ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂ ಕುಸಿತದ ಆತಂಕ: ಸರ್ವೆ ಕಾರ್ಯಕ್ಕೆ ಮುಂದಾದ ಕೇಂದ್ರ ಭೂ ವಿಜ್ಞಾನಿಗಳು

By Govindaraj SFirst Published Aug 14, 2022, 11:29 PM IST
Highlights

ಜಿಲ್ಲೆಯಲ್ಲಿ ಮಳೆ ಕಾಟ ಇಳಿಕೆಯಾದರೂ ಜಿಲ್ಲೆಯ ವಿವಿಧೆಡೆ  ಭೂ ಕುಸಿತದಿಂದಾಗಿ ಮತ್ತೆ  ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಭೂ ವಿಜ್ಞಾನಿಗಳ ತಂಡ ಸರ್ವೆ ಕಾರ್ಯಕ್ಕೆ ಮುಂದಾಗಿದ್ದು, ಈ ಮೂಲಕ ಮುಂದಿನ ದಿನಗಳಲ್ಲಿ ಎದುರಾಗುವ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ನೀಡಲಿದ್ದಾರೆ. 

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಆ.14): ಜಿಲ್ಲೆಯಲ್ಲಿ ಮಳೆ ಕಾಟ ಇಳಿಕೆಯಾದರೂ ಜಿಲ್ಲೆಯ ವಿವಿಧೆಡೆ  ಭೂ ಕುಸಿತದಿಂದಾಗಿ ಮತ್ತೆ  ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಕೇಂದ್ರ ಭೂ ವಿಜ್ಞಾನಿಗಳ ತಂಡ ಸರ್ವೆ ಕಾರ್ಯಕ್ಕೆ ಮುಂದಾಗಿದ್ದು, ಈ ಮೂಲಕ ಮುಂದಿನ ದಿನಗಳಲ್ಲಿ ಎದುರಾಗುವ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ನೀಡಲಿದ್ದಾರೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ. 

ಕಳೆದ ಎರಡು ತಿಂಗಳಿಂದ ಸುರಿದ ರಣಭೀಕರ ಮಳೆ ಉತ್ತರಕನ್ನಡ ಜಿಲ್ಲೆಯನ್ನು ಅಕ್ಷರಶಃ ನರಕವಾಗಿಸಿತ್ತು. ಮಳೆಯಿಂದಾಗಿ ಭಟ್ಕಳದ ಮುಟ್ಟಳ್ಳಿಯಲ್ಲಿ ಭೂ ಕುಸಿತವಾಗಿ ನಾಲ್ಕು ಮಂದಿ ಭೂ ಸಮಾದಿಯಾದ ಬೆನ್ನಲ್ಲೇ ಹೊನ್ನಾವರದ ಅಪ್ಸರ ಕೊಂಡ ಭಾಗದಲ್ಲಿ ಭೂ ಕುಸಿತದ ಜೊತೆ ಹಲವು ಭಾಗದಲ್ಲಿ ಭೂ ಭಾಗ ಬಿರುಕು ಕಾಣಿಸಿಕೊಂಡಿತ್ತು. ಹೀಗಾಗಿ 64 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. 

ಸಮಾಜ ಸೇವೆಗೆ ಜಾರ್ಜ್‌ ಫರ್ನಾಂಡಿಸ್‌ ಮಾದರಿ: ಶಾಸಕಿ ರೂಪಾಲಿ ನಾಯ್ಕ

ಆದರೆ, ಇದೀಗ ಜಿಲ್ಲೆಯ ಹಲವು ಭಾಗದಲ್ಲಿ ಗುಡ್ಡ ಕುಸಿತದ ಆತಂಕ ಇರುವುದರಿಂದ  ಜಿಲ್ಲೆಯ ಶಿರಸಿಯ ಜಾಜಿಗುಡ್ಡ, ಕುಮಟಾದ ತಂಡ್ರಕುಳಿ, ಹೊನ್ನಾವರದ ಅಪ್ಸರ ಕೊಂಡ, ಯಲ್ಲಾಪುರ ಭಾಗದ ಕಳಚೆ, ಜೋಯಿಡಾ ಭಾಗದ ಅಣಶಿ, ಭಟ್ಕಳದ ಮುಟ್ಟಳ್ಳಿ ಭಾಗಗಳಿಗೆ ಕೇಂದ್ರ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಹಾಗೂ ಜಿಲ್ಲಾ ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಇನ್ನೂ ಒಂದು ವಾರಗಳ ಕಾಲ ಈ ತಂಡ ಜಿಲ್ಲೆಯ ವಿವಿಧ ಭಾಗದಲ್ಲಿ ಸರ್ವೆ ಕಾರ್ಯ ನಡೆಸಲಿದ್ದು, ನಂತರ ಜಿಲ್ಲಾಡಳಿತಕ್ಕೆ ವರದಿ ನೀಡಲಿದೆ. 

