'ಸಾಹಿತ್ಯ ಸಮ್ಮೇಳನದಲ್ಲಿ ವಸತಿ ಸೌಲಭ್ಯಕ್ಕೆ ಖಾಸಗಿ ಹೋಟೆಲ್ ಸಹಭಾಗಿತ್ವ ಪಡ್ಕೊಳ್ರಿ'

By Kannadaprabha NewsFirst Published Jan 23, 2020, 1:31 PM IST
Highlights

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಒಟ್ಟು 19000 ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆ| ಸಾಹಿತ್ಯ ಸಮ್ಮೇಳನ ಪೂರ್ವ ಸಿದ್ಧತೆ ಸಭೆಯಲ್ಲಿ ಅಧಿಕಾರಿಗಳಿಗೆ ಪ್ರಿಯಾಂಕ್ ಖರ್ಗೆ ಸಲಹೆ| ಬಸ್ಸಿನ ಖರ್ಚು ಭರಿಸಲು ಕಾಂಗ್ರೆಸ್ ದೇಣಿಗೆ|

ಕಲಬುರಗಿ(ಜ.23): ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಆಹ್ವಾನಿತರಿಗೆ ಹಾಗೂ ಪ್ರತಿನಿಧಿಗಳ ಅನುಕೂಲಕ್ಕಾಗಿ ವಸತಿ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಖಾಸಗಿ ಹೋಟೆಲ್ ಮಾಲೀಕರೊಂದಿಗೆ ಚರ್ಚಿಸಿ ಅಗತ್ಯ ಕೈಗೊಳ್ಳುವಂತೆ ವಸತಿ ಹಾಗೂ ಸಾರಿಗೆ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. 

ಕಲಬುರಗಿ ನಗರದ ಕೃಷಿ ಇಲಾಖೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ವಸತಿ ಹಾಗೂ ಸಾರಿಗೆ ಸಮ್ಮೇಳನದ ಎರಡು ಪ್ರಮುಖ ಅಂಶಗಳಾಗಿದ್ದು, ಅಧಿಕಾರಿಗಳು ಸಮ್ಮೇಳನಕ್ಕೆ ಬರುವ ಅಹ್ವಾನಿತರಿಗೆ ಹಾಗೂ ಪ್ರತಿನಿಧಿಗಳಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ನಗರದ ಖಾಸಗಿ ಹೋಟೆಲ್‌ಗಳ ಭಾಗಿತ್ವದ ಪ್ರತಿಶತ ಹೆಚ್ಚಿಸುವಂತೆ ಮಾಡಲು ಅಧಿಕಾರಿಗಳು ಹೋಟೆಲ್ ಮಾಲೀಕರೊಂದಿಗೆ ಮಾತನಾಡಿ, ಅಗತ್ಯ ರೂಮುಗಳ ವ್ಯವಸ್ಥೆ ಮಾಡಬೇಕು. ಸಮ್ಮೇಳನಕ್ಕೆ ಭಾಗಿಯಾಗಲು ಹೆಸರು ನೋಂದಾಯಿಸಿದವರಿಗೆ ವಸತಿ ಸೌಲಭ್ಯ ಕಲ್ಪಿಸಿರುವುದರ ಸಮರ್ಪಕ ಮಾಹಿತಿ ಅವರ ಮೊಬೈಲ್ ನಲ್ಲಿ ವಿವರ ಕಳಿಸುವ ವ್ಯವಸ್ಥೆ ಮಾಡುವಂತೆ ಜಿಪಂ ಸಿಇಒ ರಾಜಾಗೆ ಸೂಚಿಸಿದ್ದಾರೆ. 

ಕಲಬುರಗಿ: 85ನೇ ಸಾಹಿತ್ಯ ಸಮ್ಮೇಳನಕ್ಕೆ ವಸತಿ ಸೌಲಭ್ಯದ್ದೇ ಚಿಂತೆ!

