ವೃಕ್ಷಮಾತೆ, ಪದ್ಮಶ್ರೀ ತುಳಸಿ ಗೌಡ ಅವರ ಮನೆಗೆ ಹೋಗುವ ದಾರಿಯಲ್ಲಿ ಸೇತುವೆ ನಿರ್ಮಿಸಿ ಕೊಡೋದಾಗಿ ಭರವಸೆ ನೀಡಿದ್ದ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ಇದೀಗ ಕೊಟ್ಟ ಮಾತು ಈಡೇರಿಸಿದ್ದಾರೆ.
ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರ ಕನ್ನಡ (ಆ.14): ವೃಕ್ಷಮಾತೆ, ಪದ್ಮಶ್ರೀ ತುಳಸಿ ಗೌಡ ಅವರ ಮನೆಗೆ ಹೋಗುವ ದಾರಿಯಲ್ಲಿ ಸೇತುವೆ ನಿರ್ಮಿಸಿ ಕೊಡೋದಾಗಿ ಭರವಸೆ ನೀಡಿದ್ದ ಕಾರವಾರ-ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್ ಇದೀಗ ಕೊಟ್ಟ ಮಾತು ಈಡೇರಿಸಿದ್ದಾರೆ. ಈ ಮೂಲಕ ವೃದ್ಧೆ ಪದ್ಮಶ್ರೀ ತುಳಸಿ ಗೌಡ ಅವರ ಮೊಗದಲ್ಲಿ ಶಾಸಕಿ ರೂಪಾಲಿ ಹರ್ಷ ಮೂಡಿಸಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಎಂಬ ಪುಟ್ಟ ಗ್ರಾಮದ ನಿವಾಸಿಯಾಗಿರುವ ಹಾಲಕ್ಕಿ ಸಮುದಾಯದ ತುಳಸಿ ಗೌಡ ಅವರ ಕುಟುಂಬ ಪ್ರತೀ ಮಳೆಗಾಲದ ಸಂದರ್ಭ ಸಮಸ್ಯೆ ಎದುರಿಸುತ್ತಿತ್ತು. ಇದಕ್ಕೆ ಕಾರಣ ಅವರ ಮನೆಯೆದುರು ತುಂಬಿ ಹರಿಯುತ್ತಿದ್ದ ತೊರೆ. ಪ್ರತೀ ವರ್ಷ ಮಳೆಗಾಲದ ಸಂದರ್ಭ ಮನೆಯಿಂದ ಹೊರಕ್ಕೆ ಯಾವುದೇ ಅಗತ್ಯ ಕಾರ್ಯಕ್ಕೆ ಅಥವಾ ತುರ್ತು ಚಿಕಿತ್ಸೆಗಾಗಿ ಹೋಗಬೇಕೆಂದಲ್ಲಿ ಈ ತುಂಬಿದ ತೊರೆಯನ್ನು ಜೀವಭಯದಲ್ಲೇ ದಾಟಿ ಹೋಗ್ಬೇಕಿತ್ತು. ಅಧಿಕಾರಿಗಳಿಗೆ ಮಳೆಗಾಲದ ಈ ಸಮಸ್ಯೆಯ ಬಗ್ಗೆ ಹಿಂದೆಯೇ ಗಮನಕ್ಕೆ ತರಲಾಗಿದ್ರೂ, ಯಾವುದೇ ಸ್ಪಂದನೆ ದೊರಕಿರಲಿಲ್ಲ.
ಸಾರ್ವಕರ್ ಬಗ್ಗೆ ಎಸ್‌ಡಿಪಿಐ ಮಾತುಗಳು ಯಾವ ಹಂತದಲ್ಲಿಯೂ ಕ್ಷಮಿಸಲು ಅರ್ಹವಲ್ಲ: ಸಿ.ಟಿ.ರವಿ
ಇದರಿಂದ ಬೇಸರಗೊಂಡಿದ್ದ ತುಳಸಜ್ಜಿ ತನ್ನ ಮೊಮ್ಮಕ್ಕಳೊಂದಿಗೆ ತೊರೆಯಲ್ಲೇ ನಿಂತು ಒಂದು ಕಾಲು ಸಂಕವನ್ನಾದರೂ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದರು. ಇವರ ಬೇಡಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಏಷಿಯಾನೆಟ್ ಸುವರ್ಣ ನ್ಯೂಸ್‌ನಲ್ಲೂ ಈ ಬಗ್ಗೆ ವರದಿ ಪ್ರಸಾರವಾಗಿತ್ತು. ಈ ವೇಳೆ ಪ್ರತಿಕ್ರಿಯಿಸಿದ್ದ ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ, ಉತ್ತಮ ಸೇತುವೆಗೆ ಅನುದಾನ ಬಿಡುಗಡೆಯಾಗಿದೆ. ಶಾಶ್ವತ ಸೇತುವೆ ನಿರ್ಮಾಣಗೊಳ್ಳೋ ಮೊದಲೇ ತುರ್ತಾಗಿ ತಾತ್ಕಾಲಿಕ ಕಾಲುಸಂಕ ನಿರ್ಮಿಸಿಕೊಡುತ್ತೇನೆಂಬ ಭರವಸೆಯನ್ನು ನೀಡಿದ್ದರು.