ಕಳೆದ ವರ್ಷ ಕೂಡ ಕೇಂದ್ರ ಭೂ ವಿಜ್ಞಾನಿಗಳ ತಂಡ ಹಲವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಿಲ್ಲಾಡಳಿತಕ್ಕೆ ಯಲ್ಲಾಪುರದ ಕಳಚೆ, ಶಿರಸಿಯ ಜಾಜಿಗುಡ್ಡ, ಅಣಶಿ ಘಟ್ಟ, ಸಿದ್ದಾಪುರದ ವಿವೇಕಾನಂದ ನಗರ, ಕಾನಸೂರು ಸೇರಿ ಒಟ್ಟು  ಐದು ಸೂಕ್ಷ್ಮ ಪ್ರದೇಶದಲ್ಲಿ ಭೂ ಕುಸಿತವಾಗುವ ವರದಿ ನೀಡಿತ್ತು. ಆದರೆ, ಇದೀಗ ಮತ್ತೆ ಹಲವು ಭಾಗದಲ್ಲಿ ಭೂ ಕುಸಿತವಾಗುತ್ತಿರುವುದರಿಂದ ಸರ್ಕಾರದ ಶಿಫಾರಸ್ಸಿನ ಮೇಲೆ ಇಂದು ಕೇಂದ್ರ ಭೂ ವಿಜ್ಞಾನಿಗಳ ತಂಡ ಜಿಲ್ಲೆಯ ಶಿರಸಿ ಭಾಗದ ಜಾಜಿಗುಡ್ಡ, ಹೊನ್ನಾವರದ ಅಪ್ಸರ ಕೊಂಡ, ಭಟ್ಕಳದ ಮುಟ್ಟಳ್ಳಿ, ಕುಮಟಾದ ತಂಡ್ರಕುಳಿ, ಅಂಕೋಲ, ಯಲ್ಲಾಪುರ ಭಾಗದ ಘಟ್ಟ ಪ್ರದೇಶದಲ್ಲಿ ಸರ್ವೆ ಕಾರ್ಯ ಮಾಡುತಿದ್ದು, ಮಣ್ಣುಗಳ ಸಾಂದ್ರತೆಯ ಪರೀಕ್ಷೆ ನಡೆಸಿದ್ದಾರೆ. 

Uttara Kannada: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸೂರ್ವೆಯ ಕರಬಂಧಿ ಚಳುವಳಿ

ಸದ್ಯ ಜಿಲ್ಲೆಯ ಹೊನ್ನಾವರದ ಅಪ್ಸರ ಕೊಂಡ, ಜಾಜಿಗುಡ್ಡ, ಯಲ್ಲಾಪುರದ ಕಳಚೆ, ಭಟ್ಕಳದ ಮುಟ್ಟಳ್ಳಿ, ಜೋಯಿಡಾದ ಅಣಶಿ ಭಾಗದಲ್ಲಿ ಮತ್ತೆ ಭೂ ಕುಸಿತವಾದಲ್ಲಿ ಜನರನ್ನು ಸ್ಥಳಾಂತರಿಸುವಂತೆ ಜಿಲ್ಲಾಡಳಿತಕ್ಕೆ ಭೂ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಕಾಟ ಕಡಿಮೆಯಾದ್ರೂ, ಭೂ ಕುಸಿತದ ಭೀತಿ ಮಾತ್ರ ನಿಂತಿಲ್ಲ. ಭಟ್ಕಳದ‌ ಘಟನೆಯ ಬಳಿಕ ಜಿಲ್ಲೆಯ ಜನರಲ್ಲಿ ಭೀತಿಯ ವಾತಾವರಣ ಸೃಷ್ಠಿಯಾಗಿದ್ದು, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ನೀಡುವ ವರದಿ ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಲಿದೆಯೇ ಅಥವಾ ನೆಮ್ಮದಿ ಕಾಣಿಸಲಿದೆಯೇ ಎಂದು ಕಾದು ನೋಡಬೇಕಷ್ಟೇ.

click me!