ಸಮ್ಮೇಳನಕ್ಕೆ ಒಟ್ಟು 19000 ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಕನ್ನಡ ಸಾಹಿತ್ಯ ಪರಿಷತ್ ಆಹ್ವಾನಿತರ ವಿವರ ಒದಗಿಸಿದರೆ ಅವರಿಗೆ ರೂಮಿನ ವ್ಯವಸ್ಥೆ ಮಾಡಲಾಗುವುದು ಎಂದು ಡಾ. ರಾಜಾ ತಿಳಿಸಿದರು. ಕೇಂದ್ರ ಸಮಿತಿ ಪ್ರಕಾರ ಒಟ್ಟು ಲಭ್ಯವಿರುವ ರೂಮುಗಳ ಮಾಹಿತಿ ಒದಗಿಸಿದರೆ ಎ, ಬಿ ಹಾಗೂ ಸಿ ಕೆಟಗರಿ ಅಹ್ವಾನಿತರಿಗೆ ರೂಮುಗಳನ್ನು ಹಂಚಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಸಭೆಗೆ ತಿಳಿಸಿದರು. ಆಗ ಪ್ರತಿಕ್ರಿಯಿಸಿದ ಶಾಸಕರು, ಅಧಿಕಾರಿಗಳು ಪರಿಷತ್‌ನ ಸಂಬಂಧಿಸಿದವರೊಂದಿಗೆ ಮಾತನಾಡಿ, ವಿವರಗಳ ವಿನಿಮಯ ಮಾಡಿಕೊಂಡು ಸಮ್ಮೇಳನಕ್ಕೆ ಬರುವವರಿಗೆ ಅಗತ್ಯ ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಸೂಚಿಸಿದರು. ಈಗಾಗಲೇ 18 ಕಲ್ಯಾಣ ಮಂಟಪ ಗುರುತಿಸಿದ್ದು, ಅಲ್ಲಿ ಒಟ್ಟು 4,820 ಆಹ್ವಾನಿತರಿಗೆ ಸೌಲಭ್ಯ ಕಲ್ಪಿಸಲಾಗುವುದು. ಇನ್ನುಳಿದವರಿಗೆ ಹೋಟೆಲ್, ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ರಾಜಾ ವಿವರಿಸಿದರು. 

ಅಗತ್ಯ ಬೆಡಶಿಟ್ ಖರೀದಿ ಮಾಡಲು ಮಾದರಿ ಬೆಡ್ ಶೀಟ್ ಒಂದನ್ನು ಸಭೆಯಲ್ಲಿ ತೋರಿಸಲಾಯಿತು. ಹಾಗೆ ಖರೀದಿಸಿದ ಬೆಡ್‌ಶೀಟ್‌ಗಳನ್ನು ಸಮ್ಮೇಳನದ ನಂತರ ಸರ್ಕಾರಿ ಹಾಸ್ಟೆಲ್‌ಗಳಿಗೆ ಬಳಕೆ ಮಾಡಬೇಕು. ಯಾವ ಹಾಸ್ಟೆಲ್‌ಗಳಲ್ಲಿ ಶೌಚಾಲಯ ಕೊರತೆ ಇದ್ದರೆ ಅಲ್ಲಿ ತಾತ್ಕಾಲಿಕ ಶೌಚಾಲಯ ನಿರ್ಮಿಸಬೇಕು. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಈ ಕುರಿತು ನಗರಸಭೆ ಅಧಿಕಾರಿಗಳೊಂದಿಗೆ ಮಾತನಾಡಲು ಶಾಸಕರು ಸಿಇಒಗೆ ಸೂಚಿಸಿದರು. ಸಮ್ಮೇಳನದ ಭದ್ರತೆ ಹೊಣೆಗಾರಿಕೆ ಪೊಲೀಸ್ ಇಲಾಖೆಗೆ ಸೇರಿದ್ದು. ಮಹಿಳಾ ಪ್ರತಿನಿಧಿಗಳು ವಾಸ್ತವ್ಯ ಹೂಡುವ ಕಡೆಗಳಲ್ಲಿ ಅಗತ್ಯ ಭದ್ರತೆ ಒದಗಿಸಿವುದರ ಜೊತೆಗೆ ಸಾಕಷ್ಟು ಸಂಖ್ಯೆಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವಂತೆ ಶಾಸಕರು ಸಭೆಗೆ ತಿಳಿಸಿದರು.

‘ಕನ್ನಡ ನುಡಿ ಜಾತ್ರೆ’ಗೆ ಜರ್ಮನ್‌ ಟೆಕ್ನಾಲಜಿಯ ವೇದಿಕೆ!