ಇದೀಗ ತನ್ನದೇ ಸ್ವಂತ ಖರ್ಚಿನಲ್ಲಿ 50 ಸಾವಿರ ರೂ. ವೆಚ್ಚದಲ್ಲಿ ಉತ್ತಮ ಕಾಲು ಸಂಕ ನಿರ್ಮಾಣ ಮಾಡಿಕೊಡೋ ಮೂಲಕ ಶಾಸಕಿ ರೂಪಾಲಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಇದು ತುಳಸಿ ಗೌಡರ ಮೊಗದಲ್ಲಿ ಹರ್ಷ ಮೂಡಿಸಿದೆ. ಕೊಟ್ಟ ಮಾತಿನಂತೆ ಶಾಸಕಿ ರೂಪಾಲಿ ನಾಯ್ಕ್ ತಾತ್ಕಾಲಿಕ ಕಾಲುಸಂಕ ನಿರ್ಮಿಸಿಕೊಟ್ಟಿರುವುದು ತುಳಸಜ್ಜಿ ಕುಟುಂಬಕ್ಕೆ ಇದೀಗ ಓಡಾಟಕ್ಕೆ ಅನುಕೂಲವಾಗಿದೆ. ಈ ಪ್ರದೇಶದಲ್ಲಿ ಶಾಶ್ವತ ಸೇತುವೆ ನಿರ್ಮಾಣಕ್ಕೆ ಖಾಸಗಿ ಜಮೀನು ಮಾಲಕರೊಬ್ಬರ ತಕರಾರಿದ್ದು, ಅದನ್ನು ಬಗೆಹರಿಸುವ ಪ್ರಯತ್ನವೂ ಮುಂದುವರಿದಿದೆ. ತುಳಸಜ್ಜಿ ಮಾಡಿದ್ದ ಮನವಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಗ ಸಾಕಷ್ಟು ಜನರು ಸರಕಾರ ಹಾಗೂ ಜನಪ್ರತಿನಿಧಿಗಳ ಮೇಲೆ ಹರಿಹಾಯ್ದಿದ್ದರು.
ಹುಲಿಹೈದರ ಘಟನೆ: ಡಿಸಿ ನೇತೃತ್ವದ ತಂಡ ಭೇಟಿ, ಸಾಂತ್ವನ
ಆದರೆ, ಅದಾಗಲೇ ತುಳಸಜ್ಜಿ ಕುಟುಂಬದ ಮನವಿ ಸ್ವೀಕರಿಸಿದ್ದ ಶಾಸಕಿ ರೂಪಾಲಿ ನಾಯ್ಕ್, ಸೇತುವೆಗಾಗಿ 30-40 ಲಕ್ಷ ರೂ. ಅನುದಾನ ಕೂಡಾ ವ್ಯವಸ್ಥೆ ಮಾಡಿಕೊಂಡಿದ್ದರು. ಶಾಶ್ವತ ಸೇತುವೆಗೆ ಮತ್ತಷ್ಟು ಸಮಯ ತಗಲುವುದರಿಂದ ಅದಕ್ಕಿಂತ ಮುನ್ನವೇ ತನ್ನದೇ ಸ್ವಂತ ಖರ್ಚಿನಲ್ಲಿ ತಾತ್ಕಾಲಿಕ ಉತ್ತಮ ಸೇತುವೆ ಮಾಡುವ ಮೂಲಕ ಶಾಸಕಿ ಶೀಘ್ರ ಸ್ಪಂದನೆ ಮಾಡಿದ್ದಾರೆ. ಒಟ್ಟಿನಲ್ಲಿ ಕೊಟ್ಟ ಮಾತು ಈಡೇರಿಸಿರುವ ಶಾಸಕಿ ರೂಪಾಲಿ ಈಡೇರಿಸಿರುವುದರಿಂದ ಕೇವಲ ತುಳಸಿ ಅಜ್ಜಿಯ ಕುಟುಂಬ ಮಾತ್ರವಲ್ಲದೇ, ಇಲ್ಲಿನ ಗ್ರಾಮಸ್ಥರೂ ಕೂಡಾ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ, ಖಾಸಗಿ ವ್ಯಕ್ತಿಯ ತರಕಾರು ಕೂಡಾ ಮುಕ್ತಾಯಗೊಂಡು ಶೀಘ್ರದಲ್ಲಿ ಶಾಶ್ವತ ಸೇತುವೆ ನಿರ್ಮಾಣಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.