿಸಿ, ನಮ್ಮ ತಂದೆಗೆ ಕೊರೋನಾ ಪಾಸಿಟಿವ್‌ ಬಂದಿತ್ತು. ಚಿಕಿತ್ಸೆಗಾಗಿ ಬಿಬಿಎಂಪಿಗೆ ಕರೆ ಮಾಡಿದ್ದೆವು. ಆದರೆ, ಬಿಬಿಎಂಪಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಏ.10ರಂದು ನಂದಿನಿ ಲೇಔಟ್‌ನ ಕಣ್ವ ಆಸ್ಪತ್ರೆಗೆ ದಾಖಲಿಸಿದಾಗ ಮೊದಲಿಗೆ 50 ಸಾವಿರ ರು. ಮುಂಗಡ ಕೇಳಿದ್ದರು. ಅಷ್ಟು ಹಣ ಇಲ್ಲದೆ ಮುಂಗಡವಾಗಿ 20 ಸಾವಿರ ಪಾವತಿಸಿದೆವು. ಒಟ್ಟು 60 ಸಾವಿರ ರು. ಹಣ ಪಾವತಿಸಿದ್ದೇವೆ. ಆದರೆ, ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಚಿಕಿತ್ಸೆ ನೀಡಲಿಲ್ಲ. ತಂದೆಯು ಶೇ.30ರಷ್ಟು ಸೋಂಕಿನಿಂದ ಗುಣಮುಖವಾಗಿದ್ದಾರೆ ಎಂದು ವೈದ್ಯರು ಹೇಳಿದ್ದರು. ಅದಾದ ಎರಡು ದಿನಗಳ ನಂತರ ಮೃತಪಟ್ಟಿದ್ದಾರೆ ಎಂದು ಅಳಲು ತೋಡಿಕೊಂಡಳು.
 

PREV
click me!

Recommended Stories

ಅಡಿಕೆ ತೋಟದ ದುರಂತ: ಗೊನೆ ಕೊಯ್ಯುವಾಗ ಆಯತಪ್ಪಿ ಬಿದ್ದ ಕಾರ್ಮಿಕ ಸಾವು
'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!