ಇನ್ನೂ ಸಮ್ಮೇಳನಕ್ಕೆ ಬರುವವರಿಗೆ ಸೂಕ್ತ ಸಾರಿಗೆ ಸೌಲಭ್ಯ ಒದಗಿಸಲು ಸರ್ಕಾರಿ ಹಾಗೂ ಖಾಸಗಿ ವಾಹನ ಬಳಸಲಾಗುತ್ತಿದೆ. 164 ಶಾಲಾ ವಾಹನಗಳು, 50 ಇನ್ನೋವಾ, 50 ಕ್ರೂಸರ್ ಹಾಗೂ 50 ಕಾರುಗಳನ್ನು ಬುಕ್ ಮಾಡಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಆಗ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ಇತರೆ ತಾಲೂಕುಗಳ ಖಾಸಗಿ ಶಾಲೆಗಳೊಂದಿಗೆ ಮಾತನಾಡಿ, ವಾಹನ ಒದಗಿಸುವಂತೆ ಕೋರಲು ಮಾತನಾಡುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು. ಅಂದು ಸಮ್ಮೇಳನಕ್ಕೆ ಬರುವವರಿಗೆ ಸಾಹಿತ್ಯಾಸಕ್ತರನ್ನು ಸಮ್ಮೇಳನದ ಜಾಗಕ್ಕೆ ಕಡಿಮೆದರದಲ್ಲಿ ಕರೆತರಲು ಆಟೋ ಮಾಲೀಕರೊಂದಿಗೆ ಮಾತನಾಡುವಂತೆ ಸೂಚಿಸಿದರು. 

ಸಮ್ಮೇಳನಕ್ಕೆ ಆಗಮಿಸುವವರಿಗೆ ಅನುಕೂಲವಾಗಲು ಅಗತ್ಯ ವಸತಿ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಕಷ್ಟಪಡುತ್ತಿದೆ ಎನ್ನುವ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿದ ಶಾಸಕರು, ಸಮ್ಮೇಳನಕ್ಕೆ ಮಾಡಿಕೊಂಡಿರುವ ತಯಾರಿ ಕುರಿತು ಮಾಧ್ಯಮಗಳಿಗೆ ಆಗಾಗ ಮಾಹಿತಿ ಕೊಡುವಂತೆ ಶಾಸಕರು ಸಿಇಒಗೆ ಸೂಚಿಸಿದರು. ವಸತಿ ಹಾಗೂ ಸಾರಿಗೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ಇದೇ 25ನೇ ದಿನಾಂಕದ ಒಳಗಾಗಿ ಒದಗಿಸುವಂತೆ ಪ್ರಿಯಾಂಕ್ ಖರ್ಗೆ ಹೇಳಿದರು. 
ಸಭೆಯಲ್ಲಿ ಜಹೀರಾ ನಸೀಂ, ಎಂಡಿ ಎನ್‌ಇಕೆಆರ್ ಟಿಸಿ, ಜಿಪಂ ಸೆಕ್ರೆಟರಿ ಪ್ರಿಯಾ ಪ್ರವೀಣ್, ಜಿಪಂ ವಿರೋಧ ಪಕ್ಷದ ನಾಯಕರಾದ ಶಿವಾನಂದ್ ಪಾಟೀಲ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ಬಸ್ಸಿನ ಖರ್ಚು ಭರಿಸಲು ಕಾಂಗ್ರೆಸ್ ದೇಣಿಗೆ 

ಜಿಲ್ಲೆಯ ವಿವಿಧ ತಾಲೂಕುಗಳಿಂದ ಮೂರು ದಿನ ನುಡಿ ಸಮ್ಮೇಳನಕ್ಕೆ ಸಾರ್ವಜನಿಕರನ್ನು ಕರೆದುಕೊಂಡು ಬಂದು ಮರಳಿ ಹೋಗುವ ಸರ್ಕಾರಿ ಬಸ್ಸುಗಳ ವೆಚ್ಚ ಸುಮಾರು 8 ಲಕ್ಷ ರು. ಆಗಲಿದ್ದು, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಈ ವೆಚ್ಚ ಭರಿಸಲು ಅವಕಾಶವಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಜಹೀರಾ ನಸೀಂ ತಿಳಿಸಿದಾಗ ಆ ಹಣವನ್ನು ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಿಂದ ಸಂಗ್ರಹಿಸಿ ನೀಡುವುದಾಗಿ ಪ್ರಿಯಾಂಕ್ ಖರ್ಗೆ ತಿಳಿಸಿದರು. 

ಕಲಬುರಗಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದೇಣಿಗೆ ನೀಡುವಂತೆ ಜಿಲ್ಲಾಧಿಕಾರಿ ಮನವಿ

ಆರ್.ಟಿ.ಒ. ದಾಮೋದರ ಕೆ. ಮಾತನಾಡಿ, ಪ್ರತಿನಿಧಿಗಳು ಸೇರಿದಂತೆ ಇನ್ನಿತರರ ಓಡಾಟಕ್ಕೆ ಒಟ್ಟಾರೆ 200 ಶಾಲಾ ಬಸ್ ತೆಗೆದುಕೊಳ್ಳಲಾಗುವುದು. ಇದಲ್ಲದೆ ಬಾಡಿಗೆ ಮೇಲೆ ತಲಾ 50 ಇನ್ನೋವಾ, ಕ್ರೂಸರ್, ಕಾರುಗಳನ್ನು ಸಹ ಪಡೆಯಲಾಗುತ್ತಿದೆ. ಇನ್ನೂ ಅವಶ್ಯಕತೆ ಇದ್ದಲ್ಲಿ ತಾಲೂಕುಗಳಿಂದ ವಾಹನಗಳನ್ನು ಪಡೆಯಲಾಗುವುದು ಎಂದು ಸಭೆಗೆ ತಿಳಿಸಿದರು. 

ಹೆಲ್ಪ್ ಡೆಸ್ಕ್ ಸ್ಥಾಪಿಸಿ: 

ಕನ್ನಡದ ಮೇರು ಹಬ್ಬಕ್ಕೆ ಬೇರೆ ಊರುಗಳಿಂದ ಬರುವವರಿಗೆ ಕಲಬುರಗಿ ನಗರದ ಬಸ್ ನಿಲ್ದಾಣ, ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣದಲ್ಲಿ ಹೆಲ್ಪ್‌ಡೆಸ್ಕ್ ಸ್ಥಾಪಿಸಿ ವಸತಿ, ಸಾರಿಗೆ ಸೇರಿದಂತೆ ಕಾರ್ಯಕ್ರಮಗಳ ಮಾಹಿತಿ ನೀಡಲು ಸ್ವಯಂ ಸೇವಕರನ್ನು ನೇಮಿಸಬೇಕು ಎಂದು ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು. 

500 ಸ್ನಾನ, 400 ಶೌಚಗೃಹ ನಿರ್ಮಾಣ ಸಾರಿಗೆ ಮತ್ತು ವಸತಿ ಸಮಿತಿ ಕಾರ್ಯಾ ಧ್ಯಕ್ಷರಾದ ಜಿಲ್ಲಾ ಪಂಚಾಯತ್ ಸಿ.ಇ.ಒ. ಡಾ. ಪಿ. ರಾಜಾ ಮಾತನಾಡಿ, ವಸತಿ ವ್ಯವಸ್ಥೆ ಕಲ್ಪಿಸಲು ಈಗಾಗಲೇ 18 ಕಲ್ಯಾಣ ಮಂಟಪ, 16 ಶಿಕ್ಷಣ ಸಂಸ್ಥೆಗಳು, 36 ಹೋಟೆಲ್, ಲಾಡ್ಜ್‌ಗಳನ್ನು ಗುರುತಿಸಿ ಕೋಣೆ ಕಾಯ್ದಿರಿಸಲಾಗಿದೆ. ಹೋಟೆಲ್ ಮತ್ತು ಕೋಣೆಗಳ ಸಂಖ್ಯೆ ಇನ್ನೂ ಅವ್ಯಕತೆ ಇರುವುದರಿಂದ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹೋಟೆಲ್ ಮಾಲೀಕರ ಸಭೆ ಕರೆದು ಇನ್ನೂ ಕಾಯ್ದಿರಿಸಲಾಗುವುದು. 

ವಸತಿಗೆ ಗುರುತಿಸಿರುವ ಶಿಕ್ಷಣ ಸಂಸ್ಥೆ ಮತ್ತು ಕಲ್ಯಾಣ ಮಂಟಪದಲ್ಲಿನ ಶೌಚಾಲಯ, ಸ್ನಾನಗೃಹ, ವಿದ್ಯುತ್ ದುರಸ್ತಿ ಮಾಡಲು ಹಾಗೂ ತಾತ್ಕಲಿಕವಾಗಿ 500 ಸ್ನಾನಗೃಹ, 400 ಶೌಚಾಲಯ ನಿರ್ಮಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶಿಸಲಾಗಿದೆ. ವಸತಿ ವ್ಯವಸ್ಥೆ ಕುರಿತಂತೆ ಸಹಾಯಕ್ಕಾಗಿ 100 ಜನ ಪ್ರತಿನಿಧಿಗಳಿಗೆ ಓರ್ವ ಪಿ.ಡಿ.ಒ. ಮತ್ತು 1000 ಜನ ಪ್ರತಿನಿಧಿಗಳ ಮೇಲ್ವಿಚಾರಣೆಗೆ ಓರ್ವ ಅಧಿಕಾರಿಯನ್ನು ನೇಮಿಸಲಾಗುವುದು ಎಂದರು.
 

click